ಐಎಎಸ್ ರೋಹಿಣಿ ಸಿಂಧೂರಿ ಹಾಗೂ ಐಪಿಎಲ್ ರೂಪಾ ಮೌದ್ಗಿಲ್ ನಡುವಿನ ಹೋರಾಟಕ್ಕೆ ಕಾನೂನು ಸಮರಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಐಪಿಎಸ್ ರೂಪಾ ಮೌದ್ಗಿಲ್ ವಿರುದ್ಧ ಒಂದು ಹಂತದ ಕಾನೂನು ಹೋರಾಟದಲ್ಲಿ ರೋಹಿಣಿ ಸಿಂಧೂರಿ ಗೆದ್ದಿದ್ದಾರೆ. ಅದರ ಮುಂದುವರಿದ ಭಾಗವಾಗಿ ರೂಪಾ ಮೌದ್ಗಿಲ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಗೂ ಸುಪ್ರೀಂಕೋರ್ಟ್ ತಾತ್ಕಾಲಿಕ ಬ್ರೇಕ್ ಹಾಕಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ್ದ, ವಿವಾದಾಸ್ಪದ ಪೋಸ್ಟ್‌ಗಳನ್ನು ತೆಗೆಯಲು ಸುಪ್ರೀಂಕೋರ್ಟ್ ಸೂಚನೆ ಕೊಟ್ಟಿತ್ತು. ಆದೇಶಕ್ಕೆ ಅನುಗುಣವಾಗಿ ರೂಪಾ ಅವರು ಪ್ರಮಾಣಪತ್ರ ಸಲ್ಲಿಸಿದ ನಂತರ, ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ವಿಚಾರಣೆ ವೇಳೆ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿಲ್ಲದ ಹೇಳಿಕೆಗಳು ಹಾಗೂ ಅಧಿಕಾರಿಯ ವಿರುದ್ಧದ ತನ್ನ ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತೆಗೆದುಹಾಕಿದ್ದೇನೆ ಎಂದು ರೂಪಾ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಇದನ್ನು ದಾಖಲೆಯಲ್ಲಿ ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯವು, ಮಧ್ಯಂತರ ಕ್ರಮವಾಗಿ ಮಾನನಷ್ಟ ಮೊಕದ್ದಮೆಗೆ ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿದೆ.
ಐಎಎಸ್ ಅಧಿಕಾರಿಯಾಗಿರುವ ರೋಹಿಣಿ ಸಿಂಧೂರಿಯವರ ಖಾಸಗಿ ಫೋಟೋಗಳನ್ನು ರೂಪಾ ಮೌದ್ಗಿಲ್ ಬಹಿರಂಗಪಡಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಹಲವು ಆರೋಪಗಳನ್ನೂ ಮಾಡಿದ್ದರು. ಫೆಬ್ರವರಿ 18 ರಂದು ರೋಹಿಣಿ ಗಮನಿಸಿದ್ದರು. ಫೆಬ್ರವರಿ 21ರಂದು ಲೀಗಲ್ ನೋಟಿಸ್ ನೀಡಿದ್ದರು. ಇದು ಇಬ್ಬರ ನಡುವೆ ಸಾರ್ವಜನಿಕ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತು. ಇದರಿಂದಾಗಿ ಈ ಇಬ್ಬರೂ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡುವಂತಾಗಿತ್ತು.
ರೂಪಾ ಮೌದ್ಗಿಲ್ ಅವರು ತಮಗೆ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಮತ್ತು ತನ್ನ ಪ್ರತಿಷ್ಠೆಗೆ ಧಕ್ಕೆ ತಂದುದಲ್ಲದೆ ತನಗೆ ಮಾನಸಿಕ ಯಾತನೆ ಉಂಟುಮಾಡಿದ್ದಕ್ಕಾಗಿ 1 ಕೋಟಿ ರೂ.ಗಳ ಪರಿಹಾರ ನೀಡಬೇಕು ಎಂದು ರೋಹಿಣಿ ಸಿಂಧೂರಿ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 24 ರಂದು ರೋಹಿಣಿ ಸಲ್ಲಿಸಿದ್ದ ಖಾಸಗಿ ಮೊಕದ್ದಮೆಯ ವಿಚಾರಣೆ ನಡೆಸಿದ ಬೆಂಗಳೂರು ನ್ಯಾಯಾಲಯು ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವಂತೆ ಆದೇಶಿಸಿತ್ತು. ಇದನ್ನು ರದ್ದುಗೊಳಿಸುವಂತೆ ಕೋರಿ ರೂಪಾ ಹೈಕೋರ್ಟ್ ಮೊರೆ ಹೋದರು. ಆಗಸ್ಟ್ 21ರಂದು ಕರ್ನಾಟಕ ಹೈಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ರೂಪಾ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಸುಪ್ರೀಂ ಕೋರ್ಟ್ ಪ್ರಕರಣದಲ್ಲಿ ರಾಜೀ ಸಂಧಾನಕ್ಕೆ ಮುಂದಾಗುವಂತೆ ಶಿಫಾರಸು ಮಾಡಿತ್ತು. ಇಂತಹ ಅಧಿಕಾರಿಗಳ ನಡುವಿನ ಸಾರ್ವಜನಿಕ ವೈಮನಸ್ಸು ಸರ್ಕಾರ ಮತ್ತು ಅದರ ಪ್ರತಿಷ್ಠೆಗೆ ಅಪಮಾನಕಾರಿ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಅದಾದ ಒಂದು ದಿನದ ನಂತರ, ಡಿಸೆಂಬರ್ 14 ರಂದು ಸುಪ್ರೀಂ ಕೋರ್ಟ್ ರೋಹಿಣಿ ವಿರುದ್ಧದ ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟುಗಳನ್ನು ತೆಗೆದುಹಾಕುವುದಾಗಿ ಮತ್ತು ಕ್ಷಮೆಯಾಚಿಸುವುದಾಗಿ ಭರವಸೆ ನೀಡುವಂತೆ ರೂಪಾ ಅವರಿಗೆ ತಾಕೀತು ಮಾಡಿತ್ತು. ಈಗ ರೂಪಾ ಅವರು ಕೋರ್ಟ್ ಆದೇಶವನ್ನು ಪಾಲಿಸಿದ್ದರ ಪರಿಣಾಮ, ರೂಪಾ ಅವರ ವಿರುದ್ಧದ ಮಾನನಷ್ಟ ಮೊಕದ್ದಮೆಗೂ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಪ್ರಕರಣವನ್ನು ಅಧಿಕಾರಿಗಳ ಮಧ್ಯೆಯೇ ಇತ್ಯರ್ಥ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.



