ಕರ್ನಾಟಕದಲ್ಲಿ ಕಾಂಗ್ರೆಸ್ 224ರಲ್ಲಿ 135+01 ಗೆದ್ದಾಗ ಇದೆಲ್ಲ ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿತ್ತು. ಬಹುಮತಕ್ಕೆ ಬೇಕಿರುವ 113 ಸ್ಥಾನಗಳನ್ನು ಗೆಲ್ಲುವುದೇ ಕಷ್ಟ ಎನ್ನುವ ಪರಿಸ್ಥಿತಿಯಿಂದ ಕಾಂಗ್ರೆಸ್ ಸಲೀಸಾಗಿ ಗೆದ್ದು ಬಂದಿತ್ತು. ಈಗ ಆ ಸಂಖ್ಯೆ 140ಕ್ಕೆ ಹೋಗಿದೆ. ಕಾಂಗ್ರೆಸ್ಸಿನ ಮೂಲ ಮತಗಳ ಜೊತೆಗೆ ಮುಸ್ಲಿಂ ಸಮುದಾಯ 100ಕ್ಕೆ 100 ಪ್ರಮಾಣದಲ್ಲಿ ಕಾಂಗ್ರೆಸ್ಸಿಗೆ ವೋಟು ಹಾಕಿದ್ದು ಕೂಡಾ ಅದಕ್ಕೆ ಕಾರಣವಾಗಿತ್ತು. ಬಿಜೆಪಿ ಗೆಲ್ಲಬಾರದು ಎಂಬ ಉದ್ದೇಶದಿಂದ ಮುಸ್ಲಿಮರು ಒಗ್ಗಟ್ಟಾದರು ಎನ್ನುವುದನ್ನು ರಾಜಕೀಯ ತಜ್ಞರು ಒಪ್ಪಿಕೊಳ್ತಾರೆ. ಇದೇ ಮಾಡೆಲ್ ತೆಲಂಗಾಣದಲ್ಲೂ ಆಯ್ತು. ಅಲ್ಲಿಯೂ ಕಾಂಗ್ರೆಸ್ ಗೆಲ್ತು. ಆದರೆ.. ಇದಕ್ಕೆ ಮೊದಲ ಬಾರಿ ರಿವರ್ಸ್ ರಿಸಲ್ಟ್ ಸಿಕ್ಕಿದೆ. ಆ ಉತ್ತರ ಕೊಟ್ಟಿರುವುದು ಬಿಹಾರ.
ವಿಶೇಷ ಎಂದರೆ ಬಿಹಾರದಲ್ಲಿ ತೇಜಸ್ವಿ ಯಾದವ್ ಜೊತೆಗೆ ಯಾದವರು ಮತ್ತು ಮುಸ್ಲಿಮರು ಜೊತೆಯಲ್ಲಿದ್ದರು. ಫಲಿತಾಂಶವನ್ನು ನೋಡಿದರೆ RJD ಪಡೆದ ಮತ ಪ್ರಮಾಣದಲ್ಲಿ ಸ್ವಲ್ಪವೂ ಬದಲಾವಣೆ ಆಗಿಲ್ಲ. ಬಿಹಾರದಲ್ಲಿ ಬಿಜೆಪಿ ದೊಡ್ಡ ಪಕ್ಷ. 89 ಸ್ಥಾನ ಗೆದ್ದಿರುವ ಬಿಜೆಪಿ ಪಡೆದಿರುವ ಮತ ಶೇ.20.8. ಅಂದರೆ 1 ಕೋಟಿ 81 ಸಾವಿರ ಮತಗಳು. ಸ್ಪರ್ಧೆ ಮಾಡಿದ್ದು 101 ಕ್ಷೇತ್ರಗಳಲ್ಲಿ. ಅತ್ತ 101 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ ಜೆಡಿಯು ಪಡೆದ ಮತಗಳ ಪ್ರಮಾಣ 1 ಕೋಟಿಯನ್ನೂ ದಾಟಲಿಲ್ಲ. 96 ಲಕ್ಷ ಚಿಲ್ರೆ. ಚಿರಾಗ್ ಪಾಸ್ವಾನ್ ಅವರ ಪಕ್ಷವೂ ಅಷ್ಟೆ. 24 ಲಕ್ಷ ವೋಟು ಪಡೆದರು.
ಆದೇ ಆರ್‌ಜೆಡಿ ವಿಷಯಕ್ಕೆ ಬಂದರೆ ಆರ್‌ಜೆಡಿ 143 (+9) ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. 9 ಕ್ಷೇತ್ರಗಳಲ್ಲಿ ಮಿತ್ರ ಪಕ್ಷ ಕಾಂಗ್ರೆಸ್ ವಿರುದ್ಧವೇ ಸ್ಪರ್ಧೆ ಮಾಡಿತ್ತು. ಆರ್‌ಜೆಡಿ ಪಡೆದ 1 ಕೋಟಿ, 15 ಲಕ್ಷದ 6055 ಮತಗಳು. ಅಂದರೆ ಏಕಾಂಗಿಯಾಗಿ ಲೆಕ್ಕ ತೆಗೆದುಕೊಂಡರೆ ದೊಡ್ಡ ಮತವೇ ಬಂದಿದೆ. 2020ರಲ್ಲೂ ಇಷ್ಟೇ ವೋಟು ಪಡೆದಿದ್ದ ಆರ್‌ಜೆಡಿ, ಈ ಬಾರಿ ಸೋತಿದ್ದು ಎಲ್ಲಿ ಎಂದರೆ.. ರಿವರ್ಸ್ ಕನ್ಸಾಲಿಡೇಷನ್ ಉತ್ತರ ಸಿಗುತ್ತದೆ.
ತೇಜಸ್ವಿ ಯಾದವ್ ಸಿಎಂ ಎಂದು ಘೋಷಣೆಯಾಗ್ತಾ ಇದ್ದಂತೆ ನಿತೀಶ್ ಕುಮಾರ್ ವಿರುದ್ಧ ಇದ್ದವರು ಕೂಡಾ ಅಯ್ಯಯ್ಯೋ ಎಂದರು. ಹಳೆಯ ಗೂಂಡಾರಾಜ್ ನೆನಪು ಕಾಡ್ತಾನೇ ಇತ್ತು. ಅನುಭವಿಸಿದ ಅವಮಾನ, ನೋವುಗಳು ನೆನಪಾಗಿದ್ದವು. ಅತ್ಯಾಚಾರ, ಕೊಲೆಗಳು ಕಾಡಿದ್ದವು. ಜಂಗಲ್ ರಾಜ್ ನೆನಪನ್ನು ಮರೆಯದ ಜನ ಒಗ್ಗಟ್ಟಾಗಿ ನಿಂತು ಮಹಾಘಟಬಂಧನ್ ಅಭ್ಯರ್ಥಿಯನ್ನು ಸೋಲಿಸುವ ಅಭ್ಯರ್ಥಿಗೆ ಒಗ್ಗಟ್ಟಾಗಿ ಮತ ಹಾಕಿದರು. ಅದರ ಪರಿಣಾಮವೇ ಇದು.
ಮಹಾಘಟಬಂಧನ್ ಒಟ್ಟಾರೆಯಾಗಿ ಪಡೆದಿದ್ದು ಶೇ. 36.9–37.6% ಮತಗಳು.
ಎನ್‌ಡಿಎ ಒಕ್ಕೂಟಕ್ಕೆ ಸಿಕ್ಕಿದ್ದು 46.5–47.2%.
ಈ ಶೇ.10ರ ಅಂತರವೇ ಫಲಿತಾಂಶವನ್ನು ಸಾರಿ ಹೇಳುತ್ತಿದೆ. ಓವೈಸಿಯವರ ಎಂಐಎಂಐಎಂ ಪಕ್ಷ ಮತ್ತೊಮ್ಮೆ 5 ಸ್ಥಾನ ಗೆದ್ದಿದೆ. ಕಾಂಗ್ರೆಸ್ ಗೆದ್ದಿರೋದು 6.
ಎನ್‌ಡಿಎ ಒಕ್ಕೂಟದ ಪುಟ್ಟ ಪಾಲುದಾರ ಪಕ್ಷವಾದ ಹಿಂದೂಸ್ತಾನ್ ಅವಾಮಿ ಮೋರ್ಚಾ 5, ರಾಷ್ಟ್ರೀಯ ಲೋಕ ಮೋರ್ಚಾ 4 ಸ್ಥಾನ ಗೆದ್ದಿದೆ ಎನ್ನುವುದರಲ್ಲೇ ಮಹಾಘಟಬಂಧನ್ ಅಭ್ಯರ್ಥಿಗಳನ್ನು ಸೋಲಿಸುವ ಪಣ ತೊಟ್ಟಿದ್ದವರು ಒಗ್ಗಟ್ಟಾಗಿ ಮತ ಹಾಕಿದ್ದಕ್ಕೆ ಸಾಕ್ಷಿ.
ಇಂಡಿಯಾ ಒಕ್ಕೂಟಕ್ಕೆ ಇದು ಖಂಡಿತಾ ಒಳ್ಳೆಯ ಬೆಳವಣಿಗೆ ಅಲ್ಲ. ಆದರೆ.. ಎನ್‌ಡಿಎ ಮೈತ್ರಿಕೂಟಕ್ಕೆ ನಿಟ್ಟುಸಿರು ಬಿಟ್ಟಂತಾಗಿದೆ.



