ಶಿವರಾಜ್ ಕುಮಾರ್ ಅವರೀಗ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಡಿಸೆಂಬರ್ 24ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ವಿಶೇಷ ಎಂದರೆ ಶಿವಣ್ಣಗೆ ಚಿತ್ರರಂಗದ ನಟರೆಲ್ಲ ಹೋಗಿ ಧೈರ್ಯ ಹೇಳಿದರೆ, ಹೊರಗೆ ಬಂದ ಶಿವಣ್ಣ ಅಭಿಮಾನಿಗಳಿಗೆ ಧೈರ್ಯ ತುಂಬಿದರು. ಎಲ್ಲ ಓಕೆ.. ಅವರೆಲ್ಲಿ.. ಇದು ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ.
ಏಕೆಂದರೆ ಶಿವಣ್ಣ ಅವರನ್ನು ನೋಡಲು ಬಹುತೇಕ ಚಿತ್ರರಂಗವೇ ಬಂದಿದೆ. ಕೆಲವರು ಮನೆಗೆ ಬಂದು ಹೋಗಿದ್ದರೆ, ಕೆಲವರು ಫೋನಿನಲ್ಲಿ ಶುಭ ಕೋರಿದ್ದಾರೆ. ಆದರೆ.. ದೊಡ್ಮನೆಯ ಬಹುತೇಕ ಸದಸ್ಯರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ದೊಡ್ಮನೆ ಮಿಸ್ಸಿಂಗ್ ಕಾಡುತ್ತಿದೆ.
ನಟ ಕಿಚ್ಚ ಸುದೀಪ್, ಮಾಜಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಸಚಿವ ಮಧು ಬಂಗಾರಪ್ಪ ಮೊದಲಾದವರೆಲ್ಲ ಭೇಟಿ ನೀಡಿ ಶಿವಣ್ಣನ ಆರೋಗ್ಯ ವಿಚಾರಿಸಿದ್ದಾರೆ. ಮನೆಗೆ ಹೋಗಿದ್ದಾಗ ಸುದೀಪ್ ತುಸು ಭಾವುಕರಾಗಿದ್ದಾರೆ. ಶಿವಣ್ಣ ಮತ್ತು ಸುದೀಪ್ ನಡುವಿನ ಬಾಂಧವ್ಯವೇ ಬೇರೆಯದ್ದು. ನಟ ವಿನೋದ್ ರಾಜ್ ಅವರೂ ಶಿವಣ್ಣ ಮನೆಗೆ ಭೇಟಿ ನೀಡಿ ಆರೋಗ್ಯವಾಗಿ ಬನ್ನಿ ಶಿವಣ್ಣ ಎಂದು ಶುಭ ಹಾರೈಸಿದ್ದಾರೆ. ನೂರಾರು ಅಭಿಮಾನಿಗಳು ಶಿವಣ್ಣ ಮನೆಗೆ ಹೋಗಿ ಶುಭ ಕೋರಿದ್ದಾರೆ. ಆದರೆ.. ಶಿವಣ್ಣ ಅವರ ತಮ್ಮ ರಾಘವೇಂದ್ರ ರಾಜ್ ಕುಮಾರ್, ಯುವ ಹಾಗೂ ವಿನಯ್ ರಾಜ್ ಕುಮಾರ್, ಅಶ್ವಿನಿ ಪುನೀತ್ ಮತ್ತವರ ಕುಟುಂಬದವರಾಗಲೀ ಕಾಣಿಸಿಕೊಂಡಿಲ್ಲ. ತಂಗಿ ಪೂರ್ಣಿಮಾ ಮತ್ತವರ ಕುಟುಂಬದವರೇನೋ ಮನೆಗೆ ಬಂದು ಹೋಗಿದ್ದಾರೆ.
ಆದರೆ ದೊಡ್ಮನೆಯ ಹಿರಿಯರು ಎಲ್ಲಿ ಹೋದರು..?
ಅಭಿಮಾನಿಗಳಿಗೆ ಶಿವಣ್ಣ ಒಬ್ಬರೇ ಅಲ್ಲ, ಎಲ್ಲರ ಮೇಲೆ ಎಂಥ ಪ್ರೀತಿ ಗೌರವ ಇದೆ ಎಂದರೆ, ಬೇಸರವಾದರೂ ಹೊರಗೆ ತೋರಿಸಿಕೊಳ್ಳಲ್ಲ. ಇತ್ತೀಚೆಗೆ ದೊಡ್ಮನೆಯಲ್ಲಿನ ಬಾಂಧವ್ಯದ ಬಗ್ಗೆ ಪ್ರಶ್ನೆಗಳು ಮೂಡುತ್ತಿವೆ. ಈಗಲೂ ಅಷ್ಟೇ, ಸಣ್ಣದೊಂದು ಧ್ವನಿ ಶುರುವಾಗಿದೆ. ಆದರೆ ತಮಗೆ ತಾವೇ ಉತ್ತರವನ್ನೂ ಕಂಡುಕೊಂಡಿದ್ದಾರೆ. ಹಾಗೆ ಉತ್ತರ ಹುಡುಕಿಕೊಂಡು ಶಿವಣ್ಣ ಮನೆಗೆ ಹೋಗಿ, ದೇವರ ಪ್ರಸಾದ ಕೊಟ್ಟು, ಕಾಡುಮಲ್ಲೇಶ್ವರ ದೇವಸ್ಥಾನದ ಅರ್ಚಕರಿಂದ ಪೂಜೆ ಮಾಡಿಸಿದ್ದಾರೆ. ಹರಕೆ ಮಲೆ ಮಹದೇಶ್ವರನಿಗೆ ಮುಡಿ ಕೊಡುವುದಾಗಿ ಹರಕೆ ಹೊತ್ತಿದ್ದಾರೆ.
ತದನಂತರ ರಾತ್ರಿಯ ಹೊತ್ತಿಗೆ ಏರ್‌ಪೋರ್ಟಿಗೆ ತೆರಳಿದ ವೇಳೆ ಪತ್ರಕರ್ತರು ಮಾತನಾಡಿಸಿ ಹುಷಾರಾಗಿ ಬನ್ನಿ ಶಿವಣ್ಣ ಎನ್ನುತ್ತಾ ಬೀಳ್ಕೊಟ್ಟಿದ್ದಾರೆ. ಈ ವೇಳೆ ಪತ್ರಕರ್ತರ ಜೊತೆಯಲ್ಲೂ ದೈರ್ಯದಿಂದ ಮಾತನಾಡಿದ ಶಿವಣ್ಣ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ. ಆದರೆ..ಅಲ್ಲಿಯೂ ದೊಡ್ಮನೆಯವರು ಮಿಸ್ಸಿಂಗ್. ವಿಮಾನ ನಿಲ್ದಾಣದಲ್ಲಿ ಖಂಡಿತಾ ಜೊತೆಯಲ್ಲಿರುತ್ತಾರೆ ಎಂದುಕೊಂಡಿದ್ದವರಿಗೂ ದೊಡ್ಮನೆಯವರು ಕಾಣಿಸಿಕೊಂಡಿಲ್ಲ.
ಬಹುಶಃ ಮಾಧ್ಯಮಗಳ ಎದುರು ಬರುವ ಅಗತ್ಯವಿಲ್ಲ ಎಂದು ಹೋಗಿರಬೇಕು. ಹಾಗೆಲ್ಲ ಆಗಿರೋಕೆ ಸಾಧ್ಯವೇ ಇಲ್ಲ ಎನ್ನುತ್ತಿರುವವರಿಗೂ ಕೂಡಾ ವಿಮಾನ ನಿಲ್ದಾಣದಲ್ಲಾದರೂ ಕಾಣಿಸಿಕೊಂಡಿಲ್ಲ ಎಂದು ಕೇಳಿದಾಗ.. ಮೌನವಾಗುತ್ತಾರೆ. ಏನೋ ಆಗಿದೆ.. ಇಲ್ಲದಿದ್ದರೆ ಹಿಂಗೆಲ್ಲ ಆಗೋಕೆ ಸಾಧ್ಯವಿಲ್ಲ ಎನ್ನುವ ಅಭಿಮಾನಿಗಳಿಗೂ ಶಿವಣ್ಣ ಅವರ ಕುಟುಂಬವೇ ಒಂದು, ಉಳಿದ ಕುಟುಂಬವೇ ಒಂದು ಎಂಬ ಭಾವನೆ ಕಾಡುತ್ತಿದೆ.



