ದಳಪತಿಗಳನ್ನ ಹೊರಗಿಟ್ಟು ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿರುವ ಬಿಜೆಪಿ, ಮೈತ್ರಿಗೆ ಎಳ್ಳು ನೀರು ಬಿಟ್ಟಂತೆ ವರ್ತಿಸುತ್ತಿದೆ. ಜೆಡಿಎಸ್, ಬಿಜೆಪಿ ಮೈತ್ರಿ ನಡುವೆ ಸಮನ್ವಯತೆ ಕೊರತೆಯಿಂದಾಗಿ ಮುರಿದು ಬೀಳತ್ತಾ ಜೆಡಿಎಸ್, ಬಿಜೆಪಿ ನಾಯಕರ ಮೈತ್ರಿ ಎಂಬ ಶಂಕೆ ಶುರುವಾಗಿದೆ. ಬಿಜೆಪಿ ವಿರುದ್ಧವೇ ಅಸಮಾಧಾನ ಹೊರಹಾಕಿರೋ ಹೆಚ್‌ಡಿಕೆ ʻʻಬಿಜೆಪಿ ಪಕ್ಷ ಸಂಘಟನೆಗಾಗಿ ಪ್ರತಿಭಟನೆ ಮಾಡ್ತಿದ್ದಾರೆ. ನಾವು ಸಂಘಟನೆಗಾಗಿ ಹೋರಾಟ ಮಾಡ್ತೇವೆʼʼ ಎಂದಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆಯಾದರೂ, ಜೆಡಿಎಸ್ ಪಕ್ಷವಾಗಿ ‘ಅಸ್ತಿತ್ವ’ ಕಂಡುಕೊಳ್ಳುವ ಕಸರತ್ತಿನಲ್ಲಿದೆ. ಆದರೆ ಇದೇ ಕಸರತ್ತಿನಲ್ಲಿರುವ ಬಿಜೆಪಿಯವರೂ, ಹೋರಾಟವನ್ನು ಏಕಾಂಗಿಯಾಗಿ ಮಾಡುವುದಕ್ಕೆ ಆಸಕ್ತಿ ತೋರಿದ್ದಾರೆ. ಹಾಗೆ ನೋಡಿದರೆ, ರಾಷ್ಟ್ರ ಮಟ್ಟದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಹಾಗೂ ಬಿಜೆಪಿ ವರಿಷ್ಠರಿಗೆ ಒಳ್ಳೆಯ ಕೆಮಿಸ್ಟ್ರಿ ಯಿದ್ದರೂ ರಾಜ್ಯ ನಾಯಕತ್ವದ ವಿಷಯದಲ್ಲಿ ಹೊಂದಾಣಿಕೆಯಾಗುತ್ತಿಲ್ಲ. ಬಿಜೆಪಿ ಈ ಹಿಂದೆ ‘ಮುಡಾ’ ವಿರುದ್ಧ ನಡೆಸಿದ ಹೋರಾಟದಲ್ಲಿಯೂ ನಾಮ್-ಕೆ-ವಾಸ್ತೆ ‘ಮೈತ್ರಿ’ ಹೋರಾಟ ಮಾಡಿದ್ದರೂ, ಪೂರ್ಣ ಪ್ರಮಾಣದಲ್ಲಿ ಒಂದಾಗಿರಲಿಲ್ಲ.
ಅದಾದ ಮೇಲೆ ಗ್ರೇಟರ್ ಬೆಂಗಳೂರು ವಿಷಯದಲ್ಲಿ, ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ವಿಚಾರದಲ್ಲಿ, ಬಿಜೆಪಿ ಶಾಸಕರು ಅಮಾನತಾದ ವಿಷಯದಲ್ಲಿಯೂ ಜೆಡಿಎಸ್ ನಿಲುವು ಒಂದಾದರೆ, ಬಿಜೆಪಿ ನಿಲುವೇ ಬೇರೆಯಾಗಿತ್ತು. ಜೆಡಿಎಸ್ ನಾಯಕರು ಈ ವಿಷಯಗಳಲ್ಲಿ ‘ಹೇಳಿಕೆ’ಗಳಿಗೆ ತಮ್ಮ ಹೋರಾಟವನ್ನು ಸೀಮಿತ ಗೊಳಿಸಿದರೆ, ಬಿಜೆಪಿಗರು ಜೆಡಿಎಸ್ ನಾಯಕರನ್ನು ಆಹ್ವಾನಿಸಲೇ ಇಲ್ಲ. ಇದೀಗ ಬಿಜೆಪಿ ಆರಂಭಿಸಿರುವ ಜನಾಕ್ರೋಶ ಯಾತ್ರೆಯಲ್ಲಿ ಜೆಡಿಎಸ್ ನಾಯಕರು ಭಾಗವಹಿಸದಿದ್ದರೂ, ಮುಂದಿನ ದಿನದಲ್ಲಿ ಕುಮಾರಸ್ವಾಮಿ ಅವರು ಪ್ರತ್ಯೇಕ ಯಾತ್ರೆ ಕೈಗೊಳ್ಳಲಿದ್ದಾರೆ. ಈ ಮೂಲಕ ಬಿಜೆಪಿ-ಜೆಡಿಎಸ್‌ನವರು ತಮ್ಮ ಅಸ್ತಿತ್ವಕ್ಕಾಗಿ ಹೋರಾಟದಲ್ಲಿ ಭಿನ್ನರಾಗ ತೋರಿದ್ದಾರೆ ಎನ್ನುವುದು ಸ್ಪಷ್ಟ.
ಈ ಎಲ್ಲದರ ನಡುವೆ ಕಳೆದ ಎರಡು ವರ್ಷದಿಂದ ಕಾಣದ ಒಗ್ಗಟ್ಟು ಬಿಜೆಪಿಯಲ್ಲಿ ಈಗ ಕಾಣಿಸಲು ಶುರುವಾಗಿದೆ. ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ಕೆಲ ನಾಯಕರನ್ನು ಹೊರತುಪಡಿಸಿ ಮಿಕ್ಕವರು, ಯತ್ನಾಳ್ ಉಚ್ಚಾಟನೆಯ ಬಳಿಕ ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಕುಮಾರಸ್ವಾಮಿ ತಂಡಕ್ಕೆ ಈಗ ಆಗುತ್ತಿರುವ ಬೆಳವಣಿಗೆ ಎದೆಯಲ್ಲಿ ತವಡು ಕುಟ್ಟಿದಂತಾಗಿರುವುದು ಸ್ಪಷ್ಟ.
ಏಕೆಂದರೆ ಬಿಜೆಪಿ ಹಳೇ ಮೈಸೂರು ಭಾಗವನ್ನೇ ಟಾರ್ಗೆಟ್ ಮಾಡ್ತಿದೆ. ಜೆಡಿಎಸ್ ಮೈತ್ರಿ ಬಿಟ್ಟು ಬಿಜೆಪಿಯಿಂದ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೊಂದಿರೋ ಜೆಡಿಎಸ್ ನಾಯಕರನ್ನು ಸೈಡಿಗಿಟ್ಟಿದೆ.
ಬಿಜೆಪಿ ಹೋರಾಟಕ್ಕೆ ದಳಪತಿಗಳ ಆಕ್ರೋಶ ವ್ಯಕ್ತವಾಗಿದ್ದರೂ, ಡೋಂಟ್ ಕೇರ್ ಎಂದು ಹೊರಟಿದೆ.
ಜೊತೆಗೆ ಇತ್ತೀಚೆಗೆ ಡಿಕೆ ವಿರುದ್ಧ ಗುಡುಗುವಾಗ ಕುಮಾರಸ್ವಾಮಿ ಅವರು ಯಡಿಯೂರಪ್ಪ ವಿರುದ್ಧವೂ ಗುಡುಗಿದ್ದರು. ಯಡಿಯೂರಪ್ಪ ಕೂಡಾ ಟನ್ನುಗಟ್ಟಲೆ ದಾಖಲೆ ಇಟ್ಟುಕೊಂಡು ಹುಡುಕಿದ್ದರು ಎಂದಿದ್ದರು. ಆ ಮೂಲಕ ಪರೋಕ್ಷವಾಗಿ ವಿಜಯೇಂದ್ರಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು.
ವಿಶೇಷ ಎಂದರೆ ಗಮನ ಸೆಳೆಯುತ್ತಿರುವುದು ವಿಜಯೇಂದ್ರ ಮೌನ. ಕುಮಾರಸ್ವಾಮಿ ಕೂಡಾ ಇತ್ತೀಚೆಗೆ ಅಗತ್ಯಕ್ಕಿಂತ ಹೆಚ್ಚು ಮಾತನಾಡಿ ಗೌರವ, ಮನ್ನಣೆಗೆ ಧಕ್ಕೆ ತಂದುಕೊಳ್ಳುತ್ತಿದ್ದಾರೆ. ಯತ್ನಾಳ್ ವಿರುದ್ಧ ಮೌನವಹಿಸಿಯೇ ಯುದ್ಧ ಗೆದ್ದ ವಿಜಯೇಂದ್ರ ಮತ್ತೊಂದು ಮೌನ ಸಂಗ್ರಾಮಕ್ಕೆ ಸಿದ್ಧರಾಗಿದ್ದಾರೆ.



