ಇಬ್ಬರು ಸೂಪರ್ ಸ್ಟಾರ್ಸ್. ಇಬ್ಬರೂ ಸಖತ್ ಡ್ಯಾನ್ಸರ್ಸ್. ಸ್ಟಾರ್ ನಿರ್ದೇಶಕ. ಸ್ಟಾರ್ ನಿರ್ಮಾಪಕ. ಸ್ಟಾರ್ ಮ್ಯೂಸಿಕ್ ಡೈರೆಕ್ಟರ್. ಎಲ್ಲರೂ ಒಟ್ಟಾಗಿರುವ ಸಿನಿಮಾ ಕರಟಕ ದಮನಕ.
ಪಂಚತಂತ್ರವನ್ನು ಓದಿರುವವರಿಗೆ ಕರಟಕ ದಮನಕ ಪಾತ್ರಗಳ ಪರಿಚಯ ಇರುತ್ತದೆ. ಇದು ಎರಡು ಕುತಂತ್ರಿ ನರಿಗಳ ಹೆಸರು. ಪಂಚತಂತ್ರದ ಈ ಪಾತ್ರಗಳು, ಅವುಗಳ ವ್ಯಕ್ತಿತ್ವ, ಪಂಚತಂತ್ರವನ್ನು ಓದಿರುವವರಿಗೆ ಗೊತ್ತಿಲ್ಲದೇ ಇರುವುದೇನಲ್ಲ. ಅಂತಹ ನರಿಗಳ ಹೆಸರನ್ನಿಟ್ಟುಕೊಂಡು ಸಿದ್ಧವಾಗುತ್ತಿರುವ ಸಿನಿಮಾ ಕರಟಕ ದಮನಕ. ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ ಚಿತ್ರೀಕರಣ ಮುಕ್ತಾಯವಾಗಿದೆ.
ಶಿವಣ್ಣ ಮತ್ತು ಪ್ರಭುದೇವ ಅಭಿನಯಿಸಿರುವ ಕರಟಕ ದಮನಕ ಚಿತ್ರಕ್ಕೆ ರಾಕ್ʻಲೈನ್ ವೆಂಕಟೇಶ್ ನಿರ್ಮಾಪಕರು. ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಾಯಕಿಯರಾಗಿ ನಟಿಸಿದ್ದು, ಮುಖ್ಯಮಂತ್ರಿ ಚಂದ್ರು ಹಾಗೂ ತನಿಕೆಲ್ಲ ಭರಣಿ ಅವರಂತಹ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಯೋಗರಾಜ್ ಭಟ್ ಮತ್ತು ರಾಕ್ʻಲೈನ್ ವೆಂಕಟೇಶ್ ಇಬ್ಬರೂ ನಟಿಸಿದ್ಧಾರಂತೆ. ಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು, ಹರಿಕೃಷ್ಣ ಮ್ಯೂಸಿಕ್ ಇದೆ.
ಶಿವಣ್ಣ ಅವರ ಸಿನಿಮಾಗಳು ಇತ್ತೀಚೆಗೆ ಫ್ಲಾಪ್ ಆಗಿಲ್ಲವಾದರೂ, ದೊಡ್ಡ ಮಟ್ಟದಲ್ಲಿ ಸೂಪರ್ ಡ್ಯೂಪರ್ ಹಿಟ್ ಎನ್ನುವಂತೆಯೂ ಸಕ್ಸಸ್ ಕಂಡಿಲ್ಲ. ಆದರೆ ಇದು ಶಿವಣ್ಣ ಅವರಿಗೆ ಹೊಸದಲ್ಲ. ಒಂದಷ್ಟು ಸಿನಿಮಾಗಳು ಸೋಲುವುದು, ಆವರೇಜ್ ಹಿಟ್ ಆಗುವುದು.. ಬಳಿಕ ಧುತ್ತೆಂದು ಭರ್ಜರಿ ಹಿಟ್ ಕೊಡುವುದು ಮಾಡುತ್ತಲೇ ಬಂದಿದ್ದಾರೆ.
ಇನ್ನು ಪ್ರಭುದೇವ ಅವರಿಗೆ ಕೂಡಾ ಇತ್ತೀಚೆಗೆ ಹಿಟ್ ಸಿಕ್ಕಿಲ್ಲ. ಅವರಿಗೂ ಸೋಲು ಗೆಲುವಿನ ಪಾಠ ಹೇಳುತ್ತಿದೆ ಸಿನಿಮಾ ಲೈಫ್.
ಯೋಗರಾಜ್ ಭಟ್ಟರಿಗೂ ಗೆಲುವು ಸಿಕ್ಕಿಲ್ಲ. ಕಮರ್ಷಿಯಲಿ ನಿರ್ಮಾಪಕರಿಗೆ ಲಾಸ್ ಆಗಿಲ್ಲ ಎನ್ನುವುದು ನಿಜವಾದರೂ, ಅದು ಭಟ್ಟರ ಕೆಪ್ಯಾಸಿಟಿಗೆ ಅಲ್ಲ. ರಾಕ್ʻಲೈನ್ ವೆಂಕಟೇಶ್ ಅವರಿಗೂ ಅಷ್ಟೆ, ಗೆಲುವು ಮರೀಚಿಕೆಯಾಗಿಯೇ ಉಳಿದಿದೆ. ಹಾಗಂತ ಅವರೂ ಲಾಸ್ ಆಗಿಲ್ಲ. ಸಿನಿಮಾಗಳಲ್ಲಿ ದೊಡ್ಡ ಬಿಸಿನೆಸ್ ನೋಡಿಲ್ಲ. ಅಷ್ಟೆ.
ಹೀಗೆ ಸೋತಿರುವವರೆಲ್ಲ ಒಟ್ಟಾಗಿ ಸೇರಿ ಇತಿಹಾಸ ಸೃಷ್ಟಿಸಲು ಹೊರಟಿರುವ ಸಿನಿಮಾನೇ ಕರಟಕ ದಮನಕ. ಚಿತ್ರಕ್ಕೀಗ ಕುಂಭಳಕಾಯಿ ಒಡೆಯಲಾಗಿದೆ. ಮುಂದಿನ ವರ್ಷ ಮಾರ್ಚ್ ಏಪ್ರಿಲ್ ಹೊತ್ತಿಗೆ ಕರಟಕ ದಮನಕ ಚಿತ್ರಮಂದಿರಗಳಲ್ಲಿರಲಿದೆ.



