ಎಕ್ಕ. ಇದು ಯುವ ನಟಿಸುತ್ತಿರುವ ಹೊಸ ಸಿನಿಮಾ. ಡೈರೆಕ್ಟರ್ ರೋಹಿತ್ ಪದಕಿ ಅವರ ಪ್ರಕಾರ ಇದು ಕೇವಲ ರಕ್ತಸಿಕ್ತ ಕಥೆಯಲ್ಲ. ಸದ್ಯಕ್ಕೆ ರಿಲೀಸ್ ಆಗಿರುವ ಎರಡೂ ಪೋಸ್ಟರುಗಳಲ್ಲಿ ರಕ್ತ ಮಾಂಸವೇ ತುಂಬಿಕೊಂಡಿದೆ. ಆದರೆ ಇದು ಹಾಗಲ್ಲ, ಒಂದು ರೀತಿಯಲ್ಲಿ ನನ್ನೊಳಗೆ ಉದ್ಭವವಾದ ಪ್ರಶ್ನೆಗಳಿಗೆ ಉತ್ತರವೇ ಈಗ ಹೇಳುತ್ತಿರುವ ಕಥೆ ಎನ್ನುವ ರೋಹಿತ್ ಅವರಿಗೆ ಡಾ.ರಾಜ್ ಮತ್ತು ಅನಂತ್ ನಾಗ್ ಚಿತ್ರಗಳೇ ಸ್ಪೂರ್ತಿ.
ನಾನು ರಾಜ್ ಕುಮಾರ್ ಮತ್ತು ಅನಂತನಾಗ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. ಅವರ ಚಿತ್ರಗಲ್ಲಿ ನಮ್ಮ ಕಥೆ ಇತ್ತು. ನನ್ನ ಕಣ್ಣೆದುರು ನಡೆಯುವ ಕಥೆಗಳೇ ಆಗ ಸಿನಿಮಾಗಳಾಗುತ್ತಿದ್ದವು. ಜನ ಇಷ್ಟಪಡುವುದು ಅಂತಹ ಕಥೆಗಳನ್ನೇ. ಚಿತ್ರಕ್ಕೆ ಬರುವ ಪ್ರೇಕ್ಷಕರು ತಮ್ಮನ್ನು ತಾವು ಹುಡುಕಿಕೊಳ್ಳುತ್ತಾರೆ. ಅಂತಹ ಕಥೆಯನ್ನೇ ಎಕ್ಕ ಚಿತ್ರದಲ್ಲೂ ಹೇಳಲಿದ್ದೇವೆ ಎಂದಿದ್ದಾರೆ ರೋಹಿತ್ ಪದಕಿ.
ರೋಹಿತ್ ಪದಕಿ ಅವರ ಈ ಹಿಂದಿನ ದಯವಿಟ್ಟು ಗಮನಿಸಿ ಹಾಗೂ ರತ್ನನ್ ಪ್ರಪಂಚ ಚಿತ್ರಗಳಲ್ಲಿ ರಿಯಾಲಿಸ್ಟಿಕ್ ಕಥೆ ಇತ್ತು. ಆದರೆ ಈಗ ಮಾಡುತ್ತಿರುವ ಉತ್ತರಕಾಂಡ ಹಾಗೂ ಎಕ್ಕ ಚಿತ್ರಗಳು ಪಕ್ಕಾ ಕಮರ್ಷಿಯಲ್ ಸಿನಿಮಾಗಳು ಎನ್ನುವ ರೋಹಿತ್ ಪದಕಿ ಉತ್ತರ ಕರ್ನಾಟಕದವರು ಕಮರ್ಷಿಯಲ್ ಸಿನಿಮಾಗಳನ್ನು ಹೆಚ್ಚು ಇಷ್ಟಪಡ್ತಾರೆ ಎನ್ನುತ್ತಾರೆ.
ಹಾಗಾದರೆ ಯುವ ಚಿತ್ರದ ಕಥೆ ಏನು ಎಂದರೆ.. ಅವರು ಕಥೆಗಿಂತ ಹೆಚ್ಚು ವೇದಾಂತ ಹೇಳ್ತಾರೆ. ಯಾವೊಬ್ಬ ಮನುಷ್ಯನೂ ಹುಟ್ಟುತ್ತಾ ಕ್ರೂರಿಯಲ್ಲ. ಹಿಂಸೆಯನ್ನು ಇಷ್ಟಪಡುವುದಿಲ್ಲ. ಒಬ್ಬ ಮನುಷ್ಯ ಮತ್ತೊಬ್ಬನನ್ನು ಕೊಲ್ಲುವಷ್ಟು ಕ್ರೂರಿಯಾಗುತ್ತಾನೆ ಎನ್ನುವುದು ನಂಬುವುದಕ್ಕೆ ಆಗದಷ್ಟು ಕ್ರೌರ್ಯ. ಆದರೆ ಆ ಹಿಂಸೆ, ಕ್ರೌರ್ಯದ ಹಿಂದೆಯೂ ಒಂದು ಕಥೆ ಇರುತ್ತದೆ. ಕಾರಣ ಇರುತ್ತದೆ. ಯುವ ಚಿತ್ರದಲ್ಲಿ ಅಂತಹವುಗಳ ಶೋಧನೆ ನಡೆಯುತ್ತದೆ. ಹಿನ್ನೆಲೆಯನ್ನು ಹೇಳುತ್ತೇವೆ. ಯುವ ಕೇವಲ ರಕ್ತಸಿಕ್ತ ಕಥೆಯಂತೂ ಖಂಡಿತಾ ಅಲ್ಲ ಅನ್ನುತ್ತಾರೆ ರೋಹಿತ್ ಪದಕಿ.
ಇದು ಹಳೆಯ ಫಾರ್ಮುಲಾ. ಹೀರೋ ಕ್ರೈಂ ಮಾಡಿದರೆ, ರೌಡಿಸಂ ಮಾಡಿದರೆ.. ಅದರ ಹಿಂದೆ ಒಂದು ಕಥೆ, ಕಾರಣ ಹೇಳೋದು ಸಾಮಾನ್ಯ ಅಲ್ವಾ ಅಂದ್ರೆ.. ರೋಹಿತ್ ಪದಕಿ ಹೇಳೋದು ಸಿನಿಮಾ ನೋಡಿ, ಅಭಿಪ್ರಾಯ ಹೇಳಿ ಎನ್ನುವುದಷ್ಟೇ. ರೋಹಿತ್ ಪದಕಿ ಈ ಚಿತ್ರದಲ್ಲಿ ಈ ಹಿಂದಿನ ಇದೇ ಮಾಡೆಲ್ ಸಿನಿಮಾಗಳಿಗಿಂತ ಹೊಸದೇನನ್ನು ಹೇಳ್ತಾರೆ.. ಅನ್ನೋ ಕುತೂಹಲವಂತೂ ಅಭಿಮಾನಿಗಳಲ್ಲಿ ಇದೆ.
ಇದೊಂದು ರಕ್ತಸಿಕ್ತ ಕಥೆ ಎಂಬ ಸುಳಿವು ಕೊಟ್ಟಿದ್ದ ಚಿತ್ರತಂಡ, ಎರಡು ಪೋಸ್ಟರುಗಳಲ್ಲೂ ಅದನ್ನೇ ಹೇಳುತ್ತಿದೆ. ಆದರೆ ಡೈರೆಕ್ಟರ್ ಹೇಳುತ್ತಿರುವುದು ಬೇರೆ.
ಯುವ ರಾಜ್ಕುಮಾರ್ ನಟನೆಯ ಎರಡನೇ ಸಿನಿಮಾ ಎಕ್ಕ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶಕ. ಪಿಆರ್ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲಮ್ಸ್ ನಿರ್ಮಾಣದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಅಶ್ವಿನಿ ಪುನೀತ್, ಜಯಣ್ಣ-ಭೋಗೇಂದ್ರ ಹಾಗೂ ಕಾರ್ತಿಕ್ ಗೌಡ-ಯೋಗಿ ಜಿ ರಾಜ್ ನಿರ್ಮಾಪಕರಾಗಿದ್ದಾರೆ.



