ಶಿವರಾಜ್ ಕುಮಾರ್ ಅವರು ಅಭಿನಯಿಸಿರುವ 130+ ಸಿನಿಮಾಗಳಲ್ಲಿ ಪೊಲಿಟಿಕಲ್ ಸಬ್ಜೆಕ್ಟ್ ಇರುವ ಸಿನಿಮಾಗಳೆಷ್ಟು..? ಅಲ್ಲೊಂದು ಶಿವಸೈನ್ಯ.. ಇಲ್ಲೊಂದು ಭೂಮಿ ತಾಯಿಯ ಚೊಚ್ಚಲ ಮಗ ಬಿಟ್ಟರೆ.. ಯಾವ ಚಿತ್ರಗಳೂ ಥಟ್ಟಂತ ನೆನಪಾಗುವುದಿಲ್ಲ. ಇದೀಗ ಅವರ ಇನ್ನೊಂದು ಹೊಸ ಸಿನಿಮಾ ಘೋಷಣೆಯಾಗಿದೆ. ಅದು ಪೊಲಿಟಿಕಲ್ ಸಬ್ಜೆಕ್ಟ್ ಸಿನಿಮಾ. ಹಾಗಂತ ಪೊಲಿಟಿಕಲ್ ಥ್ರಿಲ್ಲರ್ ಕಥೆ ಅಲ್ಲ. ಬಯೋಪಿಕ್. ಶಿವಣ್ಣ ಇದುವರೆಗೆ ಎಲ್ಲ ಮಾದರಿಯ ಸಿನಿಮಾಗಳನ್ನು ಟ್ರೈ ಮಾಡಿದ್ದರೂ.. ಬಯೋಪಿಕ್ ಮಾಡಿರಲಿಲ್ಲ. ಅದು ಈಗ ಸಾಧ್ಯ ಆಗ್ತಿರೋದು ಗುಮ್ಮಡಿ ನರಸಯ್ಯ ಚಿತ್ರದಿಂದ.
ಯಾರು ಈ ಗುಮ್ಮಡಿ ನರಸಯ್ಯ..?
ಗುಮ್ಮಡಿ ನರಸಯ್ಯ. ಆಂಧ್ರಪ್ರದೇಶದಲ್ಲಿ ಒಂದಲ್ಲ..ಎರಡಲ್ಲ.. ಸತತ 5 ಬಾರಿ ಶಾಸಕರಾಗಿದ್ದವರು. ತಮ್ಮ ಜೀವಿತಾವಧಿಯಲ್ಲಿ 5 ಬಾರಿ ಶಾಸಕರಾಗಿದ್ದರೂ.. ಗುಮ್ಮಡಿ ನರಸಯ್ಯ ಅವರು ಮೊದಲಿಗೆ ಕಾಲ್ನಡಿಗೆಯಲ್ಲೇ ವಿಧಾನಸೌಧಕ್ಕೆ ಬರುತ್ತಿದ್ದರು. ನಂತರ ಅವರು ಸೈಕಲ್ ಖರೀದಿಸಿದರು. ಆಸ್ತಿ ಮಾಡಲಿಲ್ಲ. ಕಾರು ಬರಲೇ ಇಲ್ಲ. ಮನೆ.. ಬಂಗಲೆ ಆಗಲೇ ಇಲ್ಲ. ಈಗಲೂ ಅವರು ಬದುಕುತ್ತಿರುವುದು ಹೆಂಚಿನ ಮನೆಯಲ್ಲಿ.
ಜನಾನುರಾಗಿಯೇ ಉಳಿದ ಇವರು ಕಮ್ಯುನಿಸ್ಟ್ ನಾಯಕ. ಸಿಪಿಐ (ಎಂಎಲ್-ನ್ಯೂ ಡೆಮಾಕ್ರಸಿ) ಇವರ ಪಕ್ಷ. ಇವರನ್ನು ಇವರ ಕ್ಷೇತ್ರದ ಜನ ʻಪ್ರಜಾಲಮನಿಷಿʼ ಎಂದೇ ಕರೆಯುತ್ತಾರೆ. ಶಾಸಕರಾಗಿದ್ದಕ್ಕೆ ಸಂಬಳ ಬರುತ್ತದಲ್ಲ.. ಆ ಸಂಬಳವನ್ನೆಲ್ಲ ಪಕ್ಷಕ್ಕೇ ನೀಡುತ್ತಿದ್ದ ನರಸಯ್ಯ, ನಂತರ ಪಕ್ಷದವರು ಕೊಟ್ಟ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಇವರ ಚುನಾವಣೆ ಖರ್ಚಿಗೆ ಜನರೇ ಹಣ ಕೊಡುತ್ತಿದ್ದರು. ಇವರ ಪತ್ನಿ ಸೌದೆ, ಭರಣಿ ಮಾಡಿ ಜೀವನ ಸಾಗಿಸುತ್ತಿದ್ದರು. 2009 ರಲ್ಲಿ ಅವಿಭಜಿತ ಆಂಧ್ರಪ್ರದೇಶ ವಿಭಜನೆಯಾಗಿದ್ದಷ್ಟೇ ಅಲ್ಲ.. ಕ್ಷೇತ್ರವೂ ಮೂರೂ ಕ್ಷೇತ್ರಗಳಲ್ಲಿ ಹಂಚಿ ಹೋಯಿತು. ಅದಾದ ಮೇಲೆ ಗುಮ್ಮಡಿ ನರಸಯ್ಯ ಗೆಲ್ಲಲಿಲ್ಲ. ಅಂತಹ ವ್ಯಕ್ತಿಯ ಜೀವನ ಚರಿತ್ರೆಯಲ್ಲಿ ಶಿವಣ್ಣ ನಟಿಸುತ್ತಿದ್ದಾರೆ.
ನೆನಪಾಗಿದ್ದು ಶಿವಸೈನ್ಯ..!
ಶಿವಣ್ಣ ನಟಿಸಿದ ರಾಜಕೀಯ ಸಿನಿಮಾ ಎಂದರೆ ತಕ್ಷಣ ನೆನಪಾಗುವುದು ಶಿವಸೈನ್ಯ. ಶಿವಮಣಿ ನಿರ್ದೇಶನದ ಆ ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ಹೋರಾಟ ಮಾಡಿ ರಾಜಕೀಯದಲ್ಲಿ ಪ್ರಬಲನಾಗುವ ಕಥೆ ಇತ್ತು. ಆ ಶಿವಸೈನ್ಯ ಚಿತ್ರಕ್ಕೆ ಪ್ರಫುಲ್ಲ ಕುಮಾರ ಮಹಂತ ಸ್ಫೂರ್ತಿಯಾಗಿದ್ದರು. ಅಸ್ಸಾಂ ಮುಖ್ಯಮಂತ್ರಿಯಾಗಿದ್ದ ಪ್ರಫುಲ್ಲ ಕುಮಾರ್ ಮಹಂತ, ಅಸ್ಸಾಂ ಗಣ ಪರಿಷತ್ ಸ್ಥಾಪನೆ ಮಾಡಿ, ವಿದ್ಯಾರ್ಥಿಗಳ ಆಂದೋಲನವನ್ನೇ ರೂಪಿಸಿ ಸಿಎಂ ಆಗಿದ್ದರು. ಈಗ ಆ ಪಕ್ಷ ಮತ್ತು ನಾಯಕ ಇಬ್ಬರೂ ರಾಜಕೀಯದಲ್ಲಿ ಅಪ್ರಸ್ತುತರಾಗಿದ್ದಾರೆ. ಗುಮ್ಮಡಿ ನರಸಯ್ಯ ಕಥೆಗೂ, ಪ್ರಫುಲ್ಲ ಕಥೆಗೂ ಹೋಲಿಕೆ ಇಲ್ಲವಾದರೂ.. ಶಿವಣ್ಣ ಮಾಡ್ತಿರೋ ಹಿನ್ನೆಲೆಯಲ್ಲಿ ಶಿವಸೈನ್ಯ ನೆನಪಾಗಿದೆ.
ಗುಮ್ಮಡಿ ನರಸಯ್ಯ ಕಥೆಗೆ ತೆಲುಗು ಮೂಲದ ಸುರೇಶ್ ರೆಡ್ಡಿ ನಿರ್ಮಾಪಕರಾಗಿದ್ದರೆ, ಪರಮೇಶ್ವರ್ ಹಿವರಾಲೆ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಆಗಲಿದೆ.



