ಶಿವರಾಜ್ ಕುಮಾರ್ ಹೀರೋ ಅಲ್ಲದೆ ನಟಿಸಿರುವ ಸಿನಿಮಾಗಳೆಷ್ಟು. ಶಿವರಾಜ್ ಕುಮಾರ್ ಅವರ ಕಟ್ಟರ್ ಫ್ಯಾನ್ಸ್ ಕೂಡಾ ತಲೆ ಕೆರೆದುಕೊಂಡು ಲೆಕ್ಕ ಹಾಕ್ತಾರೆ. ಅಲ್ಲೊಂದು ಇಲ್ಲೊಂದು ಚಿತ್ರದಲ್ಲಿ ಅತಿಥಿ ನಟರಾಗಿ ನಟಿಸಿದ್ದರೂ, ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಶಿವಣ್ಣ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡುವವರ ಡಾರ್ಲಿಂಗ್. ಇದೀಗ ಅಂತದ್ದೇ ಪ್ರಯೋಗತ್ಮಕ ವೀರ ಚಂದ್ರಹಾಸ ಎಂಬ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಷ್ಟೇ ಅಲ್ಲ, ಬಹುತೇಕ ಚಿತ್ರೀಕರಣವನ್ನೂ ಮುಗಿಸಿದ್ದಾರಂತೆ. ಆದರೆ ಹೀರೋ ಆಗಿಲ್ಲ. ಪೋಷಕ ನಟನ ಪಾತ್ರದಲ್ಲಿ.
ಶಿವಣ್ಣ ಯಾಕೆ ಸಪೋರ್ಟಿಂಗ್ ಕ್ಯಾರೆಕ್ಟರ್ ಒಪ್ಪಿಕೊಂಡ್ರು.. ಅನ್ನೋ ಪ್ರಶ್ನೆಗೆ ನಿರ್ದೇಸಕ ರವಿ ಬಸ್ರೂರು ಉತ್ತರ ಕೊಡ್ತಾರೆ. ಚಿತ್ರದಲ್ಲಿ ಶಿವಣ್ಣ ಹೀರೋ ಅಲ್ಲ. ಶಿವಣ್ಣ ಅವರನ್ನೇ ಪ್ರಮುಖ ಪಾತ್ರದಲ್ಲಿ ನಟಿಸುವಂತೆ ಕೇಳಿದ್ದೆವು. ಆದರೆ ಅವರ ಅನಾರೋಗ್ಯದಿಂದಾಗಿ ಸಾಧ್ಯವಾಗಲಿಲ್ಲ. ಚಂದ್ರಹಾಸನ ಪಕ್ಕದ ರಾಜ್ಯದವನ ಪಾತ್ರದಲ್ಲಿ ನಟಿಸಿದ್ದಾರೆ. ಯಕ್ಷಗಾನ ವೇಷ ಹಾಕಿಯೇ ನಟಿಸಿದ್ದಾರೆ ಎಂದು ಹೇಳಿದ್ದಾರೆ ರವಿ ಬಸ್ರೂರು.
ಅಮೆರಿಕಕ್ಕೆ ಹೋಗುವ ಮುನ್ನವೇ ವೀರ ಚಂದ್ರಹಾಸ ಚಿತ್ರದ ಕೆಲಸ ಮುಗಿಸಿದ್ದರಂತೆ ಶಿವಣ್ಣ. ಚಂದ್ರಹಾಸ ಚಿತ್ರದ ಪೋಸ್ಟರ್ ಹೊರಬಂದಿದ್ದು, ಶಿವ ಪುಟ್ಟಸ್ವಾಮಿ ಅನ್ನೋ ಹೆಸರು ಬಳಸಿದ್ದಾರೆ. ಪುಟ್ಟಸ್ವಾಮಿ ಅನ್ನೋದು ಶಿವರಾಜ್ ಕುಮಾರ್ ಅವರ ಮೂಲ ಹೆಸರು. ಇದು ರವಿ ಬಸ್ರೂರು ಅವರ ಸಿನಿಮಾ. ಯಕ್ಷಗಾನ ಕಲೆಯ ಬಗ್ಗೆ ಮಾಡುತ್ತಿರುವ ಸಿನಿಮಾ ಎಂದು ಕೇಳಿಯೇ ಥ್ರಿಲ್ ಆದರಂತೆ ಶಿವಣ್ಣ. ಆದರೆ ಯಕ್ಷಗಾನದ ಪಾತ್ರಕ್ಕೆ ವೇಷ ಹಾಕುವುದು, ನಿರಂತರವಾಗಿ ಕುಣಿಯುವುದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ತಾವು ಗುಣಮುಖರಾಗುವವರೆಗೂ ಕಾಯುವುದು ಬೇಡ. ನೀವು ಸಿನಿಮಾ ಮಾಡಿ ಎಂದು ಹೇಳಿದ ಶಿವಣ್ಣ, ಸ್ವತಃ ತಾವೇ ಪೋಷಕ ನಟನ ಪಾತ್ರ ಆಯ್ದುಕೊಂಡರಂತೆ.
ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಯಕ್ಷಗಾನ ಕಲೆಯನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಈ ಸಿನಿಮಾ ಪೂರ್ಣಗೊಂಡಿದ್ದು, ಇದರಲ್ಲಿ ನಟ ಶಿವರಾಜ್‌ಕುಮಾರ್ ಕೂಡ ಮುಖ್ಯ ಪಾತ್ರ ಮಾಡಿದ್ದಾರೆ. ಅವರು ಯಕ್ಷಗಾನ ಪಾತ್ರಧಾರಿಯಾಗಿರುವ ಲುಕ್ ಇತ್ತೀಚೆಗೆ ಬಿಡುಗಡೆಯಾಗಿದೆ.
“ಯಕ್ಷಗಾನಕ್ಕೆ ದೊಡ್ಡ ಇತಿಹಾಸವಿದೆ. ಬಹುತೇಕರಿಗೆ ಅದರ ಬಗ್ಗೆ ಸಣ್ಣ ಅರಿವಿದ್ದರೂ ಸಂಪೂರ್ಣವಾಗಿ ತಿಳಿದಿಲ್ಲ. ಯಕ್ಷಗಾನ ಆಟ ಶುರುವಾಗುವ ಮುಂಚೆ ಚೌಕಿ ಮನೆಯಲ್ಲಿ ಬಣ್ಣ ಹಚ್ಚಿಕೊಳ್ಳುವುದರಿಂದ ಹಿಡಿದು ಯಕ್ಷಗಾನ ಮುಗಿಯುವವರೆಗಿನ ಲೋಕವನ್ನು ಈ ಸಿನಿಮಾದಲ್ಲಿ ನೋಡಬಹುದು. ಇದು ನನ್ನ 12 ವರ್ಷಗಳ ಕನಸುʼʼ ಎಂದು ಹೇಳಿಕೊಂಡಿದ್ದಾರೆ ರವಿ ಬಸ್ರೂರು.
ಇಲ್ಲಿರೋದು ಚಂದ್ರಹಾಸನ ಕಥೆ. ಬಹುತೇಕರಿಗೆ ಕಥೆ ಗೊತ್ತು. ಆದರೆ ಇದನ್ನು ತೆರೆಯ ಮೇಲೆ ತಂದಿರುವ ರೀತಿ ಖಂಡಿತಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎನ್ನುವ ರವಿ ಬಸ್ರೂರು ಯಕ್ಷಗಾನದಲ್ಲಿ ಸಾಮಾನ್ಯವಾಗಿ ಯುದ್ಧ ನಡೆಯುವಾಗ ಕಲಾವಿದರು ಒಂದು ಸುತ್ತು ಬರುತ್ತಾರೆ. ಆದರೆ ಇದರಲ್ಲಿ ಯುದ್ಧಭೂಮಿಯಲ್ಲಿ ಯುದ್ಧವೇ ನಡೆಯುತ್ತದೆ ಎಂದು ಮಾಹಿತಿ ಕೊಡ್ತಾರೆ. ಯಕ್ಷಗಾನದಲ್ಲಿ ಯುದ್ಧವೇ.. ಈ ಪ್ರಶ್ನೆಯೇ ಕುತೂಹಲ ಹುಟ್ಟಿಸುತ್ತದೆ.
ಆದರೆ ಹೀರೋ ಆಲ್ಲದಿದ್ದರೂ ಕೇವಲ ಕಲೆಯ ಮೇಲಿನ ಪ್ರೀತಿಗೆ ಪೋಷಕ ನಟನಾಗಲು ಒಪ್ಪಿಕೊಂಡ ಶಿವಣ್ಣ ಅಣ್ಣಾವ್ರನ್ನು ನೆನಪಿಸಿದ್ದಾರೆ. ಡಾ.ರಾಜ್ ಕೂಡಾ ಹೀಗೇ.. ಕಾಯಕಯೋಗಿ ಬಸವಣ್ಣ (ಅಶೋಕ್ ಹೀರೋ), ಕಿತ್ತೂರು ಚೆನ್ನಮ್ಮ (ನಾಯಕಿ ಪ್ರಧಾನ) ಚಿತ್ರದಲ್ಲಿ ನಾಯಕ ನಟರಲ್ಲದಿದ್ದರೂ ಚಿತ್ರದ ಕಥೆ ಕೇಳಿ ಪೋಷಕ ನಟರಾಗಿ ನಟಿಸಿದ್ದರು.



