ವಿರಾಟ್ ಕೊಹ್ಲಿ ಸೆಂಚುರಿ ಹೊಡೆದಿದ್ದು, ೪೯ನೇ ಶತಕ ಬಾರಿಸುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ್ದು ಒಂದು ಸಾಧನೆಯಾದರೆ, ವಿಶ್ವಕಪ್ ಸರಣಿಯಲ್ಲಿ ಸತತ ೮ನೇ ಗೆಲುವು ದಾಖಲಿಸಿದ ಭಾರತ ಇನ್ನೊಂದು ಹೊಸ ದಾಖಲೆಯನ್ನೇ ಬರೆದಿದೆ. ಇನ್ನು ಮೂರು ಪಂದ್ಯಗಳನ್ನು ಇಷ್ಟೇ ತೀವ್ರತೆಯಲ್ಲಿ ಆಡಿ ಗೆದ್ದುಬಿಟ್ಟರೆ ಭಾರತ ವಿಶ್ವಚಾಂಪಿಯನ್.
ಈಡನ್ ಗಾರ್ಡನ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದಲ್ಲಿ ಸತತ ಗೆಲುವಿನ ದಾಖಲೆ ಬರೆದಿದ್ದು ಬೇರೆ. ಈ ಗೆಲುವಿನಲ್ಲಿ ರೋಹಿತ್ ಶರ್ಮಾರ ೪೦ (ಸ್ಲೋ ಪಿಚ್ಚಿನಲ್ಲಿ ಆರ್ಭಟಿಸಿ ೪೦ ರನ್ ಹೊಡೆದಿದ್ದು), ಶ್ರೇಯಸ್ ಅಯ್ಯರ್ ಅವರ ಸತತ ೨ನೇ ಅರ್ಧ ಶತಕ, ಸೂರ್ಯ ಮತ್ತು ಜಡೇಜಾ ಅವರ ಮಿಂಚಿನ ಬ್ಯಾಟಿಂಗ್ ಒಂದು ಕಡೆಯಾದರೆ, ಮತ್ತೊಂದು ಕಡೆ ಅದೇ ರವೀಂದ್ರ ಜಡೇಜಾ ಅವರ ೫ ವಿಕೆಟ್ ಸಾಧನೆ, ಶಮಿ ಮತ್ತು ಕುಲದೀಪ್ ಯಾದವ್ ತಲಾ ೨ ವಿಕೆಟ್ ಪಡೆದರೆ, ಸಿರಾಜ್ ಒಂದು ವಿಕೆಟ್ ಪಡೆದರು. ಆದರೆ ವಿಶೇಷವೇನು ಗೊತ್ತೇ.. ವಿರಾಟ್ ಕೊಹ್ಲಿಯ ಮೈಲಿಗಲ್ಲು ಪಂದ್ಯಗಳಲ್ಲಿ ಜಡೇಜಾ ಅವರ ತ್ರಿವಿಕ್ರಮ ಸಾಧನೆ ಮೆರೆದಿರುವುದು.


ಕೊಹ್ಲಿಯ 100ನೇ ಏಕದಿನ ಪಂದ್ಯದಲ್ಲಿ ಕೂಡಾ ರವೀಂದ್ರ ಜಡೇಜಾ ೫ ವಿಕೆಟ್ ಪಡೆದಿದ್ದರಷ್ಟೇ ಅಲ್ಲ, ಪಂದ್ಯಶ್ರೇಷ್ಟ ಪ್ರಶಸ್ತಿಯನ್ನೂ ಪಡೆದಿದ್ದರು.
ಕೊಹ್ಲಿಯ 100ನೇ ಟೆಸ್ಟ್ ಪಂದ್ಯದಲ್ಲಿ ಕೂಡಾ ಜಡೇಜಾ ಅಜೇಯ ೧೭೫ ರನ್ ಹೊಡೆದು ಎರಡೂ ಇನ್ನಿಂಗ್ಸ್‌ಗಳಿಂದ ೯ ವಿಕೆಟ್ ಪಡೆದಿದ್ದರು.
ನಾಯಕನಾಗಿ ಕೊಹ್ಲಿ 50ನೇ ಟಿ20 ಪಂದ್ಯ ಆಡಿದಾಗ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದಿದ್ದರು. ನಿರ್ಣಾಯಕ ೩ ವಿಕೆಟ್ ಪಡೆದು ಗೆಲುವಿನಲ್ಲಿ ಮಿಂಚಿದ್ದರು.
ಕೊಹ್ಲಿಯ ಇನ್ನೊಂದು ಬರ್ತ್ ಡೇ ದಿನದ ೨೦೧೫ನೇ ಇಸವಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಜನ್ಮದಿನದಂದು ೮ ವಿಕೆಟ್ ಪಡೆದಿದ್ದರಷ್ಟೇ ಅಲ್ಲ, ಮ್ಯಾನ್ ಆಫ್ ದಿ ಮ್ಯಾಚ್ ಕೂಡಾ ಅವರೇ ಆಗಿದ್ದರು.
ಇನ್ನು ೨೦೨೧ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ಟಿ-೨೦ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿಯೂ ೩ ವಿಕೆಟ್ ಕಬಳಿಸಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದರು.
ಇದೀಗ ದ.ಆಫ್ರಿಕಾ ವಿರುದ್ಧವೂ ಅಷ್ಟೆ, ಈಡನ್ ಗಾರ್ಡನ್ ಪಂದ್ಯದಲ್ಲಿ ಮಿಂಚಿನ ೧೪ ಎಸೆತಗಳಲ್ಲಿ ೨೯ ರನ್ ಬಾರಿಸಿದ್ದರು. ೯ ಓವರುಗಳಲ್ಲಿ ೧ ಮೇಡನ್ ಸೇರಿದಂತೆ ೩೩ ರನ್ ನೀಡಿ ೫ ವಿಕೆಟ್ ಕಬಳಿಸಿದ್ದರು. ಕೊಹ್ಲಿ ಮ್ಯಾನ್ ಆ ಆಫ್ ದಿ ಮ್ಯಾಚ್ ಆದರೇನೋ ಹೌದು, ಆದರೆ ಅಷ್ಟೇ ಗಮನ ಸೆಳೆದಿದ್ದು ರವೀಂದ್ರ ಜಡೇಜಾ.



