ಶಿವಣ್ಣ ಹಾಗೂ ಪ್ರಕಾಶ್ ರೈ ಅವರ ಕ್ಷಮೆಯನ್ನು ನಾನು ಸ್ವೀಕರಿಸುವುದಿಲ್ಲ. ತಮಿಳು ನಟ ಸಿದ್ದಾರ್ಥ ಅವರ ಹೇಳಿಕೆಯ ಬಗ್ಗೆ ಇದು ಬಹುತೇಕ ಕಡೆ ಬಂದ ಹೆಡ್ ಲೈನ್. ಆದರೆ ಒಳಹೊಕ್ಕು ಇಡೀ ಹೇಳಿಕೆಯ ಅರ್ಥ ಗಮನಿಸಿದರೆ ಕಥೆ ಬೇರೆಯೇ ಇದೆ.
ಕಾವೇರಿ ಗಲಾಟೆ ವಿವಾದ ತಾರಕಕ್ಕೇರುತ್ತಿದೆ. ತಮಿಳುನಾಡು ಸಿಎಂ ಸ್ಟಾಲಿನ್ ಅವರನ್ನು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಾಗಲೀ, ಡಿಸಿಎಂ ಡಿಕೆ ಶಿವಕುಮಾರ್ ಆಗಲೀ ಟೀಕೆ ಮಾಡಿಲ್ಲ. ಬದಲಿಗೆ ಮೋದಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅತ್ತ ಬಿಜೆಪಿಯವರು ಸ್ಟಾಲಿನ್ ಮತ್ತು ಸಿದ್ದರಾಮಯ್ಯ ಅವರನ್ನು ಅಟ್ಯಾಕ್ ಮಾಡುತ್ತಾ ಮೋದಿಯ ಬೆನ್ನಿಗೆ ನಿಂತಿದ್ದಾರೆ. ಕನ್ನಡ ಪರ ಸಂಘಟನೆಗಳೂ ಅಪ್ಪಟ ರಾಜಕೀಯದಲ್ಲಿ ಇಬ್ಭಾಗವಾಗಿವೆ.
ಇದರ ನಡುವೆ ಕಾವೇರಿ ವಿಷಯ, ತಮಿಳುನಾಡು ಮತ್ತು ಕರ್ನಾಟಕ ಸಿನಿಮಾ ಕಲಾವಿದರನ್ನು ಸಂಕಟಕ್ಕೆ ದೂಡಿದೆ. ಇತ್ತೀಚೆಗೆ ಕರ್ನಾಟಕ ಬಂದ್ʻಗೆ ಕರೆ ಕೊಟ್ಟಿದ್ದ ಸಮಯದಲ್ಲಿಯೇ ತಮಿಳು ನಟ ಸಿದ್ದಾರ್ಥ ಬೆಂಗಳೂರಿನಲ್ಲಿ ತಮ್ಮ ಸಿನಿಮಾ ಪ್ರಮೋಷನ್ನಿಗೆ ಬಂದಿದ್ದರು. ಇದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಸುದ್ದಿಗೋಷ್ಟಿಗೆ ಅಡ್ಡಿ ಪಡಿಸಿದ್ದರು. ಇದರ ಬಗ್ಗೆ ಪ್ರತಿಭಟನೆ ವೇಳೆಯಲ್ಲಿ ನಟ ಶಿವ ರಾಜ್ಕುಮಾರ್, ಕನ್ನಡಿಗರ ಪರವಾಗಿ ಸಿದ್ದಾರ್ಥ ಅವರ ಕ್ಷಮೆ ಕೇಳಿದ್ದರು. ನಟ ಪ್ರಕಾಶ್ ರಾಜ್ ಅವರೂ ಕ್ಷಮೆ ಕೇಳಿದ್ದರು. ಈ ಬಗ್ಗೆ ಮಾತನಾಡಿರುವ ಸಿದ್ದಾರ್ಥ, ಶಿವರಾಜ್ ಕುಮಾರ್ ಅವರು ಕ್ಷಮೆ ಕೇಳುವ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ ಉದ್ಯಮದ ಪರವಾಗಿ ಹಿರಿಯ ನಟ ಶಿವರಾಜ್ ಕುಮಾರ್ ಅವರು ಕ್ಷಮೆ ಕೋರಿದ್ದಾರೆ. ಆದರೆ ಇದನ್ನು ನಾನು ಸ್ವೀಕರಿಸಲಾಗುವುದಿಲ್ಲ. ಈ ಘಟನೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೆ ತಮ್ಮ ಉದಾತ್ತ ಹೃದಯದಿಂದಾಗಿ ಅವರು ಈ ರೀತಿ ನಡೆದುಕೊಂಡಿದ್ದಾರೆ. ಅದು ಶಿವಣ್ಣ ಅವರ ದೊಡ್ಡ ಗುಣ. ಅವರಿಗೂ ಮತ್ತು ನಡೆದ ಘಟನೆಗೂ ಸಂಬಂಧವೇ ಇರಲಿಲ್ಲ. ಆದರೂ, ಕಲಾವಿದರ ಮೇಲಿನ ಗೌರವಕ್ಕಾಗಿ ಅವರು ನನಗೆ ಕ್ಷಮೆ ಕೇಳಿದ್ದಾರೆ. ಅವರು ಮಾಡದೇ ಇರುವ ತಪ್ಪಿಗೆ ಕ್ಷಮೆ ಕೇಳಬಾರದಿತ್ತು. ಹಾಗಾಗಿ ನಾನು ಅವರ ಕ್ಷಮೆಯನ್ನು ಸ್ವೀಕರಿಸುವುದಿಲ್ಲ. ಆ ಇಬ್ಬರ ಕಲಾವಿದರ ಮೇಲೆ ನನಗೆ ಇನ್ನೂ ಗೌರವ ಹೆಚ್ಚಾಯಿತು ಎಂದಿದ್ದಾರೆ ಸಿದ್ದಾರ್ಥ.
ತಮಿಳು ನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವಿನ ಕಾವೇರಿ ನದಿ ವಿವಾದಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರ ನಿರ್ಮಾಪಕನಾಗಿ ಇದರಿಂದ ನನಗೆ ಹೆಚ್ಚು ನಷ್ಟವಾಗಿದೆ ಎಂದಿದ್ದಾರೆ. ಇನ್ಸ್ಟಾಗ್ರಾಂ ಲೈವ್ನಲ್ಲಿ ಈ ಬಗ್ಗೆ ಮಾತನಾಡಿರುವ ಅವರು ‘ಅಲ್ಲಿ ಏನಾಯಿತೆಂದು ಎಲ್ಲರೂ ನೋಡಿದ್ದೀರಿ. ಅನೇಕ ಕ್ಯಾಮರಾಗಳ ಮುಂದೆಯೇ ಆ ಘಟನೆ ನಡೆದಿದೆ. ಅದರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ಅಲ್ಲಿನ ಜನರೊಂದಿಗೆ ಉತ್ತಮ ಚಿತ್ರವೊಂದನ್ನು ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ಬೇಸರವಾಗಿದೆ ಎಂದಿದ್ದಾರೆ.



