ಶಿವರಾಜ್ ಕುಮಾರ್ ಅವರನ್ನು ಟೀಕಿಸುವವರು ಕಡಿಮೆ. ಇಲ್ಲವೆಂದೇ ಹೇಳಬಹುದು. ಕೆಲವು ವಿಚಾರಗಳಲ್ಲಿ ಶಿವಣ್ಣ ಹತೋಟಿ ತಪ್ಪಿದರೂ, ಬೇಸರವಾದರೂ.. ಅದನ್ನು ಅಭಿಮಾನಿಗಳೇ ಯಾವ್ಯಾವುದೋ ಕಾರಣ ಕೇಳಿ ತಳ್ಳಿ ಹಾಕಿಬಿಡುತ್ತಾರೆ. ಇತ್ತೀಚಿನ ಥಗ್ ಲೈಫ್ ವಿವಾದ ಅದಕ್ಕೊಂದು ಉದಾಹರಣೆ ಅಷ್ಟೇ. ಅಂತಹ ಶಿವಣ್ಣ ಸಿನಿಮಾ ಜರ್ನಿಯಲ್ಲಿ 40 ವರ್ಷ ಪೂರೈಸಿದ್ದಾರೆ. ಚಿತ್ರರಂಗದ ಅನೇಕರು ಶಿವಣ್ಣ ಬಗ್ಗೆ ಚೆಂದದ ಮಾತನಾಡುತ್ತಿರುವಾಗ ದೊಡ್ಡಪ್ಪನ ಬಗ್ಗೆ ಯುವ ರಾಜ್ ಕುಮಾರ್ ಮಾತನಾಡಡಿದ್ದರೆ ಹೇಗೆ..?
ಯುವಗೆ ಶಿವಣ್ಣ ಇಷ್ಟದ ನಟ ಅಷ್ಟೇ ಅಲ್ಲ, ಗೈಡ್ ಕೂಡಾ. ದೊಡ್ಮನೆಯಲ್ಲಿ ದೊಡ್ಡ ಯಜಮಾನ ಎಂದರೆ ಈಗ ಶಿವಣ್ಣ ಅವರೇ. ಯುವ, ಶಿವಣ್ಣ ಅವರ ಪ್ರೀತಿಯ ತಮ್ಮ ರಾಘವೇಂದ್ರ ಅವರಿಗೆ ಅಣ್ಣ. ಮೂವರು ಅಣ್ಣ ತಮ್ಮಂದಿರಲ್ಲಿ ರಾಘವೇಂದ್ರ ಅವರಿಗೆ ಮಾತ್ರ ಇಬ್ಬರು ಗಂಡು ಮಕ್ಕಳು. ಪುನೀತ್ ಮತ್ತು ಶಿವಣ್ಣ ಇಬ್ಬರಿಗೂ ಹೆಣ್ಣು ಮಕ್ಕಳು. ಸಹಜವಾಗಿಯೇ ಲವ್ ಜಾಸ್ತಿ ಇರುತ್ತದೆ. ಅಂತಹ ದೊಡ್ಡಪ್ಪ ಸಿನಿಮಾ ಜರ್ನಿಯಲ್ಲಿ 40 ವರ್ಷ ಪೂರೈಸಿದಾಗ ನ್ಯಾಚುರಲ್ ಆಗಿಯೇ ದೊಡ್ಡಪ್ಪನ ಗುಣಗಳನ್ನು ಕೊಂಡಾಡಿದ್ದಾರೆ ಯುವ ರಾಜ್ ಕುಮಾರ್. ಒಂದು ಸುದೀರ್ಘ ಪತ್ರವನ್ನೇ ಬರೆದಿದ್ದಾರೆ.
ದೊಡ್ಡಪ್ಪ ನನಗೆ ಚಿಕ್ಕವನಾಗಿದ್ದಾಗಿನಿಂದಲೂ ಫೇವರೆಟ್ ನಟ ಅಷ್ಟೆ ಅಲ್ಲ, ಅವರು ನನ್ನ ಜೀವನದ ಮಾರ್ಗದರ್ಶಕರು ಕೂಡ
ಚಿತ್ರ ಹಾಗೂ ಚಿತ್ರರಂಗದ ಮೇಲಿನ ಅವರ ಬದ್ದತೆ ನಮಗೇಲ್ಲ ಪಾಠಗಳಂತೆ. ನಟನೆ ಮೇಲಿನ ಅವರ ಉತ್ಸಾಹ, ನನಂತೆಯೇ
ಎಷ್ಟೋ ಜನರ ಜೀವನೋತ್ಸಾಹಕ್ಕೆ ಕಾರಣವಾಗಿದೆ.
ಒಬ್ಬ ನಟ, ಶ್ರೇಷ್ಠ ನಟನಾಗುವುದು ಹೇಗೆ ಅಂತ ನಮ್ಮ ದೊಡ್ಡಪ್ಪನವರ ಒಂದೊಂದು ಚಿತ್ರಗಳು ತೋರಿಸಿಕೊಟ್ಟಿವೆ.
ಸದಾ ಇತರರಿಗಾಗಿ ಮಿಡಿಯುವ ದೊಡ್ಡಪ್ಪನ ಹೃದಯ
ಪ್ರೀತಿ, ವಿಶ್ವಾಸ, ಬಾಂಧವ್ಯಕ್ಕೆ ಎಂದಿಗೂ ನಿರಾಸೆ ಮೂಡಿಸದೆ, ಎಲ್ಲರನ್ನ ಕಾಯಲು ನಿಲ್ಲುತ್ತದೆ. ತನ್ನ ಅನಾರೋಗ್ಯದ ಸಂದರ್ಭದಲ್ಲುಕೂಡ ತನ್ನನ್ನ ನಂಬಿದವರಿಗೆ ಭರವಸೆಯ ಸಾಂತ್ವನ ಹೇಳಿದ್ದು, ದೊಡ್ಡಪ್ಪನವರ ವಿಶಾಲ ಹೃದಯವಂತಿಕೆ.
ಅವರ ಈ ಐತಿಹಾಸಿಕ ಸಿನಿ ಜರ್ನಿಯಲ್ಲಿ ಅದೇಷ್ಟೋ ಸೂಪರ್ ಹಿಟ್, ಬ್ಲಾಕ್ ಬಾಸ್ಟರ್ ಚಿತ್ರಗಳು ಹೊರಬಂದಿವೆ.
ಅದ್ರಲ್ಲಿ ಬೆಸ್ಟ್ ಆಫ್ ಬೆಸ್ಟ್ ಚಿತ್ರವಾದ ಓಂ ಚಿತ್ರದಲ್ಲಿ ನಾನು ಅವರೊಂದಿಗೆ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದು ನನ್ನ ಸೌಭಾಗ್ಯ, ನಾನ್ ಅದನ್ನ ಯಾವತ್ತು ಮರಿಯೋಲ್ಲ. ಮತ್ತೆ ಅದೆ ಥರದ ಅವಕಾಶಕ್ಕೆ ಕಾಯ್ತಿದ್ದೀನಿ.
40 ವರ್ಷಗಳ ನಿಮ್ಮ ಜರ್ನಿ ಭಾರತದ ಚಿತ್ರರಂಗದಲ್ಲಿ ಇತಿಹಾಸ ಸೃಷ್ಠಿಸಿದೆ. ನಿಮ್ಮ ಅಭಿನಯ ನಮ್ಮಂತಹ ಅದೇಷ್ಟೋ ಪೀಳಿಗಳಿಗೆ ಸ್ಪೂರ್ತಿ ನೀಡಿದೆ. ನಿಮ್ಮ ಈ ಸಿನಿ ಪಯಣ ಹೀಗೆ ಮುಂದುವರೆಯಲಿ. ನಿಮ್ಮ 40 ವರ್ಷದ ಸಿನಿ ಪಯಣವನ್ನ ನಾನು ಸಂಭ್ರಮದಿಂದ, ಸಂಭ್ರಮಿಸುತ್ತೇನೆ.
♥️ದೊಡ್ಡಪ್ಪ…
ಎಂದು ಪೋಸ್ಟ್ ಮಾಡಿದ್ದಾರೆ ಯುವ ರಾಜ್ ಕುಮಾರ್.
ಅಂದಹಾಗೆ ಯುವ ಓಂ ಚಿತ್ರದಲ್ಲಿ ನಟಿಸಿದ್ದರು ಕೂಡಾ. ಓಂ ಚಿತ್ರದ ಕ್ಲೈಮಾಕ್ಸ್ ಸೀನ್ʻನಲ್ಲಿ ಬರುವ ಶಿವಣ್ಣ-ಪ್ರೇಮಾ ದಂಪತಿಯ ಇಬ್ಬರು ಮಕ್ಕಳಲ್ಲಿ ಒಬ್ಬ ಯುವ.



