ಶ್ಯಾಮಲಾ ದೇವಿ. ಹಿರಿಯ ಪೋಷಕ ನಟಿ. ವಯಸ್ಸು 62 ವರ್ಷ. ಚಂದ್ರಾಲೇಔಟಿನಲ್ಲೊಂದು ಮನೆಯಿದೆ. ಆ ಮನೆ ಮತ್ತು ಮಕ್ಕಳು ಈಗ ಹಿರಿಯ ಜೀವದ ಪಾಲಿಗೆ ವಿಲನ್ ಆಗಿದ್ದಾರೆ. ಹಿರಿಯ ಪೋಷಕ ನಟಿ ಶ್ಯಾಮಲಾದೇವಿಗೆ ಮಗ ಮತ್ತು ಸೊಸೆಯೇ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಖುದ್ದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಶ್ಯಾಮಲಾ ದೇವಿ, ಆಸ್ತಿಗಾಗಿ ಮಗ ಮತ್ತು ಸೊಸೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.
ಶ್ಯಾಮಲಾ ದೇವಿಗೆ ನಿತಿನ್ ಮತ್ತು ಉಮಾ ಎಂಬ ಇಬ್ಬರು ಮಕ್ಕಳಿದ್ದಾರೆ. ಚಂದ್ರಾಲೇಔಟ್‍ನಲ್ಲಿ ವಾಸವಿರುವ ನಟಿ ಶ್ಯಾಮಲಾದೇವಿ, ಮನೆ ಬಾಡಿಗೆಯಿಂದಲೇ ಜೀವನ ಸಾಗಿಸುತ್ತಿದ್ದಾರೆ. ಆ ಮನೆಯ ಮೇಲೆ ಕಣ್ಣಿಟ್ಟಿರುವ ಮಗ ನಿತಿನ್ ಮತ್ತು ಸೊಸೆ ಸ್ಮಿತಾ, ಮನೆಯನ್ನು ತಮ್ಮ ಹೆಸರಿಗೆ ಬರೆದುಕೊಡು ಎಂದು ಹಠಕ್ಕೆ ಬಿದ್ದಿದ್ದಾರೆ. ಸೊಸೆ ಸ್ಮಿತಾ ಹಿರಿಯ ಪೊಲೀಸ್ ಆಧಿಕಾರಿಯೊಬ್ಬರ ಮಗಳು. ಮದುವೆಯಾದ ಕೆಲವೇ ದಿನಗಳಲ್ಲಿ ಹಿಂಸೆ ಶುರುವಾಯ್ತು. ಈ ಹಿಂದೆ ಹಿರಿಯ ನಾಗರಿಕರ ವೇದಿಕೆಯಲ್ಲಿ ದೂರು ನೀಡಿದ್ದೆ.
ಆದರೆ ಮಗ ಬಂದು ಸೊಸೆ ಗರ್ಭಿಣಿ ಎಂದು ಹೇಳಿ ಸಮಾಧಾನ ಮಾಡಿದ್ದ. ತಪ್ಪಾಯ್ತು ಅಮ್ಮ, ಕ್ಷಮಿಸಿಬಿಡು ಎಂದಿದ್ದ. ಮನೆಗೆ ವಾಪಸ್ ಹೋದವಳಿಗೆ ಮತ್ತೆ ಕಿರುಕುಳ ಶುರುವಾಯ್ತು ಎಂದು ದೂರಿದ್ದಾರೆ ಶ್ಯಾಮಲಾದೇವಿ. ಮನೆ ಬರೆದುಕೊಡದಿದ್ದರೆ, ಪತ್ನಿಯಿಂದ ವರದಕ್ಷಿಣೆ ಕಿರುಕುಳ ಕೇಸ್ ಹಾಕಿಸುವುದಾಗಿ ಬೆದರಿಸುತ್ತಿದ್ದಾರೆ. ಲಂಡನ್`ಗೆ ಹೋಗಿರುವ ಮಗಳು ಉಮಾಳನ್ನೂ ಕೊಲ್ಲಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ಕೊಟ್ಟಿದ್ದಾರೆ.
ನನ್ನದೇ ಮನೆಯಲ್ಲಿ ನನಗೆ ಅಡುಗೆ ಮಾಡಲು ಬಿಡುತ್ತಿಲ್ಲ, ಪಾತ್ರೆಗಳನ್ನು ಬಳಸಲು ಬಿಡುತ್ತಿಲ್ಲ, ರೂಂಗಳ ಬಾಗಿಲು ಹಾಕಿಕೊಂಡಿದ್ದಾರೆ. ಗಿಡ ನೆಡಲು ಮಣ್ಣು ತರಿಸಿದ್ದೆ, ಅದರಲ್ಲಿಯೇ ನಿನ್ನನ್ನು ಹೂಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಪ್ರತಿದಿನ ನಾನು ಸರಿಯಾಗಿ ಮಲಗಬಾರದೆಂದು ತೊಂದರೆ ಕೊಡುತ್ತಾರೆ. ದೈಹಿಕ, ಮಾನಸಿಕ ಹಲ್ಲೆಗಳನ್ನು ಮಾಡುತ್ತಲೇ ಇರುತ್ತಾರೆ. ನನ್ನನ್ನು ಸುಳ್ಳು ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಸಿಲುಕಿಸುವ ಬೆದರಿಕೆ ಹಾಕಿದ್ದಾರೆ ದಯವಿಟ್ಟು ನನ್ನ ಜೀವ ಕಾಪಾಡಿ, ಸೂಕ್ತ ಭದ್ರತೆ ಒದಗಿಸಿ ಎಂದು ಶ್ಯಾಮಲಾದೇವಿ ಕಣ್ಣೀರಿಟ್ಟಿದ್ದಾರೆ.



