ಯಶಸ್ಸು ಸಿಕ್ಕ ನಂತರ ಹತ್ತಿರದವರು ದೂರವಾಗುತ್ತಾರಾ.. ಗೊತ್ತಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಹಾಗೆ ಅನ್ನಿಸೋದು ಸತ್ಯ. ಈಗ ನೋಡಿ.. ರಿಷಬ್ ಶೆಟ್ಟಿಯವರ ಕಾಂತಾರ ಸೂಪರ್ ಡ್ಯೂಪರ್ ಹಿಟ್ ಆಗಿದೆ. ಬ್ಲಾಕ್ ಬಸ್ಟರ್ ಆಗುವ ಹಾದಿಯಲ್ಲಿದೆ. ಆದರೆ.. ಅವರೇ ಇಲ್ಲ. ಜನ ಹಾಗೂ ಅಭಿಮಾನಿಗಳು ಹುಡುಕುತ್ತಿರುವುದು ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಅವರನ್ನು.
ಕಾಂತಾರ ಪ್ರೀಮಿಯರ್ ಶೋ ನಂತರ ಪತ್ನಿ ಪ್ರಗತಿ ಶೆಟ್ಟಿ ಭಾವುಕರಾಗಿ ಪ್ರೇಕ್ಷಕರ ಮಧ್ಯೆಯೇ ಪತಿಯನ್ನು ಅಪ್ಪಿಕೊಂಡಿದ್ದನ್ನು ನೋಡಿದವರಿಗೆ ಖುಷಿಯಾಗಿದ್ದೇನೋ ನಿಜ. ಆದರೆ.. ರಕ್ಷಿತ್ ಶೆಟ್ಟಿ ಎಲ್ಲಿ ಎಂಬ ಪ್ರಶ್ನೆ ಮೂಡಿದ್ದೂ ನಿಜ. ಕಾಂತಾರ-01 ಸಕ್ಸಸ್ ಆಗಿದೆ, ನಿಜ. ಆದರೆ, ರಿಷಬ್ ಶೆಟ್ಟಿಯವರ ಮೊದಲ ಕಾಂತಾರವನ್ನು ಅದ್ಭುತ ಎಂದು ಗುರುತಿಸಿದ ಮೊದಲಿಗ ರಕ್ಷಿತ್ ಶೆಟ್ಟಿ. ಕಾಂತಾರದ ಕ್ಲೈಮಾಕ್ಸ್ ಮುಗಿಯುತ್ತಿದ್ದಂತೆಯೇ ಥಿಯೇಟರಿನ ಕೊನೆಯ ಸಾಲಿಂದ ಓಡೋಡಿ ಬಂದು ರಿಷಬ್ ಶೆಟ್ಟಿಯನ್ನು ಅಪ್ಪಿಕೊಂಡಿದ್ದನ್ನು ಮರೆಯುವಂತೆಯೇ ಇಲ್ಲ. ಅಂತಹ ರಕ್ಷಿತ್ ಶೆಟ್ಟಿ ಕಾಂತಾರ-01 ಸಿನಿಮಾ ನೋಡಿಲ್ಲವಾ.. ಯಾಕೆ ಪ್ರೀಮಿಯರ್ ಶೋಗೆ ಬಂದಿಲ್ಲ ಎಂಬ ಪ್ರಶ್ನೆಗಳು ಕಾಡುವುದು ಸಹಜ.
ಆದರೆ, ರಿಷಬ್ ಮತ್ತು ರಕ್ಷಿತ್ ಮಧ್ಯೆ ಯಾವ ಸಮಸ್ಯೆಯೂ ಆಗಿಲ್ಲ. ಅವರಿಬ್ಬರೂ ಈಗಲೂ ಮೊದಲಿನಂತೆಯೇ ಇದ್ದಾರೆ. ಕಾಂತಾರ ಸಿನಿಮಾ ಪ್ರಮೋಷನ್ ವೇಳೆ ಕೂಡಾ ರಿಷಬ್ ಅವರಿಗೆ ಎಂದಿನಂತೆ ರಕ್ಷಿತ್ ಶೆಟ್ಟಿ ಕುರಿತ ಪ್ರಶ್ನೆ ಬಂದಾಗ ʻಅವನು ನನಗೆ ಸ್ನೇಹಿತ, ಸಹೋದರ ಎಂಬ ಪ್ರೀತಿಗಿಂತ ಹೆಚ್ಚುʼ ಎಂದಿದ್ದರು ರಿಷಬ್ ಶೆಟ್ಟಿ. ಪತ್ನಿ ಪ್ರಗತಿ ಶೆಟ್ಟಿಯೂ ಅಷ್ಟೇ, ರಕ್ಷಿತ್ ಶೆಟ್ಟಿ ಅವರನ್ನು ಅಣ್ಣ ಎಂದೇ ಗೌರವಿಸುತ್ತಾರೆ. ಟ್ರೇಲರ್ ಬಂದಾಗ ಹೆಮ್ಮೆಯಿಂದ ಗೆಳೆಯನ ಸಿನಿಮಾ ಮೆಚ್ಚಿಕೊಂಡು ಟ್ವೀಟ್ ಮಾಡಿದ್ದ ರಕ್ಷಿತ್ ಶೆಟ್ಟಿ, ಪ್ರೀಮಿಯರ್ ಶೋಗೆ ಬಂದಿಲ್ಲ ಎಂಬ ಕಾರಣಕ್ಕೆ ಕಥೆ ಕಟ್ಟುವ ಅಗತ್ಯ ಇಲ್ಲ.
ಇನ್ನು ರಾಜ್ ಬಿ ಶೆಟ್ಟಿ ಅವರೂ ಅಷ್ಟೇ, ಒಂದು ಅಂತರ ಕಾಯ್ದುಕೊಂಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿರುವ ಸತ್ಯ. ಕಾಂತಾರದ ದೈವದ ಸೀನ್ ಚಿತ್ರೀಕರಿಸಿದ್ದವರೇ ರಾಜ್ ಬಿ ಶೆಟ್ಟಿ. ಆದರೆ.. ಪದೇ ಪದೇ ದೈವದ ಸಿನಿಮಾ ಮಾಡುವುದು ರಾಜ್ ಬಿ ಶೆಟ್ಟಿಗೆ ಇಷ್ಟ ಇಲ್ಲವಂತೆ. ಆದರೆ.. ರಾಜ್ ಬಿ ಶೆಟ್ಟಿ ಅವರು ರಕ್ಷಿತ್ ಮತ್ತು ರಿಷಬ್ ಇಬ್ಬರಿಂದಲೂ ಡಿಸ್ಟೆನ್ಸ್ ಮೈಂಟೇನ್ ಮಾಡುತ್ತಿರುವುದು ಹೌದು. ಬಹಿರಂಗವಾಗಿ ಮಾತನಾಡುತ್ತಿಲ್ಲ, ಅಷ್ಟೆ.
ಇಷ್ಟಕ್ಕೂ ರಿಷಬ್ ಶೆಟ್ಟಿ ಮೊದಲು ನಿರ್ದೇಶಕರಾಗಿದ್ದೇ ರಕ್ಷಿತ್ ಶೆಟ್ಟಿ ಸಿನಿಮಾದಿಂದ. ರಿಕ್ಕಿ.
ನಟರಾಗಿ ಕಾಣಿಸಿಕೊಂಡಿದ್ದೂ ಅಷ್ಟೇ, ರಕ್ಷಿತ್ ಶೆಟ್ಟಿ ನಾಯಕನಾಗಿದ್ದ ಚಿತ್ರದಿಂದಲೇ. ತುಗ್ಲಕ್.
2016ರಲ್ಲಿ ರಿಕ್ಕಿ ಚಿತ್ರ ಬಿಡುಗಡೆಯಾಗಿದ್ದಾಗ ರಕ್ಷಿತ್ ಶೆಟ್ಟಿ ಹೀರೋ. ಹರಿಪ್ರಿಯಾ ಹೀರೋಯಿನ್. ಆದರೆ.. ಅಂದು ತಾನು ಹುಟ್ಟಿ ಬೆಳೆದೆ ಮಂಗಳೂರಿನಲ್ಲೇ ಅವರಿವರ ಕೈಕಾಲು ಹಿಡಿದು ಸಿನಿಮಾ ರಿಲೀಸ್ ಮಾಡಿಸಿದ್ದರು ರಿಷಬ್ ಶೆಟ್ಟಿ. ಅದಾದ ನಂತರ ಕಿರಿಕ್ ಪಾರ್ಟಿ ಚಿತ್ರಕ್ಕೂ ಅದೇ ಸಮಸ್ಯೆ ಎದುರಾಗಿದ್ದು ಹೌದು. ಆದರೆ ಆ ಸಿನಿಮಾ ಹಿಟ್ ಆಗಿತ್ತು. ಗೆರೆ ಬದಲಾಗಿತ್ತು. ಅಂದು ಒಂದೇ ಒಂದು ಶೋಗಾಗಿ ಬಿಗ್ ಸಿನಿಮಾಸ್ ಎದುರು ಕೈಮುಗಿದು ನಿಂತಿದ್ದರು. ಯಾರ್ ಯಾರದ್ದೋ ಕೈಕಾಲು ಹಿಡಿದಿದ್ದರು. ಕಿರಿಕ್ ಪಾರ್ಟಿ ಸೂಪರ್ ಹಿಟ್ ಆದ ಮೇಲೆ ರಿಷಬ್ ಶೆಟ್ಟಿ ಚರಿಷ್ಮಾ ಬದಲಾಗಿದ್ದೇನೋ ಹೌದು.
ಆದರೆ.. ಕಂಪ್ಲೀಟ್ ಚೇಂಜ್ ಆಗಿದ್ದು ಕಾಂತಾರದ ನಂತರ. ಈಗ ಕಾಂತಾರದ ಒಂದು ಶೋಗಾಗಿ ಅದೇ ಮಲ್ಟಿಪ್ಲೆಕ್ಸ್ʻಗಳು ಕಾದು ನಿಲ್ಲುತ್ತವೆ. ಕಾಲ ಬದಲಾಗುತ್ತದೆ.
ಆ ದಿನವನ್ನೂ ರಿಷಬ್ ಶೆಟ್ಟಿಯವರ ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ. ಅದನ್ನು ಕೂಡ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ರಿಷಬ್ ಶೆಟ್ಟಿ.
Rishab Shetty , ಇಂದು #ಕಾಂತಾರ ಬರೀ ಕನ್ನಡ ಭಾಷೆಯಲ್ಲೇ ವಿಶ್ವಾದ್ಯಂತ ರೀಲೀಸ್ ಮಾಡಿ, ನಮ್ ಕರ್ನಾಟಕದಲ್ಲೇ ಇನ್ನು ಕೆಲವು ಕಡೆ ಜನಗಳು (ಬೆಂಗಳೂರು ಹೊರತುಪಡಿಸಿ) ಟಿಕೆಟ್ ಸಿಗದೆ ಪರದಾಡುವಂತಾಗಿದೆ..



