ವಿಜಯೇಂದ್ರ ಅನುಭವಿ ಅಲ್ಲ, ಕಿರಿಯರು ಅಂತ ಇವತ್ತು ಕೆಲವರು ಹೇಳುತ್ತಾರೆ. ಆದರೆ ಗಮನಿಸಬೇಕಾದ ವಿಷಯವೆಂದರೆ ಸಂಘಟನೆಯನ್ನು ಕಟ್ಟುವ ವಿಷಯದಲ್ಲಿ ವಿಜಯೇಂದ್ರ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ದೃಷ್ಟಿಯಿಂದ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವ ದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು.
ಇದನ್ನು ಹೇಳಿರೋದು ಬೇರೆ ಯಾರೋ ಅಲ್ಲ, ಬಿಎಲ್ ಸಂತೋಷ್. ಬಿಜೆಪಿಯಲ್ಲಿ ಇರುವವರಿಗೆ ಸಂತೋಷ್ ಅವರ ವಿಚಾರ ಹೊಸದೇನಲ್ಲ. ಸಂಘಟನೆಯಲ್ಲಿ ಏನೇ ದೊಡ್ಡ ಸ್ಥಾನ ಇರಬಹುದು, ವಿಜಯೇಂದ್ರ ವಿಷಯದಲ್ಲಿ ಬಿಎಲ್ ಸಂತೋಷ್ ಅವರಿಗೆ ಸಂತೋಷವೇನೂ ಇರಲಿಲ್ಲ. ವಿಜಯೇಂದ್ರ ಅವರನ್ನು ವಿರೋಧಿಸುವ ಒಂದು ಬಣಕ್ಕೆ ಇದು ಶಕ್ತಿಯಾಗಿಯೂ ಇತ್ತು. ಹೀಗಾಗಿಯೇ ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾದ ನಂತರ ಸಂತೋಷ್ ಅವರು ಒಂದು ಅಂತರ ಕಾಯ್ದುಕೊಂಡೇ ಬಂದಿದ್ದರು. ಅರ್ಥಾತ್, ಅವರಿಗೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂತಿದ್ದು ಸಮಾಧಾನ ತಂದಿರಲಿಲ್ಲ. ಅಂತಹ ಸಂತೋಷ್ ಅಥವಾ ಬಿಜೆಪಿಯ ನಾಯಕರು ಸಂತೋಷ್ʻಜೀ ಎಂದೇ ಕರೆಯುವ ಬಿಲ್ ಸಂತೋಷ್, ವಿಜಯೇಂದ್ರ ಅವರನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ಅದೂ RSS ಸಭೆಯಲ್ಲಿ ಎನ್ನವುದೇ ವಿಶೇಷ.
ಕಳೆದ ವಾರ ಯಲಹಂಕದ ‘ರಮಡ’ ರೆಸಾರ್ಟ್ ನಲ್ಲಿ ನಡೆದ ಪಕ್ಷದ ಸಭೆಯಲ್ಲಿ RSSನ ಕೆಲವು ನಾಯಕರೂ ಭಾಗವಹಿಸಿದ್ದರು. ಆ ಸಭೆಯಲ್ಲಿ ಸಂತೋಷ್ ಮಾತನಾಡಿರುವ ರೀತಿ ಯಡಿಯೂರಪ್ಪ ವಿರೋಧಿ ಬಣಕ್ಕೂ ಶಾಕ್ ಕೊಟ್ಟಿದೆ. ಅವರಿಗೇ ಏನು, ಯಡಿಯೂರಪ್ಪ ಮತ್ತು ವಿಜಯೇಂದ್ರ ಪರ ನಿಂತಿರುವವರಿಗೂ ಶಾಕ್ ಆಗಿದೆ. ನಾವು ಕೇಳುತ್ತಿರುವುದು ನಿಜವಾ.. ಕನಸಾ ಎಂದು ಮೈಕೈ ಚಿವುಟಿ ನೋಡಿಕೊಂಡಿದ್ದಾರೆ.
ಸಭೆಯಲ್ಲಿ ಸಂತೋಷ್ ಸಮಾರೋಪ ಭಾಷಣ ಮಾಡಲು ಶುರುಮಾಡಿದಾಗ, ವಿಜಯೇಂದ್ರ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಬಹುದು ಎಂದು ಕೆಲವರು ಊಹೆ ಮಾಡಿದ್ದರು. ಆದರೆ, ಸಂತೋಷ್ ಭಾಷಣದ ಶುರುವಿನಿಂದಲೇ ವಿಜಯೇಂದ್ರ ಅವರ ನಾಯಕತ್ವಕ್ಕೆ ಪಾಸಿಟಿವ್ ಆಗಿ ಮಾತನಾಡಿದ್ದಾರೆ. ಸಂತೋಷ್ “ವಿಜಯೇಂದ್ರ ಅನುಭವಿ ಅಲ್ಲ, ಕಿರಿಯರು ಅಂತ ಇವತ್ತು ಕೆಲವರು ಹೇಳುತ್ತಾರೆ. ಆದರೆ ಗಮನಿಸಬೇಕಾದ ವಿಷಯವೆಂದರೆ ಸಂಘಟನೆಯನ್ನು ಕಟ್ಟುವ ವಿಷಯದಲ್ಲಿ ವಿಜಯೇಂದ್ರ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನೆನಪಿಡಬೇಕಾದ ವಿಷಯವೆಂದರೆ, ಇವತ್ತು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯಾಗಿರುವ ಯೋಗಿ ಆದಿತ್ಯನಾಥ್ ಅವರು ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಿಕೊಂಡಾಗ ಅವರಿಗೆ ಬರೀ ಇಪ್ಪತ್ತೊಂಬತ್ತು ವರ್ಷ. ಹೀಗಾಗಿ ಕರ್ನಾಟಕದಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ಯನ್ನು ವಿಜಯೇಂದ್ರ ಸಮರ್ಥವಾಗಿ ಹೊರಬಲ್ಲರು” ಎಂದಿದ್ದಾರೆ.
ಎಲ್ಲಿಯ ಯೋಗಿ ಆದಿತ್ಯನಾಥ್.. ಎಲ್ಲಿಯ ವಿಜಯೇಂದ್ರ. ಹೋಲಿಕೆ ಅತಿಯಾಯ್ತು ಎಂದು ಖುದ್ದು ವಿಜಯೇಂದ್ರ ಬಣದವರೇ ಅಂದುಕೊಂಡಿದ್ದಾರಂತೆ. ಕೊನೆಗೆ ಒಂದು ವಿಷಯ ಸ್ಪಷ್ಟವಾಗಿದೆ. ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲು ನಡೆಯುತ್ತಿರುವ ಹೋರಾಟಕ್ಕೆ ಬ್ರೇಕ್ ಬಿದ್ದಿದೆ. ಅಂದ ಹಾಗೆ, ಬಿ.ಎಲ.ಸಂತೋಷ್ ಅವರು ಇದ್ದಕ್ಕಿದ್ದಂತೆ ವಿಜಯೇಂದ್ರ ಅವರ ಪರ ನಿಂತಿರುವುದೇಕೆ ಎಂದರೆ, ಅಮಿತ್ ಶಾ ಅವರ ಉಪದೇಶ ಕಾರಣ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಂತರಿಕ ಕ್ಷೋಭೆಯಿಂದ ತತ್ತರಿಸುತ್ತಿದೆ. ಅದು ಯಾವ ಹಂತಕ್ಕೆ ಬೇಕಾದರೂ ಹೋಗಬಹುದು. ಆ ಸಮಯ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ರಾಜ್ಯದಲ್ಲಿ ಪಕ್ಷದಲ್ಲಿ ಒಗ್ಗಟ್ಟೇ ಇಲ್ಲದಿದ್ದರೆ ಕಷ್ಟ ಎಂದು ಹೇಳಿದ್ದಾರಂತೆ. ಅಮಿತ್ ಶಾ ಮಾತನ್ನು ಶಿರಸಾವಹಿಸಿ ಪಾಲಿಸಿದ್ದಾರೆ ಬಿಎಲ್ ಸಂತೋಷ್.



