ಕನ್ನಡಕ್ಕೊಂದು ಒಟಿಟಿ ಬೇಕು ಅನ್ನೋದು ಚಿತ್ರರಂಗದವರ ಬೇಡಿಕೆ. ಮಲಯಾಳಂ ಮಾದರಿಯಲ್ಲಿ ಸರ್ಕಾರಿ ಸಹಯೋಗದಲ್ಲಿ ಒಟಿಟಿ ಮಾಡುವ ಆಲೋಚನೆಯೇನೋ ಒಳ್ಳೆಯದೆ. ಆದರೆ, ಅದು ಸರ್ಕಾರಕ್ಕೆ, ಸಿಎಂ ಸಿದ್ದರಾಮಯ್ಯನವರಿಗೂ ಗೊತ್ತಿಲ್ಲದಂತೆ, ಅವರ ಎದುರಲ್ಲೇ ಘೋಷಣೆಯಾಗಿದ್ದು ಮಾತ್ರ ಹೊಸದು. 6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ ಬರುತ್ತದೆ ಎಂದು ಸಾಧುಕೋಕಿಲ ಘೋಷಿಸಿದ್ದರೆ, ಇದು ಹೊಸ ಬೇಡಿಕೆ, ಗೊತ್ತಿಲ್ಲ, ನೋಡೋಣ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಒಟಿಟಿಗಳಲ್ಲಿ ಕನ್ನಡ ಸಿನಿಮಾ ಕೊಳ್ಳುತ್ತಿಲ್ಲ ಎಂಬ ಕೂಗು ಸರ್ಕಾರವನ್ನು ಮುಟ್ಟಿದಂತೆ ಕಾಣುತ್ತಿದೆ. ಕನ್ನಡ ಚಿತ್ರ ನಿರ್ಮಾಪಕರ ಈ ಆಗ್ರಹಕ್ಕೆ ಸಿದ್ದರಾಮಯ್ಯ ಮಣಿದಿದ್ದಾರೆ. ಆದರೆ, ಇದು ನನಗೆ ಅಷ್ಟಾಗಿ ಗೊತ್ತಿಲ್ಲ, ಇದು ಹೊಸ ಬೇಡಿಕೆ ಎಂದು ಹೇಳಿದ್ದಾರೆ. ಆದರೆ, ಇನ್ನಾರು ತಿಂಗಳಲ್ಲಿ ಕನ್ನಡದಲ್ಲಿ ಕನ್ನಡಕ್ಕೆಂದೇ ಹೊಸ ಒಟಿಟಿ ಶುರುವಾಗುತ್ತದೆ ಎಂದಿದ್ದಾರೆ ಸಾಧು ಕೋಕಿಲ. ಸಾಧುಕೋಕಿಲ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ.
ಚಲನಚಿತ್ರ ನಿರ್ಮಾಪಕರ ಸಂಘದ ಹೊಸ ಕಟ್ಟಡ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಮೊದಲಿಗೆ ಸಿನಿಮಾ ನಗರಿ ನಿರ್ಮಾಣದ ವಿಷಯ ಮಾತನಾಡಿದರು.‘ಫಿಲಂ ಸಿಟಿಗೆ ಮೈಸೂರಿನ ಹಿಮ್ಮಾವು ಬಳಿ ಸುಮಾರು 100 ಎಕರೆಗೆ ಹೆಚ್ಚು ಜಾಗವನ್ನು ನಾವು ಕೊಟ್ಟಿದ್ದೇವೆ. ಈ ಹಿಂದಿನ ಬಿಜೆಪಿ ಸರ್ಕಾರ, ಅಲ್ಲಿ ಫಿಲಂ ಸಿಟಿ ನಿರ್ಮಿಸುವ ಕಾರ್ಯವನ್ನು ಮಾಡಲಿಲ್ಲ. ಅದೇಕೋ ನನಗೆ ಗೊತ್ತಿಲ್ಲ ಆದರೆ ನಾವು ಆ ಕಾರ್ಯವನ್ನು ಮಾಡಿಯೇ ಮಾಡುತ್ತೇವೆ. ಈ ಕಾರ್ಯವು ಖಾಸಗಿ ಮತ್ತು ಪಿಪಿಪಿ ಮಾಡೆಲ್ನಲ್ಲಿ ಆಗಬೇಕಾದ ಕಾರ್ಯ. ಕನ್ನಡ ಭಾಷೆಯ ಒಳ್ಳೆಯ ಸಿನಿಮಾಗಳಿಗೆ ನಮ್ಮ ಸರ್ಕಾರದ ಬೆಂಬಲ ಸದಾ ಇದ್ದೇ ಇರುತ್ತದೆ ಎಂದು ಹೇಳಿದರು.
ಅದಾದ ಮೇಲೆ ಕನ್ನಡಕ್ಕೆಂದೇ ಒಟಿಟಿ ನಿರ್ಮಾಣದ ವಿಷಯ ಪ್ರಸ್ತಾಪವಾಯ್ತು. ಇದು ಹೊಸ ಬೇಡಿಕೆ. ಈ ಬಗ್ಗೆ ನಮ್ಮ ಗಮನಕ್ಕೆ ಇನ್ನೂ ಬಂದಿಲ್ಲ ಆದರೆ ಪರಿಶೀಲನೆ ನಡೆಸಿ ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು. ಆದರೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿರುವ ನಟ, ಸಂಗೀತ ನಿರ್ದೇಶಕ, ನಿರ್ಮಾಪಕ, ನಿರ್ದೇಶಕರೂ ಆಗಿರುವ ಸಾಧುಕೋಕಿಲಇನ್ನು ಕೇವಲ 6 ತಿಂಗಳಲ್ಲಿ ಸರ್ಕಾರದ ವತಿಯಿಂದ, ಖಾಸಗಿಯವರ ಸಹಭಾಗಿತ್ವದಲ್ಲಿ ‘ನಮ್ಮ ಚಲನಚಿತ್ರ’ ಎಂಬ ಒಟಿಟಿ ಶುರುವಾಗುತ್ತದೆ. ಕೇವಲ 6 ತಿಂಗಳಲ್ಲಿ ನಾವು ಇದನ್ನು ಶುರು ಮಾಡುವುದು ಖಚಿತ. ಅದಕ್ಕೂ ಮುನ್ನ ‘ನಮ್ಮ ಚಲನಚಿತ್ರ’ ಎಂಬ ವೆಬ್ಸೈಟ್ ಕೂಡ ಪ್ರಾರಂಭಿಸುತ್ತೇವೆ. ಅದರಲ್ಲಿ ಸಿನಿಮಾಗಳ ಪೋಸ್ಟರ್, ಟ್ರೇಲರ್ ಎಲ್ಲವೂ ಇರುತ್ತದೆ ಎಂದು ಹೇಳಿದ್ದಾರೆ.
ಎಲ್ಲ ಓಕೆ, ಸಿಎಂ ಸಿದ್ದರಾಮಯ್ಯಗೂ ಗೊತ್ತಿಲ್ಲದೆ, ಒಟಿಟಿಗೊಂದು ʻನಮ್ಮ ಚಲನಚಿತ್ರʼ ಎಂಬ ನಾಮಕರಣವನ್ನೂ ಮಾಡಿರುವ ಸಾಧುಕೋಕಿಲ, ಹೇಳಿದಂತೆಯೇ ಇನ್ನಾರು ತಿಂಗಳಲ್ಲಿ ಕನ್ನಡಕ್ಕೆಂದೇ ಒಂದು ಪ್ರತ್ಯೇಕ ಒಟಿಟಿ ತಂದರೆ ಖಂಡಿತಾ ಅದು ಕನ್ನಡ ಚಿತ್ರರಂಗಕ್ಕೆ ಗುಡ್ ನ್ಯೂಸ್ ಆಗಲಿದೆ.



