ಬಿ.ವೈ.ವಿಜಯೇಂದ್ರ. ಬಿಜೆಪಿ ರಾಜ್ಯಾಧ್ಯಕ್ಷರಾದ ಅವಧಿಯಿಂದ ಬಿಜೆಪಿಯೊಳಗೆ ಒಂದು ತಂಡ ಗುಸುಗುಸು ಗುಮ್ಮುತ್ತಲೇ ಇದೆ. ವಿಜಯೇಂದ್ರ ಅವರ ಅತಿ ದೊಡ್ಡ ಶಕ್ತಿ ಯಡಿಯೂರಪ್ಪ ಅವರ ತಂದೆ ಎನ್ನುವುದಾದರೆ, ಅದೇ ಅವರ ಎದುರಾಳಿಗಳ ಶಕ್ತಿಯೂ ಹೌದು. ಈಗ ವಿಜಯೇಂದ್ರ ಅವರ ವಿರುದ್ಧ ಒಂದು ದೊಡ್ಡ ತಂಡ ಸೃಷ್ಟಿಯಾಗಿದೆ. ಬಿಜೆಪಿ ಈ ಬಾರಿ ಗೆದ್ದಿರೋದು ಕೇವಲ 66 ಎಂಎಲ್ʻಎಗಳನ್ನು ಮಾತ್ರ. ಹೀಗಾಗಿ ವಿರೋಧಿಗಳ ತಂಡ ಆ ಮಟ್ಟಿಗೆ ದೊಡ್ಡದೇ ಹೌದು.
ವಿಜಯೇಂದ್ರ ವಿರುದ್ಧ ತೊಡೆ ತಟ್ಟಿರುವವರಲ್ಲಿ ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ ಲೀಡ್ʻನಲ್ಲಿರುವ ನಾಯಕರು. ಯತ್ನಾಳ್ ಈಗಲ್ಲ, ಹಿಂದಿನಿಂದಲೂ ಯಡಿಯೂರಪ್ಪ ವಿರುದ್ಧ ಕಿಡಿ ಕಾರುತ್ತಲೇ ಬಂದವರು. ಎಲೆಕ್ಷನ್ ಸಮಯದಲ್ಲಿ ಅದು ಹೇಗೋ ಯಡಿಯೂರಪ್ಪ ಅವರನ್ನ ಕರೆದುಕೊಂಡು ಹೋಗಿ ಪ್ರಚಾರ ಮಾಡಿಸಿಕೊಳ್ಳೋ ಯತ್ನಾಳ್, ಎಲೆಕ್ಷನ್ ಮುಗಿಯುತ್ತಿದ್ದಂತೆ ಉಲ್ಟಾ ಹೊಡೆದು ಬಿಡುತ್ತಾರೆ. ಬಿಜೆಪಿಯನ್ನು ಬಿಟ್ಟು ಹೋಗಿದ್ದ ಯತ್ನಾಳ್ ಅವರನ್ನು ಬಿಜೆಪಿಗೆ ವಾಪಸ್ ತಂದು ಗೆಲ್ಲಿಸಿದವರು ಇದೇ ಯಡಿಯೂರಪ್ಪ.
ಇದು ಯತ್ನಾಳ್ ಅವರ ಕಥೆಯಾದರೆ, ರಮೇಶ್ ಜಾರಕಿಹೊಳಿಯವರ ಕಥೆಯೇ ಬೇರೆ. ಅವರೀಗ ಯತ್ನಾಳ್ ಅವರ ಜೊತೆ ಕೈ ಜೋಡಿಸಿದ್ದಾರೆ. ಯತ್ನಾಳ್ ಅವರಿಗೆ ತಾವು ಯಡಿಯೂರಪ್ಪ ಅವರಿಗಿಂತ ಶ್ರೇಷ್ಟ, ಬಲಿಷ್ಠ ನಾಯಕ ಎಂದು ಅನ್ನಿಸಿದ್ದರೆ, ರಮೇಶ್ ಜಾರಕಿಹೊಳಿ ಅವರಿಗೆ ಯತ್ನಾಳ್ ಅವರೇ ಪರಮಾಪ್ತ ಎಂದು ಅನ್ನಿಸಿರಬೇಕು. ಬಿಜೆಪಿ ಸರ್ಕಾರದಲ್ಲಿ ವಿಡಿಯೋ ಮೂಲಕ ಮುಜುಗರ ಸೃಷ್ಟಿಸಿದ ಜಾರಕಿಹೊಳಿ ಅವರಿಗೆ ಈಗ ಬಿಜೆಪಿಯಲ್ಲಿ ಈ ಮೊದಲಿನ ಮಾನ್ಯತೆ, ಗೌರವ ಸಿಗುತ್ತಿಲ್ಲ. ಹೀಗಾಗಿ ಅವರು ತಿರುಗಿಬಿದ್ದಿದ್ದಾರಾ.. ಗೊತ್ತಿಲ್ಲ.
ಮುಂದಿನ ದಿನಗಳಲ್ಲಿ ಯಾವುದಾದರೂ ಭರವಸೆ ಸಿಕ್ಕರೆ, ಇದೇ ರಮೇಶ್ ಜಾರಕಿಹೊಳಿ ಸಡನ್ ಆಗಿ ಟೀಂ ಬದಲಿಸಿದರೂ ಆಶ್ಚರ್ಯ ಇಲ್ಲ. ಇನ್ನು ಕುಮಾರ್ ಬಂಗಾರಪ್ಪ ಅವರಿಗೆ ಶಿವಮೊಗ್ಗ ಜಿಲ್ಲೆಯ ಚಿಂತೆ. ಅಣ್ಣ ರಾಘವೇಂದ್ರ ಎಂಪಿಯಾಗಿ, ತಮ್ಮ ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾಗಿದ್ದರೆ.. ಜಿಲ್ಲೆಯಲ್ಲಿ ತಮ್ಮ ಮಾತು ನಡೆಯೋದಿಲ್ಲ ಎಂಬ ಹಪಹಪಿ ಕಾಣುತ್ತಿದೆ.
ಅರವಿಂದ ಲಿಂಬಾವಳಿ, ಜಿಎಂ ಸಿದ್ದೇಶ್ವರ್, ಅಣ್ಣಾಸಾಹೇಬ್ ಜೊಲ್ಲೆ, ಪ್ರತಾಪ್ ಸಿಂಹ ಅವರ ಕಥೆ ಬೇರೆ. ಇವರಲ್ಲಿ ಲಿಂಬಾವಳಿ, ಸಿದ್ದೇಶ್ವರ್ ಮತ್ತು ಜೊಲ್ಲೆ ತಮ್ಮ ತಮ್ಮ ಹಠದಿಂದಾಗಿ ಸೋತವರು. ಇನ್ನು ಪ್ರತಾಪ್ ಸಿಂಹ ಲಾಭ ಬೇಕಾದಾಗ.. ಯಡಿಯೂರಪ್ಪ ಕಾಲಿಗೆ ಬೀಳುವ.. ಅವಕಾಶ ಸಿಕ್ಕಾಗ ತಿರುಗಿಬೀಳುವ ರಾಜಕಾರಣಿ.
ಇದಿಷ್ಟು ಇವರ ಕಥೆಯಾದರೆ..ರಿಯಲ್ ಕಥೆ ಬೇರೆ ಇದೆ. ಮತ್ತೊಂದು ಪಾದಯಾತ್ರೆ ನಡೆಸುವ ನೆಪದಲ್ಲಿ ಬಿಜೆಪಿಯ ಹಲವು ಹಿರಿಯ ನಾಯಕರು ಪ್ರತ್ಯೇಕ ಸಭೆ ನಡೆಸುವ ಮೂಲಕ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ದೆಹಲಿದರೆಗೂ ತಲುಪಿ ಪಕ್ಷದ ವರಿಷ್ಠರು ಶೀಘ್ರ, ಮಧ್ಯಪ್ರವೇಶ ಮಾಡದೇ ಇದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವುದು ನಿಶ್ಚಿತ.
ವಾಸ್ತವವಾಗಿ ಮತ್ತೊಂದು ಪಾದಯಾತ್ರೆ ನಡೆಸಬೇಕು ಎಂಬುದು ಸಭೆಯ ಮುಖ್ಯ ಉದ್ದೇಶವಾಗಿರಲಿಲ್ಲ, ವಿಜಯೇಂದ್ರಗೆ ಹೇಗೆ ಕಡಿವಾಣ ಹಾಕಬೇಕು ಎಂಬುದರ ಬಗ್ಗೆಯೇ ಹೆಚ್ಚು ಚರ್ಚೆ ನಡೆದಿದ್ದು ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ನಾಯಕರು ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರಂತೆ. ಒಟ್ಟು 12 ಮುಖಂಡರು ಪಾಲ್ಗೊಂಡಿರುವುದು ಪಕ್ಷದಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿದೆ.
ಏಕಾಏಕಿ ವಿಜಯೇಂದ್ರ ವಿರುದ್ಧ ಸ್ವಪಕ್ಷಿ ಯರು ದೊಡ್ಡ ಮಟ್ಟದಲ್ಲಿ ಒಗ್ಗಟ್ಟಾಗುತ್ತಿರು ವುದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಯೋಸಹಜವಾಗಿ ಅವರು ‘ದುರ್ಬಲ’ ರಾಗುತ್ತಿರುವುದೂ ಒಂದು ಮುಖ್ಯ ಕಾರಣ. ಪೋಕೋ ಪ್ರಕರಣದ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಯಡಿಯೂರಪ್ಪ ವಿರುದ್ಧ ಹರಿಹಾಯುತ್ತಿರುವುದರಿಂದ ಅದನ್ನೇ ಬಳಸಿಕೊಂಡು ಬಿಜೆಪಿಯಲ್ಲಿನ ವಿರೋಧಿಗಳೂ ಇದೇ ಸರಿಯಾದ ಸಮಯ ಎಂದುಕೊಂಡು ಒಗ್ಗಟ್ಟಾಗುತ್ತಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಬಿಜೆಪಿಯಲ್ಲಿ ದೊಡ್ಡಮಟ್ಟದಲ್ಲಿ ನಾಯಕತ್ವ ಬೆಳೆಸುವ, ಬೆಳೆಸಿಕೊಳ್ಳುವುದು ಕೂಡಾ ಸಮಸ್ಯೆಯಾಗುತ್ತಿರುವುದು ಸುಳ್ಳಲ್ಲ.



