ಹಾಡುಗಳಿಗೆ ನಾನೇ ಕಿಂಗು. ಇದು ಜೋಗಿ ಪ್ರೇಮ್ ಅವರಿಗೆ ಇರೋ ಬಿರುದು. ಈಗ ʻಕೆಡಿ ಪ್ರೇಮ್ʼ ಆಗಿ ಒಂದು ಝಲಕ್ಕು ಕೊಟ್ಟಿದ್ದಾರೆ. ಜೋಗಿ ಪ್ರೇಮ್ ಚಿತ್ರಗಳೆಂದರೆ ಹಾಡುಗಳು ಅದ್ಭುತವಾಗಿರುತ್ತವೆ. ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ಸಿಗಬಹುದು. ಆದರೆ ಪ್ರೇಮ್ ಸಿನಿಮಾ ಎಂದರೆ ಹಾಡುಗಳಂತೂ ಸಖತ್ತಾಗಿರುತ್ತವೆ ಎಂಬ ಮಾತಿನಲ್ಲಿ ಎರಡನೇ ಮಾತಿಲ್ಲ. ಅದನ್ನು ಪದೇ ಪದೇ ಪ್ರೂವ್ ಮಾಡಿರುವ ಪ್ರೇಮ್, ಈಗ ಕೆಡಿ ಚಿತ್ರದ ಮೊದಲ ಹಾಡಿನ ಝಲಕ್ ಬಿಟ್ಟಿದ್ದಾರೆ.
ಗುರುವೇ ನಿನ್ನ ಆಟ ಬಲ್ಲೋರ್ ಯಾರ್ ಯಾರೋ.. ಶಿವ.. ಎಂದು ಪ್ರೇಮ್ ಹಾಡಿರುವ ಗೀತೆಯ ಒಂದೇ ಒಂದು ಸಣ್ಣ ಝಲಕ್ ಹೊರಬಿಟ್ಟಿದ್ದಾರೆ.
ಬಹು ಭಾಷೆಯಲ್ಲಿ ಬರ್ತಿರೋ ಕೆಡಿ ಚಿತ್ರದ ಬೇರೆ ಭಾಷೆಯ ಲಿರಿಕ್ ರೈಟರ್ʻಗಳು ಕೂಡ ಮಾತನಾಡಿದ್ದು ಇದೊಂದು ಒಳ್ಳೆ ಹಾಡು. ಸಂಗೀತವಂತೂ ಅದ್ಭುತ ಎಂದು ಹೇಳಿಕೊಂಡಿದ್ದಾರೆ. ಗಾಯಕ ಕೈಲಾಶ್ ಖೇರ್ ಸಹ ಈ ಹಾಡನ್ನ ಬಹುವಾಗಿಯೇ ಮೆಚ್ಚಿಕೊಂಡಿದ್ದಾರೆ. ಗಾಯಕ ವಿಜಯ್ ಪ್ರಕಾಶ್ ಕೂಡ ಈ ಗೀತೆಯನ್ನ ಕೊಂಡಾಡಿದ್ದಾರೆ.
ಶಿವನ ಈ ಒಂದು ಹಾಡನ್ನ ಡಿಸೆಂಬರ್-24 ರಂದು ಬೆಳಗ್ಗೆ 11.04 ನಿಮಿಷಕ್ಕೆ ರಿಲೀಸ್ ಮಾಡಲಾಗುತ್ತಿದೆ. ಈ ಮೂಲಕ ಕೆಡಿ ಚಿತ್ರದ ಸಂಗೀತದ ಅಬ್ಬರ ಶುರುವಾಗಲಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಪ್ರೇಮ್ ಅವರಿಗಾಗಿಯೇ ಸ್ಪೆಷಲ್ ಟ್ಯೂನ್ ಹಾಕಿದಂತಿದೆ. ಧ್ರುವ ಸರ್ಜಾ-ರೀಷ್ಮಾ ನಾಣಯ್ಯ ಸಖತ್ತಾಗಿ ಕುಣಿಯುತ್ತಿರೋ ಫೋಟೋವನ್ನು ಹಾಕಿರುವ ಪ್ರೇಮ್, ಹಾಡಿನ ಚಿತ್ರೀಕರಣ ಯಾವ ರೀತಿ ಇರಲಿದೆ ಎಂಬ ಕ್ಲೂ ಕೊಟ್ಟಿದ್ದಾರೆ.
ಅಂದಹಾಗೆ ಗುರುವೇ ನಿನ್ನ ಆಟ ಬಲ್ಲೋರ್ ಯಾರ್ ಯಾರೋ.. ಹಾಡು ಪ್ರಸಿದ್ಧ ಜಾನಪದ ಗೀತೆ. ಗುರು, ಇಲ್ಲಿ ಶಿವನಾಗಿದ್ದಾನೆ. ಅಂದಹಾಗೆ ಶಿವನೇ ನಿನ್ನ ಆಟ ಬಲ್ಲೋರ್ ಯಾರ್ ಯಾರೋ.. ಎಂಬ ಜಾನಪದ ಗೀತೆಯೂ ಇದೆ. ಪ್ರೇಮ್ ತಮ್ಮ ಹಿಂದಿನ ಚಿತ್ರಗಳಲ್ಲಿಯೂ ಜಾನಪದ ಗೀತೆಗಳ ಝಲಕ್ ತೋರಿಸಿದ್ದರು. ವಿಲನ್ ಚಿತ್ರದಲ್ಲಿ ನೋಡಿವಳಂದಾವ.. ಎಂಬ ಗೀತೆಯನ್ನು ಕಮರ್ಷಿಯಲ್ಲಾಗಿ ಅಳವಡಿಸಿಕೊಂಡು ಗೆದ್ದಿದ್ದರು. ಜೋಗಿ ಚಿತ್ರದಲ್ಲಿ ಮಾದಪ್ಪನ ಹಾಡಿನ ಸದ್ಬಳಕೆ ಮಾಡಿಕೊಂಡಿದ್ದರು. ಹೀಗಾಗಿ ಈ ಚಿತ್ರದ, ಈ ಹಾಡಿನ ಮೇಲೂ ಕುತೂಹಲ ಇದೆ.



