ಗೀತಾ ಶಿವರಾಜ್ ಕುಮಾರ್. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಅಖಾಡಕ್ಕಿಳಿಯುತ್ತಿದ್ಧಾರೆ. 2014ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಿಂತು ಸೋತಿದ್ದ ಗೀತಾ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ಧಾರೆ. ಗೀತಾ ಅವರಿಗೆ ಗೆಲುವು ಸುಲಭನಾ? ಕಷ್ಟ ಕಷ್ಟ ಅಂತಿದೆ ಇತಿಹಾಸ.
ಗೀತಾ ಅವರನ್ನು ಎಂಪಿಯನ್ನಾಗಿ ನೋಡಬೇಕು ಅನ್ನೋದು ನನ್ನ ಆಸೆ ಎಂದು ಹೇಳಿಕೊಂಡಿದ್ದರು ಶಿವಣ್ಣ. ಆ ಕನಸು ಈ ಬಾರಿಯಾದರೂ ನನಸಾಗುತ್ತಾ..? ಗೊತ್ತಿಲ್ಲ. ಗೀತಾ ಶಿವ ರಾಜ್ ಕುಮಾರ್ ಈಗ ಕಾಂಗ್ರೆಸ್ಸಿನ ಅಧಿಕೃತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಗೀತಾ ಅವರಿಗೆ ಈ ಬಾರಿ ಎದುರಾಳಿಯಾಗಲಿರುದು ಬಿ.ವೈ.ರಾಘವೇಂದ್ರ.
2014ರಲ್ಲಿ ಏನಾಗಿತ್ತು..? 3ನೇ ಸ್ಥಾನಕ್ಕೆ ಕುಸಿದಿದ್ದರು ಗೀತಾ..!
ಈ ಹಿಂದೆ 2014ರಲ್ಲಿ ಗೀತಾ ಶಿವ ರಾಜ್ ಕುಮಾರ್, ಜೆಡಿಎಸ್ʻನಿಂದ ಸ್ಪರ್ಧೆ ಮಾಡಿದ್ದರು. ಆಗ ಗೀತಾ ಅವರಿಗೆ ಎದುರಾಳಿಯಾಗಿದ್ದವರು ಬಿ.ಎಸ್.ಯಡಿಯೂರಪ್ಪ. ಯಡಿಯೂರಪ್ಪ ಬಲದ ಎದುರು ಗೀತಾ 3ನೇ ಸ್ಥಾನಕ್ಕೆ ಜಾರಿದ್ದರು. ಯಡಿಯೂರಪ್ಪ 6 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದರೆ, ಗೀತಾ ಅವರು ಪಡೆದಿದ್ದುದು ಎರಡು ಲಕ್ಷದ 40 ಸಾವಿರ ವೋಟು. ಆ ಚುನಾವಣೆಯಲ್ಲಿ ಗೀತಾ ಅವರ ಪರವಾಗಿ ಶಿವಣ್ಣ ಕೂಡಾ ಪ್ರಚಾರ ಮಾಡಿದ್ದರು. ಎದುರಾಳಿಗಳೆಲ್ಲರು ಪಡೆದ ಒಟ್ಟು ಮತಗಳಿಗಿಂತ ಹೆಚ್ಚು ಮತಗಳನ್ನು ಪಡೆದು ಗೆದ್ದಿದ್ದರು ಯಡಿಯೂರಪ್ಪ. ಗೆಲುವಿನ ಅಂತರ 3 ಲಕ್ಷದ 63 ಸಾವಿರ.
2018 & 2019ರಲ್ಲಿ ಮಧು ಬಂಗಾರಪ್ಪ ಕೂಡಾ ಸೋತಿದ್ದರು :
ಅದಾದ ಮೇಲೆ 2018ರಲ್ಲಿ ಬೈ ಎಲೆಕ್ಷನ್ ನಡೀತು. ಆಗ ಅಭ್ಯರ್ಥಿಯಾಗಿದ್ದವರು ಬಿವೈ ರಾಘವೇಂದ್ರ. ಎದುರಾಳಿಯಾಗಿ ಈಗ ಸಚಿವರೂ ಆಗಿರುವ ಮಧು ಬಂಗಾರಪ್ಪ ನಿಂತಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿ ನಿಂತಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿಯೂ ಸೋತಿದ್ದರು. 2019ರ ಚುನಾವಣೆಯಲ್ಲಿಯೂ ಅಷ್ಟೆ. ಸೋಲು ಗ್ಯಾರಂಟಿಯಾಗಿತ್ತು. 2018ರಲ್ಲಿ 52 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರೆ, 2019ರಲ್ಲಿ 2 ಲಕ್ಷದ 23 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಎರಡೂ ಬಾರಿ ಮಧು ಬಂಗಾರಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿದ್ದರು.
ಆದರೆ, ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವಿದೆ. ಕಾಂಗ್ರೆಸ್ ಏಕಾಂಗಿಯಾಗಿ ಕಣಕ್ಕಿಳಿಯುತ್ತಿದೆ. ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿರುವುದು ಬಿ.ವೈ.ರಾಘವೇಂದ್ರ. ತಮ್ಮ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ. ಏನಾಗಲಿದೆ.. ಈ ಬಾರಿಯ ಎಲೆಕ್ಷನ್ ಎನ್ನುವುದೇ ಕುತೂಹಲ.
ಕೈ ಹಿಡಿಯುತ್ತಾ ಬಂಗಾರಪ್ಪ ಹೆಸರಿನ ಬಲ..? ಈಡಿಗರ ಮತಗಳು..?
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬೈಂದೂರು ಸೇರಿದಂತೆ ಲಿಂಗಾಯತರು, ಈಡಿಗರು, ದಲಿತರು, ಬ್ರಾಹ್ಮಣರು, ಮುಸ್ಲಿಮರು, ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಂತರದ ಸ್ಥಾನದಲ್ಲಿ ಕುರುಬರು, ಹಿಂದುಳಿದ ವರ್ಗದವರು ಬರುತ್ತಾರೆ. ಜಾತಿ ಲೆಕ್ಕಾಚಾರ ನೋಡಿದರೆ ಲಿಂಗಾಯತರು ಸುಮಾರು 3 ಲಕ್ಷ ಇದ್ಧಾರೆ. 2ನೇ ಸ್ಥಾನ ಇರುವುದು ಎಸ್ʻಸಿ ಮತ್ತು ಎಸ್ʻಟಿಯವರದ್ದು. ಹತ್ತಿರ ಹತ್ತಿರ 3 ಲಕ್ಷ. 3ನೇ ಸ್ಥಾನದಲ್ಲಿ ಈಡಿಗರಿದ್ದಾರೆ. ಅವರದ್ದು ಸುಮಾರು ಎರಡೂವರೆ ಲಕ್ಷ. ಕ್ಷೇತ್ರದಲ್ಲಿ ಬ್ರಾಹ್ಮಣರ ಸಂಖ್ಯೆಯೂ ಹೆಚ್ಚಿದೆ ಹಾಗೂ ನಿರ್ಣಾಯಕವಾಗಿದ್ದು ಸುಮಾರು ಒಂದೂವರೆ ಲಕ್ಷ ಬ್ರಾಹ್ಮಣ ಮತಗಳಿವೆ. ಮುಸ್ಲಿಮರು ಸರಿಸುಮಾರು ಇಷ್ಟೇ ಸಂಖ್ಯೆಯಲ್ಲಿದ್ಧಾರೆ. ಕುರುಬರು ಹಾಗೂ ಬಂಟರು ಕೂಡಾ ಉತ್ತಮ ಸಂಖ್ಯೆಯಲ್ಲಿದ್ದಾರೆ.
ಬಿಜೆಪಿ ಲಿಂಗಾಯತ, ಬ್ರಾಹ್ಮಣ, ಬಂಟರು, ಜೈನರ ಮತಗಳನ್ನು ನೆಚ್ಚಿಕೊಂಡಿದೆ. ಈಡಿಗ ಮತದಾರರಿಗೂ ಯಡಿಯೂರಪ್ಪ ಕುಟುಂಬದ ಮೇಲೆ ಪ್ರೀತಿ ಇದೆ. ಯಡಿಯೂರಪ್ಪ ಕೂಡಾ ಈಡಿಗರನ್ನು ಒಳಗಿಟ್ಟುಕೊಂಡೇ ರಾಜಕಾರಣ ಮಾಡಿದ್ಧಾರೆ. ಬಂಗಾರಪ್ಪನವರ ಇನ್ನಬ್ಬ ಪುತ್ರ ಕುಮಾರ್ ಬಂಗಾರಪ್ಪ ಈಗ ಬಿಜೆಪಿಯಲ್ಲಿದ್ದಾರೆ. ಹೀಗಿದ್ದರೂ.. ಗೀತಾ ಶಿವ ರಾಜ್ ಕುಮಾರ್ ಗೆಲುವಿನ ಕನಸು ಕಾಣುತ್ತಿರುವುದಕ್ಕೆ ಕಾರಣ ಇದೆ.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಮಧು ಬಂಗಾರಪ್ಪ ಸಚಿವರಾಗಿದ್ಧಾರೆ. ಮಧು ಮತ್ತು ಗೀತಾ ಒಟ್ಟಾಗಿದ್ದರೆ, ಈಡಿಗ ಮತಗಳು ಒಗ್ಗಟ್ಟಾಗುತ್ತವೆ ಅನ್ನೋದು ಮೊದಲ ಕಾರಣ. ಜೊತೆಗೆ ಶಿವಣ್ಣ ಹೆಸರಿನ ನಾಮ ಬಲವಿದೆ. ಇದೆಲ್ಲದರ ಜೊತೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಲ್ಲಿ ಶಿಕಾರಿಪುರ, ಬೈಂದೂರು, ತೀರ್ಥಹಳ್ಳಿ ಮತ್ತು ಶಿವಮೊಗ್ಗ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ಧಾರೆ. ಉಳಿದಂತೆ ಭದ್ರಾವತಿ, ಸೊರಬ ಹಾಗೂ ಸಾಗರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಉಳಿದಂತೆ ಶಿವಮೊಗ್ಗ ಗ್ರಾಮೀಣದಲ್ಲಿ ಜೆಡಿಎಸ್ ಶಾಸಕಿಯಿದ್ದಾರೆ. ಇವುಗಳಲ್ಲಿ ಬೈಂದೂರು ಉಡುಪಿ ಜಿಲ್ಲೆಯಲ್ಲಿ ಬರುತ್ತದೆ.
ಆದರೆ, 1998ರ ನಂತರ ಇಲ್ಲಿ ಬಿಜೆಪಿಯನ್ನು ಬಿಟ್ಟು ಬೇರಾರೂ ಗೆದ್ದಿಲ್ಲ. ಖುದ್ದು ಬಂಗಾರಪ್ಪನವರೇ ಯಡಿಯೂರಪ್ಪ ವಿರುದ್ಧ ನಿಂತು ಸೋತಿದ್ದಾರೆ. ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಈಗಾಗಲೇ 3 ಬಾರಿ ಗೆದ್ದಿರೋ ಲೀಡರ್. ತಮ್ಮ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ. ಗೆಲುವು ಅಷ್ಟು ಸುಲಭವೂ ಅಲ್ಲ. ಹಾಗಂತ ಸೋಲುವುದೇ ಫಿಕ್ಸ್ ಅಂತಾನೂ ಹೇಳೋಕಾಗಲ್ಲ. ಕಷ್ಟಪಟ್ಟರೆ ಗೆಲ್ಲಲೂಬಹುದು.



