ವಯಸ್ಸು 75 ದಾಟಿದರೆ ಅದು ನಿವೃತ್ತಿಯಾಗುವ ಸಮಯ. ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಇತ್ತೀಚೆಗೆ ಹೇಳಿದ್ದ ಮಾತು ಸಂಚಲನವನ್ನೇ ಸೃಷ್ಟಿಸಿತ್ತು. ಇದೇ ತಿಂಗಳು ಮೋದಿಯವರ ಹುಟ್ಟುಹಬ್ಬ. ಸೆಪ್ಟೆಂಬರ್ 17 ಬಂದರೆ ಆಯಿತು, ನರೇಂದ್ರ ಮೋದಿಗೆ 75 ಭರ್ತಿಯಾಗುತ್ತದೆ. ಅಂದರೆ.. ಈ ಮೂಲಕ ಭಾಗವತ್ ಅವರ ಹೇಳಿಕೆಯ ಮೂಲಕ RSS ಮೋದಿಯವರು ಸಕ್ರಿಯ ರಾಜಕಾರಣದಿಂದ ನಿವೃತ್ತರಾಗುವುದನ್ನು ಬಯಸುತ್ತಿದೆ ಎಂದು ಸುದ್ದಿಯಾಗಿತ್ತು. ಅಲ್ಲಿಗೆ ಬಿಜೆಪಿಯಲ್ಲಿ ಏನೇ ಆಗಲಿ.. RSS ನಿರ್ಧಾರವೇ ಅಂತಿಮ ಎಂದು ಮೆಸೇಜ್ ಹೋಗಿತ್ತು. ಈಗ ಇದ್ದಕ್ಕಿದ್ದಂತೆ ಭಾಗವತ್ ಅವರೇ ಆ ಸುದ್ದಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗವತ್ 75 ವರ್ಷವಾದಾಗ ನಾನು ನಿವೃತ್ತಿಯಾಗುತ್ತೇನೆ ಅಥವಾ ಬೇರೆಯವರು ನಿವೃತ್ತಿಯಾಗಬೇಕು ಎಂದು ನಾನು ಎಂದಿಗೂ ಹೇಳಿಲ್ಲ ಎಂದು ಹೇಳಿದ್ದಾರೆ. ತಾವು ನಿವೃತ್ತಿಯಾಗುವುದಿಲ್ಲ ಮತ್ತು ಯಾರಿಗೂ ನಿವೃತ್ತಿಯಾಗಲು ಹೇಳಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ.. ತಮ್ಮ ಕುರಿತು ಮಾತನಾಡುತ್ತಾ… ಸಂಘ ಎಲ್ಲಿಯವರೆಗೆ ಇರಲು ಹೇಳುತ್ತದೋ, ಅಲ್ಲಿಯವರೆಗೆ ನಾನು ಮುಂದುವರಿಯಬೇಕು ಎಂದಿದ್ದಾರೆ. ಅಂದರೆ ಭಾಗವತ್ ಅವರಿಗೂ ಕೂಡಾ ಇದೇ ಸೆಪ್ಟೆಂಬರಿನಲ್ಲಿ 75 ದಾಟುತ್ತದೆ. ಇಷ್ಟಕ್ಕೂ ಸರಸಂಘಚಾಲಕರು ದಿಢೀರನೆ ತಮ್ಮ ವರಸೆ ಬದಲಿಸಿದ್ದೇಕೆ ಎಂದರೆ.. ಒಂದು ಹೊಸ ಕಥೆ ತೆರೆದುಕೊಳ್ಳುತ್ತದೆ.
ಇತ್ತೀಚೆಗೆ ಮೋದಿ-ಶಾ ಜೋಡಿ RSS ನಿಲುವುಗಳನ್ನು ಗಣನೆಗೇ ತೆಗೆದುಕೊಳ್ಳದೆ ಮುನ್ನುಗ್ಗುತ್ತಿದ್ದರು. RSS ಕೂಡಾ ಅಂತರ ಕಾಯ್ದುಕೊಂಡ ಪರಿಣಾಮ ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಹೀನಾಯ ಸ್ಥಿತಿಗೆ ತಲುಪಿತ್ತು ಬಿಜೆಪಿ. RSS ಜೊತೆ ಸಂಧಾನ ಆದ ಮೇಲೆಯೇ ಮಹಾರಾಷ್ಟ್ರ, ದೆಹಲಿ, ಹರಿಯಾಣಗಳಲ್ಲಿ ಗೆಲ್ಲೋಕೆ ಸಾಧ್ಯವಾಗಿದ್ದು. ಆದರೆ.. ಗೆದ್ದ ಮೇಲೆ ಮತ್ತೆ ಮೋದಿ-ಶಾ ವರಸೆ ಬದಲಾಗಿತ್ತಂತೆ. ತಮ್ಮ ನಿಷ್ಠರೊಬ್ಬರನ್ನು ಬಿಜೆಪಿ ಅಧ್ಯಕ್ಷ ಹುದ್ದೆಗೆ ಕೂರಿಸಲು ಮುಂದಾಗಿದ್ದರಂತೆ. ಮೋದಿ-ಶಾ ಅವರ ಆಯ್ಕೆ ಧರ್ಮೇಂದ್ರ ಪ್ರಧಾನ್ ಇಲ್ಲವೇ ಭೂಪೇಂದ್ರ ಯಾದವ್ ಆಗಿತ್ತು.
ಆದರೆ RSS ವರಿಷ್ಠರಿಗೆ ಸಂಘ ನಿಷ್ಠರೊಬ್ಬರು ಅಧ್ಯಕ್ಷರಾಗಲಿ ಎಂಬ ನಿರೀಕ್ಷೆ ಇತ್ತು. ಹೀಗಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪಟ್ಟ ಕಟ್ಟಲು ಮುಂದಾಗಿತ್ತು ಆರ್ ಎಸ್ ಎಸ್. ಆದರೆ, ಮೋದಿ ಶಾ ಬಗ್ಗಿರಲಿಲ್ಲ. ಯಾವಾಗ ಈ ಪೈಪೋಟಿ ಅತಿಯಾಯಿತೋ, ಅಗ ಅರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಅವರು, ‘ಮೋದಿ ಕೆಳಗಿಳಿಯಲಿ’ ಎಂದು ಪರೋಕ್ಷ ಸಂದೇಶ ರವಾನಿಸಿದ್ದರು.
ಆದರೆ ಈಗ ಇದ್ದಕ್ಕಿದ್ದಂತೆ ಅವರು ‘ಯು-ಟರ್ನ್’ ಹೊಡೆದಿದ್ದಾರೆ ಎಂದರೆ ಮೋದಿಯವರು ಆರೆಸ್ಸೆಸ್ ಜತೆ ಹೊಂದಿಕೊಂಡು ಹೋಗಲು ಬಯಸಿದ್ದಾರೆ. ಅರ್ಥಾತ್, ಅದರ ಇಚ್ಛೆಯಂತೆ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪಟ್ಟ ಕಟ್ಟಲು ಒಲವು ತೋರಿದ್ದಾರೆ ಎಂಬುದು ಬಿಜೆಪಿ ಮೂಲಗಳ ಮಾತು. ಪರಿಣಾಮ? ಶಿವರಾಜ್‌ಸಿಂಗ್ ಚೌಹಾಣ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರೆ ಕರ್ನಾಟಕದಲ್ಲೂ ಸಂಘಪರಿವಾರದ ಪವರ್ರು ಜಾಸ್ತಿಯಾಗುತ್ತದೆ. ಮತ್ತದು ಯಾವ ಕಾರಣಕ್ಕೂ ವಿಜಯೇಂದ್ರ ಪಕ್ಷಾಧ್ಯಕ್ಷರಾಗಿರುವುದನ್ನು ಬಯಸುವುದಿಲ್ಲ ಎಂಬುದು ಅದರ ಮಾತು. ಸಹಜ ವಾಗಿಯೇ ಈ ಮಾತು ರಾಜ್ಯ ಬಿಜೆಪಿಯಲ್ಲಿರುವ ವಿಜಯೇಂದ್ರ ವಿರೋಧಿಗಳು ಖುಷಿಯಾಗುವಂತೆ ಮಾಡಿದೆ. ಆದರೆ ಈ ಖುಷಿ ಎಷ್ಟು ದಿನ ಉಳಿಯುತ್ತದೋ ಗೊತ್ತಿಲ್ಲ. ಏಕೆಂದರೆ ಶಿವರಾಜ್ ಸಿಂಗ್ ಚೌಹಾಣ್ ಸಂಘ ನಿಷ್ಠರೇನೋ ಹೌದು. ಆದರೆ, ಪಕ್ಷಕ್ಕೆ ಡ್ಯಾಮೇಜ್ ಮಾಡುವವರಲ್ಲ. ಪಕ್ಷವನ್ನು ಮೊದಲು ಅಧಿಕಾರಕ್ಕೆ ತರೋಣ, ಆಮೇಲೆ ಸಮಸ್ಯೆ ಇದ್ದರೆ ಸರಿಪಡಿಸೋಣ ಎಂಬ ಮನಸ್ಥಿತಿಯವರು. ಹೀಗಾಗಿಯೇ ಅವರು ಸತತವಾಗಿ ಸಿಎಂ ಆಗಿ, ಪಕ್ಷವನ್ನು ನಿರಂತರವಾಗಿ ಮಧ್ಯಪ್ರದೇಶದಲ್ಲಿ ಗೆಲ್ಲಿಸಿಕೊಂಡು ಬಂದಿದ್ದು.



