ಹೊಸ ವರ್ಷ 2025 ಶುರುವಾಗಿದೆ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತಯೇ ಹೊಸ ಹೊಸ ನಿರೀಕ್ಷೆಗಳೂ ಹುಟ್ಟುತ್ತವೆ. 2024ರಲ್ಲಿ ಗೆದ್ದಿದ್ದು ಕಿಚ್ಚ ಸುದೀಪ್, ಉಪೇಂದ್ರ, ಶಿವರಾಜ್ ಕುಮಾರ್, ಶ್ರೀಮುರಳಿ, ಗಣೇಶ್ ಮತ್ತು ದುನಿಯಾ ವಿಜಯ್ ಮಾತ್ರ. ಉಳಿದಂತೆ ಡಾಲಿ ಧನಂಜಯ, ಧ್ರುವ ಸರ್ಜಾ, ಪ್ರಜ್ವಲ್ ದೇವರಾಜ್ ಸೋತು ಸೊರಗಿದರು. ಈಗ ಹೊಸ ವರ್ಷ ಶುರುವಾಗುತ್ತಿದ್ದಂತೆಯೇ ಹೊಸ ಸಿನಿಮಾಗಳ ನಿರೀಕ್ಷೆಗಳೂ ಶುರುವಾಗಿವೆ. 2025ರಲ್ಲಿ ಬಹುತೇಕ ಕನ್ನಡದ ಎಲ್ಲ ಸ್ಟಾರ್ ಸಿನಿಮಾಗಳೂ ಕ್ಯೂನಲ್ಲಿವೆ.
ಧ್ರುವ ಸರ್ಜಾ ಅಭಿನಯದ ಕೆಡಿ :
ಧ್ರುವ ಸರ್ಜಾ-ಜೋಗಿ ಪ್ರೇಮ್ ಕಾಂಬಿನೇಷನ್ ಸಿನಿಮಾ. ಹೀಗಾಗಿಯೇ ನಿರೀಕ್ಷೆ ಡಬಲ್ ಆಗಿದೆ. ಕೆವಿಎನ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್ ಕೂಡಾ ನಟಿಸಿದ್ದು, ರೀಷ್ಮಾ ನಾಣಯ್ಯ ಹೀರೋಯಿನ್. ಮಾರ್ಟಿನ್ ಸೋಲಿನ ನಂತರ ಕೆಡಿ ಧ್ರುವ ಸರ್ಜಾಗೆ ಬಹು ನಿರೀಕ್ಷಿತ ಚಿತ್ರ. ಪ್ರೇಮ್ ಈಗಾಗಲೇ ಶಿವನೇ ನಿನ್ನಾಟ ಬಲ್ಲೋರ್.. ಹಾಡು ಬಿಟ್ಟಿದ್ದು, ಆರ್ಭಟಿಸಿದೆ.
ರಿಷಬ್ ಶೆಟ್ಟಿ ಕಾಂತಾರ-01 :
ಕಾಂತಾರ ಡಿವೈನ್ ಹಿಟ್ ಆದ ಕಾರಣಕ್ಕೆ ಸೆಟ್ಟೇರಿದ ಕಾಂತಾರದ ಪ್ರೀಕ್ವೆಲ್. ಹೊಂಬಾಳೆ ನಿರ್ಮಾಣದ ಚಿತ್ರ ಚಿತ್ರೀಕರಣ ಹಂತದಲ್ಲಿದ್ದು, ಈ ವರ್ಷವೇ ರಿಲೀಸ್ ಆಗಲಿದೆ. ಸಿನಿಮಾ ಡೇಟ್ ಅನೌನ್ಸ್ ಆಗಿದ್ದರೂ, ಚಿತ್ರತಂಡ ಎಲ್ಲ ಮಾಹಿತಿಗಳನ್ನೂ ಗೌಪ್ಯವಾಗಿಯೇ ಇಟ್ಟಿದೆ.
ಯಶ್ ಟಾಕ್ಸಿಕ್ :
ಕೆಜಿಎಫ್ ನಂತರ ಸಿಕ್ಕಾಪಟ್ಟೆ ರೆಸ್ಟ್ ತಗೊಂಡು ಬರುತ್ತಿರುವ ಯಶ್ ಅವರ ಟಾಕ್ಸಿಕ್ ಮೇಲೆ ನಿರೀಕ್ಷೆಗಳಿವೆ. ಹೊಸ ಸಿನಿಮಾ ಬಂದು ವರ್ಷಗಳು ಕಳೆದೇ ಹೋಗಿವೆ. ಹೀಗಾಗಿ ಈ ೨೦೨೫ರಲ್ಲಿ ರಿಲೀಸ್ ಆಗಲಿರುವ ಟಾಕ್ಸಿಕ್ ಮೇಲೆ ಭರ್ಜರಿ ನಿರೀಕ್ಷೆ ಇದೆ. ಮಾಸ್ ಹೀರೋ ಚಿತ್ರಕ್ಕೆ ಮಹಿಳಾ ನಿರ್ದೇಶಕಿ ಎನ್ನುವುದೇ ಕುತೂಹಲ.
ಮಲ್ಟಿಸ್ಟಾರರ್ 45 :
ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ಎಂಬ ತ್ರಿಮೂರ್ತಿಗಳನ್ನು ಒಟ್ಟುಗೂಡಿಸಿ, ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ ಅರ್ಜುನ್ ಜನ್ಯ. ಟೆಕ್ನಾಲಜಿ, ಮೇಕಿಂಗ್ ಬಗ್ಗೆ ಈಗಾಗಲೇ ಚಿತ್ರನಗರದಲ್ಲಿ ಮೆಚ್ಚುಗೆಯ ಮಾತು ಕೇಳಿ ಬರುತ್ತಿದೆ. ರಮೇಶ್ ರೆಡ್ಡಿ ನಿರ್ಮಾಣದ 45 ಚಿತ್ರ 2025ರ ಬಹುನಿರೀಕ್ಷಿತ ಸಿನಿಮಾ.
ಗಣೇಶ್-ರಮೇಶ್ ಅರವಿಂದ್ ಯುವರ್ಸ್ ಸಿನ್ಸಿಯರ್ಲಿ ರಾಮ್ : ಮೊದಲ ಬಾರಿಗೆ ಗಣೇಶ್ ಮತ್ತು ರಮೇಶ್ ಅರವಿಂದ್ ಒಟ್ಟಿಗೇ ನಟಿಸುತ್ತಿರುವ ಸಿನಿಮಾ, 2025ಕ್ಕೆ ರಿಲೀಸ್ ಆಗಲಿದೆ.
ದುನಿಯಾ ವಿಜಯ್ ಅವರ ಹೊಸ ಚಿತ್ರ ಅನೌನ್ಸ್ ಆಗಿದೆ. ಟೈಟಲ್ ಸೇರಿದಂತೆ ಬಹುತೇಕ ವಿಷಯಗಳು ಗೌಪ್ಯವಾಗಿಯೇ ಇವೆ. ಭೀಮ ನಂತರ ವಿಜಯ್ ಅವರೇ ನಿರ್ದೇಶಿಸಲಿರುವ ಸಿನಿಮಾ ಇದು. ಇನ್ನು ಶ್ರೀಮುರಳಿಯವರ ಪರಾಕ್. ಶ್ರೀಮುರಳಿ ಅಭಿನಯದ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚುವುದಕ್ಕೆ ಕಾರಣ ಬಘೀರನ ಸಕ್ಸಸ್.
ಇನ್ನು ನಿರ್ದೇಶಕರಾಗಿ ದಿನಕರ್ ತೂಗುದೀಪ ನಿರ್ದೇಶನದ ರಾಯಲ್, ಯೋಗರಾಜ ಭಟ್ ನಿರ್ದೇಶನದ ಮನದ ಕಡಲು ಚಿತ್ರಗಳ ಮೇಲೆ ವಿಪರೀತ ಎನ್ನುವಂತಹ ನಿರೀಕ್ಷೆಗಳಿವೆ. ಶರಣ್ ಅಭಿನಯದ ಛೂಮಂತರ್ ಜನವರಿಯಲ್ಲೇ ರಿಲೀಸ್ ಆಗುತ್ತದೆ. ಡಾಲಿ ಧನಂಜಯ ಅವರ ಯಾವ ಚಿತ್ರ ಮೊದಲು ಬರುತ್ತದೆ ಎನ್ನುವ ಕುತೂಹಲ ಹಾಗೆಯೇ ಇದೆ. ಡಾಲಿ ಧನಂಜಯ್ ಮದುವೆಯೂ ಈ ವರ್ಷವೇ ನಡೆಯಲಿದೆ.
ಸುದೀಪ್ ಅಭಿನಯದ ಚಿತ್ರಗಳಲ್ಲಿ ಯಾವುದು ಸೆಟ್ಟೇರಲಿದೆ ಎನ್ನುವುದು ಗೊತ್ತಿಲ್ಲ. ರಕ್ಷಿತ್ ಶೆಟ್ಟಿ ನಟನೆ, ನಿರ್ದೇಶನದ ಚಿತ್ರ ಯಾವುದು ಅನ್ನೋದು ಕನ್‌ಫರ್ಮ್ ಇಲ್ಲ. ದರ್ಶನ್ ಅವರ ಡೆವಿಲ್ ಸಿನಿಮಾ ಯಾವಾಗ ಶುರುವಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಯುವ ರಾಜ್ ಕುಮಾರ್ ಅವರ ಯಕ್ಕಾ, ವಿನಯ್ ರಾಜ್ ಕುಮಾರ್ ಅವರ ಸಿಟಿ ಲೈಟ್ಸ್ (ದುನಿಯಾ ವಿಜಯ್ ಮಗಳು ನಾಯಕಿ) ಮತ್ತು ಬಹಳ ವರ್ಷಗಳಿಂದ ಪೆಂಡಿಂಗ್ ಇರುವ ಅಂದೊಂದಿತ್ತು ಕಾಲ ೨೦೨೫ಕ್ಕೆ ಬರಬಹುದು. ಇನ್ನು ಪ್ರಜ್ವಲ್ ದೇವರಾಜ್ ಅಭಿನಯದ ಕರಾವಳಿ ಕೂಡಾ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ.



