ಬಸನಗೌಡ ಪಾಟೀಲ ಯತ್ನಾಳ್ ಅವರ ಬಾಯಿಗೆ ಸಿಕ್ಕವರ ಪರಿಸ್ಥಿತಿ ಹರೋಹರ. ಏನ್ ಮಾಡ್ತಾರೋ.. ಬಿಡ್ತಾರೋ.. ಕೇಳುತ್ತ ಕೇಳುತ್ತಲೇ ರಕ್ತ ಕುದಿಯುವಂತೆ ಮಾಡುವುದರಲ್ಲಿ ಯತ್ನಾಳ್ ಅವರಿಗೆ ಸರಿಸಾಟಿ ಇಲ್ಲ. ಯತ್ನಾಳ್ ಮಾತುಗಳು ತಣ್ಣಗಿನ ರಕ್ತದವರನ್ನೂ ಕೊತ ಕೊತ ಕುದಿಯುವಂತೆ ಮಾಡುತ್ತವೆ. ಅಂತದ್ದೇ ಮಾತಿನಿಂದ ರೊಚ್ಚಿಗೆದ್ದಿರುವ ಸಚಿವರೂ ಆಗಿರುವ ಶಿವಾನಂದ ಪಾಟೀಲ್, ಈಗ ತಮ್ಮ ರಾಜೀನಾಮೆ ಪತ್ರವನ್ನೇ ಸ್ಪೀಕರ್ ಯುಟಿ ಖಾದರ್ ಅವರಿಗೆ ಕೊಟ್ಟು ಬಿಟ್ಟಿದ್ದಾರೆ. ಈ ರಾಜೀನಾಮೆ ಪತ್ರ, ಸೀರಿಯಸ್ ಆಗುವುದಕ್ಕಿಂತ ಹೆಚ್ಚಾಗಿ ಕಾಮಿಡಿ ಆಗುತ್ತಿರುವುದಕ್ಕೆ ಕಾರಣಗಳೂ ಇವೆ. ಕಾರಣ ಇಷ್ಟೇ..
ಷರತ್ತಿನ ರಾಜೀನಾಮೆ ಪತ್ರ..!
ವಿಜಯಪುರ ನಗರ ಶಾಸಕರಾದ ಶ್ರೀ ಬಸನಗೌಡ ಆರ್. ಪಾಟೀಲ (ಯತ್ನಾಳ್) ರವರು ತಮ್ಮ ವಿಜಯಪುರ ಮತಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ. ನನ್ನ ವಿರುದ್ಧ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿದ್ದಾರೆ. ನಾನು ಅವರ ಸವಾಲನ್ನು ಸ್ವೀಕರಿಸಿ, ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಹಾಗಾಗಿ ನಾನು ಪ್ರತಿನಿಧಿಸುತ್ತಿರುವ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಆದುದರಿಂದ. ಶ್ರೀ ಬಸನಗೌಡ ಆರ್. ಪಾಟೀಲ್ (ಯತ್ನಾಳ್) ರವರು ಸವಾಲು ಹಾಕಿರುವಂತೆ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಅವರ ರಾಜೀನಾಮೆ ಅಂಗೀಕಾರವಾದರೆ ಮಾತ್ರ ದಯಮಾಡಿ ನನ್ನ ರಾಜೀನಾಮೆಯನ್ನೂ ಅಂಗೀಕರಿಸುವಂತೆ ತಮ್ಮಲ್ಲಿ ಕೋರುತ್ತೇನೆ. ಇದು ಶಿವಾನಂದ ಪಾಟೀಲರು ಸ್ಪೀಕರ್ ಯಟಿ ಖಾದರ್ ಅವರಿಗೆ ಕೊಟ್ಟಿರುವ ರಾಜೀನಾಮೆ ಪತ್ರ.
ರಾಜೀನಾಮೆ ಪತ್ರ ಕಾಮಿಡಿ ಆಗಿದ್ದೇಕೆ..?
ಶಿವಾನಂದ ಪಾಟೀಲ್ ರಾಜೀನಾಮೆ ಡ್ರಾಮಾ ಯಾಕೆ ಎಂದರೆ, ರಾಜೀನಾಮೆ ಪತ್ರದಲ್ಲಿ ಯತ್ನಾಳ್ ರಾಜೀನಾಮೆಯ ಷರತ್ತು ವಿಧಿಸಿದ್ದಾರೆ. ಯತ್ನಾಳ್ ಚಾಲೆಂಜ್ ಹಾಕಿದ್ದಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ. ಯತ್ನಾಳ್, ವಿಜಯಪುರ ನಗರ ಕ್ಷೇತ್ರದ ಶಾಸಕರಾದರೆ, ಶಿವಾನಂದ ಪಾಟೀಲ್, ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ. ಸ್ಪೀಕರ್ ಹುದ್ದೆಯಲ್ಲಿರುವವರಿಗೆ ಷರತ್ತು ವಿಧಿಸಿ ರಾಜೀನಾಮೆ ನೀಡುವ ಅಧಿಕಾರ ಶಾಸಕರಿಗೆ ಇಲ್ಲ. ರಾಜೀನಾಮೆ ಪತ್ರವನ್ನು ಟೈಪ್ ಮಾಡಿಸಿ, ಸಹಿ ಹಾಕಿದ್ದಾರೆ. ಟೈಪ್ ಮಾಡಿದ ರಾಜೀನಾಮೆ ಪತ್ರವನ್ನು ಅಂಗೀಕರಿಸಲು ಸಾಧ್ಯವಿಲ್ಲ. ಏಕೆಂದರೆ ಶಾಸಕರ ರಾಜೀನಾಮೆ ಪತ್ರ ಹೀಗೆಯೇ ಇರಬೇಕು ಎಂಬ ಬಗ್ಗೆ ನಿಯಮಾವಳಿಗಳಿವೆ.
ರಾಜೀನಾಮೆ ಪತ್ರವನ್ನು ಸಭಾಧ್ಯಕ್ಷರಿಗೆ ಖುದ್ದಾಗಿ ನೀಡಬೇಕು. ನೀಡಿದ್ದಾರೆ. ಆದರೆ ಕಾರಣ ಹೇಳುವಂತಿಲ್ಲ. ಹೇಳಿದ್ದಾರೆ. ಸಂಬಂಧಪಡದ ಯಾವುದೇ ಕಾರಣವನ್ನು ತಿಳಿಸುವಂತಿಲ್ಲ. ಪ್ರತೀಕೂಲ ಮಾಹಿತಿ, ಷರತ್ತು ಹೇಳುವಂತಿಲ್ಲ. ಈ ಪತ್ರದಲ್ಲಿ ಎಲ್ಲವೂ ಇದೆ.
ಇನ್ನು ರಾಜೀನಾಮೆ ಪತ್ರದಲ್ಲಿ ʻʻನಾನು ‘….’ ದಿನಾಂಕದಿಂದ ವಿಧಾನಸಭೆಯಲ್ಲಿನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆʼʼ ಎಂದಷ್ಟೇ ಬರೆದು, ಕೆಳಗೆ ಸಹಿ ಹಾಕಬೇಕು. ರಾಜೀನಾಮೆ ಪತ್ರ ಕೈಬರಹದಲ್ಲೇ ಇರಬೇಕು, ಟೈಪ್ ಮಾಡುವಂತಿಲ್ಲ. ಟೈಪ್ ಮಾಡಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ ರಾಜೀನಾಮೆ ಪತ್ರ ಕಾಮಿಡಿಯಾಗಿ ಹೋಗಿದೆ.
ತಾಕತ್ತಿದ್ದರೆ ಸರಿಯಾಗಿ ರಾಜೀನಾಮೆ ಕೊಟ್ಟು ಅಸಲಿ ಹೋರಾಟಕ್ಕೆ ಬರಲಿ ಎಂದು ಚಾಲೆಂಜ್ ಹಾಕಿರುವ ಯತ್ನಾಳ್ ʻʻ ಉತ್ತರನ ಪೌರುಷ ಒಲೆಯ ಮುಂದೆ ಎಂಬಂತಿದೆ. ರಾಜೀನಾಮೆ ಅಂಗೀಕಾರ ಆಗೋದಿಲ್ಲ ಅಂತ ಗೊತ್ತಿದ್ದರೂ ಪುಕ್ಕಟೆ ಪ್ರಚಾರಕ್ಕೆ ರಾಜೀನಾಮೆ ಕೊಟ್ಟು ರಾಜೀನಾಮೆಯನ್ನು ತಿರಸ್ಕೃತವಾಗುವಂತ ಪ್ರಭೃತಿಗಳು ಇದ್ದಾರೆ ಎಂಬುದೇ ಸೋಜಿಗದ ಸಂಗತಿ. ಶಾಸಕರು ರಾಜೀನಾಮೆ ಕೊಡುವುದಕ್ಕೆ ರೀತಿ ರಿವಾಜು ಇರುತ್ತೆ ಎಂಬುದು ಇವರಿಗೆ ಗೊತ್ತಿಲ್ಲವೇ.
ಇವರು ರಾಜೀನಾಮೆ ಕೊಡುವುದು, ಸಭಾಧ್ಯಕ್ಷರು ತಿರಸ್ಕರಿಸುವ ಬೃಹನ್ನಾಟಕ ಸಂಪನ್ನವಾಯಿತುʼʼ ಎಂದು ಉತ್ತರ ಕೊಟ್ಟಿದ್ದಾರೆ.