ರಾಜ್ಯದಲ್ಲಿ ಇತ್ತೀಚೆಗೆ ಸೈಟು, ಭೂಮಿ ನೋಂದಣಿಗೆ ಹೊಡೆತಗಳ ಮೇಲೆ ಹೊಡೆತ ಬೀಳುತ್ತಿದೆ. ಇ-ಖಾತಾ ಗೊಂದಲವೇ ಇನ್ನೂ ಬಗೆಹರಿದಿಲ್ಲ. ಈ ನಡುವೆಯೇ ಹೊಸ ಸಮಸ್ಯೆ ಉದ್ಭವವಾಗಿದೆ. ಸೋಮವಾರ ಬೆಳಗ್ಗೆಯಿಂದಲೇ ರಾಜ್ಯಾದ್ಯಂತ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ಸೇರಿದಂತೆ ಎಲ್ಲ ರೀತಿಯ ದಸ್ತಾವೇಜುಗಳ ನೋಂದಣಿ ಸ್ಥಗಿತಗೊಳಿಸಲಾಗಿದೆ. ಏಕಾಏಕಿ ಆಗಿರುವ ಈ ಕ್ರಮ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ದುಬಾರಿ ಹೊಡೆತ ಕೊಟ್ಟಿದೆ.
ಕಾರಣ ಏನು..?
ಕೇಂದ್ರದ ನೋಂದಣಿ ಕಾಯಿದೆ-1908ಗೆ ಕರ್ನಾಟಕ ನೋಂದಣಿ ತಿದ್ದುಪಡಿ ಕಾಯಿದೆ -2023ಕ್ಕೆ ರಾಷ್ಟ್ರಪತಿಗಳು ಅ.8 ರಂದು ಅಂಕಿತ ಹಾಕಿದ್ದಾರೆ. ಆ ಕಾಯಿದೆಯನ್ನು ಅ.19 ರಂದು ರಾಜ್ಯ ಸರ್ಕಾರ ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಇದು ಸೃಷ್ಟಿಸುವ ಸಮಸ್ಯೆಗಳನ್ನು ವಿರೋಧಿಸಿಯೇ ಈಗ ನೋಂದಣಿ ಸ್ಥಗಿತವಾಗಿರೋದು.
ಹೊಸ ಕಾಯಿದೆಯ ಸಮಸ್ಯೆ ಏನು? ಆತಂಕ ಏನು?
ಜಿಪಿಎ ಸಮಸ್ಯೆ : ರಾಜ್ಯದಲ್ಲಿ ನೋಂದಾಯಿತ ಜಿಪಿಎ ಹಾಗೂ ನೋಂದಣಿ ಮಾಡಿಸದ ಜಿಪಿಎ (ಆನ್‌ರಿಜಿಸ್ಟರ್ಡ್) ಮೇಲೂ ರಾಜ್ಯದಲ್ಲೂ ಆಸ್ತಿ ನೋಂದಣಿ ಮಾಡಲಾಗು ತ್ತಿತ್ತು. ಇದೀಗ ಜಿಪಿಎ ನೈಜತೆಯನ್ನು ಕೂಡಾ ಉಪ ನೋಂದಣಾಧಿಕಾರಿ ಪರೀಕ್ಷೆ ಮಾಡ ಬೇಕು. ಜಿಪಿಎ ಬರೆದುಕೊಟ್ಟವರು ಬದುಕಿರುವವರೆಗೂ ಮಾತ್ರ ಜಿಪಿಎಗೆ ಬೆಲೆ ಇರುತ್ತದೆ. ಜಿಪಿಎ ಬರೆದುಕೊಟ್ಟವರು ಬದುಕಿದ್ದಾರೋ ಅಥವಾ ಸತ್ತಿದ್ದಾರೋ ತಿಳಿಯುವುದು ಹೇಗೆ?
ನಿಷೇಧಿತ ದಸ್ತಾವೇಜುಗಳ ಪರಿಶೀಲನೆ ಗೊಂದಲ :
ಕೇಂದ್ರ ಅಧಿನಿಯಮ ಅಥವಾ ರಾಜ್ಯ ಅಧಿನಿಯಮದ ಮೂಲಕ ಕೆಲವು ವ್ಯವಹಾರಗಳಿಗೆ ನಿಷೇಧ ಹೇರಲಾಗಿದೆ. ಹೀಗೆ ನಿಷೇಧಿಸಲಾಗಿರುವ ವ್ಯವಹಾರಕ್ಕೆ ಸಂಬಂಧಿಸಿದ ದಸ್ತಾವೇಜುಗಳನ್ನೂ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಆದರೆ ಈ ಪರಿಶೀಲನೆಯಲ್ಲಿ ಯಾವ ಮಾನದಂಡ ಅನುಸರಿಸಬೇಕು ಎಂಬ ಬಗ್ಗೆ ಸ್ಪಷ್ಟ ಸೂಚನೆಗಳಿಲ್ಲ.
ಜಪ್ತಿಯಾದ ಆಸ್ತಿಯ ಮಾಹಿತಿ ಇಲ್ಲ :
ಬ್ಯಾಂಕ್, ಸಹಕಾರಿ ಬ್ಯಾಂಕ್, ಐಟಿ, ಇಡಿ ಸೇರಿದಂತೆ ವಿವಿಧ ಇಲಾಖೆಗಳು ಜಪ್ತಿ ಮಾಡಿಕೊಂಡ ಆಸ್ತಿಗಳನ್ನು ನೋಂದಣಿ ಮಾಡುವಂತಿಲ್ಲ. ಆದರೆ ಯಾವ ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳು ಉಪ ನೋಂದಣಾಧಿಕಾರಿಗಳಿಗೆ ಮಾಹಿತಿ ನೀಡಿರುವುದಿಲ್ಲ. ಉಪ ನೋಂದಣಾಧಿಕಾರಿಗಳಿಗೆ ಗೊತ್ತಾಗುವುದು ಹೇಗೆ?
ಸರ್ಕಾರಿ ಜಾಗ ಪರಿಶೀಲನೆ ಹೇಗೆ?
ಪಿಟಿಸಿಎಲ್ ಕಾಯಿದೆಯಡಿ ಬರುವ ಆಸ್ತಿ, ಅಕ್ರಮ ಮಂಜೂರಾತಿ ಆಗಿರುವ ಸರ್ಕಾರಿ ಜಾಗ ನೋಂದಣಿ ಮಾಡುವಂತಿಲ್ಲ. ಮಾಡುವುದು ಅಪರಾಧ ಎಂಬುದೇನೋ ಸರಿ, ಆದರೆ ಅಕ್ರಮ ಮಂಜೂರಾತಿ ಎಂಬುದು ಉಪ ನೋಂದಣಾಧಿಕಾರಿ ಕಚೇರಿಗೆ ಹೇಗೆ ತಿಳಿಯುತ್ತದೆ? ಯಾರು ತಿಳಿಸುತ್ತಾರೆ..? ಗೊತ್ತಿಲ್ಲ.
ಜೈಲು ಶಿಕ್ಷೆ ಬಂಧನದ ಭೀತಿ : ಆತಂಕ ಏನು..?
ಈ ತಿದ್ದುಪಡಿಯಿಂದ, ನಕಲಿ ದಾಖಲೆ ಆಧರಿಸಿ ಆಸ್ತಿ ದಸ್ತಾವೇಜು ನೋಂದಣಿ ಅಥವಾ ನಕಲಿ ದಸ್ತಾವೇಜು ಸೃಷ್ಟಿ ಮಾಡಿದರೆ ಜಿಲ್ಲಾ ನೋಂದಣಾಧಿಕಾರಿಗಳಿಗೆ ರದ್ದುಪಡಿಸಲು ಅಧಿಕಾರ ನೀಡಲಾಗಿದೆ. ಜತೆಗೆ ನಕಲಿ ದಾಖಲೆ ಆಧರಿಸಿ ನೋಂದಣಿ ಮಾಡಿದ ಉಪ ನೋಂದಣಾಧಿಕಾರಿಗಳಿಗೆ 3 ವರ್ಷದವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಬಹುದಂತೆ. ಇಷ್ಟು ಆತಂಕ, ಭಯದಲ್ಲಿ ಕೆಲಸ ಮಾಡುವುದು ಹೇಗೆ ಎನ್ನುತ್ತಿರುವ ಅಧಿಕಾರಿಗಳು, ಯಾವುದೇ ಜಾಗ, ಸೈಟು, ಜಮೀನಿನ ಎಲ್ಲ ದಾಖಲೆಗಳನ್ನೂ ಪರಿಶೀಲನೆ ಮಾಡುವುದಕ್ಕೆ ಸಮಯ ಬೇಕಾಗುತ್ತದೆ ಎಂಬ ನೆಪ ಹೇಳುತ್ತಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ನೋಂದಣಿ ಬಹುತೇಕ ಸ್ಥಗಿತಗೊಂಡಿದೆ. ಶನಿವಾರ ಅರ್ಜಿ ಸಲ್ಲಿಸಿರುವ ಪ್ರಕರಣಗಳಲ್ಲಿ ಕೆಲವು ಕಡೆ ಮಾತ್ರ ಸೋಮವಾರ ನೋಂದಣಿಯಾಗಿದೆ. ಸರ್ಕಾರದಿಂದ ಸಷ್ಟತೆ ಬರುವವರೆಗೂ ನೋಂದಣಿ ಮಾಡುವುದಿಲ್ಲ ಎಂದು ಕೆಲವು ಕಚೇರಿಗಳಲ್ಲಿ ನೋಟಿಸ್ ಅಂಟಿಸಲಾಗಿದೆ.



