ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ 50 ದಿನ ಕಳೆದಿದೆ. ರೇಣುಕಾಸ್ವಾಮಿ ಕೊಲೆಯಾಗಿಯೂ 50+ ದಿನ ಆಗಿದೆ. ಮರ್ಡರ್ ಕೇಸ್ ಆಗಿರೋದ್ರಿಂದ ಹಾಗೂ ಮೇಲ್ನೋಟಕ್ಕೆ ಸಿಕ್ಕಿರುವ ಸಾಕ್ಷ್ಯಗಳೆಲ್ಲ ದರ್ಶನ್, ಪವಿತ್ರಾ ಗೌಡ ಅವರತ್ತಲ್ಲೇ ತೋರಿಸ್ತಿರೋದ್ರಿಂದ ಚಾರ್ಜ್ ಶೀಟ್ ಹಾಕೋವರೆಗೆ ಬೇಲ್ ಅಪ್ಲಿಕೇಷನ್ ಹಾಕೋ ಹಾಗಿಲ್ಲ. ಹಾಗೆ ನೋಡಿದ್ರೆ.. ಕೇಸ್ ಮುಚ್ಚಿಹಾಕಲು ನಡೆಸಿರುವ ಪ್ರಯತ್ನಗಳು ಹಾಗೂ ಹೊರಗೆ ದರ್ಶನ್ ಅಭಿಮಾನಿಗಳು ಮಾಡುತ್ತಿರುವ ಹುಚ್ಚಾಟಗಳು ಜಾಮೀನು ಸಿಗೋದಕ್ಕೆ ಅಡ್ಡಿಯಾದರೂ ಆಶ್ಚರ್ಯವಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆರ್ಭಟ, ಹೊರಗೆ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿ.. ಅಭಿಮಾನಿಗಳ ಮೂಲಕ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಕೋರ್ಟ್ ಅರ್ಥೈಸಿಕೊಂಡರೆ.. ಪೊಲೀಸರು ಅ ರೀತಿಯಲ್ಲಿ ವಾದ ಮಂಡಿಸಿದರೆ.. ಜಾಮೀನು ಸಿಗುವ ಮಾತು ದೂರವೇ ಉಳೀತು. ಹೀಗಿರುವಾಗಲೇ ದರ್ಶನ್ ಅವರ ಬಿಡುಗಡೆಗಾಗಿ ಡಾ.ರಾಜ್ ಕುಮಾರ್ ಭವನದಲ್ಲಿ ಹೋಮ ಹವನ ನಡೆಯಲಿದೆ ಎಂದು ಸುದ್ದಿಯಾಗುತ್ತಿದೆ.
ಇದೇ ಆಗಸ್ಟ್ 13,14 ರಂದು ಕಲಾವಿದರ ಸಂಘದಲ್ಲಿ ಪೂಜೆ, ಹೋಮ, ಹವನ ಮಾಡುತ್ತಿದ್ದೇವೆ ಅಂದು ಒಳ್ಳೆಯ ದಿನ ಹಾಗಾಗಿ ಅವತ್ತು ಹೋಮ ಹವನ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ ರಾಕ್ ಲೈನ್ ವೆಂಕಟೇಶ್. ಕಲಾವಿದರ ಸಂಘದ ಕಟ್ಟಡದ ಹೆಸರು ಡಾ.ರಾಜ್ ಕುಮಾರ್ ಭವನ. ಡಾ.ರಾಜ್ ಕುಮಾರ್ ಭವನದಲ್ಲಿ ನಡೆಯುತ್ತಿರುವ ಹೋಮ ಹವನ ಚಿತ್ರರಂಗದ ಉಳಿವಿಗಾಗಿ, ಏಳ್ಗೆಗಾಗಿ ಎನ್ನುವುದು ರಾಕ್ ಲೈನ್ ಮಾತು.
ಆದರೆ.. ಜೈಲಿನಲ್ಲಿ ನಟ ದರ್ಶನ್ ಬಿಡುಗಡೆಗೆ ಹೋಮ ಹವನ ನಡೆಸಲಾಗುತ್ತಿದೆ ಅನ್ನೋ ಅನುಮಾನ ಎಲ್ಲರದ್ದು. ನಾನು ದರ್ಶನ್‌ಗಾಗಿ ನೂರು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುತ್ತೇನೆ. ಅದಕ್ಕೆ ಇಲ್ಲೇ ಬಂದು ಪೂಜೆ ಮಾಡಬೇಕಾಗಿಲ್ಲ. ಇಲ್ಲಿ ನಡೆಸುತ್ತಿರುವ ಉದ್ದೇಶ ದರ್ಶನ್ ಗಾಗಿ ಮಾತ್ರ ಒಳ್ಳೆಯದಾಗಲಿ ಅನ್ನೋದಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ತಪ್ಪು ಸರಿ ಹೇಳುವಷ್ಟು ದೊಡ್ಡ ಮನುಷ್ಯ ನಾನಲ್ಲ. ನಾನು ದರ್ಶನ್ ಒಂದೇ ಕುಟುಂಬದ ಸದಸ್ಯರೇ. ಹಾಗಾಂತ ದರ್ಶನ್ ಬಿಡುಗಡೆಗಾಗಿ ಪೂಜೆ ಮಾಡುತ್ತಿದ್ದೇವೆ ಅಂತಾ ಭಾವಿಸೋದು ತಪ್ಪು ಕಲ್ಪನೆ ಎಂದಿದ್ದಾರೆ ರಾಕ್ ಲೈನ್ ವೆಂಕಟೇಶ್.
ಹಾಗಿದ್ದರೆ ಹೋಮ ಹವನ ಏಕೆ ಎಂಬ ಪ್ರಶ್ನೆಗೆ ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಒಂದು ಸಲ್ಯೂಷನ್ ಬೇಕಾಗಿದೆ. ನಾವು ಅನೇಕ ಸಲ ಜನರ ಬಳಿ ಮನವಿ ಮಾಡಿದ್ದೇವೆ. ಇವತ್ತಿನ ಕನ್ನಡ ಚಿತ್ರರಂಗದ ಪರಿಸ್ಥಿತಿ ಏನಾಗ್ತಿದೆ ಅನ್ನೋದು ಗೊತ್ತಿದೆ. ಹಿಂದೆ ಎಲ್ಲಾ ಭಾಷೆಯ ಚಿತ್ರ ಬಿಡುಗಡೆ ಆಗ್ತಿದ್ದವು, ಅದು ಕಡಿಮೆ ಇತ್ತು. ಆದರೆ ಇವತ್ತು ಸುನಾಮಿ ರೀತಿ ಎಲ್ಲ ಚಿತ್ರಗಳು ಬರ್ತಾ ಇವೆ. ಎಲ್ಲ ಭಾಷೆಯ ಸೂಪರ್ ಡೂಪರ್ ಚಿತ್ರ ತಂದು ರಿಲೀಸ್ ಮಾಡ್ತಿದ್ದಾರೆ. ಇದು ವ್ಯಾಪಾರ. ನಾನು ಅದರ ಬಗ್ಗೆ ಮಾತನಾಡೊಲ್ಲ. ಆದರೆ ಅದರ ಪರಿಣಾಮದಿಂದ ಇವತ್ತು ಕನ್ನಡ ಚಿತ್ರರಂಗ ಪಾತಾಳಕ್ಕೆ ಹೋಗ್ತಾ ಇದೆ. ಅದನ್ನು ಉಳಿಸಿಕೊಳ್ಳೋಕೆ ಈ ಪೂಜೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಕೊರೊನಾ ಬಳಿಕ ಸಾಕಷ್ಟು ಸಾವು ನೋವು ಸಂಭವಿಸಿವೆ. ಚಿತ್ರರಂಗದಲ್ಲೂ ಹಲವರನ್ನು ನಾವು ಕಳೆದುಕೊಂಡಿದ್ದೇವೆ. ಹೀಗಾಗಿ ಚಿತ್ರರಂಗದ ಉಳಿವಿಗಾಗಿ, ಏಳಿಗೆಗಾಗಿ ಪೂಜೆ ಮಾಡಲು ತೀರ್ಮಾನ ಮಾಡಿದ್ದೇವೆ. ಸಾಮಾನ್ಯವಾಗಿ ಎಲ್ಲರಿಗೂ ಒಂದು ಆಮಂತ್ರಣ ಕೊಡ್ತೀವಿ. ಆದರೆ ಇಲ್ಲಿ ಯಾರಿಗೂ ಇನ್ವಿಟೇಷನ್ ಕೊಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಂದರೆ.. ಯಾರಿಗೂ ಖುದ್ದು ಆಹ್ವಾನ ಕೊಡುವುದಕ್ಕೆ ಹೋಗುತ್ತಿಲ್ಲ. ಅನ್ನದಾತರು, ನಿರ್ಮಾಪಕ, ನಿರ್ದೇಶಕರು, ಛಾಯಾಗ್ರಾಹಕರು, ಪ್ರೊಡಕ್ಷನ್ ಬಾಯ್ಸ್ ಮೇಕಪ್ ಆರ್ಟಿಸ್ಟ್ ಆರ್ಟ್ ಫಿಲಂ, ಪೋಷಕರ ಕಲಾವಿದರ ಸಂಘ, ಫಿಲ್ಮ್ ಚೇಂಬರ್ಸ್ ಎಲ್ಲರನ್ನೂ ಕರೆದಿದ್ದೇವೆ. ಇಷ್ಟವಿದ್ದವರು ಹೋಮದಲ್ಲಿ ಭಾಗಿಯಾಗಬಹುದು ಎಂದಿದ್ದಾರೆ.
ಹಿಂದೆ ಅಣ್ಣಾವ್ರು ಹೇಳ್ತಿದ್ರು. ಇವರೆಲ್ಲ ಕೆಲಸ ಮಾಡಿದ್ರೇನೆ ನಾವು ಚೆನ್ನಾಗಿ ಕಾಣೋದು ಅಂತಿದ್ರು. ನನ್ನ ತಾಯಿ ಮೇಲಾಣೆ ಸ್ವಾರ್ಥಕ್ಕಾಗಿ ಪೂಜೆ ಹೋಮ ಹವನ ಮಾಡ್ತಿಲ್ಲ. ಗಣಪತಿ ಹೋಮ, ಸರ್ಪದೋಷ ಪರಿಹಾರ ಮಾಡ್ತಿದ್ದೇವೆ. ಇದು ಕನ್ನಡ ಚಿತ್ರರಂಗದ ಒಳಿತಿಗಾಗಿ, ಕನ್ನಡ ಚಿತ್ರರಂಗದ ಎಲ್ಲ ಕಲಾವಿದರ ಒಳಿತಿಗಾಗಿ ಮಾಡುತ್ತಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ ಹಿರಿಯ ನಟ ದೊಡ್ಡಣ್ಣ.
ದೊಡ್ಡಣ್ಣ ಕೂಡಾ ನಟ ದರ್ಶನ್ ಅವರಿಗಾಗಿ ಪೂಜೆ, ಹೋಮ ಹವನ ಮಾಡಿಸ್ತಿಲ್ಲ. ಸಮಗ್ರ ಚಿತ್ರರಂಗದ ಒಳಿತಿಗಾಗಿ ಎಲ್ಲರಿಗೂ ಒಳ್ಳೆದಾಗಲಿ ಅಂತ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ರಾಜ್‌ಕುಮಾರ ಭವನದಲ್ಲಿ ಹೋಮ ಹವನ ಹಮ್ಮಿಕೊಂಡಿದ್ದೇವೆ. ಕೌರವನ ಆಸ್ತಾನದಲ್ಲಿ ದ್ರೌಪದಿ ಮಾನಭಂಗ ಆದಾಗ ಕೊನೆಯದಾಗಿ ಕೃಷ್ಣಾ ಅಂತ ಕೈ ಎತ್ತಿದಳಲ್ವಾ? ಅದೇ ತರಾ ಕೈ ಎತ್ತುತ್ತಾ ಇದ್ದೀವಿ. ದರ್ಶನ್ ಗೋಸ್ಕರ್ ಅವರ ಮನೆಯವರು ಮಾಡಿಕೊಳ್ತಾರೆ. ಅದಕ್ಕೆ ನಾವು ಹೊಣೆಗಾರರಲ್ಲ ನಾನು ದರ್ಶನ್ ಅಭಿಮಾನಿ ಆದ್ರೆ ನನ್ನ ಮನೇಲಿ ಅವರಿಗೆ ಒಳ್ಳೆಯದಾಗಲಿ ಅಂತಾ ವೈಯಕ್ತಿಕವಾಗಿ ನನ್ನ ಮನೇಲಿ ಮಾಡಿಸಿಕೊಳ್ತಿನಿ ಅಥವಾ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತೇನೆ. ಆದರೆ ಇದು ಕಲಾವಿದರ ಸಂಘ ಮಾಡ್ತಿರೋದು ಇಲ್ಲಿ ನಡೆತಿರೋದು ಯಾರೋ ಒಬ್ಬರ ಒಳಿತಿಗಾಗಿ ಅಲ್ಲ, ಇಡೀ ಕನ್ನಡ ಚಿತ್ರರಂಗದ ಒಳಿತಿಗಾಗಿ, ಏಳಿಗಾಗಿ. ಹೀಗಾಗಿ ಆ.13,14 ರಂದು ಗಣಪತಿ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷ ಬಲಿ ನಡೆಯಲಿದೆ. ಇದಕ್ಕಾಗಿ ಉಡುಪಿ ಕಾಪುವಿನಿಂದ ಋತ್ವಿಕರು ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ದೊಡ್ಡಣ್ಣ.
ಆದರೆ.. ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆ ಸಮರ್ಥ ಕಥೆ, ಕಲಾವಿದರು, ಚಿತ್ರಕಥೆ ರಚಿಸುವವರು, ನಿರ್ದೇಶಕರದ್ದು. ಅವರನ್ನು ತಿದ್ದಿಕೊಳ್ಳದೆ ಹೋಮ ಮಾಡಿಸುತ್ತಿರುವುದರ ಅರ್ಥ ಏನು..? ಇದು ಮೂಢ ನಂಬಿಕೆ ಅಲ್ಲವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.



