10 ವರ್ಷಗಳ ಹಿಂದೆ ನರೇಂದ್ರ ಮೋದಿಯವರ ಅಬ್ಬರದ ಗೆಲುವಿನ ಬಳಿಕ ನೆಲಕಚ್ಚಿದ್ದ 140 ವರ್ಷಗಳ ಇತಿಹಾಸವಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಈ ಬಾರಿಯ ಲೋಕಸಭೆ ಚುನಾವಣೆಯ ಮೂಲಕ ಪುನಃ ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದಿದೆ. ಕಾಂಗ್ರೆಸ್ ಪಕ್ಷದ ಪುನರುತ್ಥಾನದ ಜೊತೆಗೇ ಬಿಜೆಪಿಗೆ ಪ್ರಬಲ ವಿರೋಧಿ ಶಕ್ತಿಯಾಗಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಕೂಡ ಎದ್ದುನಿಂತಿದೆ. ಎಲ್ಲರೂ ಇದನ್ನು ರಾಹುಲ್ ಗಾಂಧಿ ತಲೆಗೆ ಪಟ್ಟ ಕಟ್ಟಲು ನೋಡುತ್ತಿದ್ಧಾರೆ. ಆದರೆ, ರಿಯಲ್ ಹೀರೋ ಯಾರು ಎಂದರೆ ಅದು ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ.
ಕಳೆದ ಎರಡು ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ನೀಡಲು ವಿಫಲವಾಗಿದ್ದ ಕಾಂಗ್ರೆಸ್ ಸಣ್ಣಪುಟ್ಟ ರಾಜಕೀಯ ಪಕ್ಷಗಳನ್ನೆಲ್ಲ ಒಗ್ಗೂಡಿಸಿ ಇಂಡಿಯಾ ಮೈತ್ರಿಕೂಟ ರಚಿಸಿಕೊಂಡಿತ್ತು. ಇತರೆ ಪಕ್ಷಗಳಿಗೆ ಹೋಲಿಸಿದರೆ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ಸನ್ನು, ಆ ಪಕ್ಷಗಳು ಹೇಗೇ ನಡೆಸಿಕೊಂಡರೂ.. ಖರ್ಗೆ ತಾಳ್ಮೆ ವಹಿಸಿದರು. ಸ್ವಲ್ಪ ಸ್ವಲ್ಪವೇ ಸಿಕ್ಕ ಕ್ಷೇತ್ರಗಳಲ್ಲಿ ಇಳಿವಯಸ್ಸಿನಲ್ಲೂ ಓಡಾಡಿ, ಕಾರ್ಯಕರ್ತರಿಗೆ ಅರ್ಥ ಮಾಡಿಸಿ, ಉತ್ಸಾಹ ತುಂಬಿದರು.
ರಾಹುಲ್ ಗಾಂಧಿಗೆ ಇದ್ದ ದೊಡ್ಡ ಕೊರತೆಯೇ ಅದು. ತಳಮಟ್ಟದ ಕಾರ್ಯಕರ್ತರ ಕಷ್ಟಗಳು ಅರ್ಥವಾಗುವುದಿಲ್ಲ. ಆದರೆ, ಅದು ಖರ್ಗೆಯವರಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿಯೇ ಕಾರ್ಯಕರ್ತರಿಗೆ ವಾಸ್ತವ ಮತ್ತು ಹೋರಾಟದ ಮಹತ್ವವನ್ನು ಅರ್ಥ ಮಾಡಿಸಿದರು. ಶಕ್ತಿಹೀನವಾಗಿದ್ದ ಕಾಂಗ್ರೆಸ್ ಪಕ್ಷ ಮರಳಿ ಶಕ್ತಿ ಗಳಿಸಿಕೊಳ್ಳುವುದಕ್ಕೆ ತಾಕತ್ತು ಕೊಟ್ಟರು.
ಒಂದು ಹಂತದಲ್ಲಿ ರಾಹುಲ್ ಗಾಂಧಿಯನ್ನು ಮೀರಿ ಖರ್ಗೆ ಹೆಸರು ಪ್ರಧಾನಿ ಪಟ್ಟಕ್ಕೆ ಕೇಳಿ ಬಂದಾಗ ಜಾಗರೂಕತೆಯಿಂದ ನಿರ್ವಹಿಸಿದ್ದು ಖರ್ಗೆಯವರ ಅನುಭವಕ್ಕೆ ಸಾಕ್ಷಿ. ಪ್ರಧಾನಮಂತ್ರಿ ಯಾರಾಗಬೇಕು ಎಂಬ ಚರ್ಚೆ, ಚುನಾವಣೆ ಹೊತ್ತಿನಲ್ಲಿಯೇ ಶುರುವಾದರೆ ಒಕ್ಕೂಟದ ಭವಿಷ್ಯ ಏನಾಗಬಹುದು ಎಂಬ ಅಂದಾಜು ಖರ್ಗೆಯವರಿಗೆ ಇತ್ತು. ಅದನ್ನು ಒಕ್ಕೂಟದ ಇತರೆ ನಾಯಕರಿಗೂ ಅರ್ಥ ಮಾಡಿಸಿದ ಖರ್ಗೆ, ಯಾರೊಬ್ಬರೂ ಆ ಬಗ್ಗೆ ಮಾತನಾಡದಂತೆ ಮಾಡಿಬಿಟ್ಟರು. ತಂತ್ರಗಾರಿಕೆಯಲ್ಲಿ ಗೆದ್ದರು.
2014ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಳಿಕ ನರೇಂದ್ರ ಮೋದಿ ಪ್ರವರ್ಧಮಾನಕ್ಕೆ ಬಂದ ರೀತಿಯಿಂದಾಗಿ ಇನ್ನು 40 ವರ್ಷಗಳ ಕಾಲ ಬಿಜೆಪಿಗೆ ದೇಶದಲ್ಲಿ ಪ್ರಬಲ ವಿರೋಧ ಪಕ್ಷಗಳೇ ಇರುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆ ಮಾತನ್ನು ಕೇವಲ 10 ವರ್ಷಗಳಲ್ಲಿ ಸುಳ್ಳಾಗಿಸಿದ ಖರ್ಗೆ, ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯವನ್ನೇ ತುಂಬಿದರು.
ಹಾಗೆ ನೋಡಿದರೆ, ಕರ್ನಾಟಕದಲ್ಲಿ ಜನತಾ ಪರಿವಾರದ ಆರ್ಭಟದ ಮಧ್ಯೆ ಕಳೆದು ಹೋಗಿದ್ದ ಪಕ್ಷಕ್ಕೂ ಜೀವ ಶಕ್ತಿ ತುಂಬಿದ್ದವರು ಖರ್ಗೆ. ಎಸ್.ಎಂ. ಕೃಷ್ಣ ಸಿಎಂ ಆಗಿದ್ದ ಅವಧಿಯಿತ್ತಲ್ಲ, ಕೃಷ್ಣ ಅವರು ಅಧಿಕಾರಕ್ಕೆ ಬಂದಿದ್ದು ಎಲೆಕ್ಷನ್ನಿಗೆ ಕೆಲವೇ ತಿಂಗಳುಗಳು ಇರುವಾಗ. ಆದರೆ.. ಅದಕ್ಕೆ ಮುನ್ನ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದ ಖರ್ಗೆ, ರಾಜ್ಯ ಕಾಂಗ್ರೆಸ್ಸಿಗೆ ಬೇಕಾಗಿದ್ದ ನವಚೈತನ್ಯ ತುಂಬಿದ್ದರು. ರಾಮಕೃಷ್ಣ ಹೆಗಡೆ, ದೇವೇಗೌಡ, ಜೆಹೆಚ್ ಪಟೇಲ್, ಸಿದ್ದರಾಮಯ್ಯ, ಯಡಿಯೂರಪ್ಪ.. ಮೊದಲಾದ ಘಟಾನುಘಟಿಗಳ ವಿರುದ್ಧ ಸೋಲುತ್ತಿದ್ದ ಪಕ್ಷಕ್ಕೆ ಶಕ್ತಿ ತುಂಬಿದ್ದರು. ಈಗ ರಾಷ್ಟ್ರೀಯ ಮಟ್ಟದಲ್ಲೂ ಅಂಥದ್ದೇ ಸಾಧನೆ ರಿಪೀಟ್ ಮಾಡಿದ್ಧಾರೆ. ಆದರೆ, ಖರ್ಗೆಯವರಿಗೆ ಸಿಗಬೇಕಾದ ಖ್ಯಾತಿ ಮತ್ತು ಹೆಸರು ಅವರಿಗೆ ಸಿಗುತ್ತಿಲ್ಲ, ಅಷ್ಟೆ.



