ರಾಜ್ಯ ಸರ್ಕಾರದ ಪ್ರಕಾರ ಕಾಲ್ತುಳಿತ ಮತ್ತು ಸಾವಿಗೆ ಸರ್ಕಾರ ಕಾರಣ ಅಲ್ಲ. ಏಕೆಂದರೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಸಮಾರಂಭದಲ್ಲಿ ಯಾವುದೇ ಅನಾಹುತ ಆಗಿಲ್ಲ. ದುರಂತಕ್ಕೆಲ್ಲ RCB, KSCA ಕಾರಣ. ಚಿನ್ನಸ್ವಾಮಿಯಲ್ಲಿ ಸಿದ್ಧತೆ ಇರಲಿಲ್ಲ. ಹೀಗಿದ್ದರೂ ರಾಜ್ಯ ಸರ್ಕಾರ ಕಮಿಷನರ್ ಸೇರಿದಂತೆ ಕೆಲವರನ್ನು ಸಸ್ಪೆಂಡ್ ಮಾಡಿ, ಕೆಲವರನ್ನು ಎತ್ತಂಗಡಿ ಮಾಡಿ, ಕೆಲವರನ್ನು ಹುದ್ದೆಯಿಂದ ಮುಕ್ತಿಗೊಳಿಸಿ ಕ್ರಮ ಕೈಗೊಂಡಿದೆ. ಆದರೆ, RCB ಪ್ರಕಾರ ಇಡೀ ದುರಂತಕ್ಕೆ ಸರ್ಕಾರವೇ ಕಾರಣ.
ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಆಡಳಿತ ಮಂಡಳಿ, ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (ಆರ್‌ಸಿಎಸ್‌ಪಿಎಲ್), ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಮೂರೂ ಕೂಡಾ ನ್ಯಾಯಾಲಯದಲ್ಲಿ ಈ ವಾದ ಮಂಡಿಸಿರುವುದು ವಿಶೇಷ.
RCB ಚಾರ್ಜ್‌ಶೀಟ್ ಪ್ರಕಾರ..
ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ಎರಡೂ ಕಡೆ ವಿಜಯೋತ್ಸವ ಕಾರ್ಯಕ್ರಮ ನಡೆಸಬೇಕು ಎಂದು ಸರ್ಕಾರ ಕೈಗೊಂಡ ನಿರ್ಧಾರದಿಂದಲೇ ಕಾಲ್ತುಳಿತ ದುರಂತ ಸಂಭವಿಸಿತು.
ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿದ ಕಾರಣ, ಲಕ್ಷಾಂತರ ಜನ ವಿಧಾನಸೌಧಕ್ಕೆ ಬಂದು, ಆನಂತರ ಕ್ರೀಡಾಂಗಣಕ್ಕೆ ಬಂದರು. ಇದರಿಂದ ಕಾಲ್ತುಳಿತ ಸಂಭವಿಸಿತು.
ವಿಧಾನಸೌಧದ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡಿದ್ದ ಪೊಲೀಸರು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಗತ್ಯವಿದ್ದಷ್ಟು ಭದ್ರತೆ ನೀಡಿರಲಿಲ್ಲ. ಚಿನ್ನಸ್ವಾಮಿ ಬಳಿ ಕಡಿಮೆ ಪ್ರಮಾಣದಲ್ಲಿ ಪೊಲೀಸರು ಇದ್ದರು.
ಪೊಲೀಸ್ ಲಭ್ಯತೆ ಕಡಿಮೆ ಇದ್ದ ಕಾರಣ RCBಯವರೇ 584 ಖಾಸಗಿ ಭದ್ರತಾ ಸಿಬ್ಬಂದಿ ನೇಮಿಸಿಕೊಂಡಿದ್ದರು.
ಮಧ್ಯಾಹ್ನ 3.30ಗೆ ಗೇಟ್ ತೆರೆದ ಬಳಿಕವೂ ಅಭಿಮಾನಿಗಳ ದಟ್ಟಣೆ ಇತ್ತು. ನಂತರ ಪೊಲೀಸರು ಬಂದು ಲಾಠಿ ಚಾರ್ಜ್ ನಡೆಸಿದ್ದರಿಂದ ಕಾಲ್ತುಳಿತ ಉಂಟಾಯಿತು.
ಪೊಲೀಸರಿಗಾಗಿ 2450 ಆಹಾರ ಪೊಟ್ಟಣ ಸಿದ್ದಪಡಿಸಲಾಗಿತ್ತು. ಆದರೆ ಪೊಲೀಸರು ಕಡಿಮೆ ಸಂಖ್ಯೆಯಲ್ಲಿದ್ದು. ಇದರಿಂದ ಮಧ್ಯಾಹ್ನ 600 ಆಹಾರ ಪೊಟ್ಟಣಗಳನ್ನು ಮಾತ್ರ ಸ್ವೀಕರಿಸಿದರು. ರಾತ್ರಿ ಭೋಜನಕ್ಕೆ ಮಾತ್ರ 2,450 ಆಹಾರ ಪೊಟ್ಟಣ ಸ್ವೀಕರಿಸಿದರು.
ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖಸ್ಥ ನಿಖಿಲ್ ಸೋಸಲೆ, ಡಿಎನ್‌ಎ ಉದ್ಯೋಗಿಗಳಾದ ಸುನೀಲ್ ಮ್ಯಾಥ್ಯೂ, ಕಿರಣ್ ಕುಮಾರ್ ಮತ್ತು ಸುಮಂತ್ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ತಮ್ಮ ಬಿಡುಗಡೆಗೆ ಕೋರಿ ಸಲ್ಲಿಸಿರುವ ಈ ಅರ್ಜಿಯಲ್ಲಿ ವಾದ ಮಂಡಿಸಿರುವುದು ಹೀಗೆ.
RCB ಪ್ರಕಾರ..
ತೆರೆದ ಬಸ್‌ನಲ್ಲಿ ಮೆರವಣಿಗೆ ನಡೆಸಲು ಅನುಮತಿ ಕೋರಿ ಜೂ.3 ರಂದು ಪತ್ರ ಬರೆಯಲಾಗಿತ್ತು. ಆದರೆ, ಇದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ವಿಧಾನಸೌಧ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ಕಾರ್ಯಕ್ರಮ ನಡೆಸಲು ಸರ್ಕಾರವೇ ಮುಖ್ಯಕಾರ್ಯದರ್ಶಿಯೊಂದಿಗೆ ಚರ್ಚಿಸಿ ಯೋಜನೆ ರೂಪಿಸಿತು. ಸರ್ಕಾರ ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದಲೇ ಅಲ್ಲಿಗೆ ಲಕ್ಷಾಂತರ ಜನ ಬಂದಿದ್ದರು. ನಂತರ ಸ್ಟೇಡಿಯಂಗೆ ಬಂದಿದ್ದೇ ಕಾಲ್ತುಳಿತ ಸಂಭವಿಸಲು ಕಾರಣ.
ಸರ್ಕಾರದ ವಾದ ಏನಿತ್ತು..?
ಆರ್‌ಸಿಬಿ ಜಯಿಸಿದ ದಿನವೇ ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಿಸಲಾಗುವುದು ಎಂದು ಆರ್‌ಸಿಬಿ ಟ್ವೀಟ್ ಮಾಡಿ ಘೋಷಿಸಿದೆ. ಇದಕ್ಕೆ ಸೂಕ್ತ ಅನುಮತಿ ಪಡೆದಿರಲಿಲ್ಲ. ಆರ್‌ಸಿಬಿ, ಡಿಎನ್‌ಎ ನಡೆಯೇ 11 ಮಂದಿ ಸಾವಿಗೆ ಕಾರಣ. ಆರೋಪಿಗಳು ಪರಾರಿಯಾಗುತ್ತಿದ್ದರೆ ನೋಡಿಕೊಂಡು ಕೂರಬೇಕೇ.. ಕಂಪನಿಗಳ ಆತುರದ ನಡೆಯಿಂದಲೇ ಘಟನೆ ನಡೆದಿದೆ.



