ಕಾಂತಾರದಲ್ಲಿ ದೈವ ಮಾಯವಾಗುವ ಸೀನ್ ನೋಡಿದ್ದೀರಲ್ಲ.. ಅಲ್ಲಿಯೇ ಏಕೆ ಮಾಯವಾದ.. ಆ ಜಾಗದ ಮಹತ್ವ ಏನು ಎನ್ನುವಲ್ಲಿಂದಲೇ ಸಿನಿಮಾ ಶುರುವಾಗುತ್ತದೆ. ಕಾಂತಾರದ ಮೂಲ ಇರುವುದೇ ಈಶ್ವರನ ಹೂದೋಟದಲ್ಲಿ. ಅಲ್ಲಿನ ಕಾಂತಾರದಲ್ಲಿ. 3 ವರ್ಷಗಳ ಹಿಂದೆ ಕಥೆ ಶುರುವಾಗುವುದೇ ದೈವದ ಕಲ್ಲಿನಿಂದ. ಈ ಕಾಂತಾರದಲ್ಲಿ ಕಥೆ ಆರಂಭವಾಗುವುದೇ.. ಆ ದೈವದ ಕಲ್ಲಿನ ಹುಟ್ಟಿನ ಸ್ಥಳದಿಂದ. ಅದೇ ಕಾಂತಾರ.
ಬಾಂಗ್ರಾ ರಾಜ ಮನೆತನ ಹಾಗೂ ಈಶ್ವರ ಹೂದೋಟದ ಕಥೆಯಿಂದ ಶುರುವಾಗುತ್ತದೆ. ಅರಸ ರಾಜಶೇಖರ, ಕುಲಶೇಖರರ ನಡುವೆ ಬೆರ್ಮೆಯ ಹೋರಾಟದ ಕಥೆ ಶುರುವಾಗುವುದೇ ರೋಚಕ. ಬಾಂಗ್ರಾದ ಅರಸ ಕಾಂತಾರದ ಮೇಲೆ ಕಣ್ಣು ಹಾಕುತ್ತಾನೆ. ಪ್ರಾಣ ಬಿಡುತ್ತಾನೆ. ಅವನ ಮೊಮ್ಮಗ ಕಾಂತಾರಕ್ಕೆ ಕಾಲಿಡುತ್ತಾನೆ. ಅಲ್ಲಿ ಕಾಂತಾರದ ರಕ್ಷಕ ಬೆರ್ಮೆ. ಇಂಟರ್ʻವೆಲ್ ಹೊತ್ತಿಗೆ ಬರುವ ಹುಲಿ ಸೀನ್.. ನೆಮ್ಮದಿಯಾಗಿ ಕುಳಿತು ಎಂಜಾಯ್ ಮಾಡುತ್ತಿದ್ದ ಪ್ರೇಕ್ಷಕರನ್ನು ದಿಗ್ಗನೆ ಎದ್ದು ಕೂರುವಂತೆ ಮಾಡುತ್ತದೆ. ಈ ದೃಶ್ಯವೇ ಕ್ಲೈಮಾಕ್ಸ್ ಎಂಬಂತೆ ಫೀಲ್ ಆಗುತ್ತದೆ. ರಾಜಮನೆತನಕ್ಕೆ ಕಾಂತಾರ ಕಾಡು ಬೇಕು. ಕಾಂತಾರದವರಿಗೆ ರಾಜನ ವ್ಯಾಪಾರದಲ್ಲಿ ಪಾಲು ಬೇಕು. ಗುಳಿಗ, ದೈವಗಳು, ರಾಜಮನೆತನ, ಸಾಂಭಾರು ಪದಾರ್ಥಗಳ ಮಾರಾಟ, ವಿದೇಶಿಗರು, ಬಂದರು, ವ್ಯಾಪಾರಗಳ ಸುತ್ತ ಕಥೆ ನಡೆಯುತ್ತಾ ಹೋಗುತ್ತದೆ.
ಫಸ್ಟ್ ಹಾಫ್‌ನಲ್ಲಿ, ದ್ವಿತೀಯಾರ್ಧಕ್ಕೆ ಕಥೆ ಹೊಂದಿಸುತ್ತಾ.. ವೇದಿಕೆ ಸೃಷ್ಟಿಸುವ ರಿಷಬ್ ಶೆಟ್ಟಿ.. ಸೆಕೆಂಡ್ ಹಾಫ್ ಆವಾಹಿಸಿಕೊಂಡು ಬಿಡುತ್ತಾರೆ. ಹೀಗಾಗಿ ಫಸ್ಟ್ ಹಾಫ್.. ಸೆಕೆಂಡ್ ಹಾಫ್ ಎಂದು ಪ್ರತ್ಯೇಕವಾಗಿ ನೋಡಬಾರದು. ಒಟ್ಟಾರೆಯಾಗಿ ಸಿನಿಮಾ ನೋಡಬೇಕು.
ನಡುನಡುವೆ ತಮಾಷೆಯೂ ಇದೆ. ಕೀಟಲೆಯೂ ಇದೆ. ಪ್ರೀತಿಯೂ ಇದೆ. ಇವರೆಲ್ಲರ ಮಧ್ಯೆ ದೈವ ಬರುವುದೇ ರೋಚಕ ಅಧ್ಯಾಯ. ಅದನ್ನು ನೋಡುಗರೂ ಮೆಚ್ಚುವಂತೆ ಕಟ್ಟಿಕೊಟ್ಟಿದ್ದಾರೆ ರಿಷಬ್ ಶೆಟ್ಟಿ. ನಗಿಸುವ ಕೆಲಸವನ್ನು ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್, ರಾಕೇಶ್ ಶೆಟ್ಟಿ ವಹಿಸಿಕೊಂಡಿದ್ದಾರೆ.
ಕನಕವತಿಯಾಗಿ ರುಕ್ಮಿಣಿ ಸೌಂದರ್ಯ ಮತ್ತು ಅಭಿನಯ ಎರಡಲ್ಲೂ ವ್ಹಾವ್ ಎನಿಸುತ್ತಾರೆ. ಅಭಿನಯದಲ್ಲಿಯೂ ಪ್ರಬುದ್ಧತೆ ಇದೆ. ಇಲ್ಲಿಯೂ ಸಿನಿಮಾ ಪೀಕ್‌ಗೆ ಹೋಗುವುದು ಕ್ಲೈಮಾಕ್ಸ್ ಹೊತ್ತಿಗೆ. ಕೊನೆಯ ಅರ್ಧ ಗಂಟೆ ಪ್ರೇಕ್ಷಕ ತಾನು ಥಿಯೇಟರಿನಲ್ಲಿದ್ದೇನೆ ಎನ್ನುವುದನ್ನೇ ಮರೆತುಬಿಡುತ್ತಾನೆ. ಕಾರಣ ದೃಶ್ಯವೈಭವ.
ಕಾಂತಾರದಲ್ಲಿ ಲೆಕ್ಕ ಹಾಕಿ ನೋಡಿದರೆ 12 ಹಾಡುಗಳಿವೆ. ಕಾಂತಾರದ ʻಕರ್ಮʼ ಸಾಂಗ್ ಹಾಗೂ ʻವರಾಹರೂಪಂʼ ಟ್ಯೂನ್ ಮತ್ತೆ ಬಳಸಲಾಗಿದೆ. ಹಾಡುಗಳು ಹೃದಯದಲ್ಲಿ ನೆಲೆ ಕಟ್ಟುವುದಕ್ಕೆ ಇನ್ನೂ ಸಮಯ ಬೇಕೇನೋ.. ಹಾಡುಗಳಿಗಿಂತ ಬ್ಯಾಕ್ ಗ್ರೌಂಡ್ ಮ್ಯೂಸಿಕ್‌ನಲ್ಲಿ ಸ್ಕೋರ್ ಮಾಡಿದ್ದಾರೆ ಅಜನೀಶ್ ಲೋಕನಾಥ್. ಜನಪದ ಹಾಡುಗಳನ್ನು ಸದ್ಭಳಕೆ ಮಾಡಿಕೊಂಡಿದ್ದಾರೆ.
ಚಿತ್ರದುದ್ದಕ್ಕೂ ದೃಶ್ಯ ವೈಭವ ಮೆರೆಯುತ್ತದೆ. ಕಥೆಗೆ ತಕ್ಕಂತೆ ಗ್ರಾಫಿಕ್ಸ್ ಇದೆ. ಕಥೆಗೆ ಎಷ್ಟು ಬೇಕೋ ಅಷ್ಟೇ ಇದೆ. ವಿಎಫ್‌ಎಕ್ಸ್‌ನ್ನು ಅತಿಯಾಗಿ ತುರುಕಿ ಇಲ್ಲ. ಕಾಡುಪಾಪಗಳು, ಹುಲಿ.. ಎಲ್ಲವೂ ಗ್ರಾಫಿಕ್ಸ್ ಎಂದು ಪದೇ ಪದೇ ಮನಸ್ಸಿಗೆ ಹೇಳಬೇಕು. ಇಲ್ಲದಿದ್ದರೆ ನಿಜ ಎಂದುಕೊಳ್ತಾನೆ ಪ್ರೇಕ್ಷಕ.
ರಿಷಬ್ ಶೆಟ್ಟಿಯ ಅಷ್ಟೂ ಶ್ರಮ ಮತ್ತು ಪ್ರತಿಭೆಯನ್ನು ಅರವಿಂದ ಕಶ್ಯಪ್ ಅದ್ಭುತವಾಗಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸಾಹಸ ದೃಶ್ಯಗಳನ್ನಂತೂ ಪ್ರೇಕ್ಷಕ ನೆಮ್ಮದಿಯಾಗಿ ನೋಡುವುದಕ್ಕೆ ಬಿಡುವುದಿಲ್ಲ. ನೋಡುತ್ತಿರುವುದು ಸಿನಿಮಾ ಅಂತಾ ಗೊತ್ತಿದ್ರೂ.. ಉಸಿರು ಟೈಟ್ ಮಾಡ್ಕೊಂಡು ನೋಡ್ತಾನೆ ಪ್ರೇಕ್ಷಕ.
ಕಾಸ್ಟ್ಯೂಮ್ ವಿಷಯದಲ್ಲಿ ಪ್ರಗತಿ ಶೆಟ್ಟಿ ಗೆದ್ದಿದ್ದಾರೆ. ಕದಂಬರ ಕಾಲದ ಕಥೆಗೆ ತಕ್ಕಂತೆ ವರ್ಕ್ ಔಟ್ ಮಾಡಿದ್ದಾರೆ.
ತಪ್ಪುಗಳೇ ಇಲ್ಲ ಅಂತಾ ಖಂಡಿತಾ ಹೇಳಲ್ಲ. ಸಣ್ಣ ಪುಟ್ಟ ತಪ್ಪುಗಳೂ ಇವೆ. ಅವನ್ನೆಲ್ಲ ಧಾರಾಳವಾಗಿ ಕ್ಷಮಿಸಿಬಿಡಬಹುದು. ಏನವು… ಏನವು.. ಅಂತಾ ಕೇಳೋಕ್ ಹೋಗ್ಬೇಡಿ. ಅವು ಕೇವಲ ಸಿನಿಮಾ ವಿಮರ್ಶಕರಿಗೆ ಕಾಣಿಸುತ್ವೆ. ಆರಾಮ್ ಆಗಿ ಎಂಜಾಯ್ ಮಾಡುವ ನಾರ್ಮಲ್ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ.



