ಬಳ್ಳಾರಿಯಲ್ಲಿ ನಡೆದ ಜನಾರ್ದನ ರೆಡ್ಡಿ ಮತ್ತು ಭರತ್ ರೆಡ್ಡಿ ನಡುವಿನ ಜಗಳ, ಅದಕ್ಕೆ ಒಂದು ಜೀವದ ಸಾವು ಸಿಎಂ ಸಿದ್ದರಾಮಯ್ಯ ಅವರ ಸಿಟ್ಟಿಗೆ ಕಾರಣವಾಗಿದೆ. ಇಡೀ ಪ್ರಕರಣದ ವಿವರ ಕೇಳಿದ ಸಿದ್ಧರಾಮಯ್ಯ, ನರಾ ಭರತ್ ರೆಡ್ಡಿ ಕುರಿತು ಸಿಟ್ಟಾಗಿದ್ದಾರೆ. ಒಂದು ಮೂಲದ ಪ್ರಕಾರ ಸಿದ್ಧರಾಮಯ್ಯ ಬಾಯಲ್ಲಿ ಅಶ್ಲೀಲ ಮಾತುಗಳೂ ಬಂದವಂತೆ. ಸಾಮಾನ್ಯವಾಗಿ ಬೈಗುಳ ಬಳಸುವಾಗಲೂ ಎಚ್ಚರಿಕೆಯಿಂದ ಬಳಸುವ ಸಿದ್ಧರಾಮಯ್ಯ, ಈ ವಿಷಯದಲ್ಲಿ ಕೆಂಡಾಮಂಡಲರಾಗುವುದಕ್ಕೆ ಕಾರಣವೂ ಇದೆ. ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಲು ಯಾರಿಂದೂ ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ಅವರ ಈ ರೀತಿಯ ಆಕ್ರೋಶಕ್ಕೆ ಕಾರಣಗಳೂ ಇವೆ.
ಸಿದ್ದರಾಮಯ್ಯ ಅವರು ಜನಾರ್ದನ ರೆಡ್ಡಿ ಅವರ ಪಟಾಲಂ ವಿರುದ್ಧ ಹೋರಾಡಿಯೇ ಲೀಡರ್ ಆದ ನಾಯಕ. ಜನಾರ್ದನ ರೆಡ್ಡಿ ಗ್ಯಾಂಗ್ ವಿರುದ್ಧ, ಅವರ ಅಹಮ್ಮಿನ ವಿರುದ್ಧ, ದೌಲತ್ತು, ದರ್ಪಗಳ ವಿರುದ್ಧವೇ ಹೋರಾಟ ಮಾಡಿದ್ದು. ಈಗ ನೋಡಿದರೆ ತಮ್ಮ ಪಕ್ಷದ ನಾಯಕನೇ ಆ ರೀತಿಯ ವರ್ತನೆ ತೋರಿದರೆ ಜನರಿಗೆ ಹೇಗೆ ಮುಖ ತೋರಿಸೋದು ಎಂದು ಬೇಸತ್ತಿದ್ದಾರಂತೆ. ಸಿದ್ದರಾಮಯ್ಯ ಬಳ್ಳಾರಿ ಗಲಭೆಯನ್ನು ಪರ್ಸನಲ್ ಆಗಿ ತೆಗೆದುಕೊಂಡಿದ್ದಾರೆ. ಅದರಲ್ಲಿಯೂ ಇಡೀ ಘಟನೆಯ ಡೀಟೈಲ್ಸ್ ತೆಗೆದುಕೊಂಡಿರುವ ಸಿದ್ದರಾಮಯ್ಯ, ಭರತ್ ರೆಡ್ಡಿ ಮತ್ತವರ ಪಟಾಲಂ ಕೆಣಕಿ ಕೆಣಕಿಯೇ ಈ ಘಟನೆ ಆಯ್ತು, ಒಬ್ಬನ ಪ್ರಾಣ ಹೋಯಿತು ಎಂಬುದನ್ನು ಅರಗಿಸಿಕೊಂಡಿಲ್ಲ.
ಸಿದ್ದರಾಮಯ್ಯಗೆ ಬಂದಿರುವ ವರದಿಯ ಪ್ರಕಾರವೇ ನರಾ ಭರತ್ ರೆಡ್ಡಿ ಅವರ ಟೀಂ ಬೇಕೆಂದೇ ಸೃಷ್ಟಿಸಿರುವ ಗಲಭೆ ಇದು. ಜನಾರ್ದನ ರೆಡ್ಡಿ ಊರಿನಲ್ಲೇ ಇರಲಿಲ್ಲ. ಗಂಗಾವತಿಯಲ್ಲಿದ್ದರು. ಅವರ ಮನೆಯ ಬಳಿ ಪೋಸ್ಟರ್ ಹಾಕಬೇಕು, ಅವರ ಕಾರು ಕೂಡಾ ಹೋಗದಂತೆ ಅಡ್ಡಿ ಮಾಡಬೇಕು ಎಂಬ ಹಠ ಯಾಕೆ.. ನಿಮ್ಮ ನಿಮ್ಮ ದೌಲತ್ತಿನ ಪ್ರದರ್ಶನಕ್ಕೆ ಒಬ್ಬನ ಜೀವವನ್ನೇ ಬಲಿ ತಗೊಂಡ್ರಲ್ಲ, ವಾಪಸ್ ಕೊಡೋಕೆ ಆಗುತ್ತೇನ್ರೀ ಎಂದು ತರಾಟೆಗೆ ತೆಗೆದುಕೊಂಡ್ರಂತೆ. ಆ ವೇಳೆಯಲ್ಲೇ ಅಶ್ಲೀಲ ಪದಗಳೂ ಹೊರಬಂದವಂತೆ.
ಸಿದ್ದರಾಮಯ್ಯ ಜೊತೆಯಲ್ಲೇ ಆಪ್ತ ಸಚಿವ ಜಮೀರ್ ಅಹ್ಮದ್ ತಾವೇ ಫೋನ್ ಮಾಡಿ ಕೊಟ್ಟರೂ, ಭರತ್ ರೆಡ್ಡಿ ಜೊತೆ ಮಾತನಾಡುವುದಕ್ಕೆ ಹೋಗಲಿಲ್ಲವಂತೆ. ಸಿದ್ಧರಾಮಯ್ಯ ಅವರು ಇಷ್ಟೊಂದು ಸಿಟ್ಟಾಗಿದ್ದನ್ನು ನೋಡಿ ಯಾವುದೋ ಕಾಲವಾಗಿತ್ತು ಎಂದು ಹೇಳಿಕೊಂಡಿರುವ ಜಮೀರ್.. ಸೈಲೆಂಟ್ ಆಗಿ ದೂರ ಸರಿದರಂತೆ. ಸಿದ್ದರಾಮಯ್ಯ ಅವರು ಮಾಧ್ಯಮಗಳ ಎದುರು ಮಾತನಾಡುವಾಗ ಬ್ಯಾಲೆನ್ಸ್ ಮಾಡಿದರೂ, ಒಳಗೆ ಕೋಪದಿಂದ ಕುದಿಯುತ್ತಿದ್ದರಂತೆ. ಇದು ಕ್ಯಾಬಿನೆಟ್ ಮೀಟಿಂಗ್‌ನಲ್ಲೂ ವ್ಯಕ್ತವಾಗಿದೆ. ಹೀಗಾಗಿ ಸಂಪುಟ ಸಭೆಯಲ್ಲಿ ಬೇರೆ ವಿಷಯ ಮಾತುಕತೆಗಳು ನಡೆದಿಲ್ಲ.
ಹಾಗೆ ನೋಡಿದರೆ ಸಿದ್ದರಾಮಯ್ಯ ಮತ್ತು ಜನಾರ್ದನ ರೆಡ್ಡಿಯವರ ಬಾಂಧವ್ಯ ಈಗ ಒಂದು ಅರ್ಥದಲ್ಲಿ ಚೆನ್ನಾಗಿಯೇ ಇದೆ. ಗಲಾಟೆ ನಡೆದ ಮೇಲೆ, ಪೊಲೀಸರಿಗಿಂತ ಮೊದಲು ರೆಡ್ಡಿ ಫೋನ್ ಮಾಡಿರುವುದು ನೇರ ಸಿದ್ಧರಾಮಯ್ಯ ಅವರಿಗೆ. ಆಗಿನ್ನೂ ರಾಜಶೇಖರ್ ರೆಡ್ಡಿ ಸಾವಾಗಿರಲಿಲ್ಲ. ಶ್ರೀರಾಮುಲು ಅವರೂ ಕೂಡಾ ಮಾತನಾಡಿದ್ದಾರೆ.
ಹೇಗೇ ನೋಡಿದರೂ ಸಿದ್ದರಾಮಯ್ಯ ಕಣ್ಣಿನಲ್ಲಿ ಭರತ್ ರೆಡ್ಡಿಯೇ ವಿಲನ್ ಆಗಿ ಕಾಣಿಸಿದ್ದಾರೆ. ಪೊಲೀಸರು ತೆಗೆಸಿದ ಮೇಲೂ ಕೂಡಾ, ಹಠಕ್ಕೆ ಬಿದ್ದು ಬ್ಯಾನರ್ ಹಾಕಿಸಿದ್ದೇಕೆ, ಅಲ್ಲಿಯೇ ಕುರ್ಚಿ ಹಾಕ್ಕೊಂಡು ಕೂತು, ಪೊಲೀಸರನ್ನೂ ಹೆದರಿಸಿ ಬ್ಯಾನರ್ ಹಾಕಿಸ್ತಾನೆ ಎಂದರೆ ಏನರ್ಥ.. ಇಲ್ಲಿರೋದು ಯಾರ ಸರ್ಕಾರ. ದೌಲತ್ತುಗಳನ್ನೆಲ್ಲ ಮನೆಯಲ್ಲಿಟ್ಟು ಬರಬೇಕು, ಒಬ್ಬ ಶಾಸಕನಾಗಿ ಹೇಗೆ ವರ್ತಿಸಬೇಕು ಅನ್ನೋ ಪರಿಜ್ಞಾನ ಬೇಡ್ವಾ ಎಂದೆಲ್ಲ ತರಾಟೆಗೆ ತೆಗೆದುಕೊಂಡರಂತೆ.
ಭರತ್ ರೆಡ್ಡಿಗೆ ಅವರ ತಂದೆಯೂ ಕೂಡಾ ಇಷ್ಟೊಂದು ಸೀರಿಯಸ್ ಆಗಿ ಬೈದಿರಲಿಲ್ಲವಂತೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಇಡೀ ಘಟನೆಯನ್ನು ಪರ್ಸನಲ್ ಆಗಿ ತೆಗೆದುಕೊಂಡಿದ್ದಾರೆ. ಹೊರಗೆ ಅದನ್ನು ಬ್ಯಾಲೆನ್ಸ್ ಮಾಡಬೇಕು. ವಿಪರ್ಯಾಸ ಎಂದರೆ ಇದೇ.



