ಮೈಕ್ರೋ ಫೈನಾನ್ಸ್ ಎಂಬುದು ಯಾವ ಮಟ್ಟಿಗೆ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ ಎಂದರೆ, ಜನ ಊರನ್ನೇ ಬಿಡ್ತಿದ್ದಾರೆ. ಮನೆ ಬಿಟ್ಟು ಹೋಗ್ತಿದ್ಧಾರೆ. ಹೆಂಡತಿ, ಮಕ್ಕಳನ್ನೇ ಬಿಟ್ಟು ಹೋಗಿದ್ದಾರೆ. ನೇಣಿಗೆ ಶರಣಾಗುತ್ತಿದ್ದಾರೆ. ಇದು ಸಹಜವಾಗಿಯೇ ರೈತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಾವೇರಿಯ ರಾಣೆಬೆನ್ನೂರಿನಲ್ಲಿ ಫೈನಾನ್ಸ್‌ಗಳ ಕಿರುಕುಳ ತಪ್ಪಿಸಿ ರೈತ ಮಹಿಳೆಯರ ಮಾಂಗಲ್ಯ ಉಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರದ ಜತೆಗೆ ತಾಳಿ ರವಾನಿಸುವ ಮೂಲಕ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿದೆ.
ಇತ್ತೀಚಿನ ದಿನಗಳಲ್ಲಿ ಚಾಮರಾಜನಗರ, ರಾಮನಗರ, ಮೈಸೂರು, ಹಾವೇರಿ, ರಾಣೇಬೆನ್ನೂರು ತಾಲೂಕು ಸೇರಿದಂತೆ ಹಲವುಡ ಕಡೆ ಫೈನಾನ್ಸ್‌ಗಳು ಲೋನ್ ಕೊಟ್ಟು, ದುಪ್ಪಟ್ಟು ಬಡ್ಡಿ ವಸೂಲಿ ಮಾಡುತ್ತಿವೆ. ಸಂಜೆ ವೇಳೆ, ರಾತ್ರಿ ಮನೆಯ ಮುಂದೆ ಸಾಲ, ಬಡ್ಡಿ ಕಟ್ಟುವಂತೆ ಕುಟುಂಬದವರನ್ನು ಅವಮಾನಗೊಳಿಸುತ್ತಿವೆ. ಮನೆ ಬೀಗ ಹಾಕುತ್ತೇವೆ. ಹರಾಜು ಮಾಡುತ್ತೇವೆ ಎಂದು ಗೂಂಡಾಗಿರಿ ಮಾಡುತ್ತಿದ್ದಾರೆ. ಕೆಲವು ಹಳ್ಳಿಗಳ ಜನರು ಸಾಲದ ಕಿರಿಕಿರಿಯಿಂದ ಊರು ಬಿಟ್ಟು ಹೋಗಿದ್ದಾರೆ. ಕೆಲವರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ.
ಇಂತಹ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿರುವ ರೈತ ಸಂಘದವರು ಎಸ್ಪಿ, ಡಿಸಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಿಳೆಯರ ಕಷ್ಟ ಅರಿತುಕೊಂಡು ಮಾಂಗಲ್ಯ ಉಳಿಸಿ, ಫೈನಾನ್ಸ್‌ಗಳ ಕಿರುಕುಳ ತಪ್ಪಿಸಬೇಕು ಎಂದು ಪತ್ರ ಬರೆದಿದ್ದಾರೆ. ರೈತ ಸಂಘದ ರಾಣೆಬೆನ್ನೂರ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಶಿವಕುಮಾರ ತಳವಾರ, ಯಲ್ಲಪ್ಪ ಚಿಕ್ಕಣ್ಣನವರ, ಉಚ್ಚನಗೌಡ, ನೀಲಮ್ಮ ನಂದೆಣ್ಣನವರ, ರೂಪಾ ಕುಲಕರ್ಣಿ, ಶಿಲ್ಪಾ, ನಾಗಮ್ಮ ಮೊದಲಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಸಾಲ ಕೊಟ್ಟ ಮೈಕ್ರೋ ಫೈನಾನ್ಸ್ ಕಂಪನಿಗಳು ಹಗಲು, ರಾತ್ರಿ ಎನ್ನದೇ ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಮನೆಯಲ್ಲಿ ನೆಮ್ಮದಿಯಾಗಿ ಇರುವಂತಿಲ್ಲ. ಮನೆಗೆ ಬಂದರೆ ಇವರ ಕಿರುಕುಳ, ಇವರು ಬಂದರೆ ಸುತ್ತಮುತ್ತಲಿನವರ ಮೂದಲಿಕೆ ಕೇಳುವಂತಾಗಿದೆ. ಹೀಗಾಗಿ ಕಿರುಕುಳ ತಪ್ಪಿಸಿ, ಮಾಂಗಲ್ಯ ಸರವನ್ನು ಉಳಿಸಿ ಎಂದು ಮಹಿಳೆಯರು ಒತ್ತಾಯಿಸಿದ್ದಾರೆ..
ಮೈಕ್ರೊ ಫೈನಾನ್ಶಿಯರ್‌ಗಳ ಕಿರುಕುಳಕ್ಕೆ ರಾಜ್ಯದಲ್ಲಿ ಬುಧವಾರ ಇಬ್ಬರು ಬಲಿಯಾಗಿದ್ದಾರೆ. ರಾಮನಗರ ಜಿಲ್ಲೆ ಮೈಲನಾಯ್ಕನಹಳ್ಳಿಯಲ್ಲಿ ಲೀಲಾವತಿ (50) ಮತ್ತು ಬಿದರಕಟ್ಟೆ ನಿವಾಸಿ ಸ್ವಾಮಿ (47) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ತಿಮ್ಮಯ್ಯನ ದೊಡ್ಡಿ ಗ್ರಾಮ ದ ಯಶೋದಮ್ಮ (60) ಎಂಬುವವರು ಎಂಬವರು ಮಂಗಳ ವಾರವಷ್ಟೇ ಸಾವಿಗೆ ಶರಣಾಗಿದ್ದರು. ಇನ್ನು ಮೃತ ಲೀಲಾವತಿ ಅವರು ಖಾಸಗಿ ಫೈನಾನ್ಸಿಯರ್ ಒಬ್ಬರಿಂದ 50 ಸಾವಿರ ರೂ. ಸಾಲ ಮಾಡಿಕೊಂಡಿದ್ದರಂತೆ. ಆ ಫೈನಾನ್ಸ್ ಸಿಬ್ಬಂದಿ ಪ್ರತಿ ನಿತ್ಯವೂ ಲೀಲಾವತಿ ಮನೆಗೆ ಬಂದು, ಸಾಲ ವಾಪಸ್ ಕೊಡಿ ಎಂದು ಸಂಜೆಯವರೆಗೂ ಕಾಡುತ್ತಿದ್ದರಂತೆ. ಈಗ ಫೈನಾನ್ಸ್ ಕಂಪೆನಿಗಳಿಂದ ಮೃತಪಟ್ಟವರ ಸಂಖ್ಯೆ 3ರ ಗಡಿ ದಾಟಿದೆ.



