ಕಾಂತಾರದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಸಪ್ತಮಿ ಗೌಡ, ಯುವ ಚಿತ್ರದಲ್ಲಿ ಯುವ ರಾಜ್ ಕುಮಾರ್ ಎದುರು ನಾಯಕಿ. ದೊಡ್ಮನೆ ಕುಟುಂಬದ ಮತ್ತೊಂದು ಕುಡಿಯ ಮೊದಲ ಚಿತ್ರಕ್ಕೆ ಹೀರೋಯಿನ್ ಆಗಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿಕೊಂಡಿದ್ದ ಸಪ್ತಮಿ ಗೌಡ, ಡಾ.ರಾಜ್ ಕುಟುಂಬದವರ ದೊಡ್ಡ ಅಭಿಮಾನಿ. ಇನ್ನು ಅವರ ತಂದೆಯಂತೂ ಡಾ.ರಾಜ್ ಅವರ ಅಪ್ಪಟ ಅಭಿಮಾನಿ. ಹೀಗಿರುವ ಸಪ್ತಮಿ ಗೌಡ ಅವರಿಗೆ ದೊಡ್ಮನೆ ಅಭಿಮಾನಿ ದೇವರುಗಳ ಪ್ರೀತಿಯ ಅನುಭವವಾಗಿದೆ.
ಪ್ರತಿದಿನ ಶೂಟಿಂಗ್ ಸೆಟ್ಗೆ ಒಬ್ಬರಲ್ಲ ಒಬ್ಬರು ದೊಡ್ಮನೆ ಅಭಿಮಾನಿಗಳು ಬರುತ್ತಾರೆ. ಬಂದವರೆಲ್ಲ ವಿಧ ವಿಧವಾದ ಊಟ ತಂದಿರುತ್ತಾರೆ. ಹೊಟ್ಟೆ ತುಂಬಿದ್ದರೂ ಊಟ ಮಾಡಬೇಕು ಅನಿಸುತ್ತೆ ಅಷ್ಟು ಪ್ರೀತಿಯಿಂದ ಅವರು ಊಟ ತಂದು ಬಡಿಸುತ್ತಾರೆ. ಅವರು ಮಾತನಾಡುವ ರೀತಿ, ನಡೆದುಕೊಳ್ಳುವ ರೀತಿ ಖುಷಿಯಾಗುತ್ತದೆ. ಸೆಟ್ಗೆ ಬಂದರೂ ಸುಮ್ಮನೆ ಇರುತ್ತಾರೆ ಅವಕಾಶ ಸಿಕ್ಕಾಗ ಬಂದು ಮಾತನಾಡಿಸುತ್ತಾರೆ. ರಾಜ್ಕುಮಾರ್ ಅವರಿದ್ದಾಗಿನಿಂದಲೂ ಅವರ ಕುಟುಂಬದ ಮೇಲೆ ಅವರಿಗಿರುವ ಪ್ರೀತಿ ಅದು, ದೊಡ್ಮನೆ ಅಭಿಮಾನಿಗಳ ಬಗ್ಗೆ ಅವರ ಪ್ರೀತಿಯ ಬಗ್ಗೆ ಕೇಳಿದ್ದೆ ಈಗ ನೋಡುತ್ತಿದ್ದೇನೆ” ಎಂದಿದ್ದಾರೆ ಸಪ್ತಮಿ ಗೌಡ.
ತಮ್ಮ ನೆಚ್ಚಿನ ನಟರಿಗೆ ಏನೇನೋ ತಂದು ಕೊಡುವ ಅಭಿಮಾನಿಗಳಿದ್ದಾರೆ. ಆದರೆ ಡಾ.ರಾಜ್ ಮನೆತನದವರ ಅಭಿಮಾನಿ ದೇವರುಗಳು ಸ್ವಲ್ಪ ವಿಭಿನ್ನ. ಊಟ ತಂದುಕೊಡುವ ಅಭಿಮಾನಿ ದೇವರುಗಳು. ಹೊಟ್ಟೆ ತುಂಬಿದ್ದರೂ ಅವರ ಪ್ರೀತಿಗೆ ಊಟ ಮಾಡಬೇಕು ಎನ್ನಿಸುತ್ತದೆ ಎನ್ನುವ ಸಪ್ತಮಿಗೌಡ, ಅಭಿಮಾನಿ ದೇವರುಗಳ ಪ್ರೀತಿಗೆ ಶರಣು ಹೋಗಿದ್ದಾರೆ.
ಯುವರಾಜ್ ಕುಮಾರ್ ಅವರ ಜೊತೆ ನಟಿಸುವಾಗ ಇದು ಮೊದಲ ಸಿನಿಮಾ ಅನಿಸುವುದೇ ಇಲ್ಲ. ಬಹಳ ಪೂರ್ವಸಿದ್ಧತೆ ಮಾಡಿಕೊಂಡು ಅವರು ಸೆಟ್ಗೆ ಬರ್ತಾರೆ ಕ್ಯಾಮೆರಾ ಎದುರಿಸುತ್ತಾರೆ. ಈಗಾಗಲೇ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಘೋಷಿಸಿದ್ದೇವೆ. ಸಿನಿಮಾದ ಬಿಡುಗಡೆ ದಿನ ದೊಡ್ಡ ಹಬ್ಬವೇ ಆಗಲಿದೆ ಎಂದಿದ್ದಾರೆ ಸಪ್ತಮಿ ಗೌಡ.



