ಸಾನ್ವಿ ಸುದೀಪ್`ಗೆ ಕನ್ನಡ ಬರಲ್ವಾ ಎಂದು ಟೀಕೆ ಮಾಡಿದ್ದವರಿಗೆ ಉತ್ತರ ಅವರ ಹಾಡಿನಲ್ಲಿ ಬಂದಿದೆ. ಅಂದಹಾಗೆ ಇಂಗ್ಲಿಷ್ ಹಾಡುಗಳನ್ನೇ ಹಾಡುವ ಪಾಪ್ ಸಿಂಗರ್ ಆಗುವ ಕನಸು ಕಂಡಿರುವ ಸಾನ್ವಿ, ಆ ಹಾದಿಯಲ್ಲೇ ಹೆಜ್ಜೆ ಹಾಕುತ್ತಿದ್ದಾರೆ. ಶ್ರಮವಹಿಸಿದ್ದಾರೆ. ಗೆದ್ದಿದ್ದಾರೆ. ಕನ್ನಡ ಚಿತ್ರರಂಗಕ್ಕೊಬ್ಬರು ಪಾಪ್ ಸಿಂಗರ್ ಸಿಕ್ಕಿದ್ದಾರೆ.
ಹೊಸ ಪ್ರತಿಭೆ. ಹೊಸ ಧ್ವನಿ. ಸಾನ್ವಿ ಸುದೀಪ್. ಜಿಮ್ಮಿ ಚಿತ್ರದ ಮೂಲಕ ಗಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಪಾಪ್ ಸಿಂಗರ್ ಆಗುವ ಕನಸಿಟ್ಟುಕೊಂಡೇ ಹಲವು ವರ್ಷಗಳಿಂದ ಅಭ್ಯಾಸ ನಡೆಸುತ್ತಿರುವ ಸಾನ್ವಿ ಸುದೀಪ್, ಜಿಮ್ಮಿ ಚಿತ್ರದ ಟೈಟಲ್ ಟೀಸರ್`ನಲ್ಲಿ ಹಾಡಿದ್ದಾರೆ. ಜಿಮ್ಮಿ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರಿಂದ ಹೊಗಳಿಸಿಕೊಂಡಿದ್ದಾರೆ. ಹಾಡನ್ನೊಮ್ಮೆ ಕೇಳಿದರೆ ಖಂಡಿತಾ ನೀವೂ ಹೊಗಳುತ್ತೀರಿ.ರಾಕ್ ಶೈಲಿಯಲ್ಲಿರುವ ಈ ಹಾಡನ್ನು ಸೊಗಸಾಗಿ ಹಾಡಿದ್ದಾರೆ ಸಾನ್ವಿ ಸುದೀಪ್.
ಸಾನ್ವಿ ಧ್ವನಿ ಪವರ್ಫುಲ್ ಮತ್ತು ಪ್ರಬುದ್ಧವಾಗಿದೆ. ಟೈಟಲ್ ಟೀಸರ್ನಲ್ಲಿರುವ ಹಾಡನ್ನು ಅವರೇ ಬರೆದು ಹಾಡಿದ್ದು, ಅವರು ತುಂಬಾ ಒಳ್ಳೆಯ ಗಾಯಕಿ ಆಗುತ್ತಾರೆ. ಸಾನ್ವಿ ಸುದೀಪ್ ಸಾಹಿತ್ಯ ಬರೆದು ಹಾಡುವಷ್ಟು ಪ್ರೌಢಿಮೆ ಹೊಂದಿದ್ದಾರೆ. ‘ಜಿಮ್ಮಿ’ ಸಿನಿಮಾದ ಟೈಟಲ್ ಟೀಸರ್ ಬಹಳ ಜನರಿಗೆ ಇಷ್ಟವಾಗಲು ಈ ಹಾಡು ಕೂಡ ಒಂದು ಕಾರಣ’ ಎಂದಿದ್ದಾರೆ ಜಿಮ್ಮಿ ಸಿನಿಮಾದ ಸಂಗೀತ ನಿರ್ದೇಶಕ ವಾಸುಕಿ ವೈಭವ್.
ಮಗಳನ್ನು ಹೊಗಳಿದರೆ, ಮಗಳ ಪ್ರತಿಭೆಯನ್ನು ಹೊಗಳಿದರೆ ಯಾವ ತಂದೆಗೆ ಇಷ್ಟವಾಗಲ್ಲ. ಸಹಜವಾಗಿಯೇ ಸುದೀಪ್ ಖುಷಿಯಾಗಿದ್ದಾರೆ. ‘ನನ್ನ ಮಗಳು ಹಾಡಿದ್ದು ನೋಡಿ ಖುಷಿಯಾಯ್ತು. ಅವಳು ಚೆನ್ನಾಗಿ ಹಾಡುತ್ತಾಳೆ ಅಂತ ಗೊತ್ತಿತ್ತು. ಆದರೆ ಇಷ್ಟು ಚೆನ್ನಾಗಿ ಹಾಡುತ್ತಾಳೆ ಅಂತ ಇವತ್ತೇ ಗೊತ್ತಾಗಿದ್ದು ಎಂದು ಹೊಗಳಿದ್ದಾರೆ.
ಜಿಮ್ಮಿ ಚಿತ್ರದ ಮೂಲಕ ಸಂಚಿತ್ ಸಂಜೀವ್ ಹೀರೋ ಕಂ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೊಸ ಹೀರೋಗೆ ವೆಲ್`ಕಂ ಹೇಳಿದ್ದು ಶಿವಣ್ಣ, ಸುದೀಪ್ ಮತ್ತು ರವಿಚಂದ್ರನ್. ಚಿತ್ರಕ್ಕೆ ಪ್ರಿಯಾ ಸುದೀಪ್, ಕೆ.ಪಿ.ಶ್ರೀಕಾಂತ್ ಹಾಗೂ ಮನೋಹರ್ ನಾಯ್ಡು ನಿರ್ಮಾಪಕರು.



