ಅಚ್ಚರಿಯಾದರೂ ಇದು ನಿಜ. ಬೀದರ್ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ದಿನೇದಿನೇ ತಿರುವು ಪಡೆಯುತ್ತಿದೆ. ಸಚಿನ್ ಬರೆದಿಟ್ಟ ನೋಟ್ ಬಿಜೆಪಿ ಪಾಲಿಗೆ ಬ್ರಹ್ಮಾಸ್ತ್ರವಾಗಿದ್ದು, ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯ ಕೇಳಿ ಬರುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಹೆಸರನ್ನು ಉಲ್ಲೇಖಿಸಿದ್ದೇ ಬಿಜೆಪಿ ಪಾಲಿಗೆ ಬ್ರಹ್ಮಾಸ್ತ್ರ. ಆದರೆ ಪ್ರಿಯಾಂಕ್ ಖರ್ಗೆ ಅವರಿಗೆ ಬಲ ತುಂಬುವಂತೆ ಸಚಿನ್ ಗುತ್ತಿಗೆದಾರನೇ ಅಲ್ಲ ಎಂದು ಬೀದರ್ ಗುತ್ತಿಗೆದಾರರ ಸಂಘ ವರದಿ ನೀಡಿದೆ. ಹಾಗಾದರೆ ಇಡೀ ಆತ್ಮಹತ್ಯೆ ಪ್ರಕರಣ ಬೇರೆಯದ್ದೇ ತಿರುವು ಪಡೆಯುವ ಸೂಚನೆಯನ್ನಂತೂ ಕೊಟ್ಟಿದೆ.
ಗುತ್ತಿಗೆದಾರರ ಸಂಘದ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿನ್ ಸಹೋದರಿ ಸುರೇಖಾ ಚಿನ್ ಗುತ್ತಿಗೆದಾರ ಅಂತಾ ನಾವು ಯಾವತ್ತು ಹೇಳಿಕೊಂಡಿಲ್ಲ, ಸಂಘದವರೇ ಬಂದು ಅವನ ಹತ್ರ ಲೈಸೆನ್ಸ್ ಇದೆಯಾ ಎಂದು ಕೇಳಿದ್ರು. ಲೈಸೆನ್ಸ್ ಇರುವ ಬಗ್ಗೆ ನಮಗೆ ಗೊತ್ತಿಲ್ಲ, ಎಲ್ಲಾ ಡಾಕ್ಯುಮೆಂಟ್ಸ್ ಕಲಬುರಗಿ ಆಫೀಸ್‌ನಲ್ಲಿದ್ದವು. ಈಗಾಗಲೇ ಕಲಬುರಗಿ ಕಚೇರಿಯಲ್ಲಿ ಎಲ್ಲಾ ದಾಖಲೆಗಳು ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಎಲ್ಲ ದಾಖಲೆಗಳನ್ನಿಟ್ಟುಕೊಂಡೇ ಸಿಎಂ ಸಿದ್ದರಾಮಯ್ಯ ‘ಬೀದರ್‌ನ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪಾತ್ರವಿಲ್ಲ, ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಇದು ರಾಜಕೀಯ ದ್ವೇಷದಿಂದ ಮಾಡುತ್ತಿರುವ ಆರೋಪ ಆಗಿರುವುದರಿಂದ ಪ್ರಿಯಾಂಕ್ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.
ಇಂಥದ್ದೇ ಪ್ರಕರಣದಲ್ಲಿ ಹಿಂದೆ ಬಿಜೆಪಿ ಕೆ.ಎಸ್.ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆದಿರಲಿಲ್ಲವೇ? ಎಂಬ ಪ್ರಶ್ನೆಗೆ, ‘ಆಗ ಗುತ್ತಿಗೆದಾರನ ಡೆತ್‌ನೋಟ್‌ನಲ್ಲಿ ಈಶ್ವರಪ್ಪ ಹೆಸರು ಬರೆದಿದ್ದರು. ಈಗ ಈ ಗುತ್ತಿಗೆದಾರನ ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಹೆಸರು ಇದೆಯಾ? ಪ್ರಿಯಾಂಕ್ ಖರ್ಗೆ ಹೆಸರು ಎಲ್ಲೂ ಇಲ್ಲ. ಜತೆಗೆ ಅವರು ಎಲ್ಲಾ ತನಿಖೆಗೂ ಸಿದ್ಧ ಎಂದು ಹೇಳಿದ್ದಾರೆ. ಹೀಗಾಗಿ ಮೊದಲು ಸಿಐಡಿ ತನಿಖೆ ನಡೆಸಿ ವರದಿ ಕೊಡಲಿ’ ಎಂದು ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಕಲಬುರಗಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಯಾವುದೇ ಸಂಬಂಧವಿಲ್ಲ. ಸಚಿನ್ ಆತ್ಮಹತ್ಯೆ ಪತ್ರದಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ನೇರ ಆರೋಪ ಮಾಡಿಲ್ಲ, ಬೇರೆಯವರ ಮೇಲೆ ಆರೋಪ ಬಂದಿದ್ದಕ್ಕೆ ಪ್ರಿಯಾಂಕ್ ರಾಜೀನಾಮೆ ನೀಡುವ ಅಗತ್ಯವಿಲ್ಲ. ಅವರ ಪ್ರಾಮಾಣಿಕತೆ ನಮಗೆ ತಿಳಿದಿದೆ ಎಂದು ಉತ್ತರ ಕೊಟ್ಟಿದ್ದಾರೆ.
ಆದರೆ ಸಚಿನ್ ಪಾಂಚಾಳ್ ಅವರ ಸೋದರಿ ಸುರೇಖಾ ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆ ಉಳಿದಿಲ್ಲ, ಕೇಂದ್ರ ಸರ್ಕಾರದಿಂದ ಪ್ರಕರಣದ ತನಿಖೆಯಾಗಬೇಕು. ಪ್ರಕರಣದ ತನಿಖೆ ಸಿಬಿಐ ಮಾಡಿದರೆ ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ. ಡೆತ್‌ನೋಟ್‌ನಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ, ಆದರೆ ಅದರ ಬಗ್ಗೆ ಆರೋಪಿಗಳನ್ನು ಪಶ್ನೆನೇ ಮಾಡಿಲ್ಲ. ತನಿಖಾಧಿಕಾರಿಗಳು ನಮಗೆ ಮಾತ್ರ ವಿಚಾರಣೆ ಮಾಡುತ್ತಿದ್ದಾರೆ. ಅವನ ಎಲ್ಲಾ ಡಾಕ್ಯುಮೆಂಟ್ ಕಲಬುರಗಿ ಆಫೀಸ್‌ನಲ್ಲಿದ್ದವು, ಎಲ್ಲ ದಾಖಲೆ ನಾಶ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಕೇಸ್ ಮುಚ್ಚಿ ಹಾಕಲು ಪ್ರಯತ್ನ ನಡೆಯುತ್ತಿದೆ. ಇವತ್ತು ಗುತ್ತಿಗೆದಾರನೇ ಇಲ್ಲ ಅಂತಾರೆ, ನಾಳೆ ಕಲಬುರಗಿ ಆಫೀಸ್ ಇಲ್ಲ ಅಂತಾರೆ, ಕಲಬುರಗಿಯಲ್ಲಿ ಕೆಲಸ ಮಾಡಿಲ್ಲ, ಆತ ನಮಗೆ ಭೇಟಿನೇ ಆಗಿಲ್ಲ, ಸಚಿನ್ ಹ್ಯಾಂಡ್ ರೈಟಿಂಗ್ ಅಲ್ಲ, ಸಚಿನ್ ಡೆಡ್ ಬಾಡಿನೇ ಇಲ್ಲ, ಸಚಿನ್ ಹುಟ್ಟೆ ಇಲ್ಲ ಎಂಬಂತೆ ಹುಟ್ಟಾಕಿ ಬಿಡುತ್ತಾರೆ ಎಂಬ ಭಯ ಕಾಡ್ತಿದೆ ಎಂದು ಆರೋಪಿಸಿದ್ದಾರೆ.



