ಪ್ರಿಯಾಂಕ್ ಖರ್ಗೆ. ರಾಜ್ಯ ಸರ್ಕಾರದ ಪ್ರಭಾವಿ ಸಚಿವ. ಐಟಿ ಬಿಟಿ ಖಾತೆ ಹೊಣೆ ಹೊತ್ತಿರುವ ಸಚಿವರು, ಇದೀಗ ಕರಾವಳಿ, ಆರ್‌ಎಸ್‌ಎಸ್ ಟೀಕಿಸಲು ಹೋಗಿ, ಮತ್ತೊಮ್ಮೆ ಕಲ್ಬುರ್ಗಿಯನ್ನೇ ಮರೆತ ಬಗ್ಗೆ ಟೀಕೆ ಎದುರಿಸುತ್ತಿದ್ದಾರೆ. ವಿಜಯ ಕರ್ನಾಟಕ ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಅವರ ‘ಕರಾವಳಿಯ ರಕ್ತ-ಕಣ್ಣೀರು’ (ಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳು) ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಖರ್ಗೆ ಹಿಂದುತ್ವ, ಕೋಮುದ್ವೇಷ, ಜಗಳಗಳಿಂದಾಗಿ ಕರಾವಳಿಗೆ ಐಟಿ ಬಿಟಿ ಕಂಪೆನಿಗಳು ಕರಾವಳಿಯಲ್ಲಿ ಹೂಡಿಕೆ ಮಾಡುತ್ತಿಲ್ಲ ಎಂದು ದೂರಿದ್ದಾರೆ. ವಾಸ್ತವವಾಗಿ ಇದು ಸಾಧ್ಯವೇ.. ಕರಾವಳಿಯಲ್ಲಿ ಹೂಡಿಕೆ ಮಾಡಿರುವ ಕಂಪೆನಿಗಳು ಎಷ್ಟು..? ಕಲಬುರಗಿಯಲ್ಲಿ ಎಷ್ಟು..? ಕೋಮುವಾದ, ರಾಜಕೀಯ ಬದಿಗಿಟ್ಟು ಲೆಕ್ಕ ನೋಡೋಣ.
ಪ್ರಿಯಾಂಕ್ ಖರ್ಗೆ ವಾದ ಏನೆಂದರೆ.. ಐಟಿ-ಬಿಟಿ ಕಂಪನಿಗಳಿಗೆ (IT-BT Company) ಹೂಡಿಕೆ ಮಾಡಿ ಎಂದು ಹೇಳುತ್ತೇವೆ. ಅವರು ಕೂಡ ರೆಡಿ ಆಗುತ್ತಾರೆ. ಆದರೆ ನಾಳೆ ಅವರ ಕೆಲಸಗಾರರಿಗೆ ತೊಂದರೆ ಆದರೆ ಏನು ಮಡೋದು ಅನ್ನೋ ಚಿಂತೆ ಮಾಡ್ತಾರೆ.. ಹೀಗಾಗಿ ಕರಾವಳಿಯಲ್ಲಿ ಹೂಡಿಕೆ ಮಾಡುವುದಕ್ಕೆ ಐಟಿಬಿಟಿ ಕಂಪೆನಿಗಳು ಮುಂದೆ ಬರ್ತಾ ಇಲ್ಲ.
ಮಂಗಳೂರು, ಉಡುಪಿಯಲ್ಲಿರುವ ಐಟಿ-ಬಿಟಿ ಕಂಪೆನಿಗಳು :
ವಾಸ್ತವ ಏನೆಂದರೆ.. ಕರಾವಳಿಯನ್ನು ಸಿಲಿಕಾನ್ ಬೀಚ್ ಎಂದೇ ಕರೆಯುತ್ತಾರೆ. ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಇನ್ಫೋಸಿಸ್,ಕಾಂಗ್ನಿಜೆಂಟ್ (Cognizant), ಟೆಕ್ ಮಹೀಂದ್ರಾ (Tech Mahindra) ಸ್ಯಾಟಲೈಟ್ ಆಫೀಸ್, ಎಂಪಾಸಿಸ್ (Mphasis), ರೋಬೋಸಾಫ್ಟ್ ಟೆಕ್ನಾಲಜೀಸ್ (Robosoft Technologies), ಟಿಸಿಎಸ್, ವಿಪ್ರೋ, ನೋವಿಗೊ ಸಲ್ಯೂಷನ್ಸ್ (Novigo Solutions), ಮತ್ತು ಇನ್ವೆಂಜರ್ ಟೆಕ್ನಾಲಜೀಸ್ (Invenger Technologies) ನಂತಹ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇನ್ನು ಬಿಟಿ ಕ್ಷೇತ್ರದಲ್ಲಿ ಅಕ್ವಾಮರೀನ್ ಇನ್ನೋವೇಶನ್ ಸೆಂಟರ್ ಕೆಲಸ ಮಾಡುತ್ತಿದೆ.
ಕಲಬುರಗಿಯಲ್ಲಿ ಹೂಡಿಕೆ ಮಾಡಿರುವ ಐಟಿ-ಬಿಟಿ ಕಂಪೆನಿಗಳು :
“ಬಿಯಾಂಡ್ ಬೆಂಗಳೂರು” ಯೋಜನೆ ಅಡಿಯಲ್ಲಿ ಕಲಬುರ್ಗಿಯಲ್ಲಿ ಇತ್ತೀಚೆಗೆ ಐಟಿ-ಬಿಟಿ ಹಬ್ ಮಾಡುವ ಕೆಲಸಗಳು ಶುರುವಾಗಿವೆ. ಪ್ರಸ್ತುತ ಲೈನಸ್ಕಾರ್ಟ್ ಐಟಿ ಸೊಲ್ಯೂಷನ್ಸ್ (Linuscart IT Solutions), ಡಿಜಿಸ್ನೇರ್ ಟೆಕ್ನಾಲಜೀಸ್ (Digisnare Technologies), ಫೈವ್ ಸೆವೆನ್ ಐಟಿ ಸೊಲ್ಯೂಷನ್ಸ್ (Five Seven IT Solutions), ಕೋರ್ ಸೆಲೆಂಟ್ ಟೆಕ್ನಾಲಜೀಸ್ (CoreCellent Technologies), ಬೀಯಿಂಗ್ ಮಾಶ್ ಸರ್ವಿಸಸ್ (Beingmash Services), ಹ್ಯಾಟ್ ಐಟಿ ಸೊಲ್ಯೂಷನ್ಸ್ (HAT IT Solutions), ಮತ್ತು ಮೆಹ್ತಾ ಡಿಜಿಟಲ್ ವೆಂಚರ್ಸ್ ಕೆಲಸ ಶುರು ಮಾಡಿವೆ.
ಎರಡನ್ನೂ ಹೋಲಿಸಿ ನೋಡಿದರೆ.. ಮಂಗಳೂರು, ಉಡುಪಿಯ ಎದುರು ಕಲಬುರಗಿ ಲೆಕ್ಕಕ್ಕೆ ಇಲ್ಲ ಎನ್ನುವಂತೆ ಕಾಣುವುದು ಸತ್ಯ. ಏಕೆಂದರೆ ಕರಾವಳಿಯಲ್ಲಿ ಶಾಲೆ, ಕಾಲೇಜು, ಬ್ಯಾಂಕಿಂಗ್, ಆಸ್ಪತ್ರೆ, ರಿಯಲ್ ಎಸ್ಟೇಟ್, ಏರ್‌ಪೋರ್ಟ್, ಮೆಡಿಕಲ್, ಬಂದರುಗಳೂ ಸೇರಿದಂತೆ ಎಲ್ಲ ರೀತಿಯಲ್ಲೂ ಬೆಳವಣಿಗೆಯಾಗುತ್ತಿದೆ. ಪ್ರವಾಸೋಧ್ಯಮವೂ ಬೆಳೆದಿದೆ. ಬೆಳೆಯುತ್ತಲೂ ಇದೆ. ಕಲಬುರಗಿಯನ್ನು ಕರಾವಳಿಗೆ ಹೋಲಿಸರೆ ಇನ್ನೂ ಶಿಶು ಎನ್ನಬಹುದಷ್ಟೇ.



