ರಶ್ಮಿಕಾ ಮಂದಣ್ಣ ಮತ್ತು ಶ್ರದ್ಧಾ ದಾಸ್ ಪ್ರಕರಣ ಇನ್ನೂ ಹಸಿರಾಗಿಯೇ ಇದೆ. ಮೊನ್ನೆ ಮೊನ್ನೆಯಷ್ಟೇ ಇಬ್ಬರೂ ಸಾವಿನ ಕದ ತಟ್ಟಿದ್ದೇವೆ ಎಂದು ಹೇಳಿಕೊಂಡಿದ್ದರು. ಅವರಿಬ್ಬರಿಗೂ ಕಾಡಿದ್ದು ಇದೇ ವಿಮಾನ. ಅವರಿದ್ದ ವಿಮಾನ ಆಕಾಶದಲ್ಲೇ ಗಿರಕಿ ಹೊಡೆದು ಆತಂಕ ಸೃಷ್ಟಿಸಿತ್ತು.
ಇದೀಗ ಅಂತಹುದೇ ಘಟನೆ ಮಾರ್ಟಿನ್ ಚಿತ್ರತಂಡಕ್ಕೆ ಜರುಗಿದೆ. ಧ್ರುವ ಸರ್ಜಾ ಮತ್ತು ಮಾರ್ಟಿನ್ ಚಿತ್ರ ತಂಡವಿದ್ದ ವಿಮಾನವು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಮಾರ್ಟಿನ್ ಟೀಂ ಅಂತಿಮ ಹಂತದ ಚಿತ್ರೀಕರಣದಲ್ಲಿದೆ.
ಇದಕ್ಕಾಗಿ ಸೋಮವಾರ ಸಂಜೆ ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಹೋಗಬೇಕಿತ್ತು. ಈ ವೇಳೆ ಮಾರ್ಟಿನ್ ತಂಡವಿದ್ದ ಇಂಡಿಗೋ ವಿಮಾನ ಆಕಾಶದಲ್ಲೇ ಗಿರಕಿ ಹೊಡೆಯಲಾರಂಭಿಸಿತ್ತು. ಹವಾಮಾನ ವೈಪರೀತ್ಯವೇ ಇದಕ್ಕೆಲ್ಲ ಕಾರಣವಾಗಿದ್ದು, ತಕ್ಷಣ ಲ್ಯಾಂಡಿಂಗ್ ಸಾಧ್ಯವಾಗದೆ ಪೈಲಟ್ ಪರದಾಡಿದ್ಧಾರೆ.
ಆದರೆ ಪೈಲಟ್ ಅನುಭವಿ. ಹೀಗಾಗಿ ಸೇಫ್ ಲ್ಯಾಂಡ್ ಮಾಡಿದ್ದಾರೆ. ಇಷ್ಟು ಹೊತ್ತಿನಲ್ಲಿ ಪ್ರಯಾಣಕರು ಜೀವ ಉಳಿದರೆ ಸಾಕಪ್ಪ ಎಂದು ದೇವರನ್ನು ನೆನೆದಿದ್ದಾರೆ. ಪ್ರಾರ್ಥನೆ ಮಾಡಿದ್ದಾರೆ, ಕಣ್ಣೀರಿಟ್ಟಿದ್ದಾರೆ. ಗಾಬರಿಯಿಂದ ಹೊರಬಂದ ಮೇಲೆ.. ಅಬ್ಬಾ ಜೀವ ಉಳಿಯಿತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಘಟನೆಯ ಬಳಿಕ ಮಾರ್ಟಿನ್ ಚಿತ್ರತಂಡವು ವಿಮಾನ ಇಳಿಯುವ ಸಂದರ್ಭದಲ್ಲಿಯೇ ವಿಡಿಯೋ ಮಾಡಿಕೊಂಡು ವಿಮಾನದಲ್ಲಿ ಎದುರಾಗಿದ್ದ ಕೆಟ್ಟ ಸಂದರ್ಭವನ್ನು ವಿವರಿಸಿ ಮರು ಜನ್ಮ ಸಿಕ್ಕಿದೆ ಎಂದಿದೆ.
ನಟ ಧ್ರುವ ಸರ್ಜಾ ಅವರು ನನ್ನ ಜೀವಮಾನದಲ್ಲಿಯೇ ವಿಮಾನದಲ್ಲಿ ಮೊದಲ ಬಾರಿ ಅತ್ಯಂತ ಕೆಟ್ಟ ಅನುಭವವಾಯಿತು. ಸದ್ಯ ನಾವು ಸುರಕ್ಷಿತವಾಗಿದ್ದೇವೆ. ಥ್ಯಾಂಕ್ ಗಾಡ್, ಜೈ ಆಂಜನೇಯ ಎಂದಿದ್ದಾರೆ. ಚಿತ್ರದ ನಿರ್ದೇಶಕ ಎ ಪಿ ಅರ್ಜುನ್, ನಾಯಕ ನಟಿ ಅನ್ವೇಶಿ ಜೈನ್, ನೃತ್ಯ ಸಂಯೋಜಕ ಇಮ್ರಾನ್ ಸರ್ಧಾರಿಯಾ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಇದ್ದಾರೆ. ಪ್ರಾಣಾಪಾಯದಿಂದ ಪಾರಾದ ಖುಷಿಯಲ್ಲಿ ಎಲ್ಲರೂ ಜೈ ಆಂಜನೇಯ ಜೈ ಶ್ರೀರಾಮ್ ಎಂದಿದ್ದಾರೆ.
ನಟ ಧ್ರುವ ಅವರಂತೂ ಭಾವುಕರಾಗಿ ಇದು ನನ್ನ ತಂದೆ ತಾಯಿಯರ, ನನ್ನ ವಿಐಪಿಗಳ ಮತ್ತು ನನ್ನ ದೇವರು ಚಿರು ಅಣ್ಣನ ಆಶೀರ್ವಾದದ ಫಲ. ವಿಮಾನದಲ್ಲಿದ್ದ ಪ್ರತಿ ಪ್ರಯಾಣಿಕರು ತಮ್ಮ ತಮ್ಮ ದೇವರನ್ನು ಪ್ರಾರ್ಥಿಸುತ್ತಿದ್ದರು. ನಿಜಕ್ಕೂ ಉಸಿರು ತೆಗೆದುಕೊಳ್ಳುವ ಅನುಭವವಾಗಿತ್ತು. ಸುರಕ್ಷಿತವಾಗಿ ಬಂದಿಳಿಯುತ್ತಿದ್ದಂತೆ ಪ್ರಯಾಣಿಕರು ಸಂತೋಷದಿಂದ ಕಣ್ಣೀರು ಹಾಕಿದರು. ಪ್ರತಿಯೊಬ್ಬರು ತಮ್ಮ ಪ್ರೀತಿಪಾತ್ರರಿಗೆ ಕರೆ ಮಾಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇದು ಪುನರ್ಜನ್ಮ ಎಂದು ಬರೆದುಕೊಂಡಿದ್ದಾರೆ ಧ್ರುವ ಸರ್ಜಾ.
ಈಗ ಬೇಸಿಗೆ ಶುರುವಾಗಿದ್ದರೂ ಬೆಳ್ ಬೆಳಗ್ಗೆ ವಿಪರೀತ ಚಳಿ ಇರುತ್ತದೆ. ಉತ್ತರ ಭಾರತದಲ್ಲಿ ಅದರಲ್ಲೂ ದೆಹಲಿ, ಪಂಜಾಬ್, ಹರಿಯಾಣ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶದ ಸುತ್ತಮುತ್ತ ವಿಪರೀತ ಮಂಜು ಕವಿದಿರುತ್ತದೆ. ಗಾಳಿಯಂತೂ ಬರ್ರನೆ ಬೀಸುತ್ತಿರುತ್ತದೆ. ಜೊತೆಗೆ ಇದ್ದಕ್ಕಿದ್ದಂತೆ ಮಳೆಯಾಗುತ್ತಿದೆ. ಹೀಗಾಗಿಯೇ ಹವಾಮಾನ ವೈಪರೀತ್ಯದ ಕಂಟಕ ಎದುರಾಗಿದೆ. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಜೈ ಆಂಜನೇಯ..



