ನಟಿ ಲೀಲಾವತಿ ಅವರ ದೇಹದ ಆರೋಗ್ಯ ಕ್ಷೀಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರರಂಗದ ಹಲವು ಕಲಾವಿದರು ಲೀಲಾವತಿ ಅವರನ್ನು ನೋಡಿಕೊಂಡು ಹೋಗುತ್ತಿದ್ಧಾರೆ. ಮಲಗಿದ್ದಲ್ಲಿಯೇ ಮಲಗಿರುವ ಲೀಲಾವತಿ ಅವರನ್ನು ಮಗುವಿನಂತೆ ಆರೈಕೆ ಮಾಡುತ್ತಿರುವುದು ವಿನೋದ್ ರಾಜ್ ದಂಪತಿ. ಲೀಲಾವತಿ ಅವರಿಗೆ ಯಾರು ಬಂದರೂ ಹೋದರೂ.. ಗುರುತು ಸಿಕ್ಕುವುದಿಲ್ಲ. ಆದರೆ ಲೀಲಾವತಿ ಮನೆಗೆ ಶಿವಣ್ಣ ದಂಪತಿ ಭೇಟಿ ಕೊಟ್ಟಾಗ ನಡೆದಿದ್ದೇ ಬೇರೆ.
ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ನೆಲಮಂಗಲದ ಸಮೀಪದ ಸೋಲದೇವನಹಳ್ಳಿಯ ನಿವಾಸಕ್ಕೆ ಭೇಟಿ ನೀಡಿದರು. ಶಿವಣ್ಣ ಲೀಲಾವತಿ ಹಣೆಗೆ ಮುತ್ತಿಟ್ಟು ಶುಭ ಹಾರೈಸಿದರೆ, ವಿನೋದ್ ರಾಜ್ ಗೀತಾ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಲೀಲಾವತಿ ಶಿವಣ್ಣ ಅವರ ಧ್ವನಿ ಕೇಳಿಯೇ ಗುರುತು ಹಿಡಿದರು.
ʻʻಅಮ್ಮ ನನ್ನ ಧ್ವನಿ ಕಂಡು ಹಿಡಿದರು. ಈ ವಯಸ್ಸಿನಲ್ಲಿಯೂ ಅವರು ನೋವನ್ನು ಸಹಿಸಿಕೊಂಡು ಇರುವ ಶಕ್ತಿ ಇದೆಯಲ್ಲ ಅದು ಸಾಮಾನ್ಯದ್ದಲ್ಲ. ಯೋಗ ಪುರುಷರು ಅನ್ನುತ್ತಾರಲ್ಲ ಹಾಗೆ. ಈಗಲೂ ಅವರು ಸ್ಟ್ರಾಂಗ್ ಆಗಿದ್ದಾರೆ. ಆಗಿನ ಕಾಲದವರು ಅವರು, ಒಳ್ಳೆಯ ಮನಸ್ಸಿರುವವರು, ಒಳ್ಳೆಯ ವ್ಯಕ್ತಿ ಉಳ್ಳವರು. ನಾವು ಅವರನ್ನು ಇಷ್ಟೋಂದು ಪ್ರೀತಿಸಲು ಅದೇ ಕಾರಣʼʼ ಎಂದ ಶಿವಣ್ಣ‘ನಾನು ಚಿಕ್ಕವನಿದ್ದಾಗಿನಿಂದಲೂ ನಮ್ಮ ಬಗ್ಗೆ ಅಪಾರ ಪ್ರೀತಿ ಲೀಲಾವತಿ ಅವರಿಗೆ. ನಾವು ಅವರನ್ನು ಯಾವಾಗ ಕಂಡರು ಅದೇ ಆತ್ಮೀಯತೆ ಅದೇ ಪ್ರೀತಿ. ಅವರ ಆ ಪ್ರೀತಿಯನ್ನು ಎಂದೂ ಮರೆಯೋಕಾಗಲ್ಲ. ಈಗ ವಿನೋದ್ ಅನ್ನು ನೋಡಿದರೆ ಅವರ ತಾಯಿಯನ್ನೇ ನೋಡಿದಂತೆ ಆಗುತ್ತದೆ. ಅವರ ಆರೋಗ್ಯ ಕ್ಷೀಣಿಸಿರುವ ಬಗ್ಗೆ ಬೇಜಾರಾಗುತ್ತೆ ಆದರೆ ಅವರು ಇನ್ನೂ ನಮ್ಮೊಂದಿಗೆ ಇರುತ್ತಾರೆ ಎಂಬ ನಂಬಿಕೆ ಇದೆ. ಅವರೊಟ್ಟಿಗೆ ದೇವರ ಆಶೀರ್ವಾದವಿದೆ ಎಲ್ಲದಕ್ಕಿಂತಲೂ ಹೆಚ್ಚಿನದಾಗಿ ಅವರ ಮಗನ ಪ್ರೀತಿ ಇದೆ’’ ಎಂದಿದ್ದಾರೆ.
ತಾಯಿಯ ಅನಾರೋಗ್ಯದ ಬಗ್ಗೆ ಆತಂಕಿತರಾಗಿ, ಅಮ್ಮನೊಟ್ಟಿಗೆ ತಾನೂ ಹೋಗಿಬಿಡುತ್ತೇನೆ ಎಂಬ ಮಾತನ್ನಾಡಿದ್ದ ವಿನೋದ್ಗೆ ಧೈರ್ಯ ತುಂಬಿದ ಶಿವಣ್ಣ ಹಾಗೆಲ್ಲ ಧೈರ್ಯ ಕಳೆದುಕೊಳ್ಳಬೇಡಿ. ನಾವು ತಾಳಿಕೊಂಡಿಲ್ಲವೇ. ನೋವು ಎಲ್ಲರಿಗೂ ಆಗುತ್ತೆ. ನೀವು ಹೇಗೆ ತಾಯಿ ಚೆನ್ನಾಗಿರಬೇಕು ಎಂದು ಬಯಸುತ್ತೀರೋ ಹಾಗೆಯೇ ನಿಮ್ಮ ತಾಯಿಯೂ ನೀವು ಚೆನ್ನಾಗಿರಬೇಕು ಎಂದು ಬಯಸುತ್ತಾರೆ ಎಂದರು.
ಲೀಲಾವತಿ ಮನೆಗೆ ಹಲವು ನಟ ನಟಿಯರು ಭೇಟಿ ನೀಡುತ್ತಿದ್ಧಾರೆ. ಅರ್ಜುನ್ ಸರ್ಜಾ, ದರ್ಶನ್, ಅಭಿಷೇಕ್ ಅಂಬರೀಷ್ ಇತ್ತೀಚೆಗೆ ಭೇಟಿ ನೀಡಿದ್ದರು. ಇನ್ನು ಗಿರಿಜಾ ಲೋಕೇಶ್, ಪದ್ಮಾ ವಾಸಂತಿ, ಶ್ರೀನಾಥ್, ತಾರಾ, ಮಾಳವಿಕ ಅವಿನಾಶ್, ಶೃತಿ, ಸುಧಾರಾಣಿ ಮೊದಲಾದ ಕಲಾವಿದರು ವಿನೋದ್ ರಾಜ್ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ಧಾರೆ.
ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಲೀಲಾವತಿ ಅವರ ಕನಸಿನ ಪಶು ಆಸ್ಪತ್ರೆ ಉದ್ಘಾಟಿಸಿ ಬಂದು ಲೀಲಾವತಿ ಅವರ ಆರೋಗ್ಯ ವಿಚಾರಿಸಿದ್ಧಾರೆ.



