ಕಾಂಗ್ರೆಸ್ಸಿನಲ್ಲಿ ಬಂಡಾಯದ ಧ್ವನಿ ಮೊಳಗುತ್ತಿವೆ. ಹರಿಪ್ರಸಾದ್ ಅವರೇನೋ ಬಹಿರಂಗವಾಗಿ ಹೇಳಿಕೆ ಕೊಟ್ಟರು. ತಮಗೆ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಇದೆ ಎನ್ನುವುದನ್ನು ತೋಡಿಕೊಂಡರು. ಶಿಸ್ತುಕ್ರಮಕ್ಕೂ ಕ್ಯಾರೆ ಎನ್ನುತ್ತಿಲ್ಲ. ಏಕೆಂದರೆ ಹರಿಪ್ರಸಾದ್ ಕಳೆದುಕೊಳ್ಳುವುದು ಏನೂ ಇಲ್ಲ. ಹರಿಪ್ರಸಾದ್ ಅವರ ಮಕ್ಕಳು ರಾಜಕೀಯದಲ್ಲಿ ಇಲ್ಲ. ಬರುವ ಸೂಚನೆಯೂ ಇಲ್ಲ. ನಷ್ಟ ಇಲ್ಲದಿರುವಾಗ ಯುದ್ಧ ಮಾಡುವುದಕ್ಕೇನು ತೊಂದರೆ ಎಂದೇ ಫೀಲ್ಡಿಗೆ ಇಳಿದಿದ್ದಾರೆ ಹರಿಪ್ರಸಾದ್. ಆದರೆ ಎರಡನೇ ಬಂಡಾಯ ಇದೆಯಲ್ಲ, ಅದು ಹಾಗಲ್ಲ.
ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದು ಒಬ್ಬರಲ್ಲ.. ಇಬ್ಬರಲ್ಲ.. 30ಕ್ಕೂ ಹೆಚ್ಚು ಶಾಸಕರು. ಖುದ್ದು ಸಹಿ ಮಾಡಿ ಪತ್ರ ಕೊಟ್ಟಿದ್ದಾರೆ. ದಯವಿಟ್ಟು ಶಾಸಕರ ಸಭೆ ಕರೆದು, ಸಮಸ್ಯೆ ಬಗೆಹರಿಸಬೇಕು ಎನ್ನುವುದು ಅವರ ದೂರು. ಜುಲೈ 27ರಂದು ಶಾಸಕರ ಸಭೆ ಇದೆ. ಆ ಸಭೆಯಲ್ಲಿ ಇಂತಿಂತಹ ವಿಷಯಗಳನ್ನು ಚರ್ಚೆ ಮಾಡಬೇಕು ಎನ್ನುವುದು ಶಾಸಕರ ಆಗ್ರಹ.
ಅವರದ್ದೇ ಸರ್ಕಾರದ ಅವರದ್ದೇ ಸಚಿವರ ವಿರುದ್ಧ ಆಕ್ರೋಶಗೊಂಡಿರುವ ಶಾಸಕರು, ಈ ಸಚಿವರ ಕಾರ್ಯವೈಖರಿ ಸರಿ ಇಲ್ಲ. ಎಲ್ಲದಕ್ಕೂ ಕೊಕ್ಕೆ ಹಾಕುತ್ತಿದ್ದಾರೆ ಎಂದು ವಿಶೇಷವಾಗಿ ಇಬ್ಬರು ಸಚಿವರ ಪ್ರಸ್ತಾಪ ಮಾಡಿದ್ದಾರೆ. ಆ ಇಬ್ಬರೂ ಸಚಿವರು ಖುದ್ದು ಮುಖ್ಯಮಂತ್ರಿಗಳ ಆದೇಶವನ್ನೂ ಪಾಲಿಸುತ್ತಿಲ್ಲ ಎನ್ನುವುದು ಶಾಸಕರ ದೂರು ಎನ್ನಲಾಗಿದೆ.
ಅಳಂದದ ಶಾಸಕ ಬಿ.ಆರ್.ಪಾಟೀಲ್, ಅಸಮಾಧಾಗಳ ಬಗ್ಗೆ ಪತ್ರ ಬರೆದಿರುವುದು ಸತ್ಯ. ಹಾಗಂತ ಅದು ಸರ್ಕಾರದ ವಿರುದ್ಧ ಅಸಮಾಧಾನ ಅಲ್ಲ ಎಂದಿದ್ದರೆ, ಪತ್ರ ಬರೆದಿರುವುದು ಶಾಸಕಾಂಗ ಪಕ್ಷದ ಸಭೆ ಕರೆಯೋಕೆ, ಅದಕ್ಕೆ ನಾನೂ ಸಹಿ ಹಾಕಿದ್ದೇನೆ ಅಂತಾರೆ ಬಸವರಾಜ ರಾಯರೆಡ್ಡಿ. ರಾಯರೆಡ್ಡಿ ಈ ಸರ್ಕಾರದಲ್ಲಿ ಸಚಿವರಾಗುವ ಉತ್ಸಾಹ ಇಟ್ಟುಕೊಂಡಿದ್ದವು. ಆಗಲಿಲ್ಲ ಎನ್ನುವುದು ಬೇರೆ ಮಾತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪ್ರಕಾರ ಯಾರೊಬ್ಬರೂ ಪತ್ರ ಬರೆದಿಲ್ಲ. ಎಲ್ಲವೂ ಮಾಧ್ಯಮಗಳ ಕಪೋಲ ಕಲ್ಪಿತ ಅಷ್ಟೆ. ಹಾಗಾದರೆ ಬಿ.ಆರ್.ಪಾಟೀಲ್, ರಾಯರೆಡ್ಡಿಯವರು ಸುಳ್ಳು ಹೇಳುತ್ತಿದ್ದಾರಾ ಅಥವಾ ಸಿಎಂ, ಡಿಸಿಎಂ ಸುಳ್ಳು ಹೇಳುತ್ತಿದ್ದಾರಾ..?
ಹಾಗಂತ ಇದೇನೋ ಸರ್ಕಾರವನ್ನೇ ಬೀಳಿಸುವಂತೆ ನಡುಗಿಸುತ್ತೆ ಎಂದುಕೊಳ್ಳೋ ಅಗತ್ಯವಿಲ್ಲ. ಒಂದಿಬ್ಬರು ಸಚಿವರು ಎಲ್ಲ ಇಲಾಖೆಗಳಲ್ಲೂ ಮೂಗು ತೂರಿಸುತ್ತಿರುವುದರಿಂದ ಕೆಲವು ಸಚಿವರೂ ಶಾಸಕರ ಬೆನ್ನಿಗೆ ಇದ್ದಾರೆ ಎನ್ನುತ್ತಿವೆ ಮೂಲಗಳು. ಹಾಗಾದರೆ ಆ ರೀತಿ ಮೂಗು ತೂರಿಸುತ್ತಿರುವ ಆ ಸಚಿವರು ಯಾರು? ಅವರು ಯಾರಿಗೆಲ್ಲ `ಪ್ರಿಯ’ರಾಗಿದ್ದಾರೆ. ಅವರನ್ನು `ಪರಮೇಶ್ವರ’ನೂ ಟಚ್ ಮಾಡುವುದಕ್ಕೆ ಆಗುವುದಿಲ್ಲವೇ? ಆ ಮಲ್ಲಿಕಾರ್ಜುನ ದೇವರೇ ಹೇಳಬೇಕು.



