ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ. ಹಲವು ದಿನಗಳಿಂದ ತಮಿಳುನಾಡು ಬಿಜೆಪಿ ಅಧ್ಯಕ್ಷ ಘಟಕದ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಅದು ಅಧಿಕೃತವಾಗಿದೆ. ರಾಜೀನಾಮೆ ಬಳಿಕ ಮಾತನಾಡಿದ ಕೆ.ಅಣ್ಣಾಮಲೈ ʻʻಈಗ ನಾನು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಲ್ಲ. ತಮಿಳುನಾಡಿನಲ್ಲಿ ಜೀವ ಕೊಟ್ಟು ಬಿಜೆಪಿ ಪಕ್ಷವನ್ನು ಬೆಳೆಸಿದ್ದೇನೆ. ಮುಂದಿನ ನೂತನ ರಾಜ್ಯಾಧ್ಯಕ್ಷ ಯಾರಾಗಬೇಕು ಎಂದು ನಾನು ಯಾರನ್ನೂ ಶಿಫಾರಸು ಮಾಡಿಲ್ಲ. ಇಲ್ಲಿಯೇ ಇರುತ್ತೇನೆ. ಎಲ್ಲಿಗೂ ಹೋಗಲ್ಲ. ಪಕ್ಷ ಚೆನ್ನಾಗಿರಬೇಕು. ಏಕೆಂದರೆ ಈ ಪಕ್ಷದಲ್ಲಿ ಎಲ್ಲ ಒಳ್ಳೆಯವರೇ ಇದ್ದಾರೆ. ಪಕ್ಷಕ್ಕಾಗಿ ಸಾಕಷ್ಟು ಜನ ಉಸಿರು ಕೊಟ್ಟಿದ್ದಾರೆ. ಬಿಜೆಪಿ ನೂತನ ಅಧ್ಯಕ್ಷರನ್ನ ಆಯ್ಕೆ ಮಾಡುವಾಗ ಇನ್ನಷ್ಟು ಮಾತನಾಡುತ್ತೇನೆʼʼ ಎಂದಿದ್ದಾರೆ.
ಸದ್ಯ ಕೆ.ಅಣ್ಣಾಮಲೈ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಹಿಂದುಳಿದ ಸಮುದಾಯಕ್ಕೆ ಸೇರಿರುವ ನೈನಾರ್ ನಾಗೇಂದ್ರನ್ ಆಯ್ಕೆ ಆಗುವ ಸಾಧ್ಯತೆ ಇದೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ಗುರಿ ಇಟ್ಟುಕೊಂಡಿದೆ.
ಅಣ್ಣಾಮಲೈ ರಾಜೀನಾಮೆಗೆ ಏನು ಕಾರಣ..?
ನಂ.1 : ಅಣ್ಣಾಡಿಎಂಕೆ ಜೊತೆ ಮೈತ್ರಿ
ತಮಿಳುನಾಡಿನಲ್ಲಿ ಮುಂದಿನ ವರ್ಷ ಅಂದರೆ 2026ಕ್ಕೆ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ, ಬಿಜೆಪಿ – ಎಐಎಡಿಎಂಕೆ ಪಕ್ಷಗಳು ಮೈತ್ರಿಯ ಬಗ್ಗೆ ಸರಣಿ ಚರ್ಚೆಗಳು ನಡೆಯುತ್ತಿವೆ. ಮೈತ್ರಿ ಆಗಬೇಕು ಎಂದರೆ ಅಣ್ಣಾಮಲೈ ಬಿಜೆಪಿಗೆ ನಾಯಕತ್ವ ಇರಬಾರದು ಎನ್ನುವ ಕಂಡೀಷನ್ ಅನ್ನು ಎಡಪ್ಪಾಡಿ ಹಾಕಿದ್ದರು. 2023ರಲ್ಲಿ ಎಐಎಡಿಎಂಕೆ ಪಾರ್ಟಿಯು, ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು. ಅಣ್ಣಾದೊರೈ ಮತ್ತು ಜಯಲಲಿತಾ ಬಗ್ಗೆ ಅಣ್ಣಾಮಲೈ ಟೀಕೆಯನ್ನು ಮಾಡಿದ ಹಿನ್ನಲೆಯಲ್ಲಿ ಎಐಎಡಿಎಂಕೆ, ಮೈತ್ರಿಕೂಟದಿಂದ ಹೊರನಡೆದಿತ್ತು. ಆದರೆ, ಪ್ರತ್ಯೇಕವಾಗಿ ಸ್ಪರ್ಧಿಸಿದ್ದರಿಂದ, ಲೋಕಸಭಾ ಚುನಾವಣೆಯಲ್ಲಿ ತೀವ್ರ ಹಿನ್ನಡೆಯನ್ನು ಎದುರಿಸಿತ್ತು. ಮುಂದಿನ ವಿಧಾನಸಭಾ ಚುನಾವಣೆಯನ್ನು ತಮ್ಮ (ಎಐಎಡಿಎಂಕೆ) ನೇತೃತ್ವದಲ್ಲೇ ಎದುರಿಸಬೇಕು ಎಂಬ ತೀರ್ಮಾನಕ್ಕೆ ಅಮಿತ್ ಶಾ ಕೂಡಾ ಬಂದಿದ್ದಾರೆ.
ಏನಾದರೂ ಆಗಲಿ.. ಅಣ್ಣಾಮಲೈ ನೇತೃತ್ವ ಬೇಡ. ಟಿಟಿವಿ ದಿನಕರನ್, ಶಶಿಕಲಾ ನಟರಾಜನ್, ಓ.ಪನ್ನೀರಸೆಲ್ವಂ ಮುಂತಾದವರಿಗೆ ಆದ್ಯತೆ ನೀಡಿದರೆ ಸಮಸ್ಯೆ ಇಲ್ಲ. ಆದರೆ, ಕೆ.ಅಣ್ಣಾಮಲೈ ಅವರ ಪಾತ್ರವನ್ನು ಕಮ್ಮಿ ಮಾಡಬೇಕು ಎನ್ನುವ ಒಂದೇ ಒಂದು ಕಂಡೀಷನ್ ಹಾಕಿದ್ದಾರಂತೆ. ಹೀಗಾಗಿ ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ತೊರೆದಿದ್ದಾರೆ ಎನ್ನುತ್ತಿದೆ ತಮಿಳುನಾಡು ಬಿಜೆಪಿ ಘಟಕ.
ಅಣ್ಣಾಮಲೈ ರಾಜೀನಾಮೆಗೆ ಏನು ಕಾರಣ..?
ನಂ.2 : ಸರ್ವೆಯಲ್ಲಿ ಅಣ್ಣಾಮಲೈ ಪರ ಒಲವಿಲ್ಲ..!
ಇತ್ತೀಚೆಗೆ ತಮಿಳುನಾಡಿನಲ್ಲಿ ಸಿವೋಟರ್ ಒಂದು ಸರ್ವೇಯೊಂದನ್ನು ನಡೆಸಿತ್ತು. ತಮಿಳುನಾಡಿನ ಮುಂದಿನ ಸಿಎಂ ಯಾರಾಗಬೇಕು ಎಂಬ ಸಮೀಕ್ಷೆಯಲ್ಲಿ ಬಿಜೆಪಿಯ ಅಣ್ಣಾಮಲೈ ಕೊನೆಯ ಸ್ಥಾನದಲ್ಲಿದ್ದರು. ಹಾಲಿ ಸಿಎಂ ಸ್ಟಾಲಿನ್ ಪರ ಶೇ.27ರಷ್ಟು ಜನ ಇದ್ದರೆ, ತಮಿಳಗ ವೆಟ್ರಿ ಕಜಗಂ ಪಕ್ಷವನ್ನು ಹುಟ್ಟು ಹಾಕಿರುವ ನಟ ವಿಜಯ್, ಸ್ಟಾಲಿನ್ ನಂತರದ ಸ್ಥಾನವನ್ನು ಪಡೆದಿದ್ದರು. ವಿಜಯ್, ರಾಜಕೀಯ ಎಂಟ್ರಿ ಕೊಟ್ಟು ತುಂಬಾ ದಿನಗಳೇನೂ ಆಗಿಲ್ಲ. ಅಷ್ಟೇ ಅಲ್ಲ, ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಶೇ.10ರಷ್ಟು ವೋಟ್ ಪಡೆದು 3ನೇ ಸ್ಥಾನದಲ್ಲಿದ್ದರು. ಅದಾದ ನಂತರದ ಸ್ಥಾನದಲ್ಲಿದ್ದ ಕೆ.ಅಣ್ಣಾಮಲೈ ಅವರು ಶೇ.9ರಷ್ಟು ಮತ ಪಡೆದಿದ್ದರು. ಅಂದರೆ ಸಿಎಂ ರೇಸಿನಲ್ಲಿ ಅಣ್ಣಾಮಲೈ ಸ್ಥಾನ ಕೊನೆಯಲ್ಲಿತ್ತು. ಇದೂ ಕೂಡಾ ಅಣ್ಣಾಮಲೈ ರಾಜೀನಾಮೆ ಪಡೆಯುವುದಕ್ಕೆ ಕಾರಣ ಎನ್ನಲಾಗ್ತಿದೆ.
ಅಣ್ಣಾಮಲೈ ಜನಪ್ರಿಯರಾಗುತ್ತಿದ್ದಾರೆಯೇ ಹೊರತು, ಅವರಿಂದ ಪಕ್ಷಕ್ಕೆ ಲಾಭವಾಗುತ್ತಿಲ್ಲ ಎಂಬ ಮಾತುಗಳು ಬಿಜೆಪಿಯಲ್ಲಿಯೇ ಕೇಳಿ ಬರುತ್ತಿದೆ. ಎಲ್ಲದರ ಜೊತೆಗೆ ಎಲೆಕ್ಷನ್ ವರ್ಷ. ಅಣ್ಣಾಮಲೈ ಅವರಂತೆ ಇನ್ನೂ ಒಂದು ವರ್ಷ ಕಾಯುವುದಕ್ಕೆ ಬಿಜೆಪಿ ಸಿದ್ಧವಿಲ್ಲ.



