RSS ಬ್ಯಾನ್ ಮಾಡ್ಬೇಕು ಎಂಬ ಕೂಗು ರಾಜ್ಯದಲ್ಲಿ ಜೋರಾಗಿ ಕೇಳಿ ಬರೋದಕ್ಕೆ ಶುರುವಾಗಿದೆ. ಅದು ಕೇವಲ ಕಾಂಗ್ರೆಸ್ ನಾಯಕರಿಂದ. ವಿಶೇಷವಾಗಿ ಪ್ರಿಯಾಂಕ್ ಖರ್ಗೆ ಬೆಂಬಲಿಗರಿಂದ. ಆಕ್ಚುವಲಿ ಕರ್ನಾಟಕದಲ್ಲಿ ಈಗಾಗಲೇ RSS ಕಾರ್ಯಕರ್ತರು ಅರ್ಥಾತ್ ಸ್ವಯಂ ಸೇವಕರ 500ಕ್ಕೂ ಹೆಚ್ಚು ಪಥಸಂಚಲನಗಳಾಗಿವೆ. ಹೀಗಿದ್ದರೂ ಸಮಸ್ಯೆ ಆಗುತ್ತಿರುವುದು ಕಲಬುರಗಿಯ ಚಿತ್ತಾಪುರದಲ್ಲಿ ಮಾತ್ರ. ಇದೀಗ ಆ ಹೋರಾಟಕ್ಕೆ ಅದೇ ಕಲಬರುಗಿಯ ಕೆಂಭಾವಿ ಕೂಡಾ ಸೇರ್ಪಡೆಯಾಗಿದೆ. ಯಾದಗಿರಿ ಜಿಲ್ಲೆ, ಗುರುಮಠಕಲ್.. ಹೀಗೆ ಎಲ್ಲೆಲ್ಲಿ ಪ್ರಿಯಾಂಕ್ ಖರ್ಗೆ ಪ್ರಬಲವಾಗಿದ್ದಾರೋ.. ಅಲ್ಲಿ ಮಾತ್ರವೇ RSS ವಿರುದ್ಧ ಹೋರಾಟ ಪ್ರತಿಭಟನೆಯ ಸ್ವರೂಪ ಪಡೆಯುತ್ತಿದೆ. RSS V/s ಕಾಂಗ್ರೆಸ್ ಹೋರಾಟ.. ನೋಡನೋಡುತ್ತಲೇ RSS V/s DSS ಹೋರಾಟವಾಗಿ, ದಲಿತರ ಹೋರಾಟವಾಗಿ ರೂಪುಗೊಳ್ಳುತ್ತಿದೆ. ಕೇವಲ ಚಿತ್ತಾಪುರ ಸುತ್ತಮುತ್ತ ಪ್ರದೇಶಗಳಲ್ಲಿ. ಹೇಗೆ ಸಾಧ್ಯವಾಯ್ತು.. ವಿಶೇಷ ಎಂದರೆ ದಲಿತ ಸಂಘಟನೆಗಳೇ ಈ ವಿಷಯದಲ್ಲಿ ಇಬ್ಭಾಗವಾಗಿವೆ. ದಲಿತ ಸಂಘಟನೆಗಳು ಛಿದ್ರವಾಗಿವೆ.
ದಲಿತ ಸಂಘಟನೆಗಳ ಆಕ್ರೋಶದ ಹಿಂದೆ ಏನಿದೆ..?
RSS ಪಥಸಂಚಲನ ನಡೆಸುವುದಕ್ಕೆ ಅನುಮತಿ ಕೇಳುತ್ತಿದ್ದಂತೆ ಕೆಲವೊಂದಿಷ್ಟು ದಲಿತ ಸಂಘಟನೆಗಳು ತಮಗೂ ಅವಕಾಶ ಕೊಡಿ. RSS ಪಥಸಂಚಲನದ ದಿನವೇ ನಾವೂ ರ್ಯಾಲಿ ಮಾಡುತ್ತೇವೆ ಎಂದು ಅರ್ಜಿ ಸಲ್ಲಿಸುತ್ತವೆ. ಆಗ ಸರ್ಕಾರ ಅಥವಾ ಅಧಿಕಾರಿಗಳು ಗೊಂದಲಕ್ಕೆ ಬೀಳುತ್ತಾರೆ.
ಎರಡನೆಯದಾಗಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಕೊಡಬೇಕು ಎಂಬ ವಾದಕ್ಕೆ ಇಲ್ಲಿ ಪುರಸ್ಕಾರ ಸಿಗುವುದಿಲ್ಲ. ಅದು ಇನ್ನೊಂದು ವಾಗ್ವಾದಕ್ಕೆ ಕಾರಣವಾಗುತ್ತದೆ ಅಷ್ಟೆ.
ಶಾಂತಿ ಸಭೆ ನಡೆಸುತ್ತೇವೆ ಎಂದು ಸರ್ಕಾರವೇ ಕರೆದ ಸಭೆಯಲ್ಲೂ ಸಂಧಾನ, ಮಾತುಕತೆ ನಡೆಯಲೇ ಇಲ್ಲ. ಕೇವಲ ಗಲಾಟೆ, ಗದ್ದಲಗಳೇ ಆದವು. ವಿಶೇಷ ಎಂದರೆ ಆ ಶಾಂತಿ ಸಭೆಗೆ RSS ಪ್ರತಿನಿಧಿಗಳನ್ನೇ ಕರೆದಿರಲಿಲ್ಲ. ಯಾರ ಜೊತೆ ಜಗಳವಾಯ್ತು ಎನ್ನುವುದೇ ಅರ್ಥವಾಗುತ್ತಿಲ್ಲ.
ದಲಿತ ಸಂಘಟನೆಗಳಲ್ಲೂ ಅಪಸ್ವರ..!
ಇನ್ನು ಭೀಮ್ ಆರ್ಮಿ, ದಲಿತ ಸೇನೆ, ದಲಿತ ಸಂಘರ್ಷ ಸಮಿತಿ.. ಮೊದಲಾದ ದಲಿತ ಪರ ಸಂಘಟನೆಗಳಲ್ಲಿಯೇ ಈ ಹೋರಾಟಕ್ಕೆ ಅಪಸ್ವರ ಬಂದಿದೆ. ದಲಿತ ಸೇನೆಯ ರಾಜ್ಯಾಧ್ಯಕ್ಷರೇ ಹನುಮಂತ ಜಿ ಎಳಸಂಗಿಯವರೇ ಹೋರಾಟದಿಂದ ದೂರ ಇದ್ದಾರೆ. ಸಂಘಟನೆಯ ಪ್ರಮುಖ ನಾಯಕರೇ ದೂರ ಉಳಿದಿದ್ದಾರೆ.
ಇನ್ನು ಭೀಮ್ ಆರ್ಮಿಯಲ್ಲಿ ದಲಿತರಿಗಿಂತ ಹೆಚ್ಚಾಗಿ ಮುಸ್ಲಿಂ ನಾಯಕರಿರುವುದು ವಿರೋಧಕ್ಕೆ ಇನ್ನೊಂದು ಕಾರಣ. ಹೋರಾಟದ ವೇಳೆ ʻಕಾಶ್ಮೀರ ರಕ್ತಪಾತʼದ ವೇಳೆ ಪ್ರತ್ಯೇಕತಾವಾದಿಗಳು ಮೊಳಗಿಸಿದ್ದ ʻಆಜಾದಿʼ ಘೋಷಣೆ ಕೇಳಿ ಬಂದಿರುವುದು ದಲಿತ ಸಂಘಟನೆಗಳು ತಲೆ ತಗ್ಗಿಸುವಂತೆ ಮಾಡಿದೆ. ಇಂತಹ ಹೋರಾಟಗಳಿಂದಾಗಿ ದಲಿತ ಸಂಘಟನೆಗಳಿಗೆ ದೇಶದ್ರೋಹಿ ಪಟ್ಟ ಸಿಗಲಿದೆಯೇ ಹೊರತು, ಯಾವುದೇ ಲಾಭವಿಲ್ಲ ಎನ್ನುವುದು ಸಂಘಟನೆಯ ಪ್ರಮುಖರ ವಾದ.
ಜೊತೆಗೆ ಪ್ರಿಯಾಂಕ್ ಖರ್ಗೆ ʻಈ ಹೋರಾಟಕ್ಕೆ ನಾನೇ ಪ್ರಾಯೋಜಕ. ಹಣ ಕೊಡುತ್ತಿದ್ದೇನೆʼ ಎಂಬ ಅರ್ಥದ ಮಾತುಗಳನ್ನಾಡಿರುವುದು ದಲಿತ ಸಂಘಟನೆಗಳನ್ನು ಕೆರಳಿಸಿದೆ. ದಲಿತ ಸಂಘಟನೆಗಳಿಗೆ ಹಣ ತೆಗೆದುಕೊಂಡು ಹೋರಾಟ ಮಾಡುತ್ತಾರೆ ಎಂಬ ಕಳಂಕವನ್ನು ಅಂಟಿಸಿದೆ.
ಒಟ್ಟಿನಲ್ಲಿ ದಲಿತ ಸಂಘಟನೆಗಳೇನೋ ಈ ವಿಷಯದಲ್ಲಿ ಇಬ್ಬಾಗವಾಗಿವೆ. ಕಾಂಗ್ರೆಸ್ ಆರಂಭಿಸಿದ್ದ ಹೋರಾಟ ನಿಧಾನವಾಗಿ ದಲಿತ ಸಂಘಟನೆಗಳಿಗೆ ಅಂಟಿಕೊಳ್ಳುತ್ತಿದೆ. ಇತಿಹಾಸ ಬಲ್ಲವರಿಗೆ ಹೋರಾಟ ತೀವ್ರಗೊಂಡಾಗ ಅಥವಾ ಡ್ಯಾಮೇಜ್ ಆದಾಗ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ಜಾರಿಕೊಂಡ ಹಳೆಯ ಘಟನೆಗಳು ನೆನಪಾಗುತ್ತಿವೆ.



