ಹಿಂದೂ ಮುಸ್ಲಿಂ ಲವ್ ಸ್ಟೋರಿ, ಮದುವೆಗಳು ದೊಡ್ಡ ವಿವಾದವಾಗುತ್ತಿರುವ ಹೊತ್ತಿನಲ್ಲೇ
ಕುಂಭಮೇಳದಲ್ಲಿ ರುದ್ರಾಕ್ಷಿ ಸೇಲ್ ಮಾಡಿ ಫೇಮಸ್ ಆಗಿದ್ದ ಮೊನಾಲಿಸಾ ಭೋಸ್ಲೇ ಮದುವೆಯಾಗಿದೆ. ಮದುವೆಯಾಗಿರುವುದು ಮುಸ್ಲಿಂ ಹುಡುಗ ಮಹಮ್ಮದ್ ಫರ್ಮಾನ್ ಜೊತೆ. ಮದುವೆಗೆ ಮೊನಾಲಿಸಾ ತಂದೆ ತಾಯಿ ಯಾರೂ ಒಪ್ಪಿಲ್ಲ. ಮದುವೆ ನಿಲ್ಲಿಸಲು ಅಪ್ಪ ಅಮ್ಮ ಕೊನೆಯವರೆಗೂ ಪ್ರಯತ್ನ ಮಾಡಿದ್ದಾರೆ. ಆದರೆ ಸ್ವತಃ ಮೊನಾಲಿಸಾ, ಪೊಲೀಸ್ ರಕ್ಷಣೆಯನ್ನೂ ಕೇಳಿ, ದೂರು ಕೊಟ್ಟಿದ್ದಾರೆ. ಅಂದಹಾಗೆ ಫರ್ಮಾನ್‌ಗೆ ಪ್ರಪೋಸ್ ಮಾಡಿದ್ದೇ ಮೊನಾಲಿಸಾ ಅಂತೆ.
ಕುಂಭಮೇಳದ ಪ್ರಯಾಗ್‌ರಾಜ್‌ನಲ್ಲಿ ರುದ್ರಾಕ್ಷಿ ಸರ ಮಾಡುತ್ತಿದ್ದ ಹುಡುಗಿ. ಕಣ್ಣಿನಲ್ಲೊಂದು ಹೊಳಪು.. ಇದ್ದಕ್ಕಿದ್ದಂತೆ ಫೇಮಸ್ ಆದ ಮೊನಾಲಿಸಾ, ʻಕುಂಭಮೇಳ ಸುಂದರಿʼ ಎಂಬ ಖ್ಯಾತಿ ಪಡೆದಿದ್ದರು. ಸಿನಿಮಾಗಳಲ್ಲೂ ಚಾನ್ಸ್ ಗಿಟ್ಟಿಸಿದ್ದರು. ಅವರ ಬದುಕಿಗೆ ಈಗ ಮಹಮ್ಮದ್ ಫರ್ಮಾನ್ ಪ್ರವೇಶಿಸಿದ್ದಾರೆ. ಫರ್ಮಾನ್ ಮುಸ್ಲಿಂ ಆಗಿದ್ದರೂ, ಮದುವೆ ಹಿಂದೂಗಳ ದೇವಸ್ಥಾನದಲ್ಲಿ ಹಿಂದೂ ಪದ್ಧತಿಯಂತೆಯೇ ಆಗಿದೆ. ಕೇರಳಂ ತಿರುವನಂತಪುರಂನ ಅರುಮನೂರಿನಲ್ಲಿರುವ ನೈನಾರ್ ದೇವ ದೇವಸ್ಥಾನವೊಂದರಲ್ಲಿ ಮಹಮ್ಮದ್ ಫರ್ಮಾನ್ ಅವರು ಮೊನಾಲಿಸಾಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಅರ್ಚಕರು ನೀಡಿದ ತಾಳಿಯನ್ನು ಕಟ್ಟಿ, ಕುಂಕುಮವನ್ನು ಇಟ್ಟಿದ್ದಾರೆ. ಈ ಮದುವೆಗೆ ಕೇರಳದ ಶಿಕ್ಷಣ ಸಚಿವರು ಸೇರಿದಂತೆ ಹಲವು ಗಣ್ಯ ರಾಜಕಾರಣಿಗಳು ಸಾಕ್ಷಿಯಾಗಿದ್ದಾರೆ.
ಮೊನಾಲಿಸಾ ಹಿಂದೂ. ಮಧ್ಯಪ್ರದೇಶದವರು. ಫರ್ಮಾನ್ ಉತ್ತರ ಪ್ರದೇಶದವರು. ಸ್ಮಾಲ್ ಟೈಂ ಆಕ್ಟರ್. ಫೇಸ್ ಬುಕ್‌ನಲ್ಲಿ ಪರಿಚಯವಾಗಿದ್ದ ಫರ್ಮಾನ್, ಆರು ತಿಂಗಳ ಹಿಂದೆ ಚಿತ್ರೀಕರಣವೊಂದರಲ್ಲಿ ಭೇಟಿಯಾದರಂತೆ. 6 ತಿಂಗಳು ಎಂದರೆ ಮೊನಾಲಿಸಾಗೆ ಇನ್ನೂ 18 ತುಂಬಿರಲಿಲ್ಲ. ಆಗ.. ಕೇವಲ 6 ತಿಂಗಳ ಹಿಂದೆ ಮಹಮ್ಮದ್ ಫರ್ಮಾನ್‌ರನ್ನು ಭೇಟಿ ಮಾಡಿದ್ದ ಮೊನಾಲಿಸಾ, ಕೇವಲ ಆರೇ ತಿಂಗಳಲ್ಲಿ ಫರ್ಮಾನ್ ಅವರ ಪರಿಚಯವಾಗಿ, ಸ್ನೇಹವಾಗಿ, ಪ್ರೀತಿ ಮಾಡಿದ್ದಾರೆ.
‘ನಾನು ಮೊನಾಲಿಸಾಳನ್ನು ಮೊದಲು ನೋಡಿದ್ದು ಶೂಟಿಂಗ್ ಸ್ಪಾಟ್‌ನಲ್ಲಿ.
ಈ ಆರು ತಿಂಗಳು ನಮಗೆ 60 ವರ್ಷಗಳ ಸುದೀರ್ಘ ಬಾಂಧವ್ಯದಂತೆ ಭಾಸವಾಗುತ್ತಿದೆ’ ಎಂದಿದ್ದಾರೆ ಫರ್ಮಾನ್. ಸಾಮಾನ್ಯವಾಗಿ ಹುಡುಗರು ಹುಡುಗಿಗೆ ಪ್ರಪೋಸ್ ಮಾಡುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಆದರೆ ಇಲ್ಲಿ ಮೊನಾಲಿಸಾನೇ ಮೊದಲು ಪ್ರಪೋಸ್ ಮಾಡಿದರಂತೆ. ಫರ್ಮಾನ್ ಬೇಡ ಎಂದರೂ ಬೆನ್ನು ಬಿದ್ದು ಪ್ರಪೋಸ್ ಮಾಡಿದರಂತೆ. ಇದು ಫರ್ಮಾನ್ ಹೇಳಿಕೊಂಡಿರೋ ಲವ್ ಸ್ಟೋರಿ.
ಇಬ್ಬರ ಮದುವೆಗೆ ಮೊನಾಲಿಸಾ ಕುಟುಂಬದವರು ಒಪ್ಪಿರಲಿಲ್ಲ. ಗಲಾಟೆ ಮಾಡುವ ಭಯವಿತ್ತು. ಹೀಗಾಗಿ ಮಧ್ಯಪ್ರದೇಶದ ಮೊನಾಲಿಸಾ, ಕೇರಳಕ್ಕೆ ಬಂದು ಫರ್ಮಾನ್‌ರನ್ನು ಮದುವೆಯಾಗಿದ್ದಾರೆ. ಫರ್ಮಾನ್ ಉತ್ತರ ಪ್ರದೇಶದವರು. ಈ ಮದುವೆಗೆ ಸಾಕ್ಷಿಯಾಗಿ ರಕ್ಷಣೆ ಕೊಟ್ಟಿರುವುದು ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ. ಫರ್ಮಾನ್ ಅವರ ತಂದೆಯೂ ಈ ಮದುವೆಗೆ ಒಪ್ಪಿಲ್ಲವಂತೆ. ಕೇರಳ ಪೊಲೀಸ್ ಠಾಣೆಯ ಎದುರು ಪ್ರತಿಭಟನೆಗೂ ಮುಂದಾಗಿದ್ದರಂತೆ. ಆದರೆ ಮೊನಾಲಿಸಾ ಮೇಜರ್.
ಮೊನಾಲಿಸಾಗೆ ಈಗಿನ್ನೂ 18 ತುಂಬಿದೆ. ಮಾರ್ಚ್ 5 ಅವರ ಹುಟ್ಟುಹಬ್ಬ. ಇದೇ ಮಾರ್ಚ್ 5ಕ್ಕೆ 18 ತುಂಬುವುದನ್ನೇ ಕಾದು ಮದುವೆಯಾಗಿದ್ದಾರೆ. ಮದುವೆಯಾಗಿರುವುದು ಮಾರ್ಚ್ 11ನೇ ತಾರೀಕು. 18 ತುಂಬಿದ ನಂತರ ಕೇವಲ 6 ದಿನಕ್ಕೆ ಮ್ಯಾರೇಜ್. 18 ತುಂಬಿ ವಾರವೂ ಕಳೆದಿಲ್ಲ.
ಮೊನಾಲಿಸಾ-ಫರ್ಮಾನ್ ಮದುವೆಗೆ ಸಾಕ್ಷಿಯಾದ ಕೇರಳದ ರಾಜಕಾರಣಿಗಳು ಇದು ನಿಜವಾದ ಕೇರಳ ಸ್ಟೋರಿ ಎಂದಿದ್ದಾರೆ. ಸದ್ಯಕ್ಕೆ ಮೊನಾಲಿಸಾ ಮಲಯಾಳಂನಲ್ಲಿ ನಾಗಮ್ಮ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ʻಡೈರಿ ಆಫ್ ಮಣಿಪುರ್ʼ ಸಿನಿಮಾದಲ್ಲಿ ನಟಿಸುವ ಚಾನ್ಸ್ ಸಿಕ್ಕಿತ್ತು. ಟ್ರೇಲರ್ ಕೂಡಾ ಬಂದಿತ್ತು. ಆದರೆ, ಚಿತ್ರದ ನಿರ್ಮಾಪಕರ ವಿರುದ್ಧ ಅದೇ ಚಿತ್ರದ ಇನ್ನೊಬ್ಬ ನಟಿ ಅತ್ಯಾಚಾರದ ದೂರು ಕೊಟ್ಟಿದ್ದರು. ಸಿನಿಮಾ ಸ್ಟಾಪ್ ಆಗಿತ್ತು.
ಇದು ಲವ್ ಜಿಹಾದ್ ಎನ್ನುವುದು ಕೆಲವರ ಆರೋಪ. ಇದು ಅಪ್ಪಟ ಪ್ರೀತಿ ಎನ್ನುವುದು ವಿರೋಧಿಗಳ ವಾದ. ದಾಂಪತ್ಯ ಒಂದು ಹಂತಕ್ಕೆ ಬಂದರೆ ಆಮೇಲೆ ವಾಸ್ತವ ಗೊತ್ತಾಗಲಿದೆ.



