ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮತ್ತೆ ಬಿಜೆಪಿಗೆ ಕರೆತರುವ ಪ್ರಯತ್ನ, ಸಂಧಾನ ಪ್ರಕ್ರಿಯೆಗಳು ಶುರುವಾಗಿವೆ. ಆ ಪ್ರಯತ್ನಗಳು ಪ್ರಾಮಾಣಿಕವಾಗಿವೆ ಎನ್ನುವುದು ವಿಶೇಷ. ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದಾರಂತೆ ಸಾಹುಕಾರ್ ರಮೇಶ್ ಜಾರಕಿಹೊಳಿ. ರಮೇಶ್ ಜಾರಕಿಹೊಳಿ ಸದ್ಯಕ್ಕೆ ಮೌನವಾಗಿದ್ದಾರೆ. ಯತ್ನಾಳ್ ಅವರನ್ನು ಉಚ್ಚಾಟನೆ ಮಾಡುತ್ತಾರೆ ಎಂದು ಅವರು ಊಹೆಯನ್ನೂ ಮಾಡಿರಲಿಲ್ಲವಂತೆ. ಈಗ ಯತ್ನಾಳ್ ಅವರನ್ನು ಮತ್ತೆ ಬಿಜೆಪಿಗೆ ಕರೆತರುವ ಪ್ರಯತ್ನ ಶುರು ಮಾಡಿದ್ದಾರಂತೆ.
ಬಿಜೆಪಿಯಿಂದ ಉಚ್ಚಾಟಿತರಾದ ಯತ್ನಾಳ್ ಹೊಸ ಪಕ್ಷ ಕಟ್ಟುತ್ತಾರೆ, ಕಟ್ಟಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರುದ್ಧ ಎರಗುತ್ತಾರೆ ಎಂಬ ನಿರೀಕ್ಷೆ ಇತ್ತಾದರೂ, ಉಚ್ಛಾಟನೆ ಆದ ಮೇಲೆ ವಾಸ್ತವದ ಲೆಕ್ಕ ನೋಡಿದಾಗ ಇದು ಅಸಾಧ್ಯ ಎಂಬ ಅರಿವಾಗಿದೆ. ಲಿಂಗಾಯತ ಒಳಪಂಗಡಗಳಲ್ಲಿ ತುಂಬಾ ಬಲಿಷ್ಠರಾದ ಪಂಚಮಸಾಲಿ ಸಮುದಾಯ ದವರು, ಯತ್ನಾಳ್ ಅವರಿಗಾದ ಈ ಅವಮಾನ ವನ್ನು ಸಹಿಸುವುದಿಲ್ಲ ಮತ್ತು ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳಲಿರುವ ಯತ್ನಾಳ್ ತಮ್ಮ ಪವರ್ ಅನ್ನು ತೋರಿಸುತ್ತಾರೆ ಎಂಬುದು ಇಂಥವರ ಲೆಕ್ಕಾಚಾರ ಇತ್ತಾದರೂ.. ಪ್ರಾಕ್ಟಿಕಲಿ ಅದರಿಂದ ಯಾವುದೇ ಲಾಭವೂ ಆಗುವುದಿಲ್ಲ ಹಾಗೂ ಸಂಪನ್ಮೂಲವೂ ಸಿಕ್ಕುವುದಿಲ್ಲ ಎಂದು ಅರಿವಾಗಿ ಸುಮ್ಮನಾದರಂತೆ.
ನಿಜವಾಗಿ ಆಗಿದ್ದೇನೆಂದರೆ ಇನ್ನು ಮುಂದೆ ವಿಜಯೇಂದ್ರ ವಿರೋಧಿ ಹೋರಾಟದ ಮುಂಚೂಣಿಯಲ್ಲಿ ನಾನೇ ಇರುತ್ತೇನೆ’ ಎನ್ನುತ್ತಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಯತ್ನಾಳ್ ಅವರಂತಹ ನಾಲಗೆ ಇಲ್ಲ. ಬಿಜೆಪಿಯಿಂದ ಉಚ್ಚಾಟಿತರಾದ ನಂತರದ ದಿನಗಳಲ್ಲಿ ರಮೇಶ್ ಜಾರಕಿಹೊಳಿ ಮೌನಕ್ಕೆ ಜಾರಿದ್ದಾರೆ. ಹಾಗಂತ ಪರ್ಮನೆಂಟಾಗಿ ಮೌನ ಧರಿಸಲು ಸಾಧ್ಯವಿಲ್ಲ. ಇನ್ನು ಯತ್ನಾಳ್ ಜೊತೆಯಲ್ಲಿದ್ದ ಹಲವು ನಾಯಕರು ತಮ್ಮ ತಮ್ಮ ಶಕ್ತಿ ಸಾಮರ್ಥ್ಯ ಎಷ್ಟು ಅನ್ನೋದನ್ನ ತೋರಿಸಿದ್ದಾರೆ. ಇವರನ್ನು ನಂಬಿಕೊಂಡು ಹೋದರೆ ಭವಿಷ್ಯ ಇಲ್ಲ ಎಂದು ಅರ್ಥವಾದ ಯತ್ನಾಳ್ ಮರಳಿ ಬಿಜೆಪಿ ಪಾಳಯ ಸೇರಲು ಉತ್ಸುಕರಾಗುವ ಮನಸ್ಸು ಮಾಡಿದ್ದಾರಂತೆ. ಆದರೆ 100% ಮನಸ್ಸಿನಿಂದ ಅಲ್ಲ.
ಅದಕ್ಕೆ ಜಾರಕಿಹೊಳಿ ಮುಖಾಂತರ ದೇವೇಂದ್ರ ಫಡ್ನವಿಸ್ ಅವರನ್ನು ಸಂಪರ್ಕಿಸಲಾಗಿದೆ ಎಂಬುದು ಸುದ್ದಿ. ಪಕ್ಷ ನಿಷ್ಠರಾದ ಯತ್ನಾಳ್ ಪ್ರಾಮಾಣಿಕವಾಗಿ ಮಾತನಾಡಿದ್ದೇ ಅವರಿಗೆ ಮುಳುವಾಗಿದೆ. ಹೀಗಾಗಿ ಉಚ್ಚಾಟಿತರಾಗಿರುವ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಅಂತ ವರಿಷ್ಠರಿಗೆ ಹೇಳಿ’ ಎಂದು ಮನವಿ ಮಾಡಿ ಕೊಂಡಿದ್ದಾರಂತೆ ರಮೇಶ್. ಮೋದಿ-ಅಮಿತ್ ಶಾ ಮಾತ್ರವಲ್ಲದೆ ಸಂಘ ಪರಿವಾರದ ನಾಯಕರಿಗೂ ಫಡ್ನವೀಸ್ ಅತ್ಯಾಪ್ತರು.
ಇಂಥ ಫಡ್ನವೀಸ್ ಅವರಿಗೆ ಕರ್ನಾಟಕದ ಗಡಿಭಾಗದ ಜಿಲ್ಲೆಗಳ ರಾಜಕೀಯದಲ್ಲಿ ಆಸಕ್ತಿ ಹೆಚ್ಚು. ಅದರಲ್ಲೂ ಮುಂಬಯಿ-ಕರ್ನಾಟಕ ಭಾಗದ ರಾಜಕೀಯದಲ್ಲಿ ತುಸು ಹೆಚ್ಚೇ ಅನ್ನಿಸುವಷ್ಟು ಆಸಕ್ತಿ ಹೊಂದಿರುವ ಫಡ್ನವೀಸ್ ಅವರು ಸಹಜವಾಗಿಯೇ ಆ ಭಾಗದ ಬಿಜೆಪಿ ನಾಯಕರ ಜತೆ ಆತ್ಮೀಯತೆ ಹೊಂದಿದ್ದಾರೆ.
ಇದೇ ಕಾರಣಕ್ಕಾಗಿ ರಮೇಶ್ ಜಾರಕಿಹೊಳಿ ತಮ್ಮನ್ನು ಭೇಟಿಯಾಗಿ ಯತ್ನಾಳ್ ಪರವಾಗಿ ವಾದಿಸಿದ ನಂತರ ಫಡ್ನವೀಸ್ ಒಂದು ಉಪಾಯ ಹೇಳಿದ್ದಾರೆ. ಇನ್ನು ಮುಂದೆ ಪಕ್ಷದ ಶಿಸ್ತು ಉಲ್ಲಂಘನೆ ಮಾಡುವುದಿಲ್ಲ ಅಂತ ಯತ್ನಾಳ್ ವರಿಷ್ಠರಿಗೆ ಸಂದೇಶ ಕಳಿಸಲಿ. ಮುಂದೆ ಅವರನ್ನು ಮರಳಿ ಬಿಜೆಪಿಗೆ ಸೇರಿಸುವ ಜವಾಬ್ದಾರಿ ನನಗಿರಲಿ ಎಂಬುದು ಅವರು ಹೇಳಿದ ಉಪಾಯ.
ಹಠಮಾರಿ ಯತ್ನಾಳ್ : ಇನ್ನು ಮುಂದೆ ಪಕ್ಷದ ಶಿಸ್ತು ಉಲ್ಲಂಘನೆ ಮಾಡುವುದಿಲ್ಲ, ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ನಾಲ್ಕು ಗೋಡೆಗಳ ಮಧ್ಯೆ ಹೇಳುವುದಕ್ಕೆ ಯತ್ನಾಳ್ ಅವರೇನೋ ಓಕೆ, ಆದರೆ ಬಹಿರಂಗವಾಗಿ ಹೇಳಬೇಕೆಂದರೆ.. ಯತ್ನಾಳ್ ಅವರಿಗೆ ಸಮಸ್ಯೆ ಆಗಿರುವುದೇ ಇದು. ಯತ್ನಾಳ್ ಬಡಪೆಟ್ಟಿಗೆ ಬಗ್ಗುವ ವ್ಯಕ್ತಿ ಅಲ್ಲ.



