ನನಗೆ ಆ ನಟ ಕಿರುಕುಳ ಕೊಟ್ಟಿದ್ದ. ನನಗೂ ಕಾಸ್ಟಿಂಗ್ ಕೌಚ್ ಆಗಿತ್ತು. ಪಾರ್ಟಿಯಲ್ಲಿ ಅವನು ಕರೆದಿದ್ದ. ಈ ನಿರ್ದೇಶಕ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದ.. ಹೀಗೆಲ್ಲ ಹೇಳುವವರಿಗೆ ಈಗ ಕೊರತೆಯೇನೂ ಇಲ್ಲ. ಆದರೆ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು ಎನ್ನುವ ಬಹುತೇಕ ನಟಿಯರು ಹೆಸರು ಹೇಳೋದಿಲ್ಲ. ಯಾವ ನಟ, ನಿರ್ದೇಶಕನಿಂದ ಈ ರೀತಿಯ ಅನುಭವ ಆಗಿತ್ತು ಎಂದು ಬಾಯ್ಬಿಡುವುದಿಲ್ಲ. ಕೆಲವೇ ಕೆಲವರು ಹೇಳಿದರೂ, ಸಾಕ್ಷಿಗಳು ಇರುವುದಿಲ್ಲ. ಹೆಸರು ಹೇಳಿದ ಮೇಲೆ ಸಾಕ್ಷಿಗಳನ್ನೂ ಹೊಂಚಬೇಕು ಎನ್ನುವ ಆತಂಕವೂ ಇರುತ್ತೆ. ಯಾವತ್ತೋ ಆದ ಘಟನೆಯ ಬಗ್ಗೆ ಗಟ್ಟಿ ಸಾಕ್ಷ್ಯಗಳು ಇಲ್ಲದೇ ಹೋದರೆ ಕಾನೂನು ಸಮಸ್ಯೆ ಎದುರಿಸಬೇಕಾಗುತ್ತೆ ಎನ್ನುವ ಭಯವೂ ಕಾಡುತ್ತದೆ. ಆದರೆ ಶಕೀಲಾ ಆ ಭಯ ಬಿಟ್ಟು ಹೆಸರು ಹೇಳಿದ್ಧಾರೆ.
ನನ್ನ ಜೊತೆ ಇವಿವಿ ಸತ್ಯನಾರಾಯಣ ಕೆಟ್ಟದಾಗಿ ನಡೆದುಕೊಂಡಿದ್ದರು. ತೆಲುಗಿನ ಖ್ಯಾತ ನಿರ್ದೇಶಕ ಇವಿವಿ ಸತ್ಯ ನಾರಾಯಣ ರಾವ್ ನನ್ನನ್ನು ಕೆಟ್ಟ ಅರ್ಥದಲ್ಲೇ ರೂಮಿಗೆ ಕರೆದರು. ತನ್ನ ಮುಂದಿನ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿದರು. ಅವರು ಮತ್ಯಾರು ಅಲ್ಲ ನಟ ಅಲ್ಲರಿ ನರೇಶ್ ತಂದೆ ಇವಿವಿ ಸತ್ಯ ನಾರಾಯಣ. ಅವರು ಆ ರೀತಿ ಕರೆದಾಗ ನಾನು ಹೇಳಿದೆ. ಬೇಡ ಸರ್, ಈ ಚಿತ್ರಕ್ಕೆ ನಾನು ಸಂಭಾವನೆ ಪಡೆದಿದ್ದು ಆಯ್ತು. ಮುಂದಿನ ಸಿನಿಮಾದಲ್ಲಿ ನಟಿಸುವುದಿಲ್ಲ. ಅಂತಹ ಆಲೋಚನೆ ಕೂಡ ನನಗೆ ಇಲ್ಲ ಸರ್ ಎಂದು ಹೇಳಿದ್ದೆ ಎಂದಿರುವ ಶಕೀಲಾ ನಾನು ಎಂದೂ ಆ ರೀತಿ ಮಾಡಲಿಲ್ಲ. ನನ್ನ ಕರಿಯರ್‌ನಲ್ಲಿ ನನಗೆ ಎಂದೂ ಅಂತಹ ಪರಿಸ್ಥಿತಿ ಬರಲಿಲ್ಲ. ನಾನು ಈಗ ಹೇಳುತ್ತಿದ್ದೇನೆ. ಆ ನಿರ್ದೇಶಕನ ಹೆಸರು ಇವಿವಿ ಸತ್ಯ ನಾರಾಯಣ. ಅವ್ರು ಈಗ ನಿಧನರಾಗಿದ್ದಾರೆ. ನಾನು ಇನ್ನು ತೆಲುಗಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಇಡೀ ಚಿತ್ರರಂಗ ನನ್ನನ್ನು ಕರೆದು ಕೇಳಬಹುದು. ನನಗೆ ಭಯವಿಲ್ಲ. ನಾನು ಹೇಳಿದ್ದೇನೆ ಎಂದಿದ್ದಾರೆ.
ಅಂದಹಾಗೆ ಈಗ ಶಕೀಲಾ ಕೂಡಾ ಕಾನೂನು ಹೋರಾಟ ಎದುರಿಸಬೇಕಾಗಬಹುದು. ಏಕೆಂದರೆ ಆಕೆ ಆರೋಪ ಮಾಡಿರುವ ಸತ್ಯನಾರಾಯಣ ಬದುಕಿಲ್ಲದೇ ಹೋದರೂ, ಅವರ ಮಗ ಅಲ್ಲರಿ ನರೇಶ್ ತೆಲುಗಿನಲ್ಲಿ ಸ್ಟಾರ್ ನಟ. ಮೊದಲು ಕಾಮಿಡಿ ಚಿತ್ರಗಳ ಮೂಲಕವೇ ಗೆದ್ದಿದ್ದ ಅಲ್ಲರಿ ನರೇಶ್, ಈಗ ವಿಭಿನ್ನ ಚಿತ್ರಗಳ ಮೂಲಕವೂ ಗೆಲ್ಲುತ್ತಿದ್ದಾರೆ.
ಶಕೀಲಾ ಈ ಪ್ರಶ್ನೆ ಕೇಳುವುದಕ್ಕೆ ಕಾರಣವಾಗಿದ್ದು ನಟಿ ವಿಚಿತ್ರ ಅವರ ಆರೋಪ. ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿರುವ ಶಕೀಲಾ ತೆಲುಗು ಸ್ಟಾರ್ ನಟನೊಬ್ಬ ತನ್ನನ್ನು ಹೆಸರು ಕೂಡಾ ಕೇಳದೆ ರೂಮಿಗೆ ಕರೆದಿದ್ದ ಎಂದು ಆರೋಪಿಸಿದ್ದರು. ನಾನು ಹೋಗದಿದ್ದಾಗ ತೊಂದರೆ ಕೊಟ್ಟಿದ್ದ ಎಂದು ಆರೋಪಿಸಿದ್ದರು. ಆ ನಟ ತೆಲುಗಿನ ಬಾಲಯ್ಯ ಇರಬಹುದು ಎಂದು ಪ್ರೇಕ್ಷಕರೇ ಊಹಿಸಿದ್ದರು. ಆದರೆ ವಿಚಿತ್ರ ಮಾತ್ರ ಹೆಸರು ಹೇಳಿರಲಿಲ್ಲ. ಈಗ ಶಕೀಲಾ ಅದೇ ವಿಚಿತ್ರ ಅವರಿಗೆ ಇವಿವಿ ಸತ್ಯನಾರಾಯಣ ಹೆಸರು ಹೇಳಿ ಚಾಲೆಂಜ್ ಮಾಡಿದ್ಧಾರೆ. ವಿಚಿತ್ರಾ ನೀವು ಹೇಳಿ ಅದು ಯಾರು ಅಂತ. ಮತ್ತೆ ಆ ಚಿತ್ರರಂಗಕ್ಕೆ ಹೋದರೆ ಒದೆಯುತ್ತಾರೆ ಎಂದು ಭಯಾನಾ? ಧೈರ್ಯ ಇದ್ದರೆ ನೀವು ಹೇಳಿ ಆ ನಟ ಯಾರು ಅಂತ. ನಾನು ಹೇಳಿದ್ದಂತೆ ಎಂದು ನಟಿ ವಿಚಿತ್ರಾಗೆ ಸವಾಲು ಹಾಕಿದ್ದಾರೆ ಶಕೀಲಾ.



