ಒಬ್ಬರು ಐಪಿಎಸ್. ಇನ್ನೊಬ್ಬರು ಐಎಎಸ್. ಇಬ್ಬರು ಅಧಿಕಾರಿಗಳ ನಡುವಿನ ವಾಗ್ವಾದ, ಆರೋಪ-ಪ್ರತ್ಯಾರೋಪಗಳು ಈಗ ಸುಪ್ರೀಂಕೋರ್ಟ್ ಅಂಗಳದಲ್ಲಿವೆ. ಹೆಚ್ಚೂ ಕಡಿಮೆ ಒಂದು ವರ್ಷದಿಂದ ನಡೆಯುತ್ತಿದ್ದ ಸಮರ ಈಗ ಮುಗೀತು.. ಇನ್ನೇನು ಕೊನೆಯಾಯಿತು.. ಕೊನೆಗೂ ಅಂತ್ಯ ಕಂಡಿತು ಎಂದು ಹೇಳುವಂತಿಲ್ಲ. ಇದೀಗ ಮತ್ತೊಮ್ಮೆ ಕಲಹದ ವಾದ-ಪ್ರತಿವಾದ ನಡೆದಿದೆ. ಇಬ್ಬರೂ ಅಧಿಕಾರಿಗಳು ಪಟ್ಟು ಸಡಿಲಿಸದೇ ವಾದ ಮಂಡಿಸಿದ್ದಾರೆ. ಕರ್ನಾಟಕದ ಡಬಲ್ ಆರ್ ಲೇಡಿ ವಾರ್ ಮತ್ತೆ ಸದ್ದು ಮಾಡಿದೆ. ಇಬ್ಬರು ಮಹಿಳಾ ಅಧಿಕಾರಿಗಳ ಬಹಿರಂಗ ಕದನ ಸದ್ಯ ಸುಪ್ರೀಂ ಕೋರ್ಟ್‌ವರೆಗೂ ತಲುಪಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮಾರ್ಧನಿಸಿದ್ದ ರೂಪಾ-ರೋಹಿಣಿ ಕಲಹ ಸುಪ್ರೀಂ ಕೋರ್ಟ್ ಹೊಸ್ತಿಲಲ್ಲೂ ಇನ್ನೂ ಇತ್ಯರ್ಥ ಕಂಡಿಲ್ಲ.
ಐಪಿಎಸ್ ಅಧಿಕಾರಿ ಡಿ. ರೂಪಾ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪರ್ಸನಲ್ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು. ತಮ್ಮ ಖಾಸಗಿ ಚಿತ್ರಗಳನ್ನ ಪೋಸ್ಟ್ ಮಾಡಿದ್ದಕ್ಕೆ ರೂಪಾ ವಿರುದ್ಧ ರೋಹಿಣಿ ಕೆರಳಿ ಕೆಂಡವಾದ್ರು. ಮಾನನಷ್ಟ ಮೊಕದ್ದಮೆ ಹೂಡಿದ್ರು. ಈಗ ರೂಪಾ ಅವರಿಗೆ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳುವಂತೆ ಹೇಳಲಾಗಿತ್ತು. ಆದರೆ ರೂಪಾ ಮೌದ್ಗೀಲ್ ಪೋಸ್ಟುಗಳನ್ನ ಡಿಲೀಟ್ ಮಾಡಿದ್ದರೂ ಕ್ಷಮೆ ಕೇಳಿಲ್ಲ. ಇದೀಗ ರೂಪಾ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ರೋಹಿಣಿ ಪಟ್ಟು ಹಿಡಿದಿದ್ದಾರೆ. ನ್ಯಾಯಮೂರ್ತಿ ಎ.ಎಸ್ ಓಕಾ ಎದುರು ವಿಚಾರಣೆ ನಡೆದಿದೆ. ವಿಚಾರಣೆಯ ಆಯ್ದ ಅಂಶ, ವಾದ-ಪ್ರತಿವಾದಗಳ ಮುಖ್ಯಾಂಶಗಳು ಇವು.
ರೋಹಿಣಿ ಪರ : ನನ್ನ ವಿರುದ್ಧ ಮಾಡಿರುವ ಅವಹೇಳನಕಾರಿ ಪೋಸ್ಟ್‌ಗಳನ್ನು ತೆಗೆದು ಹಾಕಬಹುದು. ಈ ಘಟನೆಯಿಂದ ನನ್ನ ಕುಟುಂಬಕ್ಕೆ ಘಾಸಿಯಾಗಿದೆ. ಹೀಗಾಗಿ ಡಿ.ರೂಪಾ ಬೇಷರತ್ ಕ್ಷಮೆಯಾಚಿಸಬೇಕು.
ರೂಪಾ ಮೌದ್ಗೀಲ್ ಪರ ವಕೀಲ : ರೋಹಿಣಿ ಸಿಂಧೂರಿ ಕೂಡಾ ಅವಹೇಳನಕಾರಿ ಮಾತನಾಡಿದ್ದಾರೆ. ಬುದ್ಧಿ ಭ್ರಮಣೆಯಾಗಿದೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ.
ರೋಹಿಣಿ ಸಿಂಧೂರಿ ಪರ ವಕೀಲ : ಹೌದು ಬುದ್ಧಿ ಭ್ರಮಣೆಯಾದವರು ಈ ರೀತಿ ಪೋಸ್ಟ್ ಮಾಡುತ್ತಾರೆ. ಅವರಿಗೆ ಬುದ್ದಿ ಭ್ರಮಣೆಯಾಗಿದೆ ಎಂದು ಹೇಳಿಲ್ಲ.
ನ್ಯಾ.ಎ.ಎಸ್. ಓಕಾ: ನೀವು ಒಂದು ನಿರ್ಧಾರಕ್ಕೆ ಬರಬೇಕು. ಇದಕ್ಕೆ ಒಂದು ತಿಂಗಳ ಸಮಾವಕಾಶ ನೀಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಿಂದ ಎಲ್ಲ ಪೋಸ್ಟ್‌ಗಳನ್ನ ಡಿಲೀಟ್ ಮಾಡಬೇಕು.
ರೋಹಿಣಿ ಸಿಂಧೂರಿ : ಈ ರೀತಿಯ ಮಾನಹಾನಿ ಮಾಡಿದರೆ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದು ಹೇಗೆ?
ನ್ಯಾ.ಎ.ಎಸ್. ಓಕಾ: ನಿಮಗೆ ಒಳ್ಳೆಯ ಭವಿಷ್ಯವಿದೆ. ಉಜ್ವಲ ಭವಿಷ್ಯದ ಕಾರಣದಿಂದ ಪ್ರಕರಣವನ್ನ ಇತ್ಯರ್ಥ ಮಾಡಲು ಯೋಚಿಸಿದ್ದೇವೆ. ಆದ್ರೆ, ಭಾವನೆಗಳು ಅಧಿಕವಾಗಿದ್ದರೆ ನಾವು ಒತ್ತಾಯಿಸಲು ಸಾಧ್ಯವಿಲ್ಲ.
ರೋಹಿಣಿ ಸಿಂಧೂರಿ : ನಮಗೆ ಉಜ್ವಲ ಭವಿಷ್ಯವಿರಬಹುದು. ಆದ್ರೆ ಈಗ ಜನರು ನನ್ನನ್ನು ಒಂದು ರೀತಿಯಲ್ಲಿ ನೋಡುತ್ತಿದ್ದಾರೆ. ನಾನು ಮೌನವಾಗಿರಲು ಸಾಧ್ಯವಿಲ್ಲ.
ನ್ಯಾ.ಎ.ಎಸ್. ಓಕಾ: ಮೌನವಾಗಿರಲು ಅಥವಾ ಹಿಂತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತಿಲ್ಲ. ಇಬ್ಬರೂ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.
ವಾದ ಪ್ರತಿವಾದವನ್ನ ಆಲಿಸಿದ ನ್ಯಾಯಮೂರ್ತಿ ಎ.ಎಸ್ ಓಕಾ ಈಗಾಗಲೇ ಆರ್-ಆರ್ ಪ್ರಕರಣದಲ್ಲಿ ನೀಡಲಾಗಿರುವ ಮಧ್ಯಂತರ ಆದೇಶ ಮುಂದುವರಿಸುವಂತೆ ಸೂಚಿಸಿದ್ದಾರೆ. ಫೆಬ್ರವರಿ 16ರಂದು ವಿಚಾರಣೆಯ ಮುಂದಿನ ಡೇಟ್ ನಿಗದಿಯಾಗಿದೆ.



