ರೇಣುಕಾಸ್ವಾಮಿ ಕೊಲೆ ಕೇಸ್ ದರ್ಶನ್ ಅವರ ಉಳಿದ ಜೀವನವನ್ನೇ ಕಿತ್ತುಕೊಳ್ಳುತ್ತಾ..? ಅಂತಾದ್ದೊಂದು ಪ್ರಶ್ನೆಗೆ ಉತ್ತರ ಹುಡುಕಲೇಬೇಕಿದೆ. ಕಾರಣ, ದರ್ಶನ್ & ಗ್ಯಾಂಗ್ ಮೇಲೆ ಪೊಲೀಸರು ಹಾಕಿರುವ ಸೆಕ್ಷನ್ನುಗಳು. ಒಂದೊಂದು ಸೆಕ್ಷನ್ನೂ ಒಂದಕ್ಕಿಂತ ಒಂದು ಭಯಂಕರ. ಅವೆಲ್ಲವೂ ಆದರೆ, ದರ್ಶನ್ ಹೊರಜಗತ್ತಿಗೆ ಸ್ವತಂತ್ರವಾಗಿ ಬರುವ ಪ್ರಶ್ನೆಯೇ ಇಲ್ಲ.
ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಭೀಕರವಾಗಿ ಹಲ್ಲೆ ಮಾಡಿ ಕೊಲೆಗೈದು ಚರಂಡಿ ಬಳಿ ಬಿಸಾಕಿ ಹೋದ ಕೇಸಿನಲ್ಲಿ ದರ್ಶನ್ ಆರೋಪಿ ನಂ.2. ಪವಿತ್ರಾ ಗೌಡ ಕಾರಣಕರ್ತೆ ಮತ್ತು ಉದ್ದೇಶವಾಗಿದ್ದರೆ, ಆಕೆಗೆ ಅಶ್ಲೀಲ ವಿಡಿಯೋ ಕಳಿಸಿದ್ದಕ್ಕೆ ರೊಚ್ಚಿಗೆದ್ದು ಇಡೀ ʻಮರ್ಡರ್ ಕೇಸ್ʼನ್ನು ಎಕ್ಸಿಕ್ಯೂಟ್ ಮಾಡಿದ ಆರೋಪ ದರ್ಶನ್ʻರದ್ದು. ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಕ್ರೂರ ಕೃತ್ಯವನ್ನು ಆಧರಿಸಿ ಅವರ ಮೇಲೆ 8 ಹೊಸ ಕ್ರಿಮಿನಲ್ ಸೆಕ್ಷನ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಅವುಗಳ ಪ್ರಕಾರ ಆರೋಪ ಸಾಬೀತಾದರೆ ದರ್ಶನ್ʻಗೆ ಜೀವಾವಧಿ ಶಿಕ್ಷೆಯಾಗುವುದು ಗ್ಯಾರಂಟಿ. ಮೊದಲು 302- ಕೊಲೆ, 201-ಸಾಕ್ಷ್ಯನಾಶ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದ ಪೊಲೀಸರು. ಹೆಚ್ಚುವರಿಯಾಗಿ 120ಬಿ, 364, 355, 384, 143,147,148, R/W 149 ಅಡಿಯಲ್ಲಿ ಎಂಟು ಸೆಕ್ಷನ್‌ಗಳನ್ನು ಸೇರ್ಪಡೆ ಮಾಡಿದ್ದಾರೆ. ಅಂದರೆ.. 3 ಸೆಕ್ಷನ್ನುಗಳಲ್ಲಿ ದರ್ಶನ್ʻಗೆ ಜೀವಾವಧಿ ಶಿಕ್ಷೆ ಇದೆ.
ಯಾವ್ಯಾವ ಸೆಕ್ಷನ್ ಗೆ ಎಷ್ಟೆಷ್ಟು ವರ್ಷ ಶಿಕ್ಷೆ..?
302 ವ್ಯಕ್ತಿ ಹತ್ಯೆ – ಜೀವಾವಧಿ ಶಿಕ್ಷೆ
364 ವ್ಯಕ್ತಿ ಅಪಹರಣ – ಜೀವಾವಧಿ ಶಿಕ್ಷೆ
201 – ಸಾಕ್ಷಿ ನಾಶ – ಜೀವಾವಧಿ
120-ಬಿ – ಒಳಸಂಚು – 2 ವರ್ಷ ಮೇಲ್ಪಟ್ಟು ಅಥವಾ ಜೀವಾವಧಿ ಶಿಕ್ಷೆ
355 – ಒತ್ತಡ ಹೇರಿ ಹತ್ಯೆ 2 ವರ್ಷ ಜೈಲು ಶಿಕ್ಷೆ
384 – ಸುಲಿಗೆ – 3 ವರ್ಷ ಜೈಲು ಶಿಕ್ಷೆ
143 – ಕಾನೂನು ಬಾಹಿರ ಸಭೆ – 6 ತಿಂಗಳು ಜೈಲು ಶಿಕ್ಷೆ
147 – ಗಲಭೆ – 2 ವರ್ಷ
148 – ಮಾರಕ ಆಯುಧಗಳ ಬಳಕೆ – 3 ವರ್ಷ ಶಿಕ್ಷೆ
149 – ಗುಂಪು ಸೇರಿ ಹಲ್ಲೆ 2 ವರ್ಷ ಶಿಕ್ಷೆ
ಇವುಗಳ ಪ್ರಕಾರ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಹೊಸದಾಗಿ ಸೇರ್ಪಡೆ ಮಾಡಲಾದ ಪ್ರಕರಣದಲ್ಲಿ
364- ಕಿಡ್ನಾಪ್ (ರೇಣುಕಾಸ್ವಾಮಿಯನ್ನು ಸಂಚು ಮಾಡಿ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತಂದಿರುವುದು),
384- ಸುಲಿಗೆ (ರೇಣುಕಾಸ್ವಾಮಿ ಬಳಿಯಿದ್ದ ಉಂಗುರ, ಚಿನ್ನದ ಸರ ಹಾಗೂ ಮೊಬೈಲ್ ಕದ್ದಿರುವುದು),
355 ಕ್ರಿಮಿನಲ್ ಬಲ ಪ್ರಯೋಗ (ದೇಹದ ಮೇಲೆ ಎಲೆಕ್ಟ್ರಿಕ್ ಶಾಕ್ ಯಂತ್ರ ಬಳಸಿ ಕರೆಂಟ್ ಶಾಕ್ ನೀಡಿರುವುದು),
148- ಮಾರಣಾಂತಿಕ ಆಯುಧಗಳ ಬಳಕೆ (ದೊಣ್ಣೆ, ಕಬ್ಬಿಣದ ರಾಡ್, ಬ್ರ್ಯಾಂಡೆಡ್ ಶೂ, ಬೆಲ್ಟ್ʻಗಳಿಂದ ಹಿಂಸೆ ನೀಡಿರುವುದು),
120(B) ಕ್ರಿಮಿನಲ್ ಒಳ ಸಂಚು (ಹಲ್ಲೆ ಮತ್ತು ಕೊಲೆ ಮಾಡಲು ಗ್ಯಾಂಗ್ ಕಟ್ಟಿಕೊಂಡು ಯೋಜನೆ ರೂಪಿಸಿರುವುದು),
143- ಕಾನೂನು ಬಾಹಿರ ಸಭೆ (ಶೆಡ್‌ನಲ್ಲಿ ಹಲ್ಲೆ ಮಾಡಿ ಕೊಲೆಗೈದ ನಂತರ ಶವ ಎಸೆಯಲು ಮೀಟಿಂಗ್ ಮಾಡಿದ್ದು) ,
147- ಗಲಭೆ, r/w 149 ಗುಂಪು ಹಲ್ಲೆ (ಗ್ಯಾಂಗ್ ಕಟ್ಟಿಕೊಂಡು ಹಲ್ಲೆ ಮಾಡಿರುವುದು) ಮಾಡಲಾಗಿದೆ. ಈ ಮೂಲಕ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಕಾನೂನಿನ ಕುಣಿಕೆ ಮತ್ತಷ್ಟಿ ಬಿಗಿಯಾಗಿದೆ.
ಈ ಎಲ್ಲ ಆರೋಪಗಳೂ ಸಾಬೀತಾದರೆ ದರ್ಶನ್ʻಗೆ ಜೀವಾವಧಿ ಶಿಕ್ಷೆಯಾಗುವುದು ಗ್ಯಾರಂಟಿ. 3 ಸೆಕ್ಷನ್ʻಗಳಲ್ಲಿ ಜೀವಾವಧಿ ಶಿಕ್ಷೆಯಿದ್ದರೆ, ಇನ್ನುಳಿದ ಸೆಕ್ಷನ್ʻಗಳಲ್ಲಿ ದರ್ಶನ್ ಕನಿಷ್ಠ 14 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಬೇಕಿದೆ. ಆದರೆ, ಎಲ್ಲ ಆರೋಪಗಳು ಸಾಬೀತಾಗಬೇಕು. ಚಾರ್ಜ್ʻಶೀಟ್ʻನಲ್ಲಿ ಹೇಳಿದ ಎಲ್ಲ ಆರೋಪಗಳಿಗೂ ಪೊಲೀಸರು ಸಾಕ್ಷಿ ಒದಗಿಸಬೇಕು. ಆ ಸಾಕ್ಷಿಗಳನ್ನೆಲ್ಲ ನ್ಯಾಯಾಲಯಕ್ಕೆ ಒಪ್ಪಿಸಬೇಕು. ಅಲ್ಲದೆ ಈ ಮೊದಲು ಹಲವು ಸೆಕ್ಷನ್ನುಗಳಿದ್ದಾಗ.. ಯಾವ ಪ್ರಕರಣದಲ್ಲಿ ಹೆಚ್ಚು ಅವಧಿಯ ಶಿಕ್ಷೆ ಇದೆಯೋ.. ಅದನ್ನು ಪಾಲಿಸುವ ಪದ್ಧತಿ ಇತ್ತು. ಆದರೆ ಕೆಲವು ವರ್ಷಗಳ ಹಿಂದೆ ಸುಪ್ರೀಂಕೋರ್ಟ್, ಹಾಗೆ ಎಲ್ಲ ಶಿಕ್ಷೆಗಳನ್ನೂ ಒಟ್ಟಿಗೇ ನೀಡಲು ಸಾಧ್ಯವಿಲ್ಲ. ಒಂದೊಂದು ಸೆಕ್ಷನ್ನಿನಲ್ಲೂ ಪ್ರತ್ಯೇಕ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದೆ. ಈ ಎಲ್ಲವೂ ಸಾಬೀತಾದರೆ.. ದರ್ಶನ್ ಜೀವನ ಪೂರ್ತಿ ಜೈಲಿನಲ್ಲೇ ಇರಬೇಕಾಗಿ ಬರಬಹುದು.



