ಉತ್ತರ ಪ್ರದೇಶದಲ್ಲಿ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಮುಂಬರುವ ಜನವರಿಯಲ್ಲಿ ಅದ್ದೂರಿಯಾಗಿ ಜರುಗಲಿದೆ. ಈಗಾಗಲೇ ಜಗತ್ತಿನ 50 ದೇಶಗಳಿಗೆ ಈ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ರಾಮ್ ಲೀಲಾ ವಿಗ್ರಹದ ಪ್ರತಿಷ್ಠಾಪನೆ ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯಲಿದೆ. ಈ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ದೇಶಾದ್ಯಂತ ಸುಮಾರು ೧೦ ಸಾವಿರಕ್ಕೂ ಹೆಚ್ಚು ಸೆಲಬ್ರಟಿಗಳಿಗೆ ಆಹ್ವಾನ ನೀಡಲಾಗಿದೆ.
ಕನ್ನಡ ಚಿತ್ರರಂಗದಿಂದ ರಿಷಬ್ ಶೆಟ್ಟಿಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ ಎಂಬ ಸುದ್ದಿ ಬಂದಿತ್ತು. ಇದೀಗ ನಟ ಯಶ್ ಅವರಿಗೂ ಆಹ್ವಾನ ಬಂದಿರುವ ಸುದ್ದಿ ಹೊರಬಿದ್ದಿದೆ. ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಆಹ್ವಾನ ನೀಡಲಾಗಿದೆಯಂತೆ.
ಕರ್ನಾಟಕದಿಂದ ಚಿತ್ರರಂಗದವರಲ್ಲಿ ರಿಷಬ್ ಶೆಟ್ಟಿ ಮತ್ತು ಯಶ್ ಅವರಿಗೆ ಈ ಆಹ್ವಾನ ಸಿಕ್ಕಿದೆ ಎನ್ನಲಾಗಿದೆ. ಇನ್ನುಳಿದಂತೆ ಚಿತ್ರರಂಗದವರೂ ಆಗಿರುವ ನಟ ಜಗ್ಗೇಶ್, ಸುಮಲತಾ ಉದ್ಘಾಟನೆಯ ಅತಿಥಿಗಳಾಗಬಹುದು. ತಮಿಳು, ತೆಲುಗು ಮಲಯಾಳಂ ಚಿತ್ರರಂಗದವರಲ್ಲಿ ಹಲವರಿಗೆ ಆಹ್ವಾನ ಸಿಕ್ಕಿದೆ. ರಜನಿಕಾಂತ್, ಮೋಹನ್ ಲಾಲ್, ಚಿರಂಜೀವಿ, ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ಲೆಜೆಂಡ್ ನಟರಿಗೆ ಈಗಾಗಲೇ ಆಹ್ವಾನ ಹೋಗಿರುವ ಮಾಹಿತಿ ಇದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಶೃಂಗೇರಿಯ ವಿಭುಶೇಖರ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ, ಸಿದ್ಧಗಂಗಾ, ಪುತ್ತೂರು, ಅದಮಾರು, ಶ್ರವಣ ಬೆಳಗೋಳ, ಬೇಲಿಮಠ, ರಂಭಾ ಪುರಿ ಹೀಗೆ ಹಲವು ಮಠಗಳ ಸ್ವಾಮೀಜಿಗಳಿಗೆ ಹಾಗೂ ಸದ್ಗುರು ಜಗ್ಗಿ ವಾಸುದೇವ್, ರವಿಶಂಕರ್ ಗುರೂಜಿ ಅವರಿಗೆ ಆಹ್ವಾನ ಹೋಗಿದೆ ಎನ್ನಲಾಗಿದೆ.
ಭಾರತೀಯರ ಶತಮಾನಗಳ ಕನಸಾದ ರಾಮಮಂದಿರ ಮುಂದಿನ ತಿಂಗಳು ಉದ್ಘಾಟನೆಯಾಗುತ್ತಿದೆ. ಮೊಘಲರ ಔರಂಗಜೇಬನ ಕಾಲದಲ್ಲಿ ಅಯೋಧ್ಯೆಯಲ್ಲಿನ ರಾಮಮಂದಿರವನ್ನು ಕೆಡವಿ ಬಾಬ್ರಿ ಮಸೀದಿ ಕಟ್ಟಲಾಗಿತ್ತು. ಸತತ ಹೋರಾಟಗಳ ಫಲವಾಗಿ ಕಾನೂನಾತ್ಮಕವಾಗಿ ಗೆದ್ದು, ಇದೀಗ ರಾಮಮಂದಿರ ಉದ್ಘಾಟನೆಯಾಗುತ್ತಿದೆ. ರಾಮಮಂದಿರ ಉದ್ಘಾಟನೆಗೆ ಇನ್ನೂ ಹಲವರಿಗೆ ಆಹ್ವಾನ ಲಭಿಸಲಿದ್ದು, ವಿವರಗಳು ಇನ್ನಷ್ಟೇ ಗೊತ್ತಾಗಬೇಕಿದೆ.



