ಹೆಣ್ಣು ಮಕ್ಕಳಿಗೆ ಎಷ್ಟೆಂದರೂ ತವರು ಮನೆಯ ಮೇಲಿನ ಪ್ರೀತಿ ಕಡಿಮೆಯಾಗುವುದೇ ಇಲ್ಲ. ಕನ್ನಡದ ಅದರಲ್ಲಿಯೂ ಕರಾವಳಿ ಭಾಗದ ಹಲವು ನಟ, ನಟಿಯರು ಅದೆಷ್ಟೇ ಖ್ಯಾತಿ ಸಂಪಾದಿಸಿದರೂ ತಮ್ಮ ತವರು, ತುಳು ಭಾಷೆಯ ಮೇಲಿನ ಪ್ರೀತಿ ಬಿಡುವುದಿಲ್ಲ. ಒಂದು ದೃಷ್ಟಿಯಲ್ಲಿ ತುಳು ಭಾಷಿಕರ ಮಾತೃ ಭಾಷೆಯ ಮೇಲಿನ ಪ್ರೀತಿ, ಅಭಿಮಾನ.. ಪ್ರತಿಯೊಬ್ಬ ಕನ್ನಡಿಗನಿಗೂ ಮಾದರಿ ಆಗಬೇಕು. ಶಿಲ್ಪಾ ಗಣೇಶ್ ಅವರೂ ಕೂಡಾ ಕರಾವಳಿಯವರೇ.
ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿಯಾಗಿರುವ ಶಿಲ್ಪಾ, ಮೂಲತಃ ಉಡುಪಿಯವರು. ಕರಾವಳಿ ಭಾಗದವರು. ಕಡಲತಡಿಯ ಊರು ಶಿಲ್ಪಾ ಅವರ ತವರು ಮನೆ. ಇದೀಗ ಶಿಲ್ಪಾ ಗಣೇಶ್ ತುಳುವಿನಲ್ಲಿ ಸಿನಿಮಾ ನಿರ್ಮಾಣ ಮಾಡಲು ಹೊರಟಿದ್ದಾರೆ. ಡಿಸೆಂಬರ್ ತಿಂಗಳಿನಿಂದ ಈ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಈ ಸಿನಿಮಾಗೆ ಸಂದೀಪ್ ಬೆದ್ರ ನಿರ್ದೇಶಕರಾಗಿದ್ದು, ಮೋಹನ್ ಭಟ್ಕಳ್ ಚಿತ್ರಕಥೆ ಬರೆದಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಲಿದ್ದಾರೆ.
ಹರಿಕೃಷ್ಣ ಬಂಟ್ವಾಳ್ ಪುತ್ರ ನಿತ್ಯಪ್ರಕಾಶ್ ಬಂಟ್ವಾಳ್ ಅವರು ಶಿಲ್ಪಾ ಗಣೇಶ್ ನಿರ್ಮಾಣದ ಈ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಲಿದ್ದಾರೆ. ನಾಯಕಿಯ ಪಾತ್ರಕ್ಕೆ ಹೊಸಬರ ಹುಡುಕಾಟದಲ್ಲಿದ್ದಾರೆ. ಶಿಲ್ಪಾ ಗಣೇಶ್ ಅವರಿಗೆ ಚಿತ್ರ ನಿರ್ಮಾಣ ಹೊಸದೇನಲ್ಲ. ಗಣೇಶ್ ನಾಯಕತ್ವದಲ್ಲಿ ಅನೇಕ ಸಿನಿಮಾಗಳನ್ನು ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದ್ದಾರೆ. ತುಳುವಿನಲ್ಲಿ ನಿರ್ಮಾಣ ಹೊಸದಷ್ಟೇ.
ನಿರ್ಮಾಪಕಿ ಶಿಲ್ಪಾ ಗಣೇಶ್ ಕರಾವಳಿಯವರು. ಅವರ ತಾಯಿ ಮಂಗಳೂರಿನವರಾಗಿದ್ದು, ಶಿಲ್ಪಾ ಬೆಳೆದದ್ದು ಉಡುಪಿಯ ಬಾರ್ಕೂರಿನಲ್ಲಿ. ಈಗಾಗಲೇ ಅನೇಕ ಸಿನಿಮಾಗಳನ್ನು ನಿರ್ಮಿಸಿರುವ ಅವರಿಗೆ ತಮ್ಮ ಮಾತೃಭಾಷೆಯಲ್ಲೊಂದು ಸಿನಿಮಾ ಮಾಡಬೇಕೆಂಬ ಬಯಕೆಯಿತ್ತು. ಆ ಕನಸು ಈಡೇರಿಸಲು ಅವರೀಗ ಮುಂದಾಗಿದ್ದು, ಕೋಸ್ಟಲ್‌ವುಡ್‌ನಲ್ಲಿ ಒಂದು ರೀತಿಯ ಸಂಚಲನ ಮೂಡಿದೆ.
ಇದು ಕೌಟುಂಬಿಕ ಸಂಬಂಧ, ಮೌಲ್ಯಗಳ ಬಗ್ಗೆ ಹೇಳುವ ಸಿನಿಮಾ. ಚಿತ್ರ ಕಾಮಿಡಿಯಾಗಿಯೇ ನಡೆಯುತ್ತದೆ. ಮಂಗಳೂರು, ಉಡುಪಿ, ಮೂಡುಬಿದಿರೆ, ಬಂಟ್ವಾಳ ಸೇರಿದಂತೆ ಕರಾವಳಿ ಭಾಗದಲ್ಲಿ ಇದರ ಶೂಟಿಂಗ್ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕ ಸಂದೀಪ್ ಮೂಡುಬಿದಿರೆ.
ಕರಾವಳಿ ನನ್ನ ತವರೂರು. ನಮ್ಮ ಬ್ಯಾನರ್‌ನಡಿ ತುಳು ಸಿನಿಮಾ ಮಾಡಬೇಕೆಂದು ನನ್ನ ಹಾಗೂ ಗಣೇಶ್ ಅವರ ಕನಸಾಗಿತ್ತು. ಆ ಕನಸಿಗೆ ಈಗ ಕಾಲ ಕೂಡಿ ಬಂದಿದೆ ಎಂದಿದ್ದಾರೆ ಶಿಲ್ಪಾ ಗಣೇಶ್.
ಕನ್ನಡದ ಬಹುತೇಕ ನಟ ನಟಿಯರಲ್ಲಿ ಕರಾವಳಿ ಜನರ ತುಳು ನಾಡ ಪ್ರೀತಿಯನ್ನು ಮರೆಯುವಂತಿಲ್ಲ. ರಾಧಿಕಾ ಕುಮಾರಸ್ವಾಮಿ, ಜಯಮಾಲ, ಸೋನಲ್ ಮಂಥೆರೋ, ದಿ.ಲೀಲಾವತಿ.. ಇವರೆಲ್ಲ ಕರಾವಳಿಯವರು. ಇನ್ನು ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ.. ಮೊದಲಾದ ಶೆಟ್ಟರ ಗ್ಯಾಂಗ್ ಕೂಡಾ ಕರಾವಳಿಯದ್ದೇ. ಕರಾವಳಿ ಭಾಗದ ಸಂಸ್ಕೃತಿ, ಭಾಷೆ, ಆಚರಣೆಗಳನ್ನೆಲ್ಲ ಚಿತ್ರಗಳ ಮೂಲಕ ಪ್ರಚಾರ ಮಾಡುವಂತೆ, ಶಿಲ್ಪಾ ಗಣೇಶ್ ಕೂಡಾ ಕರಾವಳಿ ಭಾಗದಲ್ಲಿ ತುಳು ಚಿತ್ರ ನಿರ್ಮಾಣ ಮಾಡ್ತಿದ್ದಾರೆ.



