ಶಿವಣ್ಣ ಅವರ ಗೀತಾ ಪಿಕ್ಚರ್ಸ್ ಬ್ಯಾನರ್ ಮೂಲಕ ಮತ್ತೊಂದು ಸಿನಿಮಾ ರೆಡಿಯಾಗ್ತಾ ಇದೆ. ಆದರೆ ಈ ಸಿನಿಮಾದಲ್ಲಿ ಶಿವಣ್ಣ ಹೀರೋ ಅಲ್ಲ, ಕೇವಲ ಪ್ರೊಡ್ಯೂಸರ್. ನಾಯಕನಾಗುತ್ತಿರುವುದು ಶಿವಣ್ಣನ ಮುದ್ದಿನ ತಂಗಿಯ ಮಗ ಧಿರೇನ್. ನಾಯಕಿಯಾಗುತ್ತಿರುವುದು ಟಗರು ಪಲ್ಯ ಖ್ಯಾತಿಯ ನೆನಪಿರಲಿ ಪ್ರೇಮ್ ಮಗಳು ಅಮೃತಾ.
ಧಿರೇನ್ ರಾಮ್ ಕುಮಾರ್. ರಾಮ್ ಕುಮಾರ್ ಮತ್ತು ಪೂರ್ಣಿಮಾ ದಂಪತಿಯ ಮಗ. ಪೂರ್ಣಿಮಾ ಅವರು ಶಿವಣ್ಣ ಅವರ ಮುದ್ದಿನ ತಂಗಿ. ಧಿರೇನ್ ʻಶಿವ 143ʼ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದ ರೊಮ್ಯಾಂಟಿಕ್ ಕಂ ಆಕ್ಷನ್ ಹೀರೋ. ಫಸ್ಟ್ ಸಿನಿಮಾದಲ್ಲೇ ಕಿಸ್ಸುಗಳ ಸುರಿಮಳೆ ಸುರಿಸಿದ್ದ ಧಿರೇನ್ ಅವರಿಗೆ ಅದೃಷ್ಟ ಕೈಹಿಡಿಯಲಿಲ್ಲ. ಮೊದಲ ಸಿನಿಮಾ ಆರ್‌ಎಕ್ಸ್ 100 ರೀಮೇಕ್ ಆಗಿತ್ತು. ಮಾನ್ವಿತಾ ಕಾಮತ್-ಧಿರೇನ್ ರೊಮ್ಯಾನ್ಸ್ ಬಿಸಿ ಏರಿಸಿತ್ತಾದರೂ.. ಸಿನಿಮಾ ಅಷ್ಟಕ್ಕಷ್ಟೇ ಎನ್ನವಂತಾಗಿತ್ತು. ಈಗ ಅಪ್ಪಟ ಸ್ವಮೇಕ್ ಬೆನ್ನು ಬಿದ್ದಿದ್ದಾರ.
ಮೊದಲ ಚಿತ್ರವನ್ನು ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದರೆ, ಈಗ ತಂಗಿಯ ಮಗನಿಗೆ ಶಿವಣ್ಣನೇ ಪ್ರೊಡ್ಯೂಸರ್ ಆಗಿದ್ದಾರೆ. ನಾಯಕಿಯಾಗಿರುವುದು ಅಮೃತಾ ಪ್ರೇಮ್. ನೆನಪಿರಲಿ ಪ್ರೇಮ್ ಅವರ ಮಗಳು. ಸಿನಿಮಾ ಹೆಸರು ಪಬ್ಬಾರ್.
ಪಬ್ಬಾರ್ ಚಿತ್ರದಲ್ಲಿ ಧಿರೇನ್ ಪೊಲೀಸ್ ಆಫೀಸರ್ ಪಾತ್ರ ಮಾಡುತ್ತಿದ್ದು, ಶಾಖಾಹಾರಿ ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್ ಅವರು ಡೈರೆಕ್ಟರ್. ಶಾಖಾಹಾರಿ ಸಿನಿಮಾ ನೋಡಿ ಬೆನ್ನು ತಟ್ಟಿದ್ದರಂತೆ ಶಿವಣ್ಣ. ಇದೇ ವೇಳೆ ಸಂದೀಪ್ ಅವರು ಹೇಳಿದ್ದ ಕಥೆ ಧಿರೇನ್ ಅವರಿಗೂ ಇಷ್ಟವಾಗಿ, ಮಾವನ ಬಳಿ ಹೇಳಿದ್ದರಂತೆ. ನಿರ್ಮಾಪಕರನ್ನ ಹುಡುಕಿ ಕೊಡುವಂತೆ ಕೇಳಿದ್ದರಂತೆ. ಶಿವಣ್ಣ ತಮ್ಮ ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲೇ ಈ ‘ಪಬ್ಬಾರ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ನಿರ್ದೇಶಕರ ಸಿನಿಮಾ ಇಷ್ಟವಾಗಿತ್ತು. ಕಥೆ ಧಿರೇನ್ʻಗೆ ಇಷ್ಟವಾಗಿತ್ತು. ನಾವೇ ಏಕೆ ನಿರ್ಮಾಣ ಮಾಡಬಾರದು ಎಂದು ಗೀತಾ ಪಿಕ್ಚರ್ಸ್ ಮೂಲಕ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಿನಿಮಾ ಸೆಟ್ಟೇರಿದೆ. ಮೇ 15ರಿಂದ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಬೆಂಗಳೂರು, ಮಡಿಕೇರಿಯಲ್ಲಿ ಮೊದಲ ಎರಡು ಶೆಡ್ಯೂಲ್ ಸಿನಿಮಾ ಚಿತ್ರೀಕರಣ ನಡೆಯಲಿದ್ದು, ನಂತರ ಹಿಮಾಚಲ ಪ್ರದೇಶದಲ್ಲಿ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನ, ವಿಶ್ವಜಿತ್ ರಾವ್ ಛಾಯಾಗ್ರಹಣ ಇದೆ.
ಅಂದ ಹಾಗೆ ಧಿರೇನ್ ಲುಕ್ ನೋಡಿದರೆ ಸ್ವಸ್ತಿಕ್ ಚಿತ್ರದ ರಾಘವೇಂದ್ರ ರಾಜ್ ಕುಮಾರ್ ಕ್ಯಾರೆಕ್ಟರ್ ನೆನಪಾಗುತ್ತೆ. ಆದರೆ ಇದು ಆ ರೀತಿಯ ಕಥೆ ಅಲ್ಲ. ಇದು ವ್ಯಕ್ತಿಯೊಬ್ಬ ತನ್ನನ್ನು ತಾನು ಹುಡುಕಿಕೊಂಡು ಹೋಗುವ ಕಥೆ ಎನ್ನುತ್ತಾರೆ ಪಬ್ಬಾರ್ ಡೈರೆಕ್ಟರ್. ಪಬ್ಬಾರ್ ಎಂದರೆ ಏನು.. ಸ್ವಲ್ಪ ದಿನ ತಡೀರಿ, ಹೇಳ್ತೀನಿ ಅಂತಾರೆ.
ಪ್ರೇಮ್ ಅವರಿಗೆ ಇದು ಖುಷಿ ಕೊಟ್ಟಿದೆ. ಶಿವಣ್ಣನ ಬ್ಯಾನರಿನಲ್ಲಿ ತನ್ನ ಮಗಳು ನಾಯಕಿಯಾಗಿರುವುದು ಅವರಿಗೆ ಏನೋ ಸಿಕ್ಕ ಖುಷಿ. ದೊಡ್ಮನೆಯ ಸಿನಿಮಾದಲ್ಲಿ ನಟಿಸುವ ಚಾನ್ಸ್ ಸಿಕ್ಕಿದೆ, ಅಂತಹ ಅವಕಾಶ ತಮಗೂ ಸಿಕ್ಕಲಿಲ್ಲ ಎನ್ನುತ್ತಲೇ ಖುಷಿಯಾಗಿದ್ದಾರೆ. ಶಿವಣ್ಣನ ಆಶೀರ್ವಾದ ಸಿಕ್ಕ ಮಗಳು ಎತ್ತರಕ್ಕೆ ಬೆಳೆಯುತ್ತಾಳೆ ಎನ್ನುವುದು ಪ್ರೇಮ್ ಕನಸು. ಕನಸು ನನಸಾಗಲಿ.



