ಶಿವಣ್ಣ ರಿಕವರ್ ಆಗಿದ್ದಾರೆ. ಆಗ್ತಿದ್ದಾರೆ. ಕ್ಯಾನ್ಸರ್ ಗೆದ್ದು ಬಂದಿರೋ ಶಿವಣ್ಣ ಇಷ್ಟು ಬೇಗ ಗುಣಮುಖರಾಗ್ತಿರೋದು ಒಳ್ಳೆಯ ಸೂಚನೆ. ಶಿವಣ್ಣ ಇತ್ತೀಚೆಗಷ್ಟೇ ಡಾಲಿ ಧನಂಜಯ ಅವರ ಮದುವೆಗೆ ಮೈಸೂರಿಗೆ ಹೋಗಿದ್ದರು. ಹೊಸ ಹೇರ್ ಸ್ಟೈಲ್, ಹೊಸ ಲುಕ್ಕು ಸಖತ್ತಾಗಿಯೇ ಇತ್ತು. ಶ್ರೀಮಂತನೇ ಆಗಲಿ, ಬಡವನೇ ಆಗಲಿ.. ಎಲ್ಲರೂ ದೇವರ ಹತ್ತಿರ ಬೇಡುವವರೇ. ಇಲ್ಯಾರೂ ಬಡವರಿಲ್ಲ ಎಂದು ಹೇಳಿದ್ದ ಶಿವಣ್ಣ, ಡಾಲಿ-ಧನ್ಯತಾ ದಂಪತಿಯನ್ನು ಮನದುಂಬಿ ಹರಸಿದ್ದರು. ಅನಾರೋಗ್ಯದ ನಡುವೆಯೂ ಶಿವಣ್ಣ, ತಮ್ಮ ಮದುವೆಗೆ ಬಂದಿದ್ದು ನನ್ನ ಭಾಗ್ಯ ಎಂದಿದ್ದರು ಡಾಲಿ ಧನಂಜಯ. ಇದೀಗ ಶಿವಣ್ಣ ಮತ್ತೆ ಬಣ್ಣ ಹಚ್ಚೋಕೆ ರೆಡಿಯಾಗಿದ್ದಾರೆ.
ಜೋಗಿ ಪ್ರೇಮ್ ಡೈರೆಕ್ಷನ್ ಮತ್ತು ಧ್ರುವ ಸರ್ಜಾ ಹೀರೋ ಆಗಿರುವ ಚಿತ್ರ ಕೆಡಿ. ಈ ಚಿತ್ರದಲ್ಲಿ ಹೀರೋಯಿನ್ ಆಗಿರೋದು ರೀಷ್ಮಾ ನಾಣಯ್ಯ. ಕ್ರೇಜಿ ಸ್ಟಾರ್ ರವಿಚಂದ್ರನ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ಸಂಜಯ್ ದತ್.. ಮೊದಲಾದ ಘಟಾನುಘಟಿಗಳೆಲ್ಲ ಇದ್ದಾರೆ. ಈಗ ಆ ಕೆಡಿ ಟೀಂಗೆ ಶಿವಣ್ಣ ಎಂಟ್ರಿ ಕೊಡ್ತಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಕೆಡಿ ಚಿತ್ರ ಕೂಡಾ ಎರಡು ಭಾಗಗಳಲ್ಲಿ ಬರಲಿದೆ. ಮೊದಲ ಚಿತ್ರದ ಕೊನೆಯಲ್ಲಿ ಸೀಕ್ವೆಲ್ʻಗೆ ಕ್ಲೂ ಕೊಡುವ ದೃಶ್ಯದಲ್ಲಿ ಶಿವಣ್ಣ ಎಂಟ್ರಿ ಕೊಡ್ತಾರಂತೆ. ಶಿವಣ್ಣ ಎಂಟ್ರಿ ಕೊಡೋದು ಪಕ್ಕಾ ಆಗ್ತಿದ್ದಂತೆಯೇ ಪ್ರೇಮ್ ಚಿತ್ರದಲ್ಲೊಂದು ಪವರ್ ಫುಲ್ ಕ್ಯಾರೆಕ್ಟರ್ ಸೃಷ್ಟಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಕ್ಯಾನ್ಸರ್ ಗೆದ್ದು ಬಂದಿರುವ ಶಿವರಾಜ್ ಕುಮಾರ್, ಇನ್ನೂ ಶೂಟಿಂಗ್ ಆರಂಭಿಸಿಲ್ಲ. ಶಿವಣ್ಣ ಸಂಪೂರ್ಣ ಗುಣಮುಖರಾದ ನಂತರ ಕಾಣಿಸಿಕೊಳ್ಳುವ ಮೊದಲ ಚಿತ್ರವೇ ಕೆಡಿ ಎನ್ನಲಾಗ್ತಿದೆ.
ಕೆಡಿ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದೆ. ಈಗಾಗಲೇ ಶಿವನೇ ನಿನ್ನಾಟ ಬಲ್ಲೋರ್ ಯಾರ್ ಯಾರೋ.. ಹಾಡು ಸೂಪರ್ ಹಿಟ್ ಆಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಕೆಡಿ ಚಿತ್ರ ರೆಟ್ರೋ ಕಾಲದ ಕಥೆಯನ್ನು ಹೊಂದಿದೆ. ಇನ್ನು ಪ್ರೇಮ್ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟ ಚಿತ್ರ ಜೋಗಿ. ಅದಾದ ನಂತರ ಶಿವಣ್ಣ ಮತ್ತು ಪ್ರೇಮ್ ನಡುವಿನ ಬಾಂಧವ್ಯ ಬೇರೆಯದೇ ಹಂತದಲ್ಲಿದೆ. ಪ್ರೇಮ್ ಜೊತೆ ಜೋಗಿ, ಜೋಗಯ್ಯ, ದಿ ವಿಲನ್ ಸಿನಿಮಾ ಮಾಡಿರುವ ಶಿವಣ್ಣ, ಇದೀಗ ಕೆಡಿ ಚಿತ್ರವನ್ನೂ ಮಾಡೋಕೆ ಎಸ್ ಎಂದಿರೋದೇ ದೊಡ್ಡ ಸೆನ್ಸೇಷನ್.
ಶಿವಣ್ಣ ಈಗಾಗಲೇ ಒಂದಿಷ್ಟು ಸಿನಿಮಾ ಕಂಪ್ಲೀಟ್ ಮಾಡಿದ್ದಾರೆ. ಅರ್ಜುನ್ ಜನ್ಯ ಅವರ 45 ಚಿತ್ರದ ಶೂಟಿಂಗ್ ಮುಗಿದಿದೆ. ಆ ಚಿತ್ರದಲ್ಲಿ ಉಪೇಂದ್ರ, ರಾಜ್ ಬಿ ಶೆಟ್ಟಿ ಕೂಡಾ ನಟಿಸಿದ್ದಾರೆ ಅನ್ನೋದು ವಿಶೇಷ. ಇನ್ನು ಉತ್ತರಕಾಂಡ ಚಿತ್ರ ಸೆಟ್ಟೇರಿ ಆಗಿದೆ. ಹೇಮಂತ್ ಕುಮಾರ್ ನಿರ್ದೇಶನದ ಭೈರವನ ಕೊನೆ ಪಾಠ ರೆಡಿಯಾಗುತ್ತಿದೆ. ಆರ್‌ಡಿಎಕ್ಸ್, ನೀ ಸಿಗೋವರೆಗೂ, ಎ ಫಾರ್ ಆನಂದ್, ವೀರ ಚಂದ್ರಹಾಸ, ಎಸ್‌ಆರ್‌ಕೆ.. ಹೀಗೆ ದೊಡ್ಡ ಪಟ್ಟಿಯೇ ಇದೆ. ಇವುಗಳಲ್ಲಿ ಎ ಫಾರ್ ಆನಂದ್, ಶಿವಣ್ಣ ಹೋಂ ಬ್ಯಾನರ್ ಸಿನಿಮಾ. ಇದೆಲ್ಲದರ ನಡುವೆ ಶಿವಣ್ಣ ಕಂಬ್ಯಾಕ್ ಸಿನಿಮಾ ಕೆಡಿ ಎನ್ನುವುದೇ ಸ್ಪೆಷಲ್.



