ನಟ ದರ್ಶನ್ & ಗ್ಯಾಂಗ್ʻನಿಂದ ಕೊಲೆಯಾಗಿರುವ ರೇಣುಕಾಸ್ವಾಮಿ ಕೂಡಾ ದರ್ಶನ್ ಅಭಿಮಾನಿಯೇ. ಮದುವೆಯಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿಗೆ ಪತ್ನಿ ಇದ್ದಾಳೆ. ವರ್ಷವೂ ಆಗಿಲ್ಲ. ಹೆಂಡತಿ ಸಹನಾ ಗರ್ಭಿಣಿ. ತಾಯಿ ಹಾಗೂ ಇಬ್ಬರು ಅಜ್ಜಿಯಂದಿರನ್ನು ಸಾಕುತ್ತಿದ್ದ ರೇಣುಕಾಸ್ವಾಮಿ ಎರಡು ತಪ್ಪು ಮಾಡಿದ್ದ. ಅನಗತ್ಯವಾಗಿ ದರ್ಶನ್ ಕುಟುಂಬದ ವಿಷಯಕ್ಕೆ ತಲೆ ಹಾಕಿದ್ದ ಮತ್ತು ಆಮೇಲೆ.. ಹುಡುಗಿಯ ಆಸೆಗೆ ಬಿದ್ದು ದರ್ಶನ್ ಗ್ಯಾಂಗ್ ಕೈಗೆ ಸಿಕ್ಕುಬಿದ್ದ.
ವಾಸ್ತವದಲ್ಲಿ ಕೊಲೆಯಾದ ರೇಣುಕಾಸ್ವಾಮಿ, ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿ ಚೆನ್ನಾಗಿರಲಿ ಎಂದೇ ಬಯಸಿದ್ದ. ಆದರೆ ದರ್ಶನ್ ಅವರು ಪವಿತ್ರ ಗೌಡ ಅವರ ಜೊತೆ ಹೆಚ್ಚು ಹೆಚ್ಚು ಬೆರೆಯುತ್ತಿದ್ದುದು ರೇಣುಕಾಸ್ವಾಮಿಗೆ ಸಿಟ್ಟು ತರಿಸಿತ್ತು. ವಿಜಯಲಕ್ಷ್ಮಿ ಅವರ ಸಂಸಾರದ ಮಧ್ಯೆ ಪವಿತ್ರ ಗೌಡ ಹುಳಿ ಹಿಂಡಿದ್ದಾರೆ ಎಂದು ನಂಬಿದ್ದ. ಅಷ್ಟೇ ಅಲ್ಲ, ದರ್ಶನ್ ಅವರು ತುಂಬಾ ಒಳ್ಳೇವ್ರು, ಪವಿತ್ರ ಗೌಡ ಅವರಿಂದಲೇ ಕೆಟ್ಟಿದ್ದಾರೆ ಎಂದು ನಂಬಿಕೊಂಡಿದ್ದ. ಅದಕ್ಕೆ ಅವನು ಸೃಷ್ಟಿಸಿದ್ದೇ ತನಿಶಾ ರೆಡ್ಡಿ 2205 ಎಂಬ ಇನ್ಸಾಗ್ರಾಂ ಅಕೌಂಟ್.
ರೇಣುಕಾಸ್ವಾಮಿ ಕೆರಳಿದ್ದ.. ಪವಿತ್ರ ಗೌಡ ಬೆನ್ನು ಹತ್ತಿದ್ದ :
ದರ್ಶನ್, ವಿಜಯಲಕ್ಷ್ಮಿ ಹಾಗೂ ಪವಿತ್ರ ಗೌಡ ಅವರ ವಿವಾದ ಅಭಿಮಾನಿಗಳಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ದರ್ಶನ್ ಅಭಿಮಾನಿಗಳು ಪವಿತ್ರಾಗೌಡ ವಿರುದ್ಧ ಕಾಮೆಂಟ್ ಮಾಡುತ್ತಿದ್ದರು. ಇದೇ ರೀತಿ ಚಿತ್ರದುರ್ಗದ ರೇಣುಕಾ ಸ್ವಾಮಿ ಕೂಡ ನಿಂದನಾತ್ಮಕ ಕಾಮೆಂಟ್ ಹಾಕಿದ್ದರು. ರೇಣುಕಾಸ್ವಾಮಿ ತನ್ನ ವೊರಿಜಿನಲ್ ಹೆಸರನ್ನೇನೂ ಯೂಸ್ ಮಾಡಿರಲಿಲ್ಲ. ʻತನಿಶಾರೆಡ್ಡಿ2205ʼ ಅನ್ನೋ ಅಕೌಂಟಿನಲ್ಲಿ ಪೋಸ್ಟ್ ಮಾಡ್ತಿದ್ದ. ಪದೇ ಪದೆ ದರ್ಶನ್ ಹಾಗೂ ವಿಜಯಲಕ್ಷ್ಮೀ ಅವರನ್ನು ಬೆಂಬಲಿಸಿ, ಪವಿತ್ರಾ ಅವರನ್ನು ಗೇಲಿ ಮಾಡುವಂತೆ ಕಾಮೆಂಟ್ ಹಾಗೂ ಸಂದೇಶಗಳನ್ನು ಕಳಿಸುತ್ತಿದ್ದ.
ನೀನು ಯಾವತ್ತಿದ್ದರೂ ಕೀಪು. ಇಟ್ಟುಕೊಂಡೋಳು. ಸಮಾಜ ನಿನ್ನನ್ನು ಗುರುತಿಸುವುದೇ ಹಾಗೆ ಎಂದು ಮೆಸೇಜ್ ಹಾಕುತ್ತಿದ್ದರು. ನಿನ್ನನ್ನು ಜನ ಪಬ್ಲಿಕ್ʻನಲ್ಲಿ ಮಾಡುತ್ತಾರೆ ಎಂದೆಲ್ಲ ಮೆಸೇಜ್ ಹಾಕುತ್ತಿದ್ದ. ಪವಿತ್ರ ಗೌಡ ಅವರಿಗೆ ತಮ್ಮ ಮರ್ಮಾಂಗದ ಫೋಟೋ ಕೂಡಾ ಕಳಿಸಿದ್ದ. ಆದೊಂದು ಫೋಟೋದಿಂದ ದರ್ಶನ್ ಕೆರಳಿದ್ದರು. ಹಾಗೆ ಪೋಸ್ಟ್ ಮಾಡಿದ್ದವನನ್ನು ಬೆನ್ನು ಹತ್ತುವುದಕ್ಕೆ ಮುಂದಾಗಿದ್ದರು.
ರೇಣುಕಾಸ್ವಾಮಿಯಂತೆಯೇ ಒಂದು ನಕಲಿ ಪೋಸ್ಟ್ ಕ್ರಿಯೇಟ್ ಮಾಡಿ, ಮಹಿಳೆಯಂತೆ ತನಿಶಾಗೆ (ರೇಣುಕಾಸ್ವಾಮಿಗೆ) ಪೋಸ್ಟ್ ಮಾಡಿ ಕೆರಳಿಸಿ ತಾವು ಹೇಳಿದ್ದ ಜಾಗಕ್ಕೆ ಕರೆಸಿಕೊಂಡಿದ್ದರು. ನೀತಿ ಹೇಳುತ್ತಿದ್ದ ರೇಣುಕಾಸ್ವಾಮಿಯೂ ಹುಡುಗಿಯ ಆಸೆಗೆ ಅವಳು ಅಂದರೆ ದರ್ಶನ್ ಗ್ಯಾಂಗ್ʻನವನು ಹೇಳಿದ್ದ ಜಾಗಕ್ಕೆ ಹೋಗಿದ್ದ. ಅಲ್ಲಿಂದ ಕಿಡ್ನಾಪ್ ಆದ. ಕೊನೆಗೆ ಸಿಕ್ಕಿದ್ದು ಹೆಣವಾಗಿ.
ಪ್ರಕರಣ ಶುರುವಾಗಿದ್ದು ಜನವರಿಯಲ್ಲಿ.. : ವಿಜಯಲಕ್ಷ್ಮಿ-ದರ್ಶನ್-ಪವಿತ್ರ ಗೌಡ ಅವರ ಜಗಳದಿಂದ..
ಕಳೆದ ಜನವರಿಯಲ್ಲಿ ನಟಿ, ಫ್ಯಾಷನ್ ಡಿಸೈನರ್ ಪವಿತ್ರಾ ಗೌಡ ಎನ್ನುವವರು ನಟ ದರ್ಶನ್ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, 10 ವರ್ಷದ ಬಾಂಧವ್ಯ, ಪ್ರೀತಿ ಎಂದು ಅಡಿ ಬರಹ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ದರ್ಶನ್ ಅವರ ಮೊದಲ ಪತ್ನಿ ವಿಜಯಲಕ್ಷ್ಮಿ ಖುಷಿ ಎನ್ನುವವಳು ಪವಿತ್ರಾ ಗೌಡ, ದರ್ಶನ್ ಮಗಳಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬೇರೆಯವರ ಗಂಡನ ಫೋಟೋವನ್ನು ಹಾಕುವಾಗ ಯೋಚಿಸಬೇಕು. ಸಮಾಜಕ್ಕೆ ಯಾವ ಸಂದೇಶ ಕೊಡ್ತಿದ್ದೀರಿ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರ ಕೊಟ್ಟಿದ್ದ ಪವಿತ್ರ ಗೌಡ ನಾನು, ದರ್ಶನ್ ಕಳೆದ 10 ವರ್ಷದಿಂದ ಪ್ರೀತಿ ಮಾಡುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದರು. ನನ್ನ ಮಾಜಿ ಪತಿ ಸಂಜಯ್ ಹಾಗೂ ನನ್ನ ಮಗಳು ಖುಷಿ. ನನ್ನ ದರ್ಶನ್ ಸಂಬಂಧ ಏನು ಎನ್ನೋದು ವಿಜಯಲಕ್ಷ್ಮೀಗೆ ಮೊದಲೇ ಗೊತ್ತಿದೆ. ಈ ಬಗ್ಗೆ ವಿಜಯಲಕ್ಷ್ಮೀ ಅವರೇ ನನಗೆ ಸಾಕಷ್ಟು ಬಾರಿ ಫೋನ್‌ನಲ್ಲಿ ಮಾತಾಡಿ ನನಗೆ ಏನೂ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಬಹಳಷ್ಟು ಜನರು ಕೆಟ್ಟ ಭಾಷೆಯಿಂದ ನನ್ನನ್ನು, ನನ್ನ ಮಗಳನ್ನು ನಿಂದಿಸಿರೋದು ನನಗೆ ಭಾರೀ ಮಾನಸಿಕ ನೋವು ಕೊಟ್ಟಿದೆ. ನಾನು ದರ್ಶನ್ ಜೀವನಕ್ಕೆ ಬರುವ ಮುನ್ನವೇ, ಅವರಿಬ್ಬರ ಮಧ್ಯೆ ಏನು ಸಮಸ್ಯೆ ಇತ್ತು, ದರ್ಶನ್ ಏನು ಅನುಭವಿಸಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ ಎಂದಿದ್ದರು.
ಇದು ದರ್ಶನ್ ಅವರಿಗೂ ತಟ್ಟಿತ್ತು. ಮಂಡ್ಯದಲ್ಲಿ ನಡೆದಿದ್ದ ದರ್ಶನ್ 25 ಕಾರ್ಯಕ್ರಮದಲ್ಲಿ ಇವತ್ತು ಇವಳು ಇರ್ತಾಳೋ, ನಾಳೆ ಅವಳು ಇರ್ತಾಳೋ. ನಿಮಗಳಿಗೆಲ್ಲ ನಾನು ತಲೆ ಕೆಡಿಸಿಕೊಂಡು ಕೂರಲ್ಲ.. ಅವಳ ಅಜ್ಜಿನ ಬಡಿಯ… ನನಗೆ ಮಾಡೋಕೆ ತುಂಬ ಕೆಲಸ ಇದೆ ಎಂದು ಹೇಳಿಕೆ ನೀಡಿದ್ದರು.



