ರೇಣುಕಾ ಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದ. ವಿನಾಕಾರಣ ದರ್ಶನ್ ಅವರ ಕುಟುಂಬ ಸರಿಯಾಗಬೇಕು ಎಂದು ಹಠಕ್ಕೆ ಬಿದ್ದು, ತನ್ನ ಸಾವು ತಾನೇ ತೋಡಿಕೊಂಡ.
ಮದುವೆಯಾಗಿ ಆತನಿಗೆ ಇನ್ನೂ ಒಂದು ವರ್ಷ ತುಂಬಿರಲಿಲ್ಲ. ದೊಡ್ಡ ಕುಳವೇನೂ ಆಗಿರಿಲಿಲ್ಲ. ಮೆಡಿಕಲ್ ಸ್ಟೋರಿನಲ್ಲಿ ಕೆಲಸ ಮಾಡ್ತಿದ್ದ ರೇಣುಕಾ ಮನೆಯಲ್ಲಿ ತಾಯಿ ಇದ್ದರು. ತಂದೆ ಇದ್ದರು. ಪತ್ನಿ ಇದ್ದರು. ಆಕೆಯ ಮಡಿಲಲ್ಲಿ ಮಗನೋ ಮಗಳೋ ಬೆಳೆಯುತ್ತಿದ್ದರು. ಅಜ್ಜಿಯರಿದ್ದರು. ಇಡೀ ಕುಟುಂಬವನ್ನು ಸಾಕಬೇಕಾದ ಹೊಣೆ ಆತನ ಮೇಲಿತ್ತು.
ಆದರೆ.. ರೇಣುಕಾಸ್ವಾಮಿ ತಲೆ ಕೆಡಿಸಿಕೊಂಡಿದ್ದು ಮಾತ್ರ ತನ್ನ ಹೀರೋ.. ದರ್ಶನ್ ಕುಟುಂಬದ ವಿಷಯಕ್ಕೆ. ಅಭಿಮಾನಿಯಾಗಿ ರೇಣುಕಾ ಸ್ವಾಮಿ.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಂಸಾರದ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಬೇಸರದಿಂದಲೋ.. ಸಿಟ್ಟಿನಿಂದಲೋ ಮಾಡಿದ ಮೆಸೇಜ್‌ಗಳಿಂದ ಇದೀಗ ಅವರ ಪ್ರಾಣವೇ ಹೋಗಿದೆ. ರೇಣುಕಾ ಸ್ವಾಮಿ ಅವರ ಪತ್ನಿ ರೇಣುಕಾ ಈಗ 3 ತಿಂಗಳ ಗರ್ಭಿಣಿ. ಇದೇ ತಿಂಗಳ 28ಕ್ಕೆ ಮದುವೆಯಾಗಿ 1 ವರ್ಷ. ಒಂದು ವಿವಾಹ ವಾರ್ಷಿಕೋತ್ಸವವನ್ನೂ ಮಾಡಿಕೊಳ್ಳದೆ ರೇಣುಕಾಸ್ವಾಮಿ, ಪತ್ನಿಯನ್ನೂ ಹುಟ್ಟಲಿರುವ ಮಗುವನ್ನೂ ನಡುನೀರಲ್ಲಿ ಬಿಟ್ಟಿದ್ದಾರೆ.ದರ್ಶನ್ ಮೇಲಿನ ಅಭಿಮಾನದಿಂದ, ದರ್ಶನ್ ಸಂಸಾರದ ಬಗ್ಗೆ ಒಳಿತು ಬಯಸಿ ಮಾಡಿದ ಕೆಟ್ಟ ಮೆಸೇಜ್‌ಗಳಿಂದಾಗಿ ರೇಣುಕಾ ಸ್ವಾಮಿ ಜೀವ ಕಳೆದುಕೊಳ್ಳುವಂತಾಗಿದೆ. ಚಿತ್ರದುರ್ಗದಲ್ಲಿ ವೀರಶೈವ ಸಂಪ್ರದಾಯ ಪದ್ಧತಿಯಂತೆ ಅಂತಿಮ ಸಂಸ್ಕಾರ ನೆರವೇರಿದೆ.
ದರ್ಶನ್ʻಗೆ ನ್ಯಾಯ ಕೊಡಿಸೋದಕ್ಕೆ ಜನರಿದ್ದಾರೆ. ನಾನು ಮುಂದೆ ಜೀವನ ಮಾಡೋದು ಹೇಗೆ? ಮುಂದೆ ಈ ಮಗುವಿಗೆ ಯಾರು ಬರ್ತಾರೆ? ನಮಗೆ ನ್ಯಾಯ ಬೇಕು. ಮದುವೆಯಾಗಿ ಒಂದು ವರ್ಷ ಆಗಿದೆ. ತಾಯಿ ಬೇರೆ ಆಗ್ತಿದ್ದೀನಿ ಇವಾಗ ಹಿಂಗ್ ಆದ್ರೆ ಏನ್ ಮಾಡ್ಲಿ.? ಮೊನ್ನೆ ಕರೆ ಮಾಡಿ ನಮ್ಮ ಜೊತೆ ಮಾತನಾಡಿದ್ದೇ ಕೊನೆ ಆಗಿಹೋಯ್ತು. ಈಗ ಮಾತನಾಡೋಕೆ ಅವರೇ ಇಲ್ಲವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ ರೇಣುಕಾ ಅವರ ಪತ್ನಿ ಸಹನಾ.
ನನ್ನ ಸೊಸೆ ಏನ್ ಮಾಡ್ತಾಳೆ. ಈಗಿನ್ನೂ ಸಂಸಾರ ಮಾಡ್ಕೊಂಡಿದ್ದ. ಅವಳಿನ್ನೂ ಗರ್ಭಿಣಿ. ಅವನೊಬ್ಬ ಸ್ಟಾರ್ ಅಂತೆ. ದೊಡ್ ಮನ್ಸಾ ಅಂತೆ. ಆ ನನ್ಮಗನ್ಗೂ ಹಿಂಗೇ ಚಿತ್ರಹಿಂಸೆ ಕೊಟ್ಟು ಸಾಯಿಸ್ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ರೇಣುಕಾಸ್ವಾಮಿಯ ತಾಯಿ.
ಮೃತಪಟ್ಟಿರುವ ಹುಡುಗ ರೇಣುಕಾಸ್ವಾಮಿ ಮನೆಯಲ್ಲಿ ಇಬ್ಬರು ಅಜ್ಜಿಯಂದಿರಿದ್ದಾರೆ. 97 ವರ್ಷದ ಅವರ ಅಜ್ಜಿ ಇದ್ದಾರೆ. ಅವರಿಗೆ ಅಕ್ಕ ಪಕ್ಕ ಯಾರಿದ್ದರೂ ಗೊತ್ತಾಗಲ್ಲ. ಇಲ್ಲದಿದ್ದರೂ ಗೊತ್ತಾಗಲ್ಲ. ಅವರಿಗೆ ವಿಷಯವೇ ಗೊತ್ತಿಲ್ಲ. ಇನ್ನೊಬ್ಬ ಅಜ್ಜಿಯೂ ಇದ್ದಾರೆ.ಮೊಮ್ಮಗ ಗುಣವಾಗಿ ಬರುತ್ತಾನೆ ಅಂತಾ ಹೇಳ್ತಾ ಇದ್ದಾರೆ. ಬೆಂಗಳೂರಲ್ಲಿ ಮೊಮ್ಮಗ ಕೊಲೆಯಾಗಿರುವ ವಿಷ್ಯ ಅವರ ಅಜ್ಜಿಯವರಿಗೆ ಗೊತ್ತಾಗಿಲ್ಲ.
ವಿಷಯವೇನು ಗೊತ್ತೇ..? ದರ್ಶನ್ ಅವರ ಕುಟುಂಬಕ್ಕೆ ಏನೂ ಆಗುವುದಿಲ್ಲ. ವಿಜಯಲಕ್ಷ್ಮಿ ಮತ್ತು ಅವರ ಮಗ.. ಎಲ್ಲರಿಗೂ ಬದುಕುವುದಕ್ಕೆ.. ಅದ್ಧೂರಿಯಾಗಿಯೇ ಜೀವಿಸುವುದಕ್ಕೆ ಎಲ್ಲ ಬಂಡವಾಳವೂ ಇದೆ. ಆಸ್ತಿ ಇದೆ. ದರ್ಶನ್ ಅವರಿಲ್ಲ ಎನ್ನುವುದು ಸಮಸ್ಯೆಯಾಗಲಾರದು. ಏಕೆಂದರೆ.. ಪವಿತ್ರ ಗೌಡ ಮತ್ತು ವಿಜಯಲಕ್ಷ್ಮಿ ಇಬ್ವರನ್ನೂ ಪ್ರತ್ಯೇಕವಾಗಿಯೇ ಇರಿಸಿದ್ದ ದರ್ಶನ್, ಬೇಕು ಎಂದಾಗ ಮನೆಗೆ ಹೋಗಿ ಬರುತ್ತಿದ್ದರು. ಆದರೆ.. ರೇಣುಕಾಸ್ವಾಮಿಯ ಸ್ಥಿತಿ ಹಾಗಿಲ್ಲ.



