ದರ್ಶನ್ ಜೈಲು ಸೇರಿದ್ದೇ ತಡ, ಹಲವರು ತಮ್ಮ ತಮ್ಮ ಬಳಿ ಇದ್ದ ದರ್ಶನ್ ಸಿನಿಮಾಗಳನ್ನು ರಿ-ರಿಲೀಸ್ ಮಾಡೋಕೆ ಮುಂದಾದ್ರು. ಕರಿಯ, ಮೆಜೆಸ್ಟಿಕ್, ಶಾಸ್ತ್ರಿ, ರಾಬರ್ಟ್, ನವಗ್ರಹ.. ಹೀಗೆ ಹಲವಾರು ಚಿತ್ರಗಳು ಮರುಬಿಡುಗಡೆ ಕಂಡವು. ಆದರೆ ಗೆದ್ದಿದ್ದು ಕರಿಯಾ ಮತ್ತು ಮೆಜೆಸ್ಟಿಕ್ ಎರಡೇ. ಎರಡೂ ಚಿತ್ರಗಳು ವಿತರಕರಿಗೆ ಮೋಸ ಮಾಡಲಿಲ್ಲ. ಉಳಿದ ಚಿತ್ರಗಳಿಗೆ ಓಪನಿಂಗ್ ಸಿಕ್ಕಿತಾದ್ರೂ, ಭರ್ಜರಿ ಕಲೆಕ್ಷನ್ ಸಿಗಲಿಲ್ಲ. ಈಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರದಿ. ಈ ಚಿತ್ರದ ರಿ-ರಿಲೀಸ್ ಕೂಡಾ ಅಟ್ಟರ್ ಫ್ಲಾಪ್ ಆಗಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ದರ್ಶನ್ ವೃತ್ತಿ ಜೀವನದ ಮಹತ್ವದ ಚಿತ್ರ. ರೌಡಿಸಂ, ಆಕ್ಷನ್ ಚಿತ್ರಗಳಲ್ಲೇ ಹೆಚ್ಚು ನಟಿಸುತ್ತಿದ್ದ ದರ್ಶನ್ ಮೊದಲ ಬಾರಿಗೆ ಐತಿಹಾಸಿಕ ಕಥೆಯ ಚಿತ್ರ ಮಾಡಿದ್ದರು. 12 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಸಂಗೊಳ್ಳಿ ರಾಯಣ್ಣ ಬಾಕ್ಸಾಫೀಸಿನಲ್ಲೂ ದಾಖಲೆ ಬರೆದಿತ್ತು. ಆದರೆ ಇದೀಗ ರಿ-ರಿಲೀಸ್ ಆಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಥಿಯೇಟರುಗಳಲ್ಲಿ ಜನರೇ ಇಲ್ಲ.
ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿದ ನಂತರ ದರ್ಶನ್, ಭಾರೀ ಸುದ್ದಿಯಲ್ಲಿದ್ದಾರೆ. ಹೀಗಾಗಿಯೇ ಹೇಗೂ ಸುದ್ದಿಯಲ್ಲಿದ್ದಾರೆ ಅಲ್ಲದೆ ದರ್ಶನ್ ಅವರಿಗೆ ಬೃಹತ್ ಫ್ಯಾನ್ ಫಾಲೋಯಿಂಗ್ ಇದೆ ಎಂಬ ಕಾರಣಕ್ಕಾಗಿ ಅವರ ಹಲವು ಚಿತ್ರಗಳು ರಿ-ರಿಲೀಸ್ ಆಗಿವೆ. ಆದರೆ ಎಲ್ಲ ಚಿತ್ರಗಳೂ ಗೆದ್ದಿಲ್ಲ.
ನಾಗಣ್ಣ ಅವರು ನಿರ್ದೇಶಿಸಿದ್ದ ಸಂಗೊಳ್ಳಿ ರಾಯಣ್ಣ ಚಿತ್ರದ ರಿ-ರಿಲೀಸ್ ಖಾಲಿ ಶೋಗಳಿಗೆ ಚಿತ್ರತಂಡ ಸರಿಯಾದ ಪ್ರಚಾರ ಮಾಡಲಿಲ್ಲ. ಎಷ್ಟೋ ಕಡೆ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದವರಿಗೂ ಸಂಗೊಳ್ಳಿ ರಾಯಣ್ಣ ಮರು ಬಿಡುಗಡೆ ಎನ್ನುವುದು ಗೊತ್ತೇ ಇರಲಿಲ್ಲ. ಶುಕ್ರವಾರ ಥಿಯೇಟರ್ ಎದುರು ಪೋಸ್ಟರ್ ಕಂಡಾಗಲಷ್ಟೇ ಅಭಿಮಾನಿಗಳಿಗೂ ಗೊತ್ತಾಗಿದೆ.
ಚಿತ್ರದ ಬಗ್ಗೆ ಮಾತನಾಡಬೇಕಿದ್ದವರು ನಿರ್ಮಾಪಕ ಆನಂದ ಅಪ್ಪುಗೋಳ್. ನಿರ್ದೇಶಕ ನಾಗಣ್ಣ ಮತ್ತು ಚಿತ್ರದ ಪ್ರಮುಖ ಪಾತ್ರಧಾರಿಗಳಾಗಿದ್ದ ನಿಖಿತಾ, ಜಯಪ್ರದಾ, ದೊಡ್ಡಣ್ಣ, ಉಮಾಶ್ರೀ.. ಮತ್ತಿತರರು. ಆದರೆ ಇವರಲ್ಲಿ ನಾಗಣ್ಣ ಅವರಿಗೆ ತಮ್ಮ ನಿರ್ದೇಶನದ ಸಿನಿಮಾ ಮತ್ತೊಮ್ಮೆ ಬಿಡುಗಡೆಯಾಗುತ್ತಿದೆ ಎಂದು ಗೊತ್ತಾಗಿದ್ದೇ ಕೆಲವು ಮಾಧ್ಯಮಗಳಿಂದ. ಇನ್ನು ಆನಂದ್ ಅಪ್ಪುಗೋಳ್ ಸಂಪರ್ಕಕ್ಕೇ ಸಿಕ್ಕಿಲ್ಲ.
ಅಲ್ಲದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ಕೂಡಾ ಅಷ್ಟೇ. ರಾಯಣ್ಣನ ಇಮೇಜ್ʻನಿಂದಾಗಿ ಹಿಟ್ ಆದ ಚಿತ್ರವೇ ಹೊರತು, ಕಲ್ಟ್ ಸಿನಿಮಾ ಏನಲ್ಲ. ಅಲ್ಲದೆ ವಿತರಕರು ಚಿತ್ರದ ರಿ-ರಿಲೀಸ್ ಬಗ್ಗೆ ಸರಿಯಾದ ಪ್ರಚಾರವನ್ನೇ ಮಾಡಲಿಲ್ಲ ಎನ್ನುವುದು ಅಭಿಮಾನಿಗಳ ದೂರು. ಆದರೆ ಅದ್ಧೂರಿ ಪ್ರಚಾರ ಮಾಡಿದ್ದರೂ ನವಗ್ರಹ ಚಿತ್ರವೂ ಕೂಡಾ ಥಿಯೇಟರುಗಳಲ್ಲಿ ಒಂದು ದಿನಕ್ಕೇ ಸುಸ್ತು ಹೊಡೆದಿತ್ತು.
ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಿಲ್ಲ ಎನ್ನುವಂತಿಲ್ಲ. ಕಳೆದ ಕೆಲವು ತಿಂಗಳಿಂದ ಭೀಮ, ಕೃಷ್ಣಂ ಪ್ರಣಯ ಸಖಿ, ಬಘೀರ, ಭೈರತಿ ರಣಗಲ್ಲು ಉತ್ತಮ ಪ್ರದರ್ಶನ ಕಾಣುತ್ತಿವೆ. ಆದರೆ ರಿ-ರಿಲೀಸ್ ಆರ್ಭಟಗಳೆಲ್ಲ ಒಂದು ಶೋ ಅಥವಾ ಒಂದು ದಿನಕ್ಕೆ ಸೀಮಿತವಾಗುತ್ತಿವೆ. ಒಟ್ಟಿನಲ್ಲಿ ದರ್ಶನ್ ಸಿನಿಮಾಗಳನ್ನು ಮತ್ತೆ ರಿಲೀಸ್ ಮಾಡಿ ದುಡ್ಡು ಮಾಡೋವ್ರ ತಂತ್ರ ಎಲ್ಲ ಸಮಯದಲ್ಲಿಯೂ ವರ್ಕೌಟ್ ಆಗುತ್ತಿಲ್ಲ.
ಈ ಮಧ್ಯೆ ದರ್ಶನ್ ಕೇಸಿನಲ್ಲಿ ದಾಖಲೆಯ 5000+ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಸೆಪ್ಟೆಂಬರ್ 4 ರಂದು 3991 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದ ಪೊಲೀಸರು, ಇದೀಗ 1300 ಪುಟಗಳ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಒಟ್ಟು 5291 ಪುಟಗಳ ಆರೋಪ ಪಟ್ಟಿ ಸಲ್ಲಿಸಿದಂತಾಗಿದೆ. ಇದು ಬೆಂಗಳೂರು ಕ್ರೈಂ ಇತಿಹಾಸದಲ್ಲಿಯೇ ದೊಡ್ಡದು ಎನ್ನಬಹುದು. ಬೆಂಗಳೂರಿನಲ್ಲಿ ರೌಡಿಸಂ, ಗ್ಯಾಂಗ್ ಸ್ಟರ್ ದಾಂಧಲೆಗಳ ಪ್ರಕರಣದಲ್ಲೂ ಇಷ್ಟು ಸುದೀರ್ ಚಾರ್ಜ್‌ಶೀಟ್ ಸಲ್ಲಿಸಿರಲಿಲ್ಲ ಎನ್ನುವುದು ವಿಶೇಷ.
ಇನ್ನು ನ್ಯಾಯಾಲಯವು ದರ್ಶನ್‌ಗೆ 6 ವಾರಗಳ ವೈದ್ಯಕೀಯ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿಯೂ ಇನ್ನೂವರೆಗೆ ದರ್ಶನ್ ಅವರಿಗೆ ಶಸ್ತ್ರ ಚಿಕಿತ್ಸೆ ಆಗಿಲ್ಲ. ಇದರ ಬಗ್ಗೆ ಸುಪ್ರೀಂಕೋರ್ಟ್ ಮೊರೆ ಹೋಗೋದಾಗಿ ಗೃಹ ಸಚಿವ ಪರಮೇಶ್ವರ್ ಅವರು ಹೇಳಿಕೆ ನೀಡಿದ್ದಾರೆ.
ಮತ್ತೊಂದು ಕಡೆ ದರ್ಶನ್ ಅವರಿಗೆ ನಿಜಕ್ಕೂ ಸಂಕಷ್ಟ ಎಂದರೆ ದರ್ಶನ್ ಬಾಡಿಗಾರ್ಡ್ ನಾಗೇಶ್ ಎಂಬ ವ್ಯಕ್ತಿ ಸಾಕ್ಷಿ ನುಡಿಯದಂತೆ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ್ದು, ಕೃತ್ಯದ ವೇಳೆ ಬಿಸಾಡಿದ್ದ ಬಟ್ಟೆಗಳ ಕುರಿತು ಬಾಯಿ ಬಿಡದಂತೆ ಬೆದರಿಕೆ ಹಾಕಿದ್ದಾರೆ. ಬಟ್ಟೆ ಬಗ್ಗೆ ಬಾಯಿ ಬಿಟ್ಟರೆ ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಸಾಕ್ಷಿಯೊಬ್ಬರಿಗೆ ಹೆದರಿಸಿದ್ದ ಪ್ರಕರಣದಲ್ಲೀಗ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದಾರೆ.



