ದರ್ಶನ್ & ಗ್ಯಾಂಗ್ʻನ ಸದಸ್ಯರೆಲ್ಲ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಅರೆಸ್ಟ್ ಆಗಿದ್ದಾರೆ. ಆದರೆ, ಸದ್ಯಕ್ಕೆ ಅವರೆಲ್ಲ ಆರೋಪಿಗಳೇ ಹೊರತು, ಅಪರಾಧಿಗಳಲ್ಲ. ಅರೆಸ್ಟ್ ಆದವರಿಗೆ ಶಿಕ್ಷೆಯಾಗುವುದು ಆರೋಪ ಸಾಬೀತಾದಾಗ. ಅವರ ಮೇಲಿನ ಕೊಲೆ ಹಾಗೂ ಅದನ್ನು ಸಮಾಧಿ ಮಾಡಲು ಪ್ರಯತ್ನಿಸಿದ ಸಂಚುಗಳನ್ನೆಲ್ಲ ಸಾಕ್ಷಿ ಸಮೇತ ಪೊಲೀಸರು ಕೋರ್ಟಿನಲ್ಲಿ ಪ್ರೂವ್ ಮಾಡಿದಾಗ..
ಆ ನಿಟ್ಟಿನಲ್ಲಿ ಪೊಲೀಸರು ಇನ್ನೂ ಇನ್ನೂ ಶ್ರಮ ವಹಿಸಿ ದಾಖಲೆ, ಸಾಕ್ಷಿಗಳನ್ನು ಹೊಂದಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರಿಗೆ ಅನುಕೂಲವಾಗಿರುವುದು ಹಾಗೂ ದರ್ಶನ್ & ಗ್ಯಾಂಗ್‌ಗೆ ಕಂಟಕವಾಗಿರುವುದು ಸೆಕ್ಷನ್ 164 ಹೇಳಿಕೆಗಳು. ಆರೋಪಿಗಳೂ ಸೇರಿದಂತೆ 13ಕ್ಕೂ ಹೆಚ್ಚು ಜನರಿಂದ ಸೆಕ್ಷನ್ 164 ಹೇಳಿಕೆ ದಾಖಲಿಸಲಾಗಿದೆ. ಅವರಲ್ಲಿ ಪ್ರತ್ಯಕ್ಷ ಸಾಕ್ಷಿಗಳು, ಸಾಂದರ್ಭಿಕ ಸಾಕ್ಷಿಗಳೂ ಸೇರಿದ್ದಾರೆ. ಸದ್ಯದ ಮಟ್ಟಿಗೆ 13+ ಮಂದಿಯಿಂದ ಸೆಕ್ಷನ್ 164 ಹೇಳಿಕೆ ಪಡೆಯಲಾಗಿದೆ.
ಸೆಕ್ಷನ್ 164 ಹೇಳಿಕೆ ದಾಖಲಿಸಿದವರು :
ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದ ಟ್ಯಾಕ್ಸಿ ಡ್ರೈವರ್ ರವಿ ಕುಮಾರ್, ಪೊಲೀಸ್ ಠಾಣೆಗೆ ಬಂದು ಸರೆಂಡರ್ ಆದವರರಲ್ಲಿ ಇಬ್ಬರು (ನಿಖಿಲ್ ಮತ್ತು ಕಪ್ಪೆ ಕಾರ್ತಿಕ್), ಒಬ್ಬ ಆಟೋ ಡ್ರೈವರ್, ಟ್ಯಾಕ್ಸಿ ಮಾಲೀಕ, ಶವ ಸಾಗಿಸಿದ್ದ ಸ್ಕಾರ್ಪಿಯೋ ಮಾಲೀಕ, ಪಟ್ಟಣಗೆರೆ ಶೆಡ್ʻನ ಸೆಕ್ಯುರಿಟಿ ಗಾರ್ಡ್, ಅಪಾರ್ಟ್ʻಮೆಂಟ್ ಬಳಿಯ ಸೆಕ್ಯುರಿಟಿ ಗಾರ್ಡ್.. ಸೇರಿದಂತೆ ಸದ್ಯಕ್ಕೆ 13 ಜನರ 164 ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಜುಲೈ 4ರಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮ್ಯಾಂಡ್ ಕಾಪಿಯಲ್ಲಿ ಈ ಎಲ್ಲ ಅಂಶಗಳೂ ದಾಖಲಾಗಿವೆ.
ಇವರಲ್ಲಿ ಟ್ಯಾಕ್ಸಿಯಲ್ಲಿ ಕರೆತಂದ ವ್ಯಕ್ತಿಯ ಹೇಳಿಕೆ ರೇಣುಕಾಸ್ವಾಮಿಯನ್ನು ಕರೆದು ತಂದ ಸಂಪೂರ್ಣ ಚಿತ್ರಣ ಬಿಚ್ಚಿಡಲಿದೆ. ಸರೆಂಡರ್ ಆಗಿರುವವರಲ್ಲಿ ಕಪ್ಪೆ ಕಾರ್ತಿಕ್ ಮತ್ತು ನಿಖಿಲ್ ಹೇಳಿಕೆಗಳು ಕೊಲೆ ಆರೋಪವನ್ನು ತಮ್ಮ ತಲೆಯ ಮೇಲೆ ಹಾಕಿಕೊಂಡಿದ್ದು ಏಕೆ ಎಂಬ ಸತ್ಯ ಬಿಚ್ಚಿಡಲಿವೆ.
ಹಾಗೆ ಸೆಕ್ಷನ್ 164 ಹೇಳಿಕೆ ನೀಡಿರುವವರಲ್ಲಿ ಮೋಹನ್ ಕುಮಾರ್ ಎಂಬ ವ್ಯಕ್ತಿಗೆ ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವ ಫೋಟೋ/ವಿಡಿಯೋ ಕಳಿಸಿದೆ. ಇದನ್ನು ಆತ ಹೇಳಿಕೆಯಲ್ಲಿ ದಾಖಲಿಸಿದ್ದಾರೆ. ಇದು ಪ್ರಮುಖ ಸಾಕ್ಷಿಯಾಗಲಿದೆ. ಈಗ ಅರೆಸ್ಟ್ ಆಗಿಲ್ಲ.
ಅಷ್ಟೇ ಅಲ್ಲ, ಈತನೇ ಬೇರೆ, ಮಾಜಿ ಕಾರ್ಪೊರೇಟರ್/ಉಪ ಮೇಯರ್ ಮೋಹನ್ ರಾಜ್ ಬೇರೆ.
ಇನ್ನು ಪಟ್ಟಣಗೆರೆ ಶೆಡ್ʻನ ಸೆಕ್ಯುರಿಟಿ ಗಾರ್ಡ್ ಕೊಟ್ಟಿರುವ ಸೆಕ್ಷನ್ 164 ಹೇಳಿಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ ಆಗಿರಬಹುದು. ಸ್ಕಾರ್ಪಿಯೋ ಮಾಲೀಕ ಶವ ಸಾಗಿಸಲು ತಮ್ಮ ವಾಹನ ದುರ್ಬಳಕೆಯಾಗಿದ್ದನ್ನು ಹೇಳುತ್ತಾನೆ. ಅಲ್ಲಿಗೆ ಕರೆದುಕೊಂಡು ಬಂದವನು, ಕೊಲೆ ಮಾಡಿದ್ದನ್ನು ತನ್ನ ಮೇಲೆ ಹಾಕ್ಕೊಳ್ಳೋಕೆ ಹೋಗಿದ್ದವನು, ಶವ ಸಾಗಿಸಲು ವಾಹನ ಕೊಟ್ಟವನು, ರೇಣುಕಾಸ್ವಾಮಿ ಮೇಲೆ ನಡೆದ ಹಲ್ಲೆಯ ಫೋಟೋ ನೋಡಿದವನು ಮತ್ತೊಬ್ಬ ಪ್ರತ್ಯಕ್ಷದರ್ಶಿ (ಪಟ್ಟಣಗೆರೆ ಶೆಡ್ ಸೆಕ್ಯುರಿಟಿ ಗಾರ್ಡ್) ಹೇಳಿಕೆಗಳು ಸೆಕ್ಷನ್ 164 ಅಡಿಯಲ್ಲಿ ದಾಖಲಾಗಿವೆ. ಇವುಗಳನ್ನಂತೂ ಬದಲಾಯಿಸೋಕೆ ಸಾಧ್ಯ ಇಲ್ಲ.
ಸೆಕ್ಷನ್ 164 ಹೇಳಿಕೆ ಎಂದರೆ..
ಸಾಮಾನ್ಯವಾಗಿ ಪೊಲೀಸರು ತಮ್ಮ ಬಳಿ ಹೇಳಿಕೆ ದಾಖಲು ಮಾಡಿಕೊಳ್ಳುತ್ತಾರೆ. ವಿಡಿಯೋ ಕೂಡಾ ಮಾಡಿಕೊಳ್ಳುತ್ತಾರೆ. ಆದರೆ, ಈ ಹೇಳಿಕೆಗಳನ್ನೇ ನ್ಯಾಯಾಲಯದಲ್ಲಿ ಹೇಳಬೇಕು ಎಂದೇನಿಲ್ಲ. ಹಲವು ಬಾರಿ ಪೊಲೀಸರ ಎದುರು ಹೇಳಿಕೆ ಕೊಟ್ಟವರು, ಕೋರ್ಟಿನಲ್ಲಿ ಪೊಲೀಸರು ಗೊಂದಲ ಮಾಡಿದರು, ಒತ್ತಡ ಹೇರಿದರು, ಬೆದರಿಸಿದರು ಎಂದೆಲ್ಲ ಹೇಳಿ ಉಲ್ಟಾ ಹೊಡೆಯುವ ಸಾಧ್ಯತೆಗಳೂ ಇರುತ್ತವೆ. ಹೀಗಾಗಿಯೇ ಪೊಲೀಸರು ಹಾಗೆ ಹೇಳಿದ್ದಕ್ಕೆಲ್ಲ ಸಾಕ್ಷಿಗಳನ್ನು ಹೊಂಚಬೇಕು. ಆದರೆ, ಸೆಕ್ಷನ್ 164 ಹೇಳಿಕೆಗಳು ಹಾಗಲ್ಲ. ಈ ಹೇಳಿಕೆಯನ್ನು ಖುದ್ದು ನ್ಯಾಯಾಧೀಶ ಅಥವಾ ಮ್ಯಾಜಿಸ್ಟ್ರೇಟ್ ಎದುರು ದಾಖಲಿಸಿಕೊಳ್ಳಲಾಗುತ್ತದೆ. ಸೆಕ್ಷನ್ 164 ಹೇಳಿಕೆ ಕೊಟ್ಟವರು ಮತ್ತೆ ತಮ್ಮ ಹೇಳಿಕೆಯನ್ನು ತಿರುಚುವ ಹಾಗಿರುವುದಿಲ್ಲ. ಅದು ಫೈನಲ್. ದರ್ಶನ್ & ಗ್ಯಾಂಗ್ʻನ ಮೇಲಿರುವ ಆರೋಪಗಳಲ್ಲಿ 13+ ಸೆಕ್ಷನ್ 164 ಹೇಳಿಕೆಗಳು ದರ್ಶನ್ ಅವರಿಗೆ ಪ್ರತಿಕೂಲವಾಗುವ ಎಲ್ಲ ಸಾಧ್ಯತೆಗಳೂ ಇರುತ್ತವೆ.



